ಯುವ ಭರವಸೆಯ ನಿರ್ದೇಶಕ : ಸಿದ್ಧಾರ್ಥ ಮರಡೆಪ್ಪ‘ಜಯ ಜಯ ಜಾನಕಿ ರಾಮ’ ಸಿನಿಮಾ ಸಿದ್ಧಾರ್ಥ ಮರಡೆಪ್ಪ ಅವರ ಸಾಕಷ್ಟು ನಿರೀಕ್ಷೆಯ ಸಿನಿಮಾವಾಗಿದ್ದು , ಅದರ ಬಗ್ಗೆ ಏನು ಹೇಳುತ್ತಾರೆ. ಆ ಸಿನಿಮಾಕ್ಕಾಗಿ ಅವರು ಪಟ್ಟ ಕಷ್ಟಗಳು ಹಾಗೂ ಸಂತೋಷದ ಕುರಿತು ಆಕೃತಿ ಕನ್ನಡದ ಜೊತೆಗೆ ಮಾತಾಡಿದ್ದಾರೆ, ಮುಂದೆ ಓದಿ….

”ರಾಯಚೂರು ಜಿಲ್ಲೆಯ ಸಮೀಪದಲ್ಲಿ ನನ್ನದು ಪುಟ್ಟದಾದಂತಹ ಹಳ್ಳಿ. ಸಿನಿಮಾ ನೋಡುವ ಗೀಳು ಹಳ್ಳಿಯ ಹುಡುಗನಿಗೆ ಎಲ್ಲಿಂದ ಬರಬೇಕು, ಪುಸ್ತಕ ಓದುವ ಹುಚ್ಚಿತ್ತು. ಕತೆ, ಕಾದಂಬರಿಗಳನ್ನ ಬಿಡದೆ ಓದುತ್ತಿದ್ದೆ. ಅದನ್ನು ಬಿಟ್ಟರೆ ಸಿನಿಮಾದ ಬಗ್ಗೆ ಗಂಧ ಗಾಳಿಯೂ ನನಗಿರಲಿಲ್ಲ. ಮುಂದೊಂದು ದಿನಾ ಸಿನಿಮಾ ಕ್ಷೇತ್ರಕ್ಕೆ ಬರ್ತೀನಿ ಅನ್ನೋ ಕಲ್ಪನೆಯು ಕೂಡಾ ಇರಲಿಲ್ಲ. ಈ ಕ್ಷೇತ್ರಕ್ಕೆ ಬಂದದ್ದು ಒಂದು ರೀತಿ ಅಚಾನಕ್ ಅಷ್ಟೇ” ಎನ್ನುತ್ತಾ ತಾವು ನಡೆದು ಬಂದ ಹಾದಿಯ ಬಗ್ಗೆ ನಿರ್ದೇಶಕ ಸಿದ್ಧಾರ್ಥ ಮರಡೆಪ್ಪ ಅವರು ಆಕೃತಿ ಕನ್ನಡದ ಜೊತೆ ಹಂಚಿಕೊಂಡಿದ್ದಾರೆ.

ಸಿದ್ಧಾರ್ಥ ಮರಡೆಪ್ಪ ಒಬ್ಬ ಯುವ ನಿರ್ದೇಶಕ.  ಸಿನಿಮಾದಲ್ಲೇ ಸುಮಾರು  ಹದಿನೈದು ವರ್ಷಗಳ ಕಾಲ ಬೆವರಿ ಹರಿಸಿ, ತಮ್ಮದೇ ಒಂದು ಛಾಪು ಮೂಡಿಸಬೇಕು ಎಂದು ಹೊರಟಿರುವ ಯುವ ಚೈತನ್ಯದ ನಿರ್ದೇಶಕ. ಮಾಸ್ತಿ ಗುಡಿ, ಮೈನಾ, ದೃಶ್ಯ೧ ಸಿನಿಮಾಗಳು ಸೇರಿದಂತೆ ಹಲವಾರು ಸಿನಿಮಾಗಳಿಗೆ ಸಹ ನಿರ್ದೇಶಕರಾಗಿ, ಚಿತ್ರಕಥೆಗಾರರಾಗಿ ಕೆಲಸ ಮಾಡಿದ್ದಾರೆ.

ಫೋಟೋ ಕೃಪೆ : top kannada

ಈಗ ಬ್ರೌನ್ ಬುಲ್ ಸ್ಟುಡಿಯೋ ಬ್ಯಾನರ್  ಅಡಿಯಲ್ಲಿ ಸಿದ್ದಾರ್ಥ ಅವರ ಚೊಚ್ಚಲ ನಿರ್ದೇಶನದ ‘ಜಯ ಜಯ ಜಾನಕಿ ರಾಮ’ ಸಿದ್ಧಗೊಳ್ಳಲಿದೆ. ಈ ಸಿನಿಮಾದಲ್ಲಿ ನಟಶಶಿಕುಮಾರ ಅವರ ಮಗ ಅಕ್ಷಿತ್ ಶಶಿಕುಮಾರ್ (ಆದಿತ್ಯ ಶಶಿಕುಮಾರ್ )ನಾಯಕನಾಗಿ ಹಾಗೂ ಅಪೂರ್ವ ಅವರು ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಇದೊಂದು ಪಕ್ಕ ಕಮರ್ಷಿಲ್ ಚಿತ್ರವಾಗಿದ್ದು, ಉತ್ತರ ಕರ್ನಾಟಕ ಭಾಷೆಯನ್ನು ಬಳಸಿಕೊಂಡು ಮಾಡಿದಂತಹ ಸಿನಿಮಾ ಇದಾಗಿದೆ.

ಈ ಸಿನಿಮಾ ಶುರುವಾಗುವುದೇ ಪ್ರೀತಿಯಿಂದ. ಹಾಗಾಗಿ ಸಿನಿಮಾದಲ್ಲಿ ಪ್ರೇಕ್ಷಕ ನಿರೀಕ್ಷಿಸುವ ಪ್ರೀತಿ ಕತೆ ಇದೆ, ಕೆ ರವಿ ವರ್ಮಾ ಅವರ ಸೂಪರ್ ಫೈಟ್ ಇದೆ, ಸೆಂಟಿಮೆಂಟ್ ಇದೆ, ಯೋಗರಾಜ್ ಭಟ್ – ವಿ ನಾಗೇಂದ್ರ ಪ್ರಸಾದ್ – ಗೌಸ್ ಪೀರ್  ಅವರ ಸಾಹಿತ್ಯವಿದೆ, ಅರ್ಜುನ ಜನ್ಯ ಅವರ ಸಂಗೀತ ನಿರ್ದೇಶನದಲ್ಲಿ ಒಳ್ಳೆ ಹಾಡು, ಉದಯ್ ಬಲ್ಲಾಳ್ ನಿರ್ದೇಶನದ ಡಾನ್ಸ್, ರವಿಶಂಕರ್ ಅವರ ಖಡಕ್ ವಿಲನ್ ಧ್ವನಿ  ಎಲ್ಲವೂ ಈ ಸಿನಿಮಾದಲ್ಲಿ ನೋಡಬಹುದು. ಇದೊಂದು ಪಕ್ಕಾ ಪೈಸಾ ವಸೂಲು  ಸಿನಿಮಾ ಆಗುವುದರಲ್ಲಿ ಅನುಮಾನವೇ ಇಲ್ಲಾ ಎನ್ನುತ್ತಾರೆ ಸಿದ್ದಾರ್ಥ.

This slideshow requires JavaScript.

 

”ಸಿನಿಮಾದ ಹೆಸರು ಮೊದಲು ‘ಮೊಡವೆ’ ಅಂತ ಹೆಸರಿಡಲಾಗಿತ್ತು, ಆದರೆ  ಕಮರ್ಷಿಯಲ್ ಚಿತ್ರಕ್ಕೆ ಈ ಹೆಸರು ಯಾಕೋ ಸರಿ ಹೋಗ್ತಿಲ್ಲ ಅಂತ ಅನ್ನಿಸಿ, ಆಮೇಲೆ  ಹೆಸರನ್ನ ಬದಲಾಯಿಸಿದ್ವಿ.  ಸಿನಿಮಾ ಮುಹೂರ್ತಕ್ಕೆ ಅಂಬರೀಶ ಅಣ್ಣ, ದರ್ಶನ ಸರ್ ಬಂದು ಶುಭಕೋರಿದ್ದರು. ಸಿನಿಮಾದ ಮುಹೂರ್ತ ಭರ್ಜರಿಯಾಗಿಯೇ ಆಯ್ತು, ಆ ಮೇಲೆ ಕೋವಿಡ್ ಬಂತು. ಶೂಟಿಂಗ್ ಸ್ವಲ್ಪ ತಡವಾಯಿತು. ಆದ್ರೂ ಕೂಡಾ ಪ್ರೇಕ್ಷಕರಿಗೆ ಒಳ್ಳೆ ಸಿನಿಮಾ ಕೊಟ್ಟೆ ಕೊಟ್ಟೆ ಕೊಡ್ತೀವಿ ಎನ್ನುವ ಆತ್ಮವಿಶ್ವಾಸವನ್ನು ಸಿದ್ಧಾರ್ಥ ಅವರು ವ್ಯಕ್ತ ಪಡಿಯುತ್ತಾರೆ.

”ಆದಿತ್ಯ ಅವರು ಈ ಸಿನಿಮಾವನ್ನು ಒಪ್ಪಿಕೊಂಡಾಗ ಇಂಜಿನಿಯರಿಂಗ್ ಅಂತಿಮ ವರ್ಷದಲ್ಲಿ ಓದುತ್ತಿದ್ದರು, ನಾವು ಸಿನಿಮಾಕ್ಕೆ ಅವರನ್ನ ಮೊದಲು ಹೇಳಿದಾಗ ನಟ ಶಶಿಕುಮಾರ ಸರ್ ‘ನನ್ನ ಮಗನಿಗೆ ಸಿನಿಮಾದ ಬಗ್ಗೆ ಏನು ಕೂಡಾ ತಿಳಿದಿಲ್ಲ , ನೋಡಿ’ ಎಂದು ನೇರವಾಗಿ ಹೇಳಿದರು. ಆದರೆ ನಮ್ಮ ಕತೆಗೆ ಆದಿತ್ಯ ಅವರೇ ಸರಿಯಾದ ವ್ಯಕ್ತಿ ಅನಸ್ತು. ನಮ್ಮ ತಂಡ ಅವರನ್ನ ಸ್ವಲ್ಪ ಟ್ರೇನಿಂಗ ಕೊಟ್ಟು ರೆಡಿ ಮಾಡಿದ್ರು, ಆದಿತ್ಯ ಅವರು ಕೂಡಾ ಶ್ರದ್ದೆಯಿಂದ ಎಲ್ಲವನ್ನುಕಲಿತರು. ನಮ್ಮ ಸಿನಿಮಾ ತಡವಾದ್ದರಿಂದ ಅಷ್ಟೋತ್ತಿಗೆ ಆದಿತ್ಯ ಅವರಿಗೆ ಬೇರೆ ಸಿನಿಮಾಗಳ ಆಫರ್ ಬಂತು, ಬೇರೆ ಸಿನಿಮಾ ರೆಡಿ ಆಗಿ ತೆರೆ ಮೇಲೆಯೂ ಬಂತು. ಜನ ಅವರ ನಾಯಕನ್ನಾಗಿ ಪ್ರೀತಿಯಿಂದ ಸ್ವೀಕರಿಸಿದ್ದಾರೆ, ಅದು ತುಂಬಾ ಖುಷಿ ಕೊಟ್ಟಿದೆ” ಎಂದು ಸಂತೋಷದಿಂದ ಹೇಳುತ್ತಾರೆ.

ಕಮರ್ಷಿಯಲ್  ಸಿನಿಮಾಗಳಲ್ಲಿ ಸಂದೇಶಗಳೇ ಇರೋಲ್ಲ ಅಂತ ಜನ ಹೇಳ್ತಾರೆ ಇದರ ಬಗ್ಗೆ ನಿಮ್ಮ ಅಭಿಪ್ರಾಯ ಏನೆಂದು ಕೇಳಿದಾಗ ಅವರು ಹೇಳೋದು ‘ಶಾಲೆಯಲ್ಲಿ ಪಾಠ, ಮನೆಯಲ್ಲೂ ನೀತಿ ಪಾಠಗಳನ್ನು ಒಂದನ್ನೇ ಜನ ಕೇಳಿ ಕೇಳಿ ಬೇಸತ್ತು ಹೋಗಿರ್ತಾರೆ . ಅವರಿಗೆ ಸಿನಿಮಾಕ್ಕೆ ಬಂದಾಗ ಅಲ್ಲೂ ನೀತಿ ಪಾಠ ಹೇಳಿದ್ರೆ ಜೀವನದಲ್ಲಿ ಜಿಗುಪ್ಸೆ ಮೂಡುತ್ತೆ. ಸಿನಿಮಾ ಅನ್ನೋದು ನನ್ನ ಪಾಲಿಗೆ ಮನರಂಜನೆ, ಸಿನಿಮಾ ಮೇಕಿಂಗ್ ಲ್ಲಿ ಪ್ರೇಕ್ಷಕನಿಗೆ ಬೇಕಾದ ಮನರಂಜನೆಯನ್ನ ಶೇಕಡಾ ೧೦೦% ಕೊಟ್ಟೆ ಕೊಡ್ತೀನಿ. ಹಾಗಂತ ಕೆಟ್ಟದ್ದು ತೋರಸ್ತೀನಿ ಅಂತಲ್ಲ.  ಕೊನೆಯಲ್ಲಿ ಒಂದು ಒಳ್ಳೆ ಮೆಸೇಜ್  ಜನಕ್ಕೆ ಪಕ್ಕಾ ತಲುಪುತ್ತೆ ಎನ್ನುತ್ತಾ ಮುಗುಳ್ನಗೆ ಬಿರುತ್ತಾರೆ.

‘ಗುರಿ ಮುಂದಿರಬೇಕು,ಬೆನ್ನ ಹಿಂದೆ ಗುರು ಇರಬೇಕು’ ನಿಜ. ನನ್ನ ಗುರಿ ನನ್ನ ಕಣ್ಮುಂದೆ ಸ್ಪಷ್ಟವಾಗಿದೆ, ಬೆನ್ನ ಹಿಂದೆ ನಿರ್ದೇಶಕ ನಾಗಶೇಖರ್ ಸರ್, ಸೂರಿ ಸರ್, ಸಂತೋಷ ಸರ್ ಅಂತಹ ಮಹಾನ್ ನಿರ್ದೇಶಕರಗಳ ಮಾರ್ಗದರ್ಶನವಿದೆ. ಹಾಗಾಗಿ ಯಾವುದು ನಾನು ಕಷ್ಟವೆನ್ನದೆ ಗುರಿಯತ್ತ ಸಾಗುತ್ತಿದ್ದೇನೆ. ಸಿನಿಮಾದಲ್ಲಿ ಹಂಪಿ, ಪಟ್ಟದಕಲ್ಲು, ಕಾಶಿ, ಬನಾರಸ್  ಸೌಂದರ್ಯವನ್ನು ಕ್ಯಾಮೆರಾದ ಕಣ್ಣಲ್ಲಿ ಸೆರೆ ಹಿಡಿದಿದೆ. ಸಿನಿಮಾವನ್ನು ತುಂಬಾ ಪ್ರೀತಿಯಿಂದ ಪ್ರೇಕ್ಷಕನ ಮಡಿಲಿಗೆ ಹಾಕುತ್ತೇನೆ. ಎತ್ತಿ ಮುದ್ದಾಡವ ಜವಾಬ್ದಾರಿ ಅವರ ಮೇಲಿದೆ ಎನ್ನುತ್ತಾ ತಮ್ಮ ಮಾತುಗಳನ್ನ ಮುಗಿಸುತ್ತಾರೆ ನಿರ್ದೇಶಕರು.

ಉತ್ತರ ಕರ್ನಾಟಕದ ಮನೆ ಹುಡುಗ ಸಿದ್ಧಾರ್ಥ ಮರಡೆಪ್ಪ ಅವರ ನಿರ್ದೇಶನದ ‘ಜಯ ಜಯ ಜಾನಕಿ ರಾಮ’ ತೆರೆಮೇಲೆ ಮುಂದಿನ ವರ್ಷ ಬರಲಿದ್ದು,ಈ ಸಿನಿಮಾ ಅವರ ಕನಸಿನ ಕೂಸು. ಈ ಸಿನಿಮಾಕ್ಕಾಗಿ ಇಡೀ ತಂಡ ಹಗಲು ರಾತ್ರಿ ಎನ್ನದೆ ಸಾಕಷ್ಟು ಕಷ್ಟಪಟ್ಟಿದ್ದಾರೆ. ಅವರ ಶ್ರಮಕ್ಕೆ ಪ್ರತಿಫಲವಾಗಿ ಜನರ ಪ್ರೀತಿಯ ಜೊತೆಗೆ ಸಿನಿಮಾ ಯಶಸ್ವಿಯಾಗಲಿ ಎಂದು ಆಕೃತಿಕನ್ನಡ ಶುಭ ಹಾರೈಸುತ್ತದೆ…


  • ಶಾಲಿನಿ ಹೂಲಿ ಪ್ರದೀಪ್ (ಆಕೃತಿ ಕನ್ನಡ ಮ್ಯಾಗಝಿನ್ ಸಂಪಾದಕಿ)

0 0 votes
Article Rating

Leave a Reply

0 Comments
Inline Feedbacks
View all comments
0
Would love your thoughts, please comment.x
()
x
%d bloggers like this:
Aakruti Kannada

FREE
VIEW