‘ಶಸ್ತ್ರಸಂತಾನ’ ನಾಟಕ ಪರಿಚಯ – ಕಿರಣ್ ಭಟ್ಸಿದ್ಧಲಿಂಗ ಪಟ್ಟಣಶೆಟ್ಟಿ ಅವರ ಅನುವಾದಿತ ‘ಶಸ್ತ್ರ ಸಂತಾನ’ ನಾಟಕವನ್ನು ‘ಸಮುದಾಯ’ ತಂಡ ಇತ್ತೀಚಿಗೆ ಬೆಂಗಳೂರಿನಲ್ಲಿ ಪ್ರದರ್ಶನ ನೀಡಿತು. ನಾಟಕದ ಕುರಿತು ನಾಟಕಕಾರ ಕಿರಣ್ ಭಟ್ ಅವರು ಬರೆದ ಲೇಖನ ಪರಿಚಯ, ಮುಂದೆ ಓದಿ…

ನಾಟಕ : ಶಸ್ತ್ರ ಸಂತಾನ
ಮೂಲ: ರಾಮೇಶ್ವರ ಪ್ರೇಮ್
ಅನುವಾದ : ಸಿದ್ಧಲಿಂಗ ಪಟ್ಟಣಶೆಟ್ಟಿ
ನಿರ್ದೇಶನ : ಶ್ರೀಪಾದ ಭಟ್
ತಂಡ : ‘ಸಮುದಾಯ’ ಬೆಂಗಳೂರು.

ನಾಟಕ ಶುರುವಾಗೋದೇ ಒಂದಿಷ್ಟು ಶಸ್ತ್ರ ಗಳು ಗುಡುಗುವ ಸದ್ದು ಮತ್ತು ಮಗುವೊಂದರ ಆಕ್ರಂದನದ ಕ್ಷಣದಲ್ಲಿ. ಶಸ್ತ್ರ ಸಂತಾನವೊಂದರ ಹುಟ್ಟಿನ ಸೂಚನೆಯ ಮೂಲಕ. ಮುಗಿಯೋದು ಘಟೋದ್ಗಜನ ಸಾವಿನ ಜೊತೆಯಲ್ಲಿ. ಆತನ ಪ್ರಾಣ ಪಕ್ಷಿ ಹಾರುವ ಕ್ಷಣದಲ್ಲಿ.

ನಾಟಕ ಶುರುವಾಗುತ್ತಿದ್ದಂತೆ ಎರಡು ಹದ್ದುಗಳು ಹಾರುತ್ತ ಹಾರುತ್ತ ಬಂದು ರಣಭೂಮಿಯಲ್ಲಿ ಹೆಣಗಳನ್ನ ಕುಕ್ಕಿ ಕುಕ್ಕಿ ತಿಂದು ತಿಂದು ಹಾಕುತ್ತವೆ . ಕೊನೆಯಲ್ಲೂ ಅವು ಮತ್ತೆ ಕಾಯುತ್ತವೆ ಘಟೋದ್ಗಜನ ದೇಹಕ್ಕಾಗಿ……ಹಾರುವ ಹಕ್ಕಿಗಳನ್ನ ಕುಕ್ಕುವದಕ್ಕಾಗಿ.

ಈ ನಡುವೆ ನಡೆಯೋದೇ ಅಧಿಕಾರದ ಹಪಾಹಪಿಯ ಶಸ್ತ್ರ ರಾಜಕಾರಣದ ಮಹಾನ್ನಾಟಕ.

“ಸೂಜಿ ಮೊನೆಯಷ್ಟು ಭೂಮಿ(?) ಗಾಗಿ ನಡೆಯೋ ಈ ರಣರಂಗದ ನಾಟಕದಲ್ಲಿ ನೇರಾ ನೇರ ಹಿಂಸೆಗೆ ಗುರಿಯಾಗುವವರು ಎಂದಿನಂತೆ ಮಹಿಳೆಯರೇ. ಶಸ್ತ್ರಗಳ ವ್ಯಾಪಾರಿ ಇಂದ್ರ ತನ್ನ ಶಸ್ತ್ರವನ್ನ ಕೊಟ್ಟು ಕರ್ಣನ ಕವಚ ಕುಂಡಲಗಳನ್ನ ಕಿತ್ತುಕೊಂಡು ಬಂದಿದ್ದಾನೆ. ಇನ್ನೂ ಎದೆಬಡಿತ ಹಿಡಿದುಕೊಂಡಿರುವ ಕವಚವನ್ನ ಎದೆಗೊತ್ತಿಕೊಂಡ ಕುಂತಿಯ ಒಡಲು ಹರಿದು ಹೋಗಿದೆ. ಒಂದು ಮಹಾಯುದ್ಧವನ್ನ ಕೊನೆಗೊಳಿಸೋದಕ್ಕೆ ಜಯದ್ರಥನ ಹತ್ತಿರ ಮಾನಭಂಗ ಎನ್ನೋ‌ ಅಸ್ತ್ರವಿದೆ. ತುಸುವೂ ರಕ್ತ ಹರಿಸದೇ ದ್ರೌಪದಿಯ ಮಾನಭಂಗ ಮಾಡಿ ನೆಲ ಜಯಿಸುವ ಅಸ್ತ್ರ ಅದು. ಆದರೆ ಇಂಥ ಅಸ್ತ್ರಕ್ಕೆ ಆತನ ಹೆಂಡತಿಯೇ ಬಲಿಯಾಗುತ್ತಾಳೆ. ಇನ್ನು ಬುಡಕಟ್ಟಿನ ಹೆಣ್ಣು ಹಿಡಿಂಬೆಯ ಕತೆಯೇ ಬೇರೆ. ಪಾಪ! ಅಮ್ಮ ಬೇಡಬೇಡವೆಂದರೂ ದ್ರೋಣರಿಂದ ‘ಶಸ್ತ್ರವಿದ್ಯೆ’ ಕಲಿಯುವದಕ್ಕೆ‌ ರಾಜಧಾನಿಗೆ ಬರುತ್ತಾನೆ ಘಟೋದ್ಗಜ. ಕೃಷ್ಣನ ಯುದ್ಧ ರಾಜಕೀಯದ ಮುಂದಿನ ಬಲಿ ಈತ. ಅಮಾಯಕ ಯೋಧನನ್ನ ಗುರಾಣಿಯಾಗಿಸಿಕೊಂಡ ಕೃಷ್ಣ ಕರ್ಣನ ಅಸ್ತ್ರಕ್ಕೆ ಆತನನ್ನ ಬಲಿಗೊಡುತ್ತಾನೆ.‌ ಯುದ್ಧಭೂಮಿಯಲ್ಲಿ ಮಗನ ಹೆಣವನ್ನ ಹುಡುಕಿಕೊಂಡು ಬರುತ್ತಾಳೆ ಹಿಡಿಂಬೆ. ” ನನ್ನ ಮಗನ ಹೆಣವನ್ನಾದರೂ ಕೊಡಿ” ಅಂತ ರೋದಿಸುತ್ತಾಳೆ. ನೂರಾರು ಶಸ್ತ್ರಗಳಗೆ ಜನ್ಮಕೊಟ್ಟ ಗಾಂಧಾರಿ, ಮಕ್ಕಳನ್ನ ಕಳಕೊಂಡ ದ್ರೌಪದಿ, ಮಗನನ್ನ ಕಳಕೊಂಡ ಕುಂತಿ,ಮಾನವನ್ನ ಕಳಕೊಂಡ, ಗಂಡನನ್ನ ಕಳಕೊಂಡ ದುಶ್ಯಲೆ ಆಕೆಯ ಜೊತೆಯಾಗಿದ್ದಾರೆ.

ಎಲ್ಲರ ಸಂತಾನಗಳೂ ಶಸ್ತ್ರಗಳಾಗಿ,ಶಸ್ತ್ರಗಳಿಂದ ಹೆಣಗಳಾಗಿ ಉರುಳಿವೆ.

” ಗರ್ಭದಲ್ಲೇ ಶಸ್ತ್ರ ವಿದ್ಯೆ ಕಲಿತ, ಶಸ್ತ್ರಗಳಾಗೇ ಹುಟ್ಟಿದವರೆಲ್ಲ ಎಲ್ಲ ಕಳೆದುಕೊಂಡು ಬಿದ್ದಿದ್ದಾರೆ” ಮಹಿಳೆಯರು ಹೆಣ ಹುಡುಕುತ್ತಿದ್ದಾರೆ. ಮತ್ತೆ ಈ ಶಸ್ತ್ರ ರಾಜಕೀಯಕ್ಕೆ ಮಹಿಳೆಯರೇ ಬಲಿಯಾಗಿದ್ದಾರೆ. ನಾಟಕದ ಕೊನೆಯಲ್ಲಿ ” ಹಕ್ಕಿ…ಹಾರು” ಎನ್ನುತ್ತದೆ ಹಾಡು. ಆದರೆ ಹಕ್ಕಿ ಹಾರುವದನ್ನೇ ಕಾಯುತ್ತ ಹದ್ದುಗಳು ಕುಳಿತಿವೆ.

ನಿಜ…ನಮಗೆ ಇವನ್ನೆಲ್ಲ ಮೀರಿ ಹಾರುವಾಸೆ. ಆದರೆ…..? ಯುದ್ಧದ ಛಿದ್ರ ಚಿತ್ರಗಳನ್ನ ಒಟ್ಟು ಹಾಕುತ್ತ ಶ್ರೀಪಾದ ಭಟ್ ಇಂಥ ಸಂತಾನ ಗಳ ಕಥೆ ಕಟ್ಟುತ್ತಾರೆ. ಒಂದು ಅರ್ಥಪೂರ್ಣ ಕೊಲಾಜ್ ನಿರ್ಮಿಸುತ್ತಾರೆ ಸಜೆಸ್ಟಿವ್ ಆದ ಕಾಸ್ಟ್ಯೂಮ್,ಪರಿಕರಗಳು ಸಂಗೀತಗಳ ಮೂಲಕ ಇಡಿಯ ಕ್ಯಾನ್ವಾಸ್ ನ್ನು ಸಮಕಾಲೀನಗೊಳಿಸುತ್ತಾರೆ.

ಮತ್ತೆ ಮತ್ತೆ ಯುದ್ಧಗಳು ರಾಜಕೀಯಕ್ಕಾಗಿ ಬಳಸಿಕೊಳ್ಳಲ್ಪಡುತ್ತಿರುವ ಈ ಹೊತ್ತಿಗೆ ನಾವು ಇಂಥವುಗಳ ಕುರಿತು ಮಾತನಾಡಲೇಬೇಕಿದೆ.


  • ಕಿರಣ್ ಭಟ್ ಹೊನ್ನಾವರ  (ರಂಗಕರ್ಮಿ, ರಂಗ ಸಂಘಟಕರು, ಕಲಾವಿದರು, ನಿರ್ದೇಶಕರು, ಬರಹಗಾರರು) ಹೊನ್ನಾವರ

0 0 votes
Article Rating

Leave a Reply

0 Comments
Inline Feedbacks
View all comments
0
Would love your thoughts, please comment.x
()
x
%d bloggers like this:
Aakruti Kannada

FREE
VIEW