ಟೊಮ್ಯಾಟೊ ಬೆಲೆ ೧೦೫ ರೂಪಾಯಿ, ಅದೇ ಟೊಮ್ಯಾಟೊ ಕೆಚಪ್ ೧೫ ರೂಪಾಯಿ. ಕೆಚಪ್ ಹಾಕಿ ಸಾರು ಮಾಡಿದ್ರೆ ಹೇಗಿರುತ್ತೆ? ಅಂತ ಕೆಚಪ್ ಸಾರು ಸ್ಪೆಷಲಿಸ್ಟ್ ಸುನಿತಾ ಹೆಗ್ಡೆ ಅವರು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಇವತ್ತು ಟೊಮ್ಯಾಟೊ ಇಲ್ಲದೇ ನಾನೊಂದೊಳ್ಳೆ ಟೊಮ್ಯಾಟೋ ತಿಳಿಸಾರು ಮಾಡಿದೆ . ಹೇಗಂತೀರಾ ?
ಹೇಳ್ತೀನಿ ಕೇಳಿ.. ಒಳ್ಳೆ ಬ್ರ್ಯಾಂಡಿನ ಟೊಮ್ಯಾಟೊ ಕೆಚಪ್ ನಿಂದ.. ಹೇಯ್ ನಿಜವಾಗ್ಲೂ.. ಅದೇನ್ ಚೆನ್ನಾಗಿರತ್ತೇ ಅಂತ ಮೂಗು ಮುರ್ಕೋ ಬೇಡಿ.. ಪಾಪ ಮೂಗಿಗೆ ನೋವಾಗತ್ತೆ.. ಹೇಗೆ ಮಾಡೋದು ಅಂತ ಹೇಳ್ತೀನಿ ಇರಿ.
ಬೇಕಾಗುವ ಸಾಮಗ್ರಿಗಳು :
- ತೊಗರಿ ಬೆಳೆ – ಮನೆಯವರಿಗೆ ಬೇಕಾದಷ್ಟು
- ತುಪ್ಪ – ೨ ಸ್ಪೂನ್
- ಟೊಮ್ಯಾಟೊ ಕೆಚಪ್ – ೪ ಚಮಚ
- ಸಾಸಿವೆ, ಜೀರಿಗೆ, ಒಣಮೆಣಸು ಮತ್ತು ಇಂಗು – ಸ್ವಲ್ಪ
- ಹುಣಿಸೆ ರಸ – ಸ್ವಲ್ಪ
- ಸಾರಿನ ಪುಡಿ – ಸ್ವಲ್ಪ
- ಅರಿಶಿಣ – ಸ್ವಲ್ಪ
- ಬೆಲ್ಲ, ಉಪ್ಪು – ರುಚಿಗೆ ತಕ್ಕಷ್ಟು
ಮೊದಲು ನಿಮಗೆ ಎಷ್ಟು ಬೇಕೋ ಅಂದ್ರೇ ನಿಮ್ಮ ಮನೆಯಲ್ಲಿರುವ ಜನಕ್ಕೆ ಆಗುವಷ್ಟು ತೊಗರಿ ಬೆಳೆ ಬೇಯಿಸಿ ಕೊಳ್ಳಿ. ಒಂದು ದಪ್ಪ ತಳದ ಪಾತ್ರೆ ಅಥವಾ ನೀವು ಸಾರು ಮಾಡುವ ಪಾತ್ರೆಯನ್ನು ಗ್ಯಾಸ್ ಮೇಲೆ ಇಟ್ಟು ಗ್ಯಾಸ್ ಹೊತ್ತಿಸಿಕೊಂಡು ಸಣ್ಣ ಉರಿಯಲ್ಲಿಟ್ಟುಕೊಳ್ಳಿ.. ನಂತರ ಅದಕ್ಕೆ ೨ ಸ್ಪೂನ್ ತುಪ್ಪ ಹಾಕಿ ಅದು ಬಿಸಿಯಾದ ಮೇಲೆ ಸಾಸಿವೆ ಜೀರಿಗೆ ಒಣಮೆಣಸು ಮತ್ತು ಇಂಗು ಒಗ್ಗರಣೆ ಮಾಡಿಕೊಳ್ಳಿ.. ಅದಕ್ಕೆ ಕಾಲು ಕಪ್ ನಷ್ಟು ಹುಣಿಸೆ ರಸ ಹಾಕಿ.. ಆ ಹುಣಿಸೆ ರಸಕ್ಕೆ . ಕಾಲು ಟೀ ಸ್ಪೂನ್ ಅರಿಶಿಣ ೧ ಚಮಚ, ಬೆಲ್ಲ ಮತ್ತು ಸಾರಿಗಾಗುವಷ್ಟು ರುಚಿಗೆ ತಕ್ಕಷ್ಟು ಉಪ್ಪು. ಇದಿಷ್ಟನ್ನು ಹಾಕಿ ಹಸಿ ವಾಸನೆ ಹೋಗುವ ತನಕ ಕುದಿಸಿ. ಅದು ಕುದಿದ ಮೇಲೆ ಪಾಕದಂತಾಗುವಾಗ ಅದಕ್ಕೆ ಒಂದು ೪ ರಿಂದ ೫ ಚಮಚದಷ್ಟು ಟೊಮ್ಯಾಟೊ ಕೆಚಪ್ ಅನ್ನು ಹಾಕಿ ಮತ್ತೆ ಒಂದು ನಿಮಿಷ ಕುದಿಸಿ. ಇದಿಷ್ಟನ್ನು ಸಣ್ಣ ಉರಿಯಲ್ಲಿಯೇ ಮಾಡಬೇಕು. ಈಗ ಅದಕ್ಕೆ ಬೇಯಿಸಿಟ್ಟ ಬೇಳೆ ಕಟ್ಟು ಹಾಕಿ ನಿಮಗೆಷ್ಟು ಬೇಕೋ ಅಷ್ಟು ನೀರನ್ನು ಹಾಕಿ ಚೆನ್ನಾಗಿ ಕುದಿಸಿ.
೩ ರಿಂದ ೪ ನಿಮಿಷ ಕುದ್ದ ಮೇಲೆ ಅದಕ್ಕೆ ನಿಮ್ಮ ಮನೆಯಲ್ಲಿ ಮಾಡಿದ ಸಾರಿನ ಪುಡಿ ( ನಾನು ಎಮ್ ಟ್ ಆರ್ ಹಾಕೋದು) ಮತ್ತೆ ೫ ನಿಮಿಷ ಕುದಿಸಿ.. ಕುದಿಯುವಾಗ ಕರಿಬೇವು ಕೊತ್ತಂಬರಿ ಸೊಪ್ಪು ಹಾಕಿ ಒಮ್ಮೆ ಉಪ್ಪು ಬೆಲ್ಲಸಾಕಾ ಅಂತ ರುಚಿ ನೋಡಿ.. ಈಗ ರುಚಿಯಾದ ಟೊಮ್ಯಾಟೊ ತಿಳಿಸಾರು ಸವಿಯಲು ಸಿದ್ಧ.
ನೋಡಿ ಬರೀ ೧೫ ರೂ ಕೊಟ್ಟು ತಂದಿದ್ದೆ, ಬ್ರೆಡ್ ಹಾಕ್ಕೋಂಡ್ ತಿನ್ನಕ್ಕೆ ಅಂತ . ಈ ಟೊಮ್ಯಾಟೊ ರೇಟ್ ನೋಡಿ ತಲೆ ತಿರುಗಿ ಕೂತೆ. ನಂಗೆ ತಿಳೀಸಾರು ಬಹಳಾ ಪ್ರೀತಿ.. ಇದನ್ನ ಯಾಕ್ ಟ್ರೈ ಮಾಡ್ಬಾರ್ದೂ ಅಂತ ಅನಿಸ್ತು. ಮಾಡಿದೆ.. ನಿಜಕ್ಕೂ ತುಂಬಾ ಚೆನ್ನಾಗಿ ಬಂದಿದೆ.
ಉಷ್…. ಅಷ್ಟೂ ಒಂದೇ ಸಮ ಟೈಪ್ ಮಾಡಿ ಸಾಕಾಯ್ತ್ ಮಾರಾಯ್ರೆ.. ಸರಿ ನಿಮಗಿಷ್ಟ ಆಯ್ತು ಈ ವಿಧಾನ ಅಂದ್ರೆ ಮಾಡ್ಕೊಳ್ಳಿ ತಿಂದ್ಕೊಳಿ ಆಯ್ತಾ.. ನೀವು ಮಾಡಿದ್ರೆ ನಂಗೂ ರುಚಿ ಹೇಗಿತ್ತಂತ ಹೇಳ್ತೀರಾ?….
- ಸುನಿತಾ ಹೆಗ್ಡೆ