ಪ್ರತಿ ವರ್ಷ ಅತ್ಯಂತ ವಿಜೃಂಭಣೆಯಿಂದ ಆಚರಿಸಲ್ಪಡುತ್ತಿರುವ ನಮ್ಮೂರ ನಂದಳಿಕೆಯ ಸಿರಿಜಾತ್ರೆ. ಪ್ರತಿವರ್ಷವೂ ವಿಶೇಷವಾಗಿ ಪ್ರಚಾರ ಪಡಿಸುತ್ತಿದ್ದ ನಂದಳಿಕೆಯ ಆಡಳಿತ ಮಂಡಳಿ ಈ ವರ್ಷ ಒಂದು ಹೆಜ್ಜೆ ಮುಂದಿಟ್ಟು ಅಪಾರ ಜನರ ಮೆಚ್ಚುಗೆ ಗಳಿಸುವಂತಹ ಮತ್ತೊಂದು ಮಹಾನ್ ಕಾರ್ಯಕ್ಕೆ ಕೈ ಹಾಕಿದೆ…
ಸೇವೆಗೊಂದು ಸಾರ್ಥಕತೆ
ನೀರಿಲ್ಲದೇ ನೆಲ ಜಲ ಬಣಗುಡುತಿದೆ.ರಣ ಬಿಸಿಲಿನ ತಾಪಕ್ಕೆ ಭೂಮಿ ಕಾದ ಕಾವಲಿಯಂತಾಗಿದೆ. ಕಾಡಿನ ನಾಶ, ಪರಿಸರ ಮಾಲಿನ್ಯ, ಕೆರೆ- ಬಾವಿಗಳನ್ನ ಮುಚ್ಚಿ ರಸ್ತೆ ಅಗಲೀಕರಣ, ಕಟ್ಟಡ ನಿರ್ಮಾಣದ ನೆಪದಲ್ಲಿ ಪ್ರಕೃತಿಯ ನಿಯಮಗಳನ್ನ ಗಾಳಿಗೆ ತೂರಿ ಮನಬಂದಂತೆ ನಡೆದುಕೊಳ್ಳುತ್ತಿದ್ದೇವೆ.ಅದರ ದುರಂತ ಪ್ರತಿಫಲವೇ ಬರಗಾಲ. ಎಲ್ಲೆಲ್ಲೂ ನೀರಿಗಾಗಿ ಹಾಹಾಕಾರ.
ಮಾನವ ಹೇಗೋ ತನ್ನ ಬುದ್ಧಿಚಾತುರ್ಯತೆಯಿಂದ ನೀರಿಗಾಗಿ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದಾನೆ. ಆದರೆ ಈ ಭೂಮಿಯಲ್ಲಿ ನಮ್ಮನ್ನು ಹೊರತುಪಡಿಸಿ ಅದೇಷ್ಟೋ ಜೀವಸಂಕುಲಗಳಿವೆ ಎಂಬುದನ್ನ ಮರೆತಿರುವ ನಾವುಗಳು ನೀರಿಗಾಗಿ ಪರದಾಡುವುದನ್ನ ಕಣ್ಣಾರೆ ಕಂಡರೂ ನೋಡಿಯೂ ನೋಡದಂತೆ ಮುಂದೆ ಸಾಗುತ್ತಿದ್ದೇವೆ. ಆದರೆ ಭೂಮಿಯ ತಾಪ ಸಹಿಸಲಾಗದೇ ನೀರಿಗಾಗಿ ಹಪಹಪಿಸುವ ಖಗಮೃಗ ವಿಷ ಜಂತುಗಳಿಗೂ ನೀರು ಸಿಗಬೇಕೆಂಬ ಉದ್ದೇಶದಿಂದ ನಂದಳಿಕೆ ಸಿರಿಜಾತ್ರೆ 2023 ರ ಆಡಳಿತ ಮಂಡಳಿ ಕೈಗೊಂಡ ಈ ನಿರ್ಧಾರ ಅತ್ಯಂತ ಶ್ಲಾಘನೀಯವಾಗಿದೆ…ಪ್ರತಿವರ್ಷ ವಿಭಿನ್ನವಾಗಿ ಪ್ರಚಾರ ಪಡಿಸುತ್ತಿದ್ದ ನಂದಳಿಕೆಯ ಆಡಳಿತ ಮಂಡಳಿ ಇಂದು ಒಂದು ಹೆಜ್ಜೆ ಮುಂದಿಟ್ಟು ತನ್ನ ಗೌರವವನ್ನು ಎತ್ತಿ ಹಿಡಿದಿದ್ದು ಇವರ ನಿಷ್ಕಲ್ಮಶ ಸೇವೆಗೊಂದು ಸಾರ್ಥಕತೆ ಎಂಬಂತೆ ಈ ಸುಂದರವಾದ ಛಾಯಚಿತ್ರ ಎಲ್ಲರ ಗಮನ ಸೆಳೆಯುತ್ತಿದೆ.ಯಾರಿಗಾಗಿ ಕಾರ್ಯ ಮಾಡಿದ್ದೇವೊ ಅವರಿಗೆ ಅದು ಅರ್ಪಣೆಯಾದಾಗ ಇದಲ್ಲವೇ ಸಾರ್ಥಕತೆ ಅನ್ನಿಸದೇ ಇರದು.
ದೇವರು ಮೆಚ್ಚುವ ಕೆಲಸವಿದು ಆ ಭಗವಂತ ಖಂಡಿತ ಖುಷಿಪಡದೇ ಇರಲಾರ. ಇದನ್ನ ಆಯೋಜಿಸಿದ ಆ ಎಲ್ಲಾ ಸಹೃದಯರಿಗೂ ಇಲ್ಲಿಂದಲೇ ಹೃತ್ಪೂರ್ವಕ ವಂದನೆ ಸಲ್ಲಿಸೋಣ…
ನಂದಳಿಕೆ ಸಿರಿಜಾತ್ರೆ ಎಪ್ರಿಲ್ 6 ಗುರುವಾರ…
- ಶರಣ್ಯ ಬೆಳುವಾಯಿ