ಮಲೆನಾಡಿನ ಮಳೆಗಾಲದಾದ್ಯಂತ ವಿಶಿಷ್ಟ ಶಬ್ದ ತರಂಗಗಳನ್ನು ಹೊಮ್ಮಿಸುವ ಸಿಕಾಡ ಕುರಿತು ಪಶುವೈದ್ಯ ಡಾ. ಯುವರಾಜ್ ಹೆಗಡೆ ಅವರು ಬರೆದ ಲೇಖನವನ್ನೊಮ್ಮೆ ಓದಿ ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ….
ಪಶ್ಚಿಮ ಘಟ್ಟಗಳು ವಿಶ್ವದ ಪ್ರಮುಖ ಜೀವವೈವಿಧ್ಯತೆಯ ತಾಣಗಳಲ್ಲಿ ಗುರುತಿಸಲ್ಪಟ್ಟಿವೆ. 1600 ಚದರ ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಪಸರಿಸಿರುವ ಪಶ್ಚಿಮ ಘಟ್ಟದ ಅರಣ್ಯದಲ್ಲಿ ಅನನ್ಯ ಜೀವ ಸಂಕುಲಗಳು ವಾಸವಾಗಿದ್ದು 5000 ಕ್ಕೂ ಮೀರಿದ ವಿವಿಧ ವರ್ಗದ ಗಿಡಮರಗಳು, 139 ಜಾತಿಯ ಸಸ್ತನಿಗಳು, 508 ಪಕ್ಷಿ ಪ್ರಭೇದಗಳು, 179 ಪ್ರಕಾರದ ಉಭಯವಾಸಿಗಳು, ಸಹಸ್ರಾರು ಪ್ರಭೇದದ ಕೀಟಗಳಿಗೆ ಆಶ್ರಯ ತಾಣವಾಗಿರುವುದಲ್ಲದೆ ಅನೇಕ ವಿಸ್ಮಯಗಳನ್ನು ತನ್ನ ಗರ್ಭದಲ್ಲಿ ಅಡಗಿಸಿಟ್ಟಿದೆ. ಅಂತಹ ವಿಸ್ಮಯಗಳ ಪಟ್ಟಿಯಲ್ಲಿ ಮಲೆನಾಡಿನ ಮಳೆಗಾಲದಾದ್ಯಂತ ವಿಶಿಷ್ಟ ಶಬ್ದ ತರಂಗಗಳನ್ನು ಹೊಮ್ಮಿಸಿ ಸಂಗೀತ ರಸದೌತಣ ನೀಡುವ ಜೀರುಂಡೆಗಳ (ಸಿಕಾಡ) ಜೀವನಶೈಲಿಯೂ ಕೂಡ ಸೇರಲ್ಪಡುತ್ತದೆ. ಸಾಮಾನ್ಯವಾಗಿ ಜೂನ್ ತಿಂಗಳಲ್ಲಿ ಪ್ರಾರಂಭವಾಗುವ ಮಳೆಗಾಲವನ್ನು ಅದ್ಭುತ ಸಂಗೀತದ ಮುಖಾಂತರ ಸ್ವಾಗತಿಸುವ ಜೀರುಂಡೆಗಳ ಸಮೂಹದ ಕುರಿತಾಗಿ ಮಲೆನಾಡಿನಲ್ಲಿ ಹುಟ್ಟಿ ಬೆಳೆದ ಸಾಹಿತಿಗಳು ತಮ್ಮ ಒಂದಿಲ್ಲೊಂದು ಕೃತಿಗಳಲ್ಲಿ ಉಲ್ಲೇಖಿಸಿಯೇ ಇರುತ್ತಾರೆ. ಮುಂಗಾರು ಆರ್ಭಟಿಸಲು ಪ್ರಾರಂಭಿಸಿದಂತೆ, ಗಿರಿ ಪರ್ವತಗಳ ನಡುವೆ ಚುರುಕುಗೊಳ್ಳುವ ಜೀರುಂಡೆಗಳ ಝೇಂಕಾರ ಅವುಗಳ ನಡುವಿನ ಸಂಗೀತ ಸ್ಪರ್ಧೆಯಂತೆ ಏರ್ಪಟ್ಟು ಅರಣ್ಯದ ನಡುವೆ ಮಾರ್ಧನಿಸುತ್ತದೆ.
ಕೆಲವೊಮ್ಮೆ ಇದು ಸಹ್ಯಾದ್ರಿ ತಪ್ಪಲಿನಲ್ಲಿ ನೆಲೆಸಿರುವ ದೇವಾದಿ ದೇವತೆಗಳಿಗೆ ಭಕ್ತಿ ಪೂರ್ವಕವಾಗಿ ನೆರವೇರಿಸುತ್ತಿರುವ ಮಹಾಮಂಗಳಾರತಿ ಎಂಬಂತಹ ಅನುಭವವೂ ಆದಲ್ಲಿ ಆಶ್ಚರ್ಯವಿಲ್ಲ. ಕೇವಲ ಅರಣ್ಯ ಮಾತ್ರವಲ್ಲದೆ ತೋಟ ,ಮನೆಯ ಮುಂದಿನ ಹೂವಿನ ಗಿಡಗಳು, ಮಲೆನಾಡಿನ ಪಟ್ಟಣ ಪ್ರದೇಶಗಳಲ್ಲಿಯೂ ಅವುಗಳ ಅಸ್ತಿತ್ವವನ್ನು ಕಾಣಬಹುದಾಗಿದೆ. ಮುಂಗಾರಿನ ಆರಂಭದಲ್ಲಿ ರೋಹಿಣಿಯನ್ನು ಸ್ವಾಗತಿಸುತ್ತಾ ಪ್ರಾರಂಭವಾಗುವ ಜೇರುಂಡೆಗಳ ಝೇಂಕಾರವು ಮೃಗಶಿರ, ಆರಿದ್ರ, ಪುನರ್ವಸುವಿನಲ್ಲಿ ಸಂಭ್ರಮಿಸಿ, ಪುಷ್ಯ, ಆಶ್ಲೇಷಗಳಲ್ಲಿ ಉಚ್ಛ್ರಾಯ ಸ್ಥಿತಿ ತಲುಪಿ ಮಘ, ಹುಬ್ಬಗಳ ಸಮಯದಲ್ಲಿ ತಗ್ಗುತ್ತಾ ಕೊನೆಗೆ ಉತ್ತರನ ಕಾಲದಲ್ಲಿ ಈ ಸುಮಧುರ ಸಂಗೀತದ ಕ್ಷಣಗಳು ಮುಗಿಯಲ್ಪಡುತ್ತದೆ.
ಇಂತಹ ವಿಸ್ಮಯ ಜಗತ್ತನ್ನು ಸೃಷ್ಟಿಸುವ ಮಳೆಗಾಲದ ಜೀರುಂಡೆಗಳು ( Cicada) ಕೀಟ ವರ್ಗಕ್ಕೆ ಸೇರಿದ್ದು ಅದು ತನ್ನ ಬಹುತೇಕ ಜೀವನವನ್ನು ಮಣ್ಣಿನಡಿಯಲ್ಲಿಯೇ ಕಳೆಯುತ್ತವೆ ಎಂದರೆ ಆಶ್ಚರ್ಯವಾಗಬಹುದು!!! ಮರದ ಬೇರುಗಳ ರಸವನ್ನು ಹೀರುವ ಮರಿ ಹುಳುಗಳು 2-3 ವರ್ಷಗಳ ನಂತರ ಪ್ರೌಡಾವಸ್ಥೆಯನ್ನು ತಲುಪುವ ಹೊತ್ತಿಗೆ ಮಣ್ಣಿನಿಂದ ಮೇಲೆದ್ದು ಬಂದು ಮರಗಳನ್ನು ಏರುತ್ತದೆ. ಮಳೆಗಾಲದಲ್ಲಿ ಮಣ್ಣು ಮೆದುವಾಗಿರುವ ಕಾರಣ ಮಣ್ಣಿನಡಿಯಿಂದ ಹೊರಬರಲು ಅವುಗಳಿಗೆ ಪೂರಕ ವಾತಾವರಣವೂ ಸೃಷ್ಟಿಯಾಗಿರುತ್ತದೆ. ಹೀಗೆ ಮೇಲೆದ್ದ ಹುಳುಗಳು ಮರದ ತೊಗಟೆಯನ್ನು ಗಟ್ಟಿಯಾಗಿ ತಮ್ಮ ಕಾಲುಗಳಿಂದ ಹಿಡಿದುಕೊಂಡು ಸ್ವಲ್ಪ ಸಮಯ ಚಟುವಟಿಕೆಗಳಿಲ್ಲದೆ ತಟಸ್ಥವಾಗಿರುವಂತೆ ಕಂಡುಬಂದರೂ, ದೇಹದ ಒಳಭಾಗದಲ್ಲಿ ರೂಪಾಂತರಗೊಂಡು ರೆಕ್ಕೆಗಳ ಬೆಳವಣಿಗೆಗೆ ಹೊಂದುತ್ತಿದ್ದಂತೆ ತನ್ನ ಬೆನ್ನ ಮೇಲಿನ ಹೊರಕವಚ ಬಿರುಕು ಬಿಟ್ಟಂತಾಗಿ, ಅದನ್ನು ಸೀಳಿಕೊಂಡು ಬಲಿತ ಜೀರುಂಡೆಗಳು ಹೊರ ಜಗತ್ತನ್ನು ಪ್ರವೇಶಿಸುತ್ತವೆ. ಹೀಗೆ ರೂಪಾಂತರಗೊಂಡು ಪ್ರೌಢಾವಸ್ಥೆಗೆ ಕಾಲಿಟ್ಟಿತು ಎಂದರೆ ಅವುಗಳ ಜೀವಿತಾವಧಿ ಅಂತ್ಯಗೊಳ್ಳುವ ಸಮಯ ಸನಿಹವಾಗಿದೆ ಎಂದರ್ಥ. ಇನ್ನುಳಿದ 3-6 ವಾರಗಳ ಅವಧಿಯಲ್ಲಿ ಅವು ವಂಶಾಭಿವೃದ್ಧಿ ಮಾಡಿ ಮುಂದಿನ ಪೀಳಿಗೆಗೆ ಅನುವು ಮಾಡಿಕೊಡಬೇಕಾದ ಸಮಯವಾಗಿರುತ್ತದೆ.
ಗಂಡು ಜೀರುಂಡೆಗಳು ಹೆಣ್ಣನ್ನು ಆಕರ್ಷಿಸುವ ಸಲುವಾಗಿ ವಿಶಿಷ್ಟ ಶಬ್ದ ತರಂಗಗಳನ್ನು ತನ್ನ ಹೊಟ್ಟೆಯ ಕೆಳಬಾಗದ “ಟಿಂಬಲ್ಸ್” ಎಂಬ ಅಂಗದ ಮುಖಾಂತರ ಉತ್ಪತ್ತಿ ಮಾಡುತ್ತದೆ. ಜನಸಾಮಾನ್ಯರು ತಿಳಿದಂತೆ ಸಿಕಾಡಗಳು ಗಂಟಲಿನ ಮುಖಾಂತರ ಶಬ್ಧವನ್ನು ಸೃಷ್ಟಿ ಮಾಡುವುದಿಲ್ಲ. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬಂತೆ ತೂಗಿದರೆ ಅಂದಾಜು 20 ಗ್ರಾಂ ಇರಬಹುದಾದ ಕೀಟದಲ್ಲಿ ಇಂತಹ ಅಬ್ಬರದ ಝೇಂಕಾರ ಹೊರಡುವುದು ಕೂಡ ಒಂದು ವಿಸ್ಮಯವೇ ಸರಿ. ಏಕಕಾಲಕ್ಕೆ ಸಹಸ್ರಾರು ಗಂಡು ಜೀರುಂಡೆಗಳು ಅರಣ್ಯದಲ್ಲಿ ಸಂಗೀತ ಸ್ಪರ್ಧೆ ಏರ್ಪಡಿಸಿದಂತೆ ಶಬ್ದ ತರಂಗಗಳನ್ನು ಹೊರಗಡವಿ, ತಮ್ಮ ಸುತ್ತಲಿನ ಹೆಣ್ಣು ಜೀರುಂಡೆಗಳನ್ನು ತಮ್ಮೆಡೆಗೆ ಆಕರ್ಷಿಸಲು ಪ್ರಯತ್ನಿಸುತ್ತವೆ. ಮಿಲನದ ನಂತರ ಹೆಣ್ಣು ಜೀರುಂಡೆಗಳು ಮರದ ತೊಗಟೆಗಳ ನಡುವೆ ಮೊಟ್ಟೆಗಳನ್ನು ಇಡುತ್ತವೆ ಹಾಗೂ ಸಂತಾನೋತ್ಪತ್ತಿಯ ನಂತರ ಪ್ರೌಢಾವಸ್ಥೆಯ ಜೀರುಂಡೆಗಳು ಸ್ವಾಭಾವಿಕವಾಗಿ ಮರಣ ಹೊಂದುತ್ತವೆ.
ಮೊಟ್ಟೆಗಳಿಂದ ಹೊರಬರುವ ಮರಿ ಹುಳುಗಳು ಸ್ವಲ್ಪ ಸಮಯದವರೆಗೆ ಮರದ ತೊಗಟೆಯ ರಸವನ್ನು ಹೀರಿಕೊಂಡು ನಿಧಾನವಾಗಿ ಹರಿದು ಮರದ ಬುಡದ ಮಣ್ಣಿನಲ್ಲಿ ಸೇರಿ 2-3 ವರ್ಷಗಳ ಕಾಲ ಬೇರುಗಳ ರಸವನ್ನು ಹೀರುತ್ತಾ ಬೆಳವಣಿಗೆ ಹೊಂದುತ್ತದೆ. ಆದರೆ ಇದರಿಂದ ಮರಗಳಿಗೆ ತೀವೃತರನಾದ ಅಪಾಯವೇನು ಇರುವುದಿಲ್ಲ. ಅಮೆರಿಕಾದಂತಹ ಕೆಲವು ದೇಶಗಳಲ್ಲಿ ಇರುವ ಸಿಕಾಡಾದ ಮರಿಗಳು ಮಣ್ಣಿನಲ್ಲಿ 13 – 17 ವರ್ಷಗಳ ಕಾಲ ಇರುತ್ತವೆ ಎಂದು ಸಂಶೋಧನೆಯಲ್ಲಿ ದೃಢಪಟ್ಟಿದೆ. ಈ ಮೂಲಕ ಇವುಗಳ ಜೀವನ ಚಕ್ರ ಮುಂದುವರಿಯುತ್ತದೆ.
ಮರವೇರಿದ ಜೀರುಂಡೆಗಳನ್ನು ಓತಿ, ಹಲ್ಲಿಗಳು, ಮರ ಹಾವುಗಳು, ಕಪ್ಪೆ, ಪಕ್ಷಿಗಳು ಬೇಟೆಯಾಡಿ ಸೇವಿಸುತ್ತವೆ .ಇದರೊಂದಿಗೆ ನಿರುಪದ್ರವಿ ಕೀಟವು ಆಹಾರ ಸರಪಳಿಯ ಒಂದು ಭಾಗವಾಗಿ ಅನೇಕ ಪ್ರಾಣಿ, ಪಕ್ಷಿಗಳಿಗೆ ಮಳೆಗಾಲದಲ್ಲಿ ಆಹಾರದ ಕೊರತೆಯನ್ನು ನೀಗಿಸಲು ಸಹ ಸಹಕಾರಿಯಾಗಿದೆ. ಅವುಗಳಿಂದ ಹೊರಡುವ ಶಬ್ದ ತರಂಗಗಳಿಂದಾಗಿ ಇತರೆ ಪ್ರಾಣಿಗಳು ಇವುಗಳು ಇರುವಿಕೆಯನ್ನು ಸುಲಭವಾಗಿ ಪತ್ತೆ ಹಚ್ಚಿ ಬೇಟೆಯಾಡುತ್ತವೆ.
ಹೀಗೆ ಮಲೆನಾಡಿನಾದ್ಯಂತ ಮಳೆಗಾಲದ ಈ ನಿರುಪದ್ರವಿ ಅತಿಥಿಗಳು ಪ್ರತಿ ವರ್ಷವೂ ಭುವಿಯಿಂದ ಮೇಲೆದ್ದು ಬಂದು ಮೂರ್ನಾಲ್ಕು ತಿಂಗಳುಗಳ ಕಾಲ ಅದ್ಭುತ ಸಂಗೀತ ರಸದೌತಣ ನೀಡಿ ತಮ್ಮ ಮುಂದಿನ ಪೀಳಿಗೆಗೆ ದಾರಿ ಮಾಡಿಕೊಟ್ಟು ಮಾಯವಾಗುತ್ತಿವೆ. ಪಕ್ಷಿಗಳ ಇಂಪಾದ ಧ್ವನಿಯನ್ನು ಅನುಕರಣೆ ಮಾಡುವ ಸಾಕಷ್ಟು ಜನರನ್ನು ನೋಡಿದ್ದೇವೆ ಆದರೆ ಮಲೆನಾಡಿನ ಜೀರುಂಡೆಗಳ ಝೇಂಕಾರವನ್ನು ಅನುಕರಿಸಲು ಬಹುಶಃ ಇದೂವರೆಗೂ ಯಾರಿಗೂ ಸಾದ್ಯವಾಗಿಲ್ಲದಿರುವುದು ಅದರ ವೈಶಿಷ್ಟ್ಯತೆ ಎನ್ನಬಹುದು . ಇಂತಹ ಜೀವಿಗಳು ಇರುವಿಕೆಯು ಇಲ್ಲಿಯ ಪರಿಸರದ ಆರೋಗ್ಯ ಸೂಚಕವೂ ಆಗಿದ್ದು ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಲಿ , ಪಶ್ಚಿಮ ಘಟ್ಟದ ವಿಸ್ಮಯಗಳನ್ನು ಉಳಿಸಿ ಮುಂದಿನ ಪೀಳಿಗೆಗೆ ಕೊಂಡೊಯ್ಯುವಲ್ಲಿ ನಾವೆಲ್ಲರೂ ಜವಾಬ್ದಾರಿ ಮೆರೆಯೋಣ ಸ್ನೇಹಿತರೆ.
- ಡಾ. ಯುವರಾಜ್ ಹೆಗಡೆ (ಪಶುವೈದ್ಯರು,ವೈದಕೀಯ ಬರಹಗಾರರು) ತೀರ್ಥಹಳ್ಳಿ.
