ಕರೋನ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಜನ ತಲ್ಲೀನರಾಗಿದ್ದಾರೆ. ಕೆಲವರು ಕೊರೋನಾ ಜಾಗೃತಿ ಮೂಡಿಸುವ ವಿಡಿಯೋ ಮಾಡಿ ಹಾಕುತ್ತಿದ್ದರೇ, ಇನ್ನು ಕೆಲವು ಬರಹಗಾರರು ಲೇಖನ, ಕವನ, ಕತೆಗಳನ್ನು ಬರೆದು ಸಿಕ್ಕ ಸಮಯವನ್ನು ಒಳ್ಳೆಯ ರೀತಿಯಲ್ಲಿ ಬಳಸಿಕೊಳ್ಳುತ್ತಿದ್ದಾರೆ. ಇದರ ಮಧ್ಯೆ ಕೆಲವಷ್ಟು ಜನ, ಏನು ಮಾಡದೇ ಬಂದ ಮೆಸೇಜ್ ಗಳಲ್ಲಿ ಸತ್ಯಾಂಶ ತಿಳಿಯದೇ ಇನ್ನೊಬ್ಬರಿಗೆ ಶೇರ್ ಮಾಡುವ ಕೆಲಸವನ್ನುಮಾಡುತ್ತಿದ್ದಾರೆ. ಶೇರ್ ಮಾಡುವ ಮೊದಲು ನಮ್ಮ ಜವಾಬ್ದಾರಿಯನ್ನು ಅರಿಯುವುದು ಮುಖ್ಯ. ಇದರ ಬಗ್ಗೆ ಲೇಖಕರಾದ ಮಂಜುನಾಥ.ಎಂ.ದೊಡ್ಡಮನಿ ಅವರು ಅರ್ಥಪೂರ್ಣವಾಗಿ ಬರೆದಿದ್ದಾರೆ. ಓದಿ ಸಾಧ್ಯವಾದಷ್ಟು ಒಳ್ಳೆಯದನ್ನು ಹಂಚಿಕೊಳೋಣ.ಕೆಟ್ಟದನಲ್ಲ.
ಸತ್ಯ ಮತ್ತು ಸುಳ್ಳು ಇಬ್ಬರೂ ಅವಳಿ ಜವಳಿ.. ಸತ್ಯ ಇದ್ದಿದ್ದನ್ನು ಇದ್ದ ಹಾಗೇ ಹೇಳುವ ವ್ಯಕ್ತಿ. ಆದರೆ ಸುಳ್ಳು ಜನರನ್ನು ಸುಲಭವಾಗಿ ಯಾಮಾರಿಸೋ ಗುಣ ಹೊಂದಿದ ವ್ಯಕ್ತಿ.
ಸುಳ್ಳನ್ನು ಸತ್ಯವೆಂದು, ಸತ್ಯವನ್ನು ಸುಳ್ಳೆಂದು ಹೇಳುವ ವ್ಯಕ್ತಿ. ಕೆಲವು ಜನಕ್ಕೆ ಜೈಕಾರ ಹಾಕಿ ಮೆರವಣಿಗೆ ಮಾಡುವುದರಲ್ಲೇ ಖುಷಿ, ನೆಮ್ಮದಿ.ಅಂದು ಆಗಿದ್ದೂ ಅದೇ.ಸುಳ್ಳನ್ನು ಸತ್ಯವೆಂದುಕೊಂಡು ಹಾರ ತುರಾಯಿ ಹಾಕಿ ಊರೆಲ್ಲ ಮೆರವಣಿಗೆ ಮಾಡಿಕೊಂಡರು. ಈ ಸದ್ದು ಗದ್ದಲಗಳ ನಡುವೆ ಸತ್ಯದ ಆರ್ಥನಾದ ಯಾರಿಗೂ ಕೇಳಲೇ ಇಲ್ಲ..ಕೊನೆಗೆ ಒಂದಿಷ್ಟು ಜನ ಸತ್ಯದ ಮಾತಿಗೆ ಕಿವಿಯಾದರು. ಕಾಲ ಮಿಂಚಿ ಹೋಗಿತ್ತು. ಮೆರವಣಿಗೆ ಮಾಡಿದವರಲ್ಲಿ ಕೆಲವರು ತಲೆಮರೆಸಿಕೊಂಡರು, ಇನ್ನುಳಿದವರು ತಪ್ಪು ಮುಚ್ಚಲು ತಿಪ್ಪೆ ಸಾರಿಸಿದರು, ಕೆಲವರು ಪ್ರಾಮಾಣಿಕವಾಗಿ ಒಪ್ಪಿಕೊಂಡರೂ ಸಹಃ. ಸುಳ್ಳಿಗೆ ಸಿಕ್ಕ ಪ್ರಚಾರ, ಮೆರವಣಿಗೆ ಸತ್ಯಕ್ಕೆ ಸಿಗಲಿಲ್ಲ.
ಸತ್ಯಕ್ಕೆ ಕಿವಿಯಾದ ಜನ ಏನಿದು ಹೀಗಾಯ್ತಲ್ಲ ಎಂದು ಸತ್ಯದ ಬಗ್ಗೆ ಸಂತಾಪ ವ್ಯಕ್ತಪಡಿಸಿದರು. ಸತ್ಯ ಹೇಳಿತು “ಇದೇನೂ ನನಗೆ ಹೊಸತಲ್ಲ.ನನಗೆ ಅವಮಾನವಾದಾಗಲೆಲ್ಲ ಹೆಚ್ಚಿನ ಜನ ಸುಳ್ಳಿನ ಮೆರವಣಿಗೆ ಮಾಡಿ ಮುಗಿಸಿಬಿಟ್ಟಿರುತ್ತಾರೆ. ನನ್ನನ್ನು ಅರ್ಥೈಸಿಕೊಳ್ಳಲು ನಿಮ್ಮಂತಹ ತಾಳ್ಮೆಯುಳ್ಳ ಜನಕ್ಕೆ ಮಾತ್ರ ಸಾಧ್ಯ.ಇಷ್ಟರಲ್ಲೇ ನೆಮ್ಮದಿ ನನಗೆ”.
ಯಾಕೆ ಹೀಗೆ? ತಪ್ಪು ಮಾಧ್ಯಮದವರದಾ? ಅವರದಷ್ಟೇ ತಪ್ಪಾಗಿದ್ರೆ, ನಮ್ಮ ಬುದ್ಧಿ ಎಲ್ಲಿ ಹೋಗಿತ್ತು..? ಯಾವುದೇ ವಿಷಯ ಬಂದಾಗ ಕ್ಷಣ ಮಾತ್ರ ಯೋಚಿಸದೇ ಫಾರವರ್ಡ್ ಮಾಡೋ ಅಷ್ಟು ಅಜ್ಞಾನ ನಮ್ಮಲ್ಲಿ ಮನೆ ಮಾಡಿದ್ದು ಹೇಗೆ? ಇಷ್ಟೆಲ್ಲಾ ಪದವಿ,ಪುರಸ್ಕಾರಗಳನ್ನೆಲ್ಲ ಗಳಿಸಿದ ನಾವು ತಾಳ್ಮೆ ಕಳೆದುಕೊಳ್ಳುತ್ತಿದ್ದೀವಾ? ಒಬ್ಬ ಜವಾಬ್ದಾರಿಯುತ ಶಿಕ್ಷಕ,ವಿಜ್ಞಾನಿ,ಲಾಯರ್ ಇತ್ಯಾದಿಯಾಗಿ ಈ ಸಾಮಾಜಿಕ ಜಾಲತಾಣಗಳಲ್ಲಿ ಅಪ್ರಬುದ್ಧರಾಗಿ ವರ್ತಿಸುವುದು ಎಷ್ಟು ಸರಿ?
ಇಲ್ಲಿ ನಾವು ಗಮನಿಸಬೇಕಾದ ಅಂಶವೆಂದರೆ ಸಾಮಾಜಿಕ ಜಾಲತಾಣಗಳಲ್ಲಿನ ಪೋಸ್ಟ್ಗಳು ಒಂದು ರೀತಿ ವೈರಸ್ ನಂತೆಯೇ ಸರಿ..ಒಬ್ಬರಿಂದ ಒಬ್ಬರಿಗೆ ಹರಡಿ ಅಲ್ಲಲ್ಲಿ ಜಗಳವನ್ನು ತಂದಿಟ್ಟು, ವೈಮನಸ್ಸನ್ನು ಸೃಷ್ಟಿಮಾಡಿ ಕೆಲವರನ್ನು ರೋಗಿಗಳನ್ನಾಗಿಸುತ್ತ ಮುಂದೆ ಸಾಗುತ್ತಾ ಹೋಗುತ್ತದೆ.
ನಮ್ಮ ಒಂದು ಅಸ್ಪಷ್ಟ, ಅಸತ್ಯ ಸಂದೇಶ ಎಷ್ಟು ಜನರ ಮನಸ್ಸನ್ನು,ದೇಶವನ್ನು ಘಾಸಿಗೊಳಿಸಬಹುದೆಂದು ಯೋಚಿಸಿದ್ದೀವಾ?.
ಇದು ಸ್ವವಿಮರ್ಶೆಗಾಗಿ ಹಾಕಿದ ಬರಹ. ನಿಮಗೂ ಸತ್ಯ, ಅವಶ್ಯಕ ಹಾಗೂ ಸರಿ ಎಂದನಿಸಿದರೆ ಇವತ್ತಿಗೇ ಇದೆಲ್ಲದಕ್ಕೂ ಅಂತ್ಯ ಹಾಡಿ. ಯಾವುದೇ ಬರಹ, ಪೋಸ್ಟ್, ನ್ಯೂಸ್ ಬಂದಾಗ ಶೇರ್ ಆಪ್ಷನ್ ಮೇಲೆ ಬೆರಳಿಕ್ಕುವ ಮೊದಲು ಯೋಚಿಸೋಣ.
ಇದರಲ್ಲಿ ನಿಮ್ಮ ನೆಮ್ಮದಿ, ಸಮಾಜದ ಸ್ವಾಸ್ಥ್ಯ ಅಡಗಿದೆ. ಇಲ್ಲ ನಾನು ಮೊದಲಿನ ಹಾಗೇ ಇರುತ್ತೇನೆ ಅಂದರೆ ನಿಮ್ಮನ್ನು ತಡೆಯುವವರು ಯಾರು?ಮುಂದುವರೆಸಿ.
- ಮಂಜುನಾಥ.ಎಂ.ದೊಡ್ಡಮನಿ, ಗುಳೇದಗುಡ್ಡ.
