ICU ನಲ್ಲಿದ್ರೂ ಬಿಡದೇ Selfie ಐಲು….??? – ಹಿರಿಯೂರು ಪ್ರಕಾಶ್



ಭ್ರಮೆ ಮತ್ತು ವಾಸ್ತವಗಳ ನಡುವಿನ ಸೂಕ್ಶ್ಮ ವ್ಯತ್ಯಾಸವನ್ನರಿಯುವಲ್ಲಿ ವಿಫಲರಾಗಿ, ಎಲ್ಲವನ್ನೂ ” ಸ್ವಂತಿಕೆ” ಯಲ್ಲಿ (Selfie) ತೆರೆದಿಡುವ ಉಮೇದಿನಲ್ಲಿ ನಮ್ಮ‌ “ಸ್ವಂತಿಕೆ ” ಯನ್ನು ಕಳೆದುಕೊಳ್ಳುವ ಪೈಪೋಟಿಗೆ ಬಿದ್ದಿದ್ದೇವೆ.

ಫೇಸ್ ಬುಕ್ ಎನ್ನುವ ಮಾಯಾಜಾಲದ ಮುಖಪುಸ್ತಕದಲ್ಲಿ, ತಮ್ಮೊಳಗಿನ ಎಲ್ಲಾ ವಿಚಾರಗಳನ್ನು, ಅದು ನೇರವಾಗಿ ತಮಗೆ ಸಂಬಂಧಿಸಿರುವ ಅಥವಾ ಸಂಬಂಧಿಸಿರದ ಅನೇಕಾನೇಕ ಸಂಗತಿಗಳನ್ನು ತಮ್ಮ ವಾಲ್ ಗಳಲ್ಲಿ ಮುಕ್ತವಾಗಿ ಹಾಕಿಕೊಳ್ಳಲು ಪ್ರತಿಯೊಬ್ಬರು ಸರ್ವ ತಂತ್ರ ಸ್ವತಂತ್ರರು. ಅದು ಅವರವರ ಇಷ್ಟ, ಅಭಿರುಚಿ, ಅನಿಸಿಕೆ ಅಥವಾ ಚಟ….ಹೀಗೆ ಏನಾದರೂ ಆಗಿರಬಹುದು. ಈ‌ ಬಗ್ಗೆ ಯಾರದ್ದೂ ಆಕ್ಷೇಪಣೆ ಇಲ್ಲ.

ಸಾಮಾನ್ಯವಾಗಿ ಬಹುತೇಕ ಎಲ್ಲರೂ ತಮ್ಮ ತಮ್ಮ ಸಂತೋಷದ, ಸಂಭ್ರಮಾಚರಣೆಯ, ನೆನಪಿನಲ್ಲುಳಿಯುವ ಘಟನೆಗಳ, ಹಳೆಯ ನೆನಪುಗಳ, ಸಾಧನೆಗಳ, ಸಾಧನೆಗೆ ಹೊರಟಿರುವ, ಪ್ರವಾಸದ, ಜನ್ಮದಿನದ, ವಿವಾಹ ವಾರ್ಷಿಕೋತ್ಸವದ, ಕೌಟುಂಬಿಕ ವಿಚಾರ ಅಥವಾ ಉದ್ಯೋಗಕ್ಕೆ ಸಂಬಂಧಿಸಿದ ಹತ್ತು ಹಲವು ಪೋಸ್ಟ್ ಗಳನ್ನು ಹಂಚಿಕೊಳ್ಳುತ್ತಾರೆ. ಮತ್ತೆ ಕೆಲವು ದುಃಖಕರ ಸಂಗತಿಗಳನ್ನೂ , ತಮ್ಮವರನ್ನು ಕಳೆದುಕೊಂಡ ವಿಷಾದಕರ ವಿಷಯಗಳನ್ನೂ‌ ಸಹಾ ಶೇರ್ ಮಾಡುತ್ತಾರೆ. ಹೀಗಾಗಿ ಸಾಮಾಜಿಕ ಸಾಮರಸ್ಯ ಕದಡದ ಪೋಸ್ಟ್ ಗಳನ್ನು ಹೊರತು ಪಡಿಸಿ, ಎಲ್ಲಾ ತರಹದ ಪೋಸ್ಟ್ ಗಳನ್ನು ಅವರವರ ಇಷ್ಟಾನುಸಾರ ಇಲ್ಲಿ ಹಂಚಿಕೊಳ್ಳುತ್ತಾರೆ ಹಾಗೂ ಇಂತಹದೇ ಸಬ್ಜೆಕ್ಟ್ ಅನ್ನು‌ ಶೇರ್ ಮಾಡಿಕೊಳ್ಳಬೇಕೆಂಬ‌ ಯಾವುದೇ ನಿಯಮ ಇಲ್ಲಿಲ್ಲ.

ಆದರೆ ಈ ಅದ್ಭುತ ಸ್ವಾತಂತ್ರ್ಯದ ಪರಿಕಲ್ಪನೆಯೊಳಗೆ ಕೆಲವರು ತಾವು ತೀರಾ ಖಾಸಗಿಯಾಗಿ ಅನುಭವಿಸಬೇಕಾದ ಅಥವಾ ಅನಪೇಕ್ಷಿತವಾದ ವಿಚಾರಗಳನ್ನೂ ಹಂಚಿಕೊಳ್ಳುತ್ತಿರುವುದು ಎಲ್ಲೋ ಒಂದು ಕಡೆ ಅಷ್ಟು ಸಹ್ಯವಲ್ಲವೇನೋ ಎನಿಸುತ್ತದೆ. ಈ ಮಾತುಗಳನ್ನು ಹೇಳುತ್ತಿರುವುದು ಓದುಗರ ಮತ್ತದರ ನೋಡುಗರ ದೃಷ್ಟಿಯಿಂದ ಅಲ್ಲ..! ಬದಲಿಗೆ ಈ ರೀತಿಯ ವಿಚಾರಗಳನ್ನು ಹಂಚಿಕೊಳ್ಳುವವರ ಹಿತದೃಷ್ಟಿಯಿಂದ ಎಂಬುದರ ಹಿನ್ನೆಲೆಯಲ್ಲಿ ಇದನ್ನು ಅರ್ಥ ಮಾಡಿಕೊಳ್ಳಬೇಕೇ ವಿನಃ ” ನಮ್ಮ ವಾಲ್ ನಮ್ಮಿಷ್ಟ… ಕೇಳಲು ಇವರಾರು…….” ಎಂಬ ಭಾವನೆ ಬಂದಲ್ಲಿ ಅದನ್ನಳಿಸಲು ದೇವರಿಂದಲೂ ಅಸಾಧ್ಯ !..

ಫೋಟೋ ಕೃಪೆ : IB times indian (ಸಾಂದರ್ಭಿಕ ಚಿತ್ರ)

ಈ ಹಿನ್ನೆಲೆಯಲ್ಲಿ ಕಳೆದ ಕೆಲವು‌ ದಿನಗಳಿಂದ ಕೆಲವರ ಒಂದೆರಡು ಪೋಸ್ಟ್ ಗಳನ್ನು ಗಮನಿಸಿದೆ.

ಒಬ್ಬರು ತಮ್ಮ ಕುಟುಂಬದ ಸದಸ್ಯರೊಬ್ಬರ ಹೆಣದ ಮುಂದೆ ನಿಂತು ದುಃಖಿಸುತ್ತಿರುವ Selfie ತೆಗೆದು ಅದನ್ನು ಪೋಸ್ಟ್ ಮಾಡಿದ್ದಾರೆ… !! ಸಾವಿನಂತಹಾ ಸೂತಕದ ದುಃಖದ ಸಮಯದಲ್ಲಿ ಇವರಿಗೆ ಸೆಲ್ ಫ಼ೀ ನೆನಪು ಹೇಗೆ ಬಂತೋ…??

ಮತ್ತೊಬ್ಬ ಆಸಾಮಿ ತಾನು ತನ್ನ ಕುಟುಂಬ ಸದಸ್ಯರೊಬ್ಬರ ಚಟ್ಟ ಹೊತ್ತು ನೆಡೆಯುತ್ತಿರುವ ಸೆಲ್ ಫ಼ೀ ಯನ್ನು ಅಲ್ಲಿಂದಲೇ ತೆಗೆದು ತಕ್ಷಣವೇ ಪೋಸ್ಟ್ ಮಾಡಿದ್ದಾನೆ…!! ಅತಿರೇಕದ ಪರಮಾವಧಿಗೆ ಇದನ್ನು ಉದಾಹರಣೆಯನ್ನಾಗಿ ನೋಡಬಹುದು .

ಫೋಟೋ ಕೃಪೆ : Daily mail (ಸಾಂದರ್ಭಿಕ ಚಿತ್ರ)

ಮತ್ತೊಬ್ಬರು ಯಾವುದೋ ಗಂಭೀರ ಖಾಯಿಲೆಯಿಂದ ಆಸ್ಪತ್ರೆಗೆ ಸೇರಿ ಅಲ್ಲಿ ಐಸಿಯು ಗೆ ಅಡ್ಮಿಟ್ ಆಗಿ ಆಮ್ಲಜನಕದ ಸಹಾಯದಿಂದ ಉಸಿರಾಡುತ್ತಿರುವ ತಮ್ಮ ಚಿತ್ರವನ್ನು ಐಸಿಯು‌ ಬೆಡ್ ನಿಂದಲೇ ಅಪ್ ಲೋಡ್ ಮಾಡಿ ” ನಿಮ್ಮೆಲ್ಲರ ಹಾರೈಕೆ ಇರಲಿ ಎಂದು ಬರೆದುಕೊಂಡಿದ್ದಾರೆ ” ….!! ಈ ಬಗ್ಗೆ….. No comments..!!

ಇನ್ನು ಕೆಲವರು ತಮ್ಮೆಲ್ಲಾ ದಿನಚರಿಯನ್ನು ಫೋಟೋಗಳ ಸಮೇತ ಸದಾ ಅಪ್‌ಲೋಡ್ ಮಾಡುತ್ತಲೇ ಇರುತ್ತಾರೆ. ಅಂದರೆ ಊಟ ತಿಂಡಿ ತರಕಾರಿ ವಿಚಾರದಿಂದ ಹಿಡಿದು ಎಲೆ ಅಡಿಕೆ ಹಾಕಿಕೊಳ್ಳುವ ಭಂಗಿ, ತಿನ್ನುವ ಭಂಗಿ, ಮನೆ ಮುಂದಿನ ಚಿಕ್ಕ ಕಣದ ವಿಚಾರವನ್ನೂ ಬಿಡದಂತೆ ಫೋಟೋ ತೆಗೆದು ಪೋಸ್ಟ್ ಮಾಡುವ ಉತ್ಸಾಹ ಇವರಿಗೆ . ಇವರ ಈ ತರಹದ ಪೋಸ್ಟ್ ಗಳಿಗೂ ಸಾಕಷ್ಟು ಲೈಕ್ಸ್ ಕಾಮೆಂಟ್ಸ್ ಗಳು ಬರುತ್ತಿದ್ದರಿಂದಲೋ ಏನೋ ಅದರಿಂದ ಅವರು ಉತ್ತೇಜಿತರಾದಂತೆ ಸದಾ ಎಲ್ಲವನ್ನೂ ಅಪ್ ಡೇಟ್ ಮಾಡಿ ಖುಷಿ ಪಡುತ್ತಿದ್ದರು. ತುಂಬಾ ಸಂತೋಷ. ನಾನು ಮೊದಲೇ ಹೇಳಿದಂತೆ ಅದು ಅವರಿಷ್ಟ- ಅವರ ಗೋಡೆ . ಇದು ತಪ್ಪಲ್ಲ !!

ಫೋಟೋ ಕೃಪೆ : Uberhumer (ಸಾಂದರ್ಭಿಕ ಚಿತ್ರ)

ಆದರೆ…ಕೆಲವರ ಇತ್ತೀಚಿನ ಒಂದೆರಡು ಪೋಸ್ಟ್ ನೋಡಿದಾಗ ತುಂಬಾ‌ ಮುಜುಗರವೆನಿಸಿತು. ಮೊದಲು ತಮಗೆ ಕೋವಿಡ್ ಬಂದು ಆಸ್ಪತ್ರೆ ಬೆಡ್ ಮೇಲಿರುವ ಫೋಟೋ ಅಪ್ ಲೋಡ್ ಮಾಡಿದರು. ಅದು ಸಹಜ‌ ಬಿಡಿ. ಅವರು ಗುಣವಾಗಲಿಕ್ಕೆಂದು ಸಾಕಾಗುವಷ್ಟು ಶುಭಹಾರೈಕೆಗಳು‌ ಬಂದವು. ನಾನೂ ರಿಕವರ್ ಆಗಲೆಂದು ಹಾರೈಸಿದೆ. ಆದರೆ‌ ನನಗೆ ತುಂಬಾ ಅಚ್ಚರಿ ಅಥವಾ ಈ ಫೇಸ್ ಬುಕ್ ಸೃಷ್ಟಿಸುವ ವಿಚಿತ್ರ ಐಲು ಎನಿಸಿದ್ದು… ಒಬ್ಬರು ತುಂಬಾ ಸುಸ್ತಾಗಿದ್ದ ತಮ್ಮವರನ್ನು ಸ್ಟ್ರೆಚರ್ ಮೇಲೆ ಆಸ್ಪತ್ರೆಯವರು ಆಪರೇಷನ್ ಥಿಯೇಟರ್ ನ ಅಥವಾ ಐಸಿಯು ಒಳಕ್ಕೋ ಆತಂಕದಿಂದ ಕರೆದುಕೊಂಡು ಹೋಗುತ್ತಿರುವ‌ ಸಂದರ್ಭದಲ್ಲಿ ಅವರೊಟ್ಟಿಗೆ ತಮ್ಮ ಸೆಲ್‌ ಫ಼ೀ ತೆಗೆದು ಅದರ ಚಿಕ್ಕ ಕಾಮೆಂಟರಿ ಕೊಟ್ಟು ಫೇಸ್ ಬುಕ್ಕಲ್ಲಿ ಅಪ್ ಲೋಡ್ ಮಾಡಿ , ಆದಷ್ಟು ಬೇಗನೇ ಗುಣಮುಖರಾಗಿ ಬನ್ನಿ ಎಂದು ಬರೆದು ಪೋಸ್ಟ್ ಮಾಡಿದ್ದನ್ನು ನೋಡಿ‌ ಏನನ್ನಬೇಕೋ ತಿಳಿಯುತ್ತಿಲ್ಲ.

ತನ್ನ ಜೀವಕ್ಕೆ ಆಪ್ತರಾದವರನ್ನು ಸ್ಟ್ರೆಚರ್ ಮೇಲೆ ತುರ್ತು ಚಿಕಿತ್ಸೆಗಾಗಿ ಕರೆದುಕೊಂಡು ಹೋಗುತ್ತಿರುವ ಸಂಧರ್ಭದಲ್ಲಿ ಇವರಿಗೆ ಸೆಲ್ ಫ಼ಿ ಅಥವಾ ಫೋಟೊ ತೆಗೆಸಿಕೊಳ್ಳುವ ವಿಚಿತ್ರ ಆಸೆ ಎಲ್ಲಿಂದ ಬಂತೋ ಗೊತ್ತಿಲ್ಲ. ತಮ್ಮ ಜೀವದ ಜೀವವಾಗಿರುವ ಕುಟುಂಬ ಸದಸ್ಯರೊಬ್ಬರನ್ನು ಸೀರಿಯಸ್ಸಾಗಿ ಎಮರ್ಜೆನ್ಸಿ ಚಿಕಿತ್ಸೆಗೆ ಕರೆದೊಯ್ಯುವ ಸಂಧರ್ಭದಲ್ಲಿ ಮನದಲ್ಲಿ‌ ಅವರ ಆರೋಗ್ಯದ ಗಂಭೀರತೆ‌ಯ ಬಗೆಗಿನ ದುಗುಡ, ಆತಂಕ, ಕಳವಳ ಬಿಟ್ಟರೆ ಬೇರೇನಾದರೂ ಯೋಚನೆ ಬರಲು ಸಾಧ್ಯವೇ…?? ಅಂತಹ ತೀರಾ ಖಾಸಗಿ‌ ಹಾಗೂ ಸಂಕಟಮಯ, ಭಾವನಾತ್ಮಕ ಅಥವಾ ದುಃಖಕರ ಸನ್ನಿವೇಶದಲ್ಲಿ ಸಾಮಾನ್ಯವಾಗಿ ಬೇರೇನೂ ತಲೆಗೆ ಹೊಳೆಯಲಾರದು, ಹೊಳೆಯಲೂ ಬಾರದು . ಆದರೆ ಈ ಫೇಸ್ ಬುಕ್ ಎಂಬ ಮಾಯಾಮೋಡಿಗೆ ಸಿಲುಕಿದ ನಮ್ಮಲ್ಲಿ ಕೆಲವರು ಯಾವ ಸಂಧರ್ಭದಲ್ಲಿ ಹೇಗಿರಬೇಕೆಂಬ ಕನಿಷ್ಟ ತಿಳಿವಳಿಕೆಗೂ ತರ್ಪಣ ಕೊಟ್ಟಿದ್ದೇವೇನೋ ಅನಿಸಿತು.




ಈ ರೀತಿಯ ತೀರಾ ಖಾಸಗಿ ಹಾಗೂ ‌ಭಾವುಕತೆಯ ಸನ್ನಿವೇಶಗಳ ಪೋಸ್ಟ್ ಗಳನ್ನು ಹಾಕುವ ಸ್ನೇಹಿತರಲ್ಲಿ ಒಂದು‌ ವಿನಯಪೂರ್ವಕ ಭಿನ್ನಹ. ನೀವು ಹಾಕಿದ ಪೋಸ್ಟ್ ಗಳಿಗೆ ನೂರಾರು ಲೈಕು ಅಥವಾ ನೂರು ಕಾಮೆಂಟು ಇಲ್ಲವೇ ಬೇಗ ಹುಷಾರಾಗಿ ಎನ್ನುವ ಸ್ಮೈಲೀಗಳನ್ನು‌ ಬಿಟ್ಟರೆ Empathetic ಆಗಿ ನಿಮ್ಮ ಕಷ್ಟಕ್ಕೆ ಸ್ಪಂದಿಸುವವರು ಕಡಿಮೆ ಅಥವಾ ಈ ಕೊರೋನಾ ಲಾಕ್ ಡೌನ್ ಸಂಧರ್ಭದಲ್ಲಿ ಹೀಗೆ ಫೇಸ್ ಬುಕ್ ಗೆಳೆಯರು ಅಥವಾ ಸಾರ್ವಜನಿಕರು ಸ್ಪಂದಿಸಲು ಸಾಧ್ಯವೇ ಇರದು . ಲೈಕು ಕೊಟ್ಟ ಮರುಕ್ಷಣವೇ ಯಾವುದಕ್ಕೆ ಲೈಕು ಒತ್ತಿದ್ದೇವೆಂದು ಸಹಾ‌ ನೆನಪಲ್ಲಿಟ್ಟುಕೊಳ್ಳದಷ್ಟು ಪೋಸ್ಟ್ ಗಳು‌ ಕ್ಷಣಕ್ಷಣಕ್ಕೂ ಫೇಸ್ ಬುಕ್ ನಲ್ಲಿ ಹರಿದಾಡುತ್ತಿರುತ್ತವೆ. ಹೀಗಾಗಿ ಅಂತಹಾ ಸಮಯದಲ್ಲಿ‌ ನಮ್ಮ‌ ಖಾಸಗಿಯಾಗಿ ಅನುಭವಿಸಬೇಕಾದ, ಎದುರಿಸಬೇಕಾದ ಅಥವಾ ಅದುಮಿಟ್ಟುಕೊಳ್ಳಬೇಕಾದ ದುಃಖಕರ , ದುಗುಡಮಯ‌ ಭಾವನೆಗಳನ್ನು ಸಾಮಾಜಿಕ‌ ಜಾಲತಾಣದಲ್ಲಿ ಹಂಚಿಕೊಳ್ಳುವ ಅನಗತ್ಯ ಹಪಾಹಪಿತನ ಸಹ್ಯವೇ ??? ನಿಮ್ಮ ಆ‌ ಸಂದರ್ಭದ ಖಾಸಗೀತನದ ಅಂತರಂಗದ ಮಿಡಿತಗಳಿಗಿಂತಲೂ‌ ನೀವು ಹಾಕುವ ಪೋಸ್ಟ್ ಗೆ ಸಿಗುವ ಪ್ರಚಾರದ ಟೇಸ್ಟೂ ಅಥವಾ ಲೈಕುಗಳೇ ಮುಖ್ಯವೇ ?? ಅಥವಾ ಲೈಕುಗಳಿಂದ ಲೈಫ಼ು ಉಳಿಯಬಲ್ಲದಾದರೆ ಯಾರೂ ಆಸ್ಪತ್ರೆಗೆ ಸೇರುವ ಅಗತ್ಯವೇ ಇಲ್ಲವೇನೋ..?

ದಯವಿಟ್ಟು ಚೆನ್ನಾಗಿ ಅರ್ಥ ಮಾಡಿಕೊಳ್ಳಿ ! ಹಾಗೆಂದ ಮಾತ್ರಕ್ಕೇ ಸಂಕಟದ ಸಮಯದಲ್ಲಿ ಮನಸಾರೆ ವಿಶ್ ಮಾಡುವವರನ್ನು, ಬೇಗ ಗುಣಮುಖರಾಗಿ ಎಂದು ಹಾರೈಸುವವರನ್ನು ಕಡೆಗಣಿಸಿ ಎಂದು ನಾನು ಖಂಡಿತವಾಗಿ ಹೇಳುತ್ತಿಲ್ಲ. ಆದರೆ ಸಂದರ್ಭ, ಸನ್ನಿವೇಶ ಹಾಗೂ ಅದರ ಗಂಭೀರತೆಯನ್ನು ಹಾಗೂ ಮುಖ್ಯವಾಗಿ ನಮ್ಮೊಳಗಿನ ಕಾಮನ್ ಸೆನ್ಸನ್ನು ಬಿಡಬಾರದಲ್ಲವೇ? ಎಂಬುದಷ್ಟೇ ನನ್ನ‌ ಸಣ್ಣ ಆಕ್ಷೇಪ . ಇದಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ, ಅದೇ ಪೋಸ್ಟನ್ನು ತಮ್ಮವರು ಹುಷಾರಾದ ಮೇಲೆ ಆ ಘಟನೆಯ ವಿವರವನ್ನು ಹಂಚಿಕೊಂಡಿದ್ದಲ್ಲಿ ಆಕಾಶವೇನೂ ತಲೆಯ ಮೇಲೆ ಬೀಳುತ್ತಿರಲಿಲ್ಲ. ಇದು ಟೀಕೆಯಲ್ಲ- ಟಿಪ್ಪಣಿಯೂ ಅಲ್ಲ. ಮೇಲಾಗಿ ಬೇರೆಯವರ ವೈಯಕ್ತಿಕ ಪೋಸ್ಟ್ ಗಳನ್ನು ಟೀಕಿಸುವ ಅರ್ಹತೆ ನಮಗಾರಿಗೂ ಇಲ್ಲ ….. ಆದರೆ ಈ ತರಹದ ಪೋಸ್ಟ್ ಹಾಕುವುದರಿಂದ ವಿದ್ಯೆ ಕಲಿತು ಸಂಪಾದಿಸಿದ ಡಿಗ್ರಿಗಳನ್ನು ನಮ್ಮ ಹೆಸರಿನ ಮುಂದೆ ಹಾಕಿಕೊಳ್ಳಬಹುದೇ ವಿನಃ, ವಿವೇಕವೆನ್ನುವುದು ಅಲ್ಲಿ ಮರೆಯಾಗಿ ಎಲ್ಲರೆದುರು ಕುಬ್ಜರಾಗುತ್ತೇವೆಂದು‌ ಹೊಳೆಯುವುದೇ ಇಲ್ಲ. ಅಥವಾ ಆ ಪೋಸ್ಟ್ ನಲ್ಲಿ‌ ಇದನ್ನು ತಪ್ಪು ಎಂದು ಯಾರೂ ಹೇಳುವುದೂ ಇಲ್ಲ. ಹೀಗಾಗಿ ನನ್ನ ಈ ಸಾಲುಗಳು ಅಂಥವರಲ್ಲಿ ಸ್ವಲ್ಪಮಟ್ಟಿಗೆ ರೋಷ ಉಕ್ಕಿಸಿದರೂ ಪರವಾಗಿಲ್ಲ, ಇದು ಅವರ ಒಳ್ಳೆಯದಕ್ಕೇ ಎಂದು‌ ಅರ್ಥವಾದರೆ ಸಾಕು..!



ಮರೆಯುವ ಮುನ್ನ

ಇಂದಿನ ಭ್ರಮಾತ್ಮಕ ಭಾಷಣಗಳು, ಭ್ರಮಾತ್ಮಕ ಲೋಕ, ಭ್ರಮಾತ್ಮಕ ನೋಟಗಳಲ್ಲಿ ನಾವು ವಾಸ್ತವತೆಯ ಮೌಲ್ಯಗಳನ್ನು ನಿಧಾನವಾಗಿ ಪಕ್ಕಕ್ಕೆ ಸರಿಸುತ್ತಿದ್ದೇವೆ. ಅರ್ಥವಿರದ ಅನುಬಂಧಗಳ ಓಲೈಕೆಗಾಗಿ ಪಕ್ಕದಲ್ಲಿರುವ ಆಪ್ಯಾಯತೆಯನ್ನು ಕೈ ಚೆಲ್ಲುತ್ತಿದ್ದೇವೆ. ಭ್ರಮೆ ಮತ್ತು ವಾಸ್ತವಗಳ ನಡುವಿನ ಸೂಕ್ಶ್ಮ ವ್ಯತ್ಯಾಸವನ್ನರಿಯುವಲ್ಲಿ ವಿಫಲರಾಗಿ, ಎಲ್ಲವನ್ನೂ ” ಸ್ವಂತಿಕೆ” ಯಲ್ಲಿ (Selfie) ತೆರೆದಿಡುವ ಉಮೇದಿನಲ್ಲಿ ನಮ್ಮ‌ “ಸ್ವಂತಿಕೆ ” ಯನ್ನು ಕಳೆದುಕೊಳ್ಳುವ ಪೈಪೋಟಿಗೆ ಬಿದ್ದಿದ್ದೇವೆ.

ಇಂತಹಾ ಸೂಕ್ಷ್ಮ ವಿಚಾರದಲ್ಲಿ ಒಬ್ಬರಿಗೆ ತಪ್ಪು ಅನಿಸಿದ್ದು ಮತ್ತೊಬ್ಬರಿಗೆ ಸರಿ ಅನಿಸಲೂ‌ಬಹುದು… ‌ಹೀಗಾಗಿ ಇದು ಸರಿ‌ ಅನಿಸಿದರೆ ಅನುಸರಿಸಿ.., ತಪ್ಪು ಎಂದಾದಲ್ಲಿ….
ಜಸ್ಟ್ Ignore ಮಾಡಿಬಿಡಿ…..!! ನಿಮ್ಮ ಗೋಡೆ ನಿಮ್ಮಿಷ್ಟ ..!

ಲಾಸ್ಟ್ ಪಂಚ್

ಎಲ್ಲವನ್ನೂ ಮಾತುಗಳಲ್ಲಿ ಹೇಳುವುದಾಗಿದ್ದರೆ ಮೌನಕ್ಕೆ ಅರ್ಥವಿರುತ್ತಿತ್ತೇ?
ಎಲ್ಲವನ್ನೂ ಬಿಚ್ಚಿಡುವುದಾಗಿದ್ದರೆ ಮುಚ್ಚಿಡುವುದಕ್ಕೆ ಮಹತ್ವವಿರುತ್ತಿತ್ತೇ ??
ಎಲ್ಲವನ್ನೂ ಭಾಷೆಯೇ ಅಭಿವ್ಯಕ್ತಿಸುವುದಾದರೆ ಭಾವನೆಗಳಿಗೆ ಬೆಲೆಯಿರುತ್ತಿತ್ತೇ……..???
ಯೋಚಿಸಬೇಕಾದ ವಿಷಯ….. !

ಪ್ರೀತಿಯಿಂದ ……..


  • ಹಿರಿಯೂರು ಪ್ರಕಾಶ್ (ಲೇಖಕರು, ಚಿಂತಕರು)

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW