ಸಮಕಾಲೀನ ಕನ್ನಡ ಕಾವ್ಯದ ಕವಯಿತ್ರಿ ಸ. ಉಷಾ ಅವರ ವೃತ್ತಿ ಜೀವನದ ಸಿಹಿ – ಕಹಿ ಅನುಭವಗಳನ್ನು ಸ್ವತಃ ಅವರೇ ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ನನ್ನ ಅಧ್ಯಾಪಕ ವೃತ್ತಿ ಆರಂಭವಾದುದು ಸಿರಿಗೆರೆ ಎಂಬ ಪುಟ್ಟ ಊರಿನಲ್ಲಿ. ೧೯೭೩ ನೇ ಇಸವಿ ಜುಲೈ ತಿಂಗಳು ಎಂದು ನೆನಪು. ಅಲ್ಲಿಯವರೆಗೆ ನಾನು ಗ್ರಾಮೀಣ ಬದುಕನ್ನು ಹತ್ತಿರದಿಂದ ನೋಡಿರಲಿಲ್ಲ. ಮೈಸೂರಿನಲ್ಲಿ ಹುಟ್ಟಿ ಬೆಳೆದ ನಾನು ಚಿತ್ರದುರ್ಗ ಜಿಲ್ಲೆಯ ಸಿರಿಗೆರೆಯ ಬಿ. ಪರಮೇಶ್ವರಪ್ಪ ಪ್ರಥಮ ದರ್ಜೆ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ನೇಮಕಗೊಂಡುದು ಒಂದು ಯೋಗಾಯೋಗವೆಂದೇ ಹೇಳಬೇಕು. ಆ ಯೋಗಾಯೋಗಕ್ಕೆ ಎರಡು ಮುಖ್ಯ ಕಾರಣಗಳು. ಒಂದು ನನ್ನ ಕಾಲೇಜಿನ ಗೆಳತಿ ಕೆ. ಎಲ್. ಪದ್ಮಿನಿ ಅಲ್ಲಿ ಉಪನ್ಯಾಸಕಿಯಾಗಿದ್ದುದು. ಇನ್ನೊಂದು ನಾನು ಮತ್ತು ನನ್ನ ಸಹಪಾಠಿ ಗೆಳೆಯ ವೈ. ಮಂಜಪ್ಪ ಪರಸ್ಪರ ಪ್ರೀತಿಸಿ ಮದುವೆಯಾಗಬೇಕೆಂದು ಕೊಂಡಿದ್ದು. ಪದ್ಮನಿ ಮತ್ತು ಅವಳ ಪತಿಯಿಂದ ನಮ್ಮ ಪ್ರೀತಿಯ ಮತ್ತು ಮದುವೆಯ ಉದ್ದೇಶ ತಿಳಿದ ಆಗಿನ ಹಿರಿಯ ಜಗದ್ಗುರುಗಳು ದೊಡ್ಡ ಮನಸ್ಸಿನಿಂದ ನನ್ನನ್ನು ಕರೆಸಿ ಉಪನ್ಯಾಸಕಿಯ ಕೆಲಸ ಕೊಟ್ಟರು.
ಪುಟ್ಟ ಮನೆ, ಅತಿ ಮುಗ್ಧರು, ಅತಿಯಾಗಿ ಹಚ್ಚಿಕೊಂಡು ಪ್ರೀತಿಸುವವರೂ ಆದ ವಿದ್ಯಾರ್ಥಿಗಳು ಇದ್ದ ಪುಟ್ಟ ಹಳ್ಳಿಯ ಕಾಲೇಜಿನಲ್ಲಿ ಸಮೃದ್ಧವಾದ ಗ್ರಂಥಾಲಯವಿತ್ತು. ಒಂದೇ ಕಟ್ಟಡದಲ್ಲಿ ಜೂನಿಯರ್ ಕಾಲೇಜು ಮತ್ತು ಪ್ರಥಮ ದರ್ಜೆಯ ಕಾಲೇಜು ನಡೆಯುತ್ತಿದ್ದುದರಿಂದ ೧೦-೩೦ ರಿಂದ ಸಂಜೆ ೫-೦೦ ರವರೆಗೆ ನಮಗೆ ಬಿಡುವು ಇರುತ್ತಿತ್ತು. ಸೊಗಸಾದ ಗ್ರಂಥಾಲಯ ಮತ್ತು ಸದಭಿರುಚಿಯ ಗ್ರಂಥಪಾಲಕರು,ನನ್ನ ಪಾಲಿಗೆ ಸಿರಿಗೆರೆ ನನಗೆ ಒಂದು ಅಧ್ಯಯನ ಸ್ವರ್ಗವೇ ಆಗಿತ್ತು. ನಮ್ಮ ಸಿರಿಗೆರೆ ಗ್ರಾಮೀಣ ಪ್ರದೇಶದಲ್ಲಿದ್ದರೂ ಸಭೆ ಸಮಾರಂಭಗಳು, ನಾಟಕಗಳು, ವಿಚಾರ ಗೋಷ್ಠಿಗಳು, ವಚನ ಗಾಯನ, ವಚನ ಸಾಹಿತ್ಯ ಕುರಿತ ಚರ್ಚೆ, ಎಲ್ಲವೂ ಅಲ್ಲಿ ಲಭ್ಯವಾಗುತ್ತಿದ್ದವು. ದಂದಣ ದತ್ತಣ ಗೋಷ್ಠಿ ಎಂಬ ವಿದ್ಯಾರ್ಥಿಗಳಿಗಾಗಿಯೇ ಇದ್ದ ವಿಚಾರ ಗೋಷ್ಠಿಯೊಂದು ಅಲ್ಲಿ ನಡೆಯುತ್ತಿತ್ತು.
ಫೋಟೋ ಕೃಪೆ : google
ಬಸವಣ್ಣನವರ ಒಂದು ವಚನದಲ್ಲಿ ಹೀಗೆ ಇದೆ.
“ಆಳಿಗೊಂಡಿಹೆವೆಂದು ಅಂಜಲದೇಕೆ? ನಾಸ್ತಿಕವಾಡಿಹೆವೆಂದು ನಾಚಲದೇಕೆ? ಕೂಡಲಸಂಗಮ ದೇವನ ಮುಂದೆ ದಂದಣ ಎನ್ನಿ ದತ್ತಣ ಎನ್ನಿ”
ಈ ವಚನದ ಅರ್ಥದಂತೆಯೇ ವಿದ್ಯಾರ್ಥಿಗಳು ಸಭಾಕಂಪನವನ್ನು ಬಿಟ್ಟು ಮಾತನಾಡಲು ಕಲಿಯಲೆಂಬುದು ಆ ಗೋಷ್ಠಿಯ ಆಶಯವಾಗಿತ್ತು. ಹೈಸ್ಕೂಲ್ ಮತ್ತು ಕಾಲೇಜಿನ ವಿದ್ಯಾರ್ಥಿಗಳು ಅಲ್ಲಿ ತಮಗೆ ತಿಳಿದ ವಿಷಯಗಳನ್ನು ಮಂಡಿಸುತ್ತಿದ್ದರು. ನಾನು ಪದವಿ ವಿದ್ಯಾರ್ಥಿಗಳನ್ನು ಪ್ರೇರಿಸಿ, ಸ್ವಲ್ಪ ಸ್ವಲ್ಪ ತರಬೇತಿಯನ್ನೂ ಕೊಟ್ಟು ಬೇಂದ್ರೆಯವರ ಕವಿತೆಯ ಬಗ್ಗೆ ಒಂದು ಸೆಮಿನಾರ್ ಮಾಡಿಸಿದೆ. ಮಕ್ಕಳು ಚೆನ್ನಾಗಿಯೇ ಮಾತನಾಡಿದರು.
ದಂದಣ ದತ್ತಣ ಗೋಷ್ಠಿಯಲ್ಲಿ ಆಗ ಜೂನಿಯರ್ ಕಾಲೇಜಿನ ಪ್ರಾಂಶುಪಾಲರಾಗಿದ್ದ ಶ್ರೀ ಎಸ್. ಬಿ. ರಂಗನಾಥ್ ಹಾಜರಿದ್ದರು. ಅವರು “ಇದು ಪ್ರೌಢ ಗೋಷ್ಠಿ. ದಂದಣ ದತ್ತಣ ಗೋಷ್ಠಿಯಲ್ಲ” ಎಂದು ಮೆಚ್ಚುಗೆ ಸೂಚಿಸಿದರು. ಒಂದು ಅಧ್ಯಯನ ವರ್ಷ ಮುಗಿಯುವಷ್ಟರಲ್ಲಿ ಪ್ರೌಢಶಾಲೆಯ ಮತ್ತು ಕಾಲೇಜಿನ ಹುಡುಗಿಯರಲ್ಲಿ ನನಗೆ ಅನೇಕ ಅಭಿಮಾನಿನಿಯರು ಹುಟ್ಟಿಕೊಂಡಿದ್ದರು. ವೃಂದಗಾನ, ಏಕಪಾತ್ರಾಭಿನಯ, ಚರ್ಚಾ ಸ್ಪರ್ಧೆ, ಭಾವಗೀತೆಯ ಕಲಿಕೆ ಇಂಥ ಚಟುವಟಿಕೆಗಳಲ್ಲಿ ಹುಡುಗಿಯರಿಗೆ ಮಾರ್ಗದರ್ಶನ ಮಾಡುವಲ್ಲಿ ನನಗೆ ಸೃಷ್ಟಿಕ್ರಿಯೆಯ ಸಂತೋಷವೂ ಆಗುತ್ತಿತ್ತು. ಪ್ರತಿ ವರ್ಷದ ಕೊನೆಯಲ್ಲಿ ಬೋಧಿಸಲು ನಿಗದಿಯಾಗಿದ್ದ ಪಠ್ಯ ಭಾಗ ಮುಗಿದ ಮೇಲೆ ಅದೇ ಪಠ್ಯ ಭಾಗ ಕುರಿತು ಇಷ್ಟವಿರುವ ವಿದ್ಯಾರ್ಥಿಗಳು ಏನಾದರೂ ಬರೆದುಕೊಂಡು ಬಂದು ಓದಿ ಎಂದು ಹೇಳುತ್ತಿದ್ದೆ. ಕೆಲವರು ಸಂತೋಷದಿಂದ ಬರೆದು ತಂದು ಓದುತ್ತಿದ್ದರು. ಸಿರಿಗೆರೆಯಲ್ಲಿ ಕಳೆದ ಮೊದಲ ಮೂರು ವರ್ಷಗಳನ್ನು ನಾನು ಈಗಲೂ ತುಂಬಾ ಪ್ರೀತಿಯಿಂದ ನೆನೆಯುತ್ತೇನೆ.
ನನ್ನ ಆಗಿನ ವಿದ್ಯಾರ್ಥಿ ವಿದ್ಯಾರ್ಥಿನಿಯರಲ್ಲಿ ಕೆಲವರು ಈಗಲೂ ಸಂಪರ್ಕದಲ್ಲಿದ್ದಾರೆ. ಅವರ ಸೇವಾ ನಿವೃತ್ತಿ, ಮಕ್ಕಳ ಮದುವೆಗಳು, ಅನಾರೋಗ್ಯ, ಸುಖ ದುಃಖಗಳು ಈಗಲೂ ತಿಳಿಯುತ್ತಿರುತ್ತವೆ. ಆ ಮೊದಲ ವರ್ಷದ ಶಿಷ್ಯೆಯರಾದ ಗೆಳತಿಯರನ್ನು ನಾನು ಯಾವಾಗಲೂ ನೆನೆಯುತ್ತೇನೆ. ಸಿರಿಗೆರೆಯಲ್ಲಿ ಒಂದು ವರ್ಷ ಉದ್ಯೋಗ ಮಾಡಿದ ಮೇಲೆ ನಮ್ಮಿಬ್ಬರಿಗೂ ಅರಸೀಕೆರೆಗೆ ವರ್ಗವಾಯಿತು. ಅರಸೀಕೆರೆಯಲ್ಲಿ ನಗರದ ಸೌಲಭ್ಯಗಳಿದ್ದವು. ಆದರೆ ಸಿರಿಗೆರೆಯ ವಾತಾವರಣದಲ್ಲಿದ್ದ ವಿಶ್ವಾಸ ಆತ್ಮೀಯತೆಗಳು ಅಲ್ಲಿ ಮೊದಲಿಗೆ ನಮ್ಮ ಅನುಭವಕ್ಕೆ ಬರಲಿಲ್ಲ. ಕೆಲವರು ಶ್ರೀಮಂತ ವಿದ್ಯಾರ್ಥಿಗಳು ಪದವಿ ನೆಪಮಾತ್ರಕ್ಕೆ ಎನ್ನುವಂತಿದ್ದರು. ಒಂದೆರಡು ವರ್ಷ ಕಳೆದ ಮೇಲೆ ಅಲ್ಲಿಯ ವಿದ್ಯಾರ್ಥಿಗಳು ಸಹ ಅಷ್ಟೇ ಆತ್ಮೀಯರಾದರು. ಅವರಲ್ಲಿ ಅನೇಕರು ಅರಸೀಕೆರೆ ಎಂಬ ವ್ಯಾಪಾರೀ ನಗರಿಯಲ್ಲಿ ಕಾನ್ವೆಂಟ್ ಶಾಲೆಗಳಲ್ಲಿ ಸಂಗೀತ ನೃತ್ಯಗಳನ್ನು ಬೇರೆ ಬೇರೆ ಗುರುಗಳ ಹತ್ತಿರ ಕಲಿತು ನಮ್ಮ ಕಾಲೇಜಿನ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕಳೆಗಟ್ಟಿಸುತ್ತಿದ್ದರು. ಕನ್ನಡ ಐಚ್ಛಿಕ ವಿದ್ಯಾರ್ಥಿಗಳಿಗೆ ವ್ಯಾಕರಣ ಮತ್ತು ಛಂದಸ್ಸುಗಳು ಒಂದು ದೊಡ್ಡ ಸವಾಲಾಗಿದ್ದವು. ಕಾವ್ಯ ಮೀಮಾಂಸೆಯು ಒಂದು ರಸದೂಟವಾಗಿತ್ತು. ಈ ಮಾತುಗಳು ನನ್ನ ವಿದ್ಯಾರ್ಥಿಗಳೇ ಬೇರೆ ಸಂದರ್ಭಗಳಲ್ಲಿ ಹೇಳಿದವು.
ಎಂ ಆರ್ ಕಮಲಾ, ಸೇರಿದಂತೆ ಇತರೆ ಮಹಿಳಾ ಲೇಖಕಿಯರೊಂದಿಗೆ ಸ. ಉಷಾ
ನಾನು ನೋಟ್ಸ್ ಸಂಸ್ಕೃತಿಯ ವಿರೋಧಿಯಾಗಿದ್ದೆ. ಇಲ್ಲಿ ನನ್ನ ಸಹಾಯಕ್ಕೆ ಬಂದುದು ಸೆಮಿನಾರ್ ಸಂಸ್ಕೃತಿ. ಒಂದು ಅಧ್ಯಾಯ ಮುಗಿದೊಡನೆ ಆ ಕುರಿತು ಮಾತನಾಡಲು ಇಚ್ಛಿಸುವವರು ಹತ್ತು ನಿಮಿಷ ಮಾತನಾಡಬಹುದೆಂದು ಆಮೇಲೆ ಆ ವಿಷಯದ ಬಗ್ಗೆ ನೋಟ್ಸ್ ಕೊಡುವೆನೆಂದೂ ಒಂದು ಆಮಿಷವನ್ನಿಟ್ಟೆ. ಮಕ್ಕಳು ಹುರುಪಿನಿಂದ ಈ ಪ್ರಯೋಗದಲ್ಲಿ ಭಾಗಿಯಾದರು. ದ್ವಿತ್ವವೂ, ರಳ, ಕುಳ, ಕ್ಷಳಗಳೂ, ಖ್ಯಾತ ಕರ್ನಾಟಕಗಳೂ, ರಗಳೆ, ಷಟ್ಪದಿಗಳೂ ತರಗತಿಯಲ್ಲಿ ನೃತ್ಯ ಮಾಡಿದವು. ಈ ಪ್ರಯೋಗ ಎಷ್ಟು ಯಶಸ್ವಿಯಾಯಿತೆಂದರೆ ಮುಂದೆ ಯಾವಾಗಲಾದರೂ ಸಿಕ್ಕಾಗ ವಿದ್ಯಾರ್ಥಿಗಳು ಹೆಮ್ಮೆಯಿಂದ ಮಿಸ್ ನಾನು ನಿಮ್ಮ ಕ್ಲಾಸಿನಲ್ಲಿ ಇಂಥಾ ವಿಷಯದ ಬಗ್ಗೆ ಸೆಮಿನಾರ್ ಮಾಡಿದ್ದೆ ಎಂದು ಹೇಳುತ್ತಿದ್ದರು.
ಬರೀ ಹತ್ತು ನಿಮಿಷದ ಆ ಸೆಮಿನಾರುಗಳು ವಿದ್ಯಾರ್ಥಿಗಳಿಗೆ ಧೈರ್ಯವನ್ನೂ, ತರಗತಿಯೊಳಗೇ ಒಂದಿಷ್ಟು ಮಾನ್ಯತೆಯನ್ನೂ ತಂದುಕೊಟ್ಟವು. ಅದರ ಫಲವಾಗಿ ಆ ಮಕ್ಕಳಲ್ಲಿ ಆತ್ಮವಿಶ್ವಾಸವೂ ವಿಷಯದ ಬಗ್ಗೆ ಆಸಕ್ತಿಯೂ ಬೆಳೆಯಿತು ಎಂಬುದು ನಾನು ವಿದ್ಯಾರ್ಥಿಗಳಿಂದ ಕಲಿತ ಪಾಠವಾಗಿತ್ತು.
ನನಗೆ ಇನ್ನೊಂದು ಮನಮುಟ್ಟುವ ಅನುಭವ ವಿದ್ಯಾರ್ಥಿನಿಯರ ಪ್ರೀತಿ. ಆಗ ವಿದ್ಯಾರ್ಥಿನಿಯರಿಗಾಗಿ ಪ್ರತ್ಯೇಕ ವಿದ್ಯಾರ್ಥಿ ಕ್ಷೇಮ ಪಾಲನೆ ನಿಯೋಜನೆ ಇರಲಿಲ್ಲ. ನನ್ನ ಕಾಲೇಜಿನಲ್ಲಿದ್ದ ವಿದ್ಯಾರ್ಥಿನಿಯರು ನನ್ನ ಖಾಸಾ ಕನ್ನಿಕೆಯರೇ ಆದರು. ಅವರ ಗೊಂದಲಗಳು ಕಷ್ಟ ಸುಖಗಳು ನನ್ನ ಕೇಳುವಿಕೆಗೆ ದಕ್ಕಿ ಮನದಲ್ಲೇ ಮಾಗಿ ಕವಿತೆಯಾಗುತ್ತಿದ್ದವು. ಕೆಲವು ಹುಡುಗಿಯರಿಗೆ ಪದವಿ ಓದುವಾಗಲೇ ಮದುವೆ ಆಗಿಬಿಡುತ್ತಿತ್ತು. ಅಂಥ ಮದುವೆಗಳಿಗೆ ಅನೇಕ ಬಾರಿ ನಾನು ಆಹ್ವಾನಿತಳಾಗಿ ಹೋದದ್ದಿದೆ. ಹಾಗೆ ಹೋದಾಗ ಅವರ ಪೋಷಕರಿಗೆ ಪದವಿ ಮುಗಿಸಲು ಅವಕಾಶ ಮಾಡಿಕೊಡಿ ಎಂದು ಹೇಳಿದ್ದಿದೆ. ಬುದ್ಧಿವಂತೆಯರೂ ಓದುವ ಆಸೆಯುಳ್ಳವರೂ ಆದ ಮಕ್ಕಳು ಓದನ್ನು ಬಿಟ್ಟು ಹೋದಾಗ ನಾನು ನೊಂದದ್ದಿದೆ.
ಈಗಲೂ ಸಂಪರ್ಕದಲ್ಲಿರುವ ನನ್ನ ಕನ್ನಿಕೆಯರು ನನ್ನ ಸಂಪತ್ತೂ ಹೌದು. ಅಧ್ಯಾಪಕ ವೃತ್ತಿಯಲ್ಲಿ ಮೌಲ್ಯ ಮಾಪನ, ಪಠ್ಯಪುಸ್ತಕ ಸಮಿತಿಯ ಸದಸ್ಯತ್ವ, ಪರೀಕ್ಷಾ ಮಂಡಳಿಯ ಸದಸ್ಯತ್ವ ಇವೆಲ್ಲ ವೃತ್ತಿಯ ಭಾಗವಾಗಿರುವ ಅನುಭವಗಳು. ಹಾಗೆ ಹೋದಾಗ ನನ್ನ ಜೊತೆಯಲ್ಲಿ ಕೆಲಸ ಮಾಡಿದ ಹಿರಿಯರಿಂದ ನಾನು ಬಹಳಷ್ಟು ಕಲಿತಿರುವೆ. ಹಾಗೆ ಹೊಸ ಸಾಹಿತ್ಯ, ಹೊಸ ವಿಚಾರಗಳನ್ನು ಮಕ್ಕಳಿಗೆ ಪರಿಚಯಿಸುವ ನನ್ನ ಆಗಿನ ಉತ್ಸಾಹಕ್ಕೆ ನಮ್ಮವರು ಸಹಕಾರ ಕೊಟ್ಟಿದ್ದಾರೆ. ನಾನು ಇನ್ನು ಎಂಟು ವರ್ಷಗಳು ಸೇವೆ ಇದ್ದಂತೆಯೇ ಸ್ವಯಂ ನಿವೃತ್ತಿ ಪಡೆದೆ. ಈಗ ನಡೆದುಬಂದ ದಾರಿ ಕಡೆಗೆ ಕಣ್ಣು ಹೊರಳಿಸಿದರೆ ನಾನು ಕಲಿಸಿರುವುದರ ಜೊತೆಗೆ ಕಲಿತಿರುವುದೂ ಇದೆ ಎಂಬ ಸಂತೋಷಕರ ಸತ್ಯ ಸಮಾಧಾನ ಕೊಡುತ್ತಿದೆ. ಅಧ್ಯಯನ ಅಧ್ಯಾಪನಗಳ ಹೊಳೆನೀರು ವೈಯಕ್ತಿಕ ಕಷ್ಟ ದುಮ್ಮಾನಗಳ ಕಸಕಡ್ಡಿಗಳನ್ನು ಕೊಚ್ಚಿಕೊಂಡು ಹೋಗಿದೆ.
“ಮೇಲು ಮೇಲಕ್ಕೇರಿ ಅರ್ಥ ತತ್ವವನಿದೋ ಬಳಲಿಕೆಯನರಿಯದೆಯೇ ಬುದ್ಧಿ ಕಾಣುತಿದೆ. ಫಲ ಸಿದ್ಧಿಯಿದು ಮೊದಲ ಸುರಿಗಳು ನಿರ್ಮಿಸಿದ ಸುವಿಚಾರ ಸೋಪಾನ ಸರಣಿಗಳಿಗೆ ” ಎಂಬ ಅಲಂಕಾರಿಕರ ಮಾತು ಸಾಹಿತ್ಯದ ಉಪನ್ಯಾಸಕರ ವಿಷಯದಲ್ಲಂತೂ ಪರಮ ಸತ್ಯ.
- ಸ.ಉಷಾ – ಕಿರು ಪರಿಚಯ
*************
ಸಮಕಾಲೀನ ಕನ್ನಡ ಕಾವ್ಯದ ಮಹತ್ವದ ಕವಯಿತ್ರಿಯಾದ ಶ್ರೀಮತಿ ಸ.ಉಷಾ ಮೂಲತ: ಮೈಸೂರಿನವರಾಗಿದ್ದು, ಸದ್ಯ ಶಿವಮೊಗ್ಗದಲ್ಲಿ ನೆಲೆಸಿದ್ದಾರೆ (ಜನನ ೧೯೫೪). ವೃತ್ತಿಯಿಂದ ಅಧ್ಯಾಪಕರಾದ ಇವರು ಪ್ರವೃತ್ತಿಯಿಂದ ಕವಯಿತ್ರಿ. “ತೊಗಲು ಗೊಂಬೆಯ ಆತ್ಮಕಥೆ” (೧೯೮೮), “ಈ ನೆಲದ ಹಾಡು” (೧೯೯೦), “ಹವಳ ಹಾರಿದ ಹೊತ್ತು” (೨೦೦೫), ಕಸೂತಿ (೨೦೦೭) ಕಾವ್ಯ ಸಂಕಲನಗಳಲ್ಲದೆ “ವೈದೇಹಿ” ಎಂಬ ವಿಮರ್ಶಾ ಕೃತಿಯನ್ನೂ ಬರೆದಿದ್ದಾರೆ. ವರ್ಧಮಾನ ಉದಯೋನ್ಮುಖ, (ತೊಗಲುಗೊಂಬೆಯ ಆತ್ಮಕಥೆ) ಕರ್ನಾಟಕ ಸಾಹಿತ್ಯ ಅಕಾಡೆಮಿ (ಈ ನೆಲದ ಹಾಡು), ದಾನಚಿಂತಾಮಣಿ ಅತ್ತಿಮಬ್ಬೆ (೨೦೧೭) ಇತ್ಯಾದಿ ಪ್ರಶಸ್ತಿಗಳನ್ನು ಪಡೆದಿರುತ್ತಾರೆ.