ವಿಟಮಿನ್ ಬಿ ೧೨ ಕುರಿತು ಒಂದಷ್ಟು ಮಾಹಿತಿ – ಸುದರ್ಶನ್ ಪ್ರಸಾದ್

ವಿಟಮಿನ್ ಬಿ 12 ನ ಕೊರತೆ ಉಂಟಾಗಲು ಎರಡು ಕಾರಣಗಳೇನು?, ವಿಟಮಿನ್ ಬಿ 12 ಕೊರತೆಯ ಲಕ್ಷಣಗಳೇನು?ವಿಟಮಿನ್ ಬಿ 12 ಕೊರತೆಯನ್ನು ಗುರುತಿಸಲು ಇರುವ ಮಾರ್ಗಗಳ ಕುರಿತು ಸುದರ್ಶನ್ ಪ್ರಸಾದ್ ಅವರು ಬರೆದಿರುವ ಮಹತ್ವದ ಲೇಖನವನ್ನು ತಪ್ಪದೆ ಮುಂದೆ ಓದಿ…

ವಿಟಮಿನ್ ಬಿ 12 ಸಹಾ ವಿಟಮಿನ್ ಡಿ ನಂತೆಯೇ ಆಹಾರಗಳ ಮುಖಾಂತರ ಅತೀ ವಿರಳವಾಗಿ ಲಭ್ಯವಾಗುವ ಪೋಷಕಾಂಶ. ವಿಟಮಿನ್ ಬಿ ಗುಂಪಿನ ಎಂಟು ಮುಖ್ಯ ಪೋಷಕಾಂಶಗಳ ಪೈಕಿ ಒಂದಾಗಿರುವ ಇದರ ರಾಸಾಯನಿಕ ಹೆಸರು ‘Cobalamin’. ಆಹಾರದಲ್ಲಿ ಪ್ರೋಟಿನ್ ಗಳೊಂದಿಗೆ ಬೆರೆತು ಹೋಗಿರುವ ಇದನ್ನು ನಮ್ಮ ದೇಹ ಹೈಡ್ರೋಕ್ಲೋರಿಕ್ ಆಸಿಡ್ ಮತ್ತು ಗ್ಯಾಸ್ಟ್ರಿಕ್ ಪ್ರೋಟಿಯೇಸ್ ಸಹಾಯದಿಂದ ಬೇರ್ಪಡಿಸಿ, Haptocorrin ನೊಂದಿಗೆ ಸೇರಿಸಿ Methylcobalamin ಮತ್ತು 5-deoxyadenosylcobalamin ಎಂಬ ಆಕ್ಟಿವ್ ರೂಪಗಳಿಗೆ ಬದಲಿಸುತ್ತದೆ. Hydroxycobalamin ಮತ್ತು Cyanocobalamin ಸಹಾ ಈ ವಿಟಮಿನ್ ನ ಮತ್ತೆರಡು ರಾಸಾಯನಿಕ ರೂಪಗಳಾಗಿದ್ದು ಜೀರ್ಣಕ್ರಿಯೆಯ ನಂತರ ಆಕ್ಟಿವ್ ರೂಪಕ್ಕೆ ಬದಲಾಗುತ್ತವೆ. ಈ ಪೋಷಕಾಂಶವು ಕೆಂಪು ರಕ್ತಕಣ ಮತ್ತು DNA ಉತ್ಪತ್ತಿಯಲ್ಲಿ ಸಹಕರಿಸುವುದು, ನರಗಳ ಕಾರ್ಯ ಚಟುವಟಿಕೆಗಳನ್ನು ನಿಯಂತ್ರಿಸುವುದು ಮುಂತಾದ ರೀತಿಯಿಂದ ದೇಹದ ರಕ್ಷಣೆ ಮತ್ತು ಬೆಳವಣಿಗೆಗೆ ಸಹಾಯ ಮಾಡುತ್ತದೆ. ಆದ್ದರಿಂದ ಇದರ ಕೊರತೆಯು ನಾನಾ ರೀತಿಯ ರೋಗ ಲಕ್ಷಣಗಳನ್ನು ಉಂಟುಮಾಡುತ್ತದೆ.


ಫೋಟೋ ಕೃಪೆ : google

ವಿಟಮಿನ್ ಬಿ 12 ಕೊರತೆಯ ಲಕ್ಷಣಗಳು ಮುಖ್ಯವಾಗಿ:

*ಬಾಯಿ ಮತ್ತು ನಾಲಿಗೆಯ ಹುಣ್ಣು,
*ಅತಿಯಾದ ಸುಸ್ತು, ತಲೆನೋವು, ವಾಕರಿಕೆ,
*ಹಳದಿ ಬಣ್ಣಕ್ಕೆ ತಿರುಗುವ ಚರ್ಮ,
*ಮರೆವು, ಅತಂಕ ಮತ್ತು ಖಿನ್ನತೆ,
*ಜೀರ್ಣಕ್ರಿಯೆ ಸಂಬಂಧಿತ ತೊಂದರೆಗಳು, ಹಸಿವು ಕ್ಷೀಣಿಸುವುದು,
*ಮಾನಸಿಕ ಅಸ್ಥಿರತೆ,
*ಕೈಕಾಲುಗಳಲ್ಲಿ ಉರಿ ಅಥವಾ ಸ್ಪರ್ಶ ಹೀನತೆ,
*ಅತಿಯಾದ ತೂಕ ವ್ಯತ್ಯಾಸ
*ಮಾಂಸಖಂಡಗಳಲ್ಲಿ ಊತ, ನೋವು,
*ದೃಷ್ಟಿದೋಷ, ಮತ್ತು
*ಪುರುಷರಲ್ಲಿ ಕಾಡಬಹುದಾದ ಲೈಂಗಿಕ ಅಸಾಮರ್ಥ್ಯ.. ಇತ್ಯಾದಿಗಳು.


ಫೋಟೋ ಕೃಪೆ : google

ವಿಟಮಿನ್ ಬಿ 12 ನ ಕೊರತೆ ಉಂಟಾಗಲು ಎರಡು ಕಾರಣಗಳಿದ್ದು ಆಹಾರದಲ್ಲಿ ಸಮರ್ಪಕವಾಗಿ ಪೂರೈಕೆಯಾಗದಿರುವುದು ಒಂದು ಕಾರಣವಾದರೆ ದೇಹ ಅಗತ್ಯ ಪ್ರಮಾಣದಲ್ಲಿ B 12 ಅನ್ನು ಪಡೆದುಕೊಳ್ಳಲು ವಿಫಲವಾಗುವುದು ಇನ್ನೊಂದು ಕಾರಣ. ಆಹಾರದಲ್ಲಿ ವಿಟಮಿನ್ ಪೂರೈಕೆ ಆಗುತ್ತಿದ್ದರೂ ದೇಹಕ್ಕೆ ಪಡೆಯಲು ಸಾಧ್ಯವಾಗದೇ ಇರುವ ಸಂದರ್ಭಗಳು ಮುಖ್ಯವಾಗಿ..

*ಜೀರ್ಣಾಂಗ ಸಂಬಂಧಿ ಸಮಸ್ಯೆಗಳು,
*ಉದರ ಸಂಬಂಧಿ ಶಸ್ತ್ರ ಚಿಕಿತ್ಸೆಗಳು,
*ಮದ್ಯಪಾನ,
*ವಿಟಮಿನ್ ನ ಪರಿವರ್ತನೆಯಲ್ಲಿ ವಿಫಲತೆ, ಇತ್ಯಾದಿ.

ಯಾವುದೇ ರೋಗ ಲಕ್ಷಣಗಳು ಕಂಡುಬಂದಾಗ ವೈದ್ಯಕೀಯ ಪರೀಕ್ಷೆಗೆ ಒಳಪಡುವುದು ಮಾತ್ರವೇ ವಿಟಮಿನ್ ಬಿ 12 ಕೊರತೆಯನ್ನು ಗುರುತಿಸಲು ಇರುವ ಮಾರ್ಗ. ಸಾಮಾನ್ಯವಾಗಿ ರಕ್ತ ಪರೀಕ್ಷೆ ನಡೆಸುವ ವೈದ್ಯರು Complete blood count ಮತ್ತು B 12 ನ ಮಟ್ಟವನ್ನು ಆಧರಿಸಿ ಕೊರತೆಯನ್ನು ಧೃಡಪಡಿಸುತ್ತಾರೆ. ಎಪ್ಪತ್ತೈದು ವರ್ಷಕ್ಕಿಂತ ಮೇಲ್ಪಟ್ಟವರು, ಕಠಿಣ ವೀಗನ್ (Vegan) ಆಹಾರ ಪದ್ದತಿ ಅನುಸರಿಸುವವರು, ಮದ್ಯವ್ಯಸನಿಗಳು, ಜೀರ್ಣಕ್ರಿಯೆ ಸಂಬಂಧಿತ ಸಮಸ್ಯೆ ಉಳ್ಳವರು, ಮಧುಮೇಹ ಅಥವಾ ಹೃದಯ ಸಂಬಂಧಿ ಖಾಯಿಲೆಗಳಿಗೆ ಔಷಧಿ ಸೇವಿಸುವವರು ಮತ್ತು ನಿರಂತರವಾಗಿ ಗರ್ಭನಿರೋಧಕ ಮಾತ್ರೆಗಳನ್ನು ತೆಗೆದುಕೊಳ್ಳುವವರು ವಿಟಮಿನ್ ಬಿ 12 ಪರೀಕ್ಷೆಗೆ ಒಳಪಡುವುದು ಅತ್ಯಗತ್ಯ. ಆರೋಗ್ಯವಂತ ಜೀವನಕ್ಕಾಗಿ ಪ್ರತಿದಿನ ಒಬ್ಬ ವ್ಯಕ್ತಿಗೆ 2.4 mcg ಯಷ್ಟು ವಿಟಮಿನ್ ಬಿ 12 ನ ಅವಶ್ಯಕತೆ ಇದ್ದು ಗರ್ಭಿಣಿಯರಿಗೆ ಮತ್ತು ಹಾಲುಣಿಸುವ ತಾಯಂದಿರಿಗೆ ಈ ಅಗತ್ಯತೆ ಕ್ರಮವಾಗಿ 2.6 ಮತ್ತು 2.8 mcg ನಷ್ಟಿರುತ್ತದೆ.

ವಿಟಮಿನ್ ಬಿ 12 ಕೊರತೆಯು ಅತಿಯಾದರೆ ರಕ್ತಹೀನತೆ (Anemia) ಉಂಟಾಗುವ ಸಾಧ್ಯತೆ ಇದ್ದು ಮೊದಲೇ ಎಚ್ಚರಿಕೆ ವಹಿಸಬೇಕಾಗುತ್ತದೆ. ಕೊರತೆ ಉಂಟಾಗದಂತೆ ತಡೆಯಲು…

ಫೋಟೋ ಕೃಪೆ : google

*ಮಾಂಸಾಹಾರಿಗಳು ಮೀನು, ಮೊಟ್ಟೆ, ಮಾಂಸವನ್ನು ಅಗತ್ಯ ಪ್ರಮಾಣದಲ್ಲಿ ಸೇವಿಸಬಹುದು.
*ಸಸ್ಯಾಹಾರಿಗಳು ಮೊಳಕೆ ಕಾಳು, ಒಣಹಣ್ಣುಗಳು, ಯೀಸ್ಟ್, ಸೋಯಾ, ಪ್ರೋಟೀನ್ ಪೌಡರ್, ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಬಳಸುವುದರಿಂದ ಕೊರತೆ ನಿವಾರಿಸಿಕೊಳ್ಳಬಹುದು.
*ಅಗತ್ಯವಿದ್ದಾಗ ವೈದ್ಯರ ಸಲಹೆಯಂತೆ ಸಪ್ಲಿಮೆಂಟ್ಸ್ ಪಡೆದು ಕೊರತೆ ನೀಗಿಸಿಕೊಳ್ಳಬಹುದು.
*ವ್ಯಸನಗಳಿಂದ ದೂರವಿದ್ದು, ಆರೋಗ್ಯಕರ ಜೀವನಶೈಲಿ ಅಳವಡಿಸಿಕೊಳ್ಳುವುದರಿಂದ ವಿಟಮಿನ್ ಬಿ 12 ಸೇರಿದಂತೆ ಯಾವುದೇ ಪೋಷಕಾಂಶಗಳ ಕೊರತೆ ಉಂಟಾಗದು ಎಂಬ ವಿಶ್ವಾಸ ವೈದ್ಯಕೀಯ ಲೋಕದ್ದು.


  • ಸುದರ್ಶನ್ ಪ್ರಸಾದ್

0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW