ಮನುಜನೆ ಅಲ್ಲ, ಪ್ರಕೃತಿಯೂ ಕೂಡಾ ವಿರಹ ಗೀತೆಗಳನೇ ಬರೆಯುತ್ತವೆ… ವಸಂತನಿಲ್ಲದ ಶಿಶಿರದಲಿ! ಕವಿ ಹೆಚ್.ಪಿ.ಕೃಷ್ಣಮೂರ್ತಿ ಅವರ ಸುಂದರ ಕವಿತೆಯನ್ನು ತಪ್ಪದೆ ಮುಂದೆ ಓದಿ…
ಶಿಶಿರದಲಿ
ಗಿಡ ಮರಗಳೆಲ್ಲ
ಎಲೆ ಉದುರಿಸಿಕೊಂಡು
ನಿರ್ಮೂಹಿಯಂತೆ
ಪೋಜು ಕೊಡುವ
ಸಂತ
ಬರುವವರೆಗೂ
ವಸಂತ
ಬಂದ ಮೇಲೆ
ಹೊಸ ಹಸಿರು ವಸ್ತ್ರ ತೊಟ್ಟು
ಓಲಾಡುತ ಮೆರೆಯುವ
ಸಿರಿವಂತ!
ಶಿಶಿರ ಬಂದರೆ
ಪ್ರಕೃತಿ
ತನ್ನ ಮೈ ಕೊಡವಿ ಕೊಂಡು
ದಿನವೂ ಮಂಜಿನಭ್ಯಂಜನ
ಮಾಡಿಕೊಂಡು ಅಣಿಯಾಗುತ್ತಾಳೆ
ಹೊಚ್ಚ ಹೊಸ ಹಸಿರು ಸೀರೆ
ಧರಿಸಿಕೊಳ್ಳಲು
ಮಧುವಣಗಿತ್ತಿಯಂತೆ
ಸಿಂಗರಿಸಿಕೊಂಡು
ವಸಂತನ ಕೈ ಹಿಡಿಯಲು!
ಮನುಜನೆ ಅಲ್ಲ
ಪ್ರಕೃತಿಯೂ ಕೂಡಾ
ವಿರಹ ಗೀತೆಗಳನೇ ಬರೆಯುತ್ತವೆ
ವಸಂತನಿಲ್ಲದ ಶಿಶಿರದಲಿ!
ಶಿಶಿರದಲಿ ಉದುರಿ
ನೆಲಕಚ್ಚಿದಂತೆ ಹಳೆಯ
ತರಗೆಲೆಗಳು
ಉದುರಿ ಬೀಳಬೇಕೋ ಮನದಿ
ಪಾಚಿಗಟ್ಟಿದ ಕೊಳೆಯ
ನೆನಪುಗಳು!
- ಹೆಚ್. ಪಿ. ಕೃಷ್ಣಮೂರ್ತಿ, ಬೆಂಗಳೂರು
