ಮಾರ್ಕೋಸ್ ಕಲಿತ ಪಾಠ

ಮಾರ್ಕೋಸ್ ನ ತಂದೆ ಒಬ್ಬ ಶ್ರೀಮಂತ. ತನ್ನ ಮಗ ಸರಿ ದಾರಿಗೆ ಬರಲಿ ಎಂದು ಎಷ್ಟೇ ಆಸ್ತಿ ಇದ್ದರೂ ತನ್ನ ಮಗನನ್ನು ಸ್ವಂತ ಕೆಲಸ ಹುಡುಕಲು ಪ್ರೇರಿಪಿಸಿದ್ದ. ಪ್ರೊ. ರೂಪೇಶ್ ಪುತ್ತೂರು ಅವರ ಲೇಖನವನ್ನು ತಪ್ಪದೆ ಮುಂದೆ ಓದಿ …

ಆದರೆ, ಇದರಿಂದ ಮಗ ಮಾರ್ಕೋಸ್ ತಂದೆಯನ್ನು ಅಷ್ಟೊಂದು ಇಷ್ಟ ಪಡುತ್ತಿರಲಿಲ್ಲ. ತನ್ನ ಮಿತ್ರ ಐವನ್ ನ ಕ್ಷೌರಾಲಯ/ ಬಾರ್ಬರ್ ಶಾಪಿನಲ್ಲಿ ಬೆಳೆಗಿನಿಂದ ಸಂಜೆ ಕೂತು, ಯಾವುದೇ ಕೆಲಸಕ್ಕೆ ಹೋಗದೆ, ಏನೇನೋ ಮಾತನಾಡಿ ಅವನಿಂದ ಸಾಲ ಪಡೆದು “ನಾಳೆ ಕೊಡುವೆ” ಎಂದು ಹೇಳುತ್ತಾ ದಿನಗಳೆಯುತ್ತಿದ್ದ.

ಒಂದು ದಿನ ಶ್ರೀಮಂತ ತೀರಿಹೋದ…..

ಕೆಲ ದಿನಗಳ ನಂತರ ಮಾರ್ಕೋಸ್ ಐಷಾರಾಮಿ ಬಟ್ಟೆ , ಬೂಟು, ಕೂಲಿಂಗ್ ಗ್ಲಾಸ್,…. ಹಾಕಿ ವಿಜ್ರಂಭಿಸಿ, ಐವನ್ನನ ಕ್ಷೌರಾಲಯದಲ್ಲಿ ಬಂದು ಗಜಗಾಂಭೀರದಲ್ಲಿ ಕೂತು ಹೇಳಿದ…” ಏಯ್ ಐವನ್ ಇಂದು ನನ್ನಲ್ಲಿ ಎಷ್ಟು ಆಸ್ತಿ ಸಂಪತ್ತು ಇದೆ ಗೊತ್ತಾ? ನಿನ್ನನ್ನು ನನ್ನೊಂದಿಗೆ ತುಲನೆ ಮಾಡಲು ಸಾಧ್ಯವಾಗದಷ್ಟು…. ನಿನಗೆ ಒಂದೆರಡು ವರುಷ ತಗಲಬಹುದು ಲೆಕ್ಕ ಹಾಕಲು…..ತೆಗೋ ನೀನು ಕೊಟ್ಟ ದುಡ್ಡು ಅದರ ಬಡ್ಡಿ ಹಾಗೂ ಟಿಪ್ಸ್…. “ ಎಂದು ಒಂದು ತಲೆದಿಂಬಷ್ಟು ಹಣ ಅವನ ಮುಂದೆ ಚೆಲ್ಲಿ ‌ಸುರಿದ.

ಗ್ರಾಹಕನ ಕೂದಲು ಕತ್ತರಿಯಿಂದ ಟಿಕ ಟಿಕನೆ ನುಣ್ಣಿಸುತ್ತಾ ಇದ್ದ ಐವನ್ ಹೇಳಿದ “ ಮಿತ್ರ ನಾನು ನಿನಗೆ ಕೊಟ್ಟ ದುಡ್ಡು ಮಾತ್ರ ನನಗೆ ಸಾಕು. ಅದರ ಬಡ್ಡಿ ಹಾಗೂ ಟಿಪ್ಸ್ ನನಗೆ ಬೇಡ. ಅಂದ ಹಾಗೆ ನನ್ನ ಆಸ್ತಿ ಸಂಪತ್ತೂ ನಿನ್ನ ಆಸ್ತಿ ಗಿಂತ ಮೂರು ಸಾವಿರ ರೂಪಾಯಿ ಕಮ್ಮಿ ಅಷ್ಟೇ ಕಣೋ.”

ದಿಗ್ಭ್ರಮೆಯಿಂದ ಮಾರ್ಕೋಸ್ ಕೇಳಿದ “ ಲೇ ನನ್ನ ಆಸ್ತಿ ಹಣ ಸಂಪತ್ತು, ತಂದೆ ತೀರಿ ಹೋದ ಈ ಹತ್ತು ದಿನಗಳಲ್ಲಿ ನನಗೇ ಲೆಕ್ಕ ಹಾಕಲು ಸಾಧ್ಯವಾಗಿಲ್ಲ…. ಮತ್ತೆ ಅದೆಂಗೆ ನೀನು ನಿನ್ನ ಆಸ್ತಿ ಗಿಂತ ನನ್ನ ಸಿರಿ ಮೂರು ಸಾವಿರ ರೂಪಾಯಿ ವ್ಯತ್ಯಾಸ ಅಂತಿಯಾ?? ಎಲ್ಲೋ ಕಲಿತಿದ್ದು ನೀನು? ಗೂಬೆ!!?”

ಐವನ್ “ ಮಿತ್ರ ನಿನ್ನ ತಂದೆ ತೀರಿ ಹೋಗುವ ಕೆಲ ದಿನ ಹಿಂದೆ ನನ್ನ ದೊಡ್ಡಪ್ಪ ತೀರಿ ಹೋಗಿದ್ದರು. ಅವರಿಗೆ ಕೊನೆಯ‌ ಕೊಫಿನ್/Coffin/ ಶವಪೆಟ್ಟಿಗೆ ಖರೀದಿಸಲು ಹೋದಾಗ, ವಿವಿಧ ರೀತಿಯವುಗಳಲ್ಲಿ, ನನ್ನ ಆಸ್ತಿ ಸಂಪತ್ತಿನ ಚೌಕಟ್ಟಿನೊಳ , ಅತ್ಯಂತ ಕನಿಷ್ಠ ಬೆಲೆಯ ರೂಪಾಯಿ ಎರಡು ಸಾವಿರದ ಕೊಫಿನ್ ನಾನು ಖರೀದಿಸಿದೆ. ನಿನ್ನ ತಂದೆಗೆ ಖರೀದಿಸಿದ ಕೊಫಿನ್ ನ ಬೆಲೆ ಎಷ್ಟು?’

ಮಾರ್ಕೋಸ್ “ …. ಅಯ್ಯೋ ನಾನು ನನ್ನ ತಂದೆಗೆ ಅತ್ಯಂತ ಹೆಚ್ಚು ಬೆಲೆ ಬಾಳುವ , ಚಿತ್ರ ಕೆತ್ತಿದ ಐದು ಸಾವಿರ ರೂಪಾಯಿಯ ಕೊಫಿನ್ ಖರೀದಿಸಿದೆ.”

ಐವನ್ “ ಅಷ್ಟೇ ವ್ಯತ್ಯಾಸ…. ಇಂದು ಅಥವಾ ಈಗ ಅಥವಾ ನಾಳೆ ನಾನು ಸತ್ತಾಗ ಮೂರು ಸಾವಿರ ಕೊಫಿನ್. ಅದೇ ನೀನು ಇಂದು, ಅಥವಾ ಈಗ ಅಥವಾ ನಾಳೆ ಸತ್ತಾಗ ಐದು ಸಾವಿರದ ಕೊಫಿನ್…. ಎರಡೂ ಕೊಫಿನ್ ನ ಹಣದ ವ್ಯತ್ಯಾಸ ಎಷ್ಟು?”

ಮಾರ್ಕೋಸ್ ತಟಕ್ಕನೆ “…… ಆಂ!!! ಮೂರು ಸಾವಿರ..”

ಐವನ್ “ ..ಅಷ್ಟೇ…. ಇದನ್ನು ಲೆಕ್ಕ ಹಾಕೋಕೆ ಗಣಿತಜ್ಞ ಆಗಬೇಕಿಂದಿಲ್ಲ.” ಎಂದು ನಗು ಬೀರುತ್ತಾ , ತನ್ನ ಗಿರಾಕಿಯನ್ನು ಕುರ್ಚಿಯಿಂದ ಕೆಳಗಿಳಿಸಿ, ಮತ್ತೊಬ್ಬನನ್ನು “ ನೆಕ್ಸ್ಟ್….ಬನ್ನಿ ಸಾ…” ಎಂದು ಕರೆದ.

ನಿಮ್ಮವ ನಲ್ಲ
ರೂಪು


  • ಪ್ರೊ. ರೂಪೇಶ್ ಪುತ್ತೂರು – ರಾಸಾಯನ ಶಾಸ್ತ್ರ ವಿಭಾಗ, ಉಪನ್ಯಾಸಕರು, ಲೇಖಕರು, ಬೆಂಗಳೂರು 

 

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW