ಎಸ್.ಎಲ್. ಭೈರಪ್ಪ ಅವರ ‘ತಬ್ಬಲಿಯು ನೀನಾದೆ ಮಗನೆ’ ಕಾದಂಬರಿಗೆ ಐವತ್ತೊಂದನೇ ವರ್ಷದ ಸಂಭ್ರಮ. ೧೯೬೮ ರಲ್ಲಿ ಈ ಕಾದಂಬರಿ ಪ್ರಕಟವಾಯಿತು. ಕೃತಿಯ ಬಗ್ಗೆ ಮಮತಾ ವೆಂಕಟೇಶ್ ಅವರು ವಿಮರ್ಶೆ ಮಾಡಿದ್ದಾರೆ.ಓದಿ ನಿಮ್ಮ ಅಭಿಪ್ರಾಯವನ್ನು ತಿಳಿಸಿ.
ಈ ಕಾದಂಬರಿಗೀಗ ಐವತ್ತೊಂದನೇ ವರ್ಷದ ಸಂಭ್ರಮ. ಆದರೂ ಇವಳು ಮುಪ್ಪಿನ ಹಾದಿಯವಳಲ್ಲ. ಚಿರ ಯೌವ್ವನೆ.
ಭೈರಪ್ಪನವರ ಕಾದಂಬರಿಗಳ ಕಥಾವಸ್ತುಗಳು ಬಹುತೇಕ ವಿವಾದಾತ್ಮಕ. ಹಾಗಿದ್ದರೂ ಅವರು ಅತಿಹೆಚ್ಚು ಓದುಗರನ್ನು ತಲುಪಿದ ಅತಿ ಜನಪ್ರಿಯ ಲೇಖಕರು ಎಂಬ ಹೆಗ್ಗಳಿಕೆಯೂ ಉಂಟು. ಈ ಕಾದಂಬರಿಯು ಅದಕ್ಕೆ ಹೊರತಾಗದೆ ಗೋಹತ್ಯೆಯ ಕಥಾವಸ್ತುವನ್ನು ತೆಗೆದುಕೊಂಡು ತಮ್ಮ ಎಂದಿನ ನಿರಾಳ ಸರಾಗವಾದ ತಣ್ಣನೆಯ ಶೈಲಿಯಲ್ಲಿ ನಿರೂಪಿಸುತ್ತಾ ಹೋಗಿದ್ದಾರೆ. ಆದರೆ ಎಂದಿನಂತೆ ಅಭಿಪ್ರಾಯಗಳನ್ನು ಮಾತ್ರ ಹೇಳದೆ, ಅವಕ್ಕೆ ಅವಶ್ಯಕತೆಗಿಂತ ಹೆಚ್ಚಿನ ಒತ್ತು ಕೊಟ್ಟಿದ್ದಾರೆನೋ ಎನಿಸುತ್ತದೆ.
ಕಾದಂಬರಿಯು ನಮಗೆಲ್ಲಾ ಚಿರಪರಿಚಿತವಾದ ಪುಣ್ಯಕೋಟಿ ಎಂಬ ಗೋವಿನ ಕಥೆಯೊಂದಿಗೆ ಮೊದಲಾಗುತ್ತದೆ .ಚಿಕ್ಕಂದಿನಲ್ಲಿ ಗೋವಿನ ಕಥೆಯನ್ನು ಕೇಳಿ ತುಂಬಾ ಅಳುತ್ತಿದ್ದುದರಿಂದಲೋ ಏನೋ ಕಥೆ ಶುರುವಿಗೆ ನನ್ನನ್ನು ಹಿಡಿದಿಟ್ಟುಕೊಂಡಿತ್ತು.
ಗೋವು ನಮ್ಮ ಸಂಸ್ಕೃತಿಯಲ್ಲಿ ಅತ್ಯಂತ ಮಹತ್ವದ ಸ್ಥಾನ ಪಡೆದಿದ್ದು ನಾವು ಕಾಮಧೇನು ಎಂದೂ, ಗೋಮಾತಾ ಎಂದೂ ಪೂಜಿಸುತ್ತೇವೆ.ಸಕಲ ದೇವತೆಗಳು ಗೋವಿನಲ್ಲಿ ಆವಾಸವಾಗಿರುತ್ತಾರೆ ಎನ್ನುತ್ತಾರೆ.ಗೋವಿನ ತ್ಯಾಜ್ಯಗಳು ಕೂಡ ನಮಗೆ ನಿಷಿದ್ಧವಲ್ಲ. ಬದಲಾಗಿ ಬಹು ಪೂಜನೀಯ. ಮೈಲಿಗೆ ಕಳೆಯಲು ಪಂಚಗವ್ಯ ಶುದ್ದಿ ನಮ್ಮಲ್ಲಿ ಬಹಳ ಸಾಮಾನ್ಯ. ಇವೆಲ್ಲವೂ ಈ ಕೃತಿಯಲ್ಲಿ ಹಾಸುಹೊಕ್ಕಾಗಿ ಹೋಗಿದೆ.
ಫೋಟೋ ಕೃಪೆ : SL Byarappa
ಈ ಕೃತಿಯು ಚಲನಚಿತ್ರವು ಆಗಿದೆಯಂತೆ. ಆದರೆ ನಾನು ನೋಡಿಲ್ಲ. ಕಾಳಿಂಗೇ ಗೌಡ ಪುಣ್ಯಕೋಟಿ ಕಥೆಯಲ್ಲಿ ಬರುವ ಗೊಲ್ಲರ ವಂಶಸ್ಥ .ಅವನ ಬಳಿ ಪುಣ್ಯಕೋಟಿ ವಂಶದ ಸೌಮ್ಯ ತಳಿಯ ಹಸುಗಳೂ ಇದ್ದವು. ಹಸುಗಳ ಮೇಲೆ ಅವನ ಪ್ರೀತಿಯ ಪರಾಕಾಷ್ಠೆ ಎಷ್ಟಿತ್ತೆಂದರೆ ಕರುಗಳನ್ನು ತಮ್ಮೊಟ್ಟಿಗೆ ಮಲಗಿಸಿ ಕೊಳ್ಳುತ್ತಿದ್ದರು.ಮಗ ಕೃಷ್ಣ ಹಸುವಿನ ರಕ್ಷಣೆಗಾಗಿ ಪ್ರಾಣ ನೀಡುತ್ತಾನೆ. ಮುದ್ದಾದ ಮೊಮ್ಮಗ ಕಾಳಿಂಗ ತಾಯಿಯ ಹಾಲಿಲ್ಲದಿದ್ದಾಗ ನೇರವಾಗಿ ಹೋಗಿ ಪುಣ್ಯಕೋಟಿಯ ಕೆಚ್ಚಲಿಗೆ ಬಾಯಿ ಹಾಕಿ ಹಾಲು ಕುಡಿಯುತ್ತಾನೆ.
ಕಾಳಿಂಗೇ ಗೌಡನ ಪ್ರಬಲ ವಿರೋಧದ ನಡುವೆಯೂ ಮೊಮ್ಮಗ ಕಾಳಿಂಗ ಜೋಯಿಸರ ಸಹಕಾರದಿಂದ ಓದನ್ನು ಮುಂದುವರಿಸುತ್ತಾನೆ.ಅವರ ಮನೆಯಲ್ಲಿ ಅವನ ಊಟ ನಡೆದುಹೋಗುತ್ತದೆ.ನಂತರ ವಿದೇಶಕ್ಕೆ ಹೊರಟು ಹೋಗುತ್ತಾನೆ.
ಇತ್ತ ಕಾಳೇಗೌಡ ಸರಕಾರದ ವಶವಾಗಲಿದ್ದ ಗೋಮಾಳವನ್ನು ಉಳಿಸಿಕೊಳ್ಳುತ್ತಾನೆ.ತನ್ನ ಹೆಂಡತಿ ಹಾಗೂ ಮೂಕಿ ಸೊಸೆ ತಾಯಮ್ಮನ ಸಹಕಾರದಿಂದ ಪುಣ್ಯಕೋಟಿಯ ದೇವಾಲಯ ಮತ್ತುಕಲ್ಯಾಣಿ ಒಂದನ್ನು ಕಟ್ಟಿಸುತ್ತಾನೆ. ರಸ್ತೆ ವಿಸ್ತರಣೆಯಲ್ಲಿ ಕೃಷ್ಣನ ಸಮಾಧಿ ಹಾಗೂ ಅವನು ಜೀವ ಉಳಿಸಿದ ಪುಣ್ಯ ಕೋಟಿಯ ತಳಿಯ ಸಮಾಧಿಯನ್ನು ಒಡೆದು ಹಾಕಿದ ಮೇಲೆ ಆ ಕೊರಗಿನಲ್ಲಿ ಗೌಡತಿ ಸಾಯುತ್ತಾಳೆ.ಅದೇ ಕೊರಗಿನಲ್ಲಿ ಮಂಕಾಗಿ ಗೌಡನು ಹೆಂಡತಿಯನ್ನು ಹಿಂಬಾಲಿಸುತ್ತಾನೆ.
ತಾತ ಸತ್ತ ಸುದ್ದಿ ತಿಳಿದು ಕಾಳಿಂಗ ದೇಶಕ್ಕೆ ವಾಪಸಾಗುತ್ತಾನೆ. ವ್ಯವಹಾರವನ್ನೆಲ್ಲ ತನ್ನ ಕೈಗೆ ತೆಗೆದುಕೊಂಡು ಮುದಿಯಾದ ನಿಷ್ಪ್ರಯೋಜಕ ಹಸುಗಳನ್ನುಕಸಾಯಿಖಾನೆಗೆ ಮಾರಿ ಬಿಡುತ್ತಾನೆ. ಟ್ರ್ಯಾಕ್ಟರ್ ತಂದು ಗೋಮಾಳವನ್ನು ಉತ್ತು ಬೆಳೆ ಹಾಕಲು ಹವಣಿಸುತ್ತಾನೆ. ದೇವಾಲಯದ ಕಲ್ಯಾಣಿಗೆ ಪಂಪ್ ಹಾಕಿ ಬೆಳೆಗೆ ನೀರುಣಿಸುತ್ತಾನೆ.ಜೋಯಿಸರ ಮಗ ವೆಂಕಟರಮಣ ದೇವಾಲಯದ ಅಧಿಕೃತ ಪೂಜಾರಿಯಾಗಿ ಕಾಳಿಂಗೇ ಗೌಡನಿಂದ ನೇಮಿಸಲ್ಪಟ್ಟರುತ್ತಾನೆ. ಅದಕ್ಕೆ ಪ್ರತಿಯಾಗಿ ಗೌಡ ಅವನಿಗೆ ದತ್ತಿ ಜಮೀನನ್ನು ಕೊಟ್ಟಿರುತ್ತಾನೆ.ಪೂಜೆಯ ಸಂದರ್ಭದಲ್ಲಿ ಕಾಳಿಂಗ , ವೆಂಕಟರಮಣ ಜೋಯಿಸರ ಜೊತೆ ಮಾತಿಗೆ ತೊಡಗುತ್ತಾನೆ.
ವಿದೇಶದಲ್ಲಿದ್ದ ತನ್ನ ಹೆಂಡತಿ ಹಿಲ್ಡಾ ಮತ್ತು ಮಗ ಜಾಕ್ ರನ್ನು ಊರಿಗೆ ಕರೆಸಿಕೊಳ್ಳುತ್ತಾನೆ. ಅವಳುವ್ಯವಸಾಯ ಹಾಗೂ ವ್ಯವಹಾರದಲ್ಲಿ ಮಹಾ ಚತುರೆ.ಸ್ವತಹ ಟ್ರ್ಯಾಕ್ಟರ್ನಲ್ಲಿಯೇ ಉತ್ತು ಜಮೀನಿನಲ್ಲಿ
ಹೊಗೆಸೊಪ್ಪನ್ನು ಹಾಕಿಸುತ್ತಾಳೆ.
ಹಿಲ್ಡಾ ಮತ್ತು ವೆಂಕಟರಮಣನ ಮಧ್ಯೆ ವೈಚಾರಿಕ ಸಂಘರ್ಷ ನಡೆಯಲು ಮೊದಲಾಗುತ್ತದೆ. ಕಾಳಿಂಗನ ಮನೆತನದ ಜೋಯಿಸನಾದರೂ ಸಹ ತಾನು ನಂಬಿದ ಪಾಲಿಸುತ್ತಿದ್ದ ಆದರ್ಶಗಳ ಪರವಾಗಿ ವೆಂಕಟ ರಮಣ ಗಟ್ಟಿಯಾಗಿ ನಿಲ್ಲುತ್ತಾನೆ .ಅವನಿಗೆ ಹಿಲ್ಡಾ ಮತ್ತು ಕಾಳಿಂಗರ ಅತಿ ವ್ಯವಹಾರಿಕ ಪ್ರಜ್ಞೆ ಬೇಸರ ತರುತ್ತದೆ. ಅದನ್ನು ತನ್ನ ಮಾತಿನಿಂದ ಪ್ರತಿಭಟಿಸುತ್ತಲೇ ಇರುತ್ತಾನೆ.
ಕಾಳಿಂಗನು ತಾಯಿಯ ದೊಡ್ಡಿಯಲ್ಲಿ ಇದ್ದ ಕೆಲವು ಹಸುಗಳನ್ನು ತಂದು ಸಾಕುತ್ತಾನೆ.ಹೆಂಡತಿಯ ಮಾತಿನಂತೆ ಕರುಗಳಿಗೆ ಹಾಲನ್ನು ಕುಡಿಯಲು ಬಿಡದೆ ಪೂರ್ತಿಯಾಗಿ ಮೆಷಿನ್ ನ ಸಹಾಯದಿಂದ ಹಿಂಡಿ ಮಾರಲು ಆರಂಭಿಸುತ್ತಾನೆ. ಹೊಗೆಸೊಪ್ಪಿನಲ್ಲಿಯೂ ಲಾಭವನ್ನು ಸಂಪಾದಿಸುತ್ತಾನೆ. ಆದರೆ ಇದೆಲ್ಲದರ ಮಧ್ಯೆಯೂ ಹಿಲ್ಡಾ ಮತ್ತು ಕಾಳಿಂಗರಿಗೆ ತೀರದ ಏಕಾಂಗಿತನ ಕಾಡಲಾರಂಭಿಸುತ್ತದೆ. ಊರಿನ ಜನರು ಇವರನ್ನು ಅಪರಿಚಿತರಂತೆ ನೋಡುತ್ತಿರುತ್ತಾರೆ.
ಹಿಲ್ಡಾ ಮತ್ತು ವೆಂಕಟರಮಣನ ಮಧ್ಯೆ ಮಾತಿನ ಚಕಮಕಿಗೆ ಕೊನೆಯೇ ಇರುವುದಿಲ್ಲ. ಹೊಗೆಸೊಪ್ಪು ಹಾಕುವುದರ ಹಾಗೂಹಾಲನ್ನು ಪೂರ್ತಿಯಾಗಿ ಹಿಂಡಿ ಮಾರುವುದರ ವಿರುದ್ಧ ವೆಂಕಟರಮಣ ತೀವ್ರ ವಿರೋಧ ವ್ಯಕ್ತ ಪಡಿಸುತ್ತಾನೆ.ಅವಳನ್ನು ರಕ್ತಪಿಪಾಸು ಎಂದೂ ಅವಳ ಜನಾಂಗವನ್ನು ಅನಾಗರಿಕ ಎಂದು ಹೇಳಿದಾಗ ಅವಳು ಕೋಪದಿಂದ ವಿಚಾರ ಶೂನ್ಯ ಳಾಗುತ್ತಾಳೆ. ಗರ್ಭಿಣಿಯಾಗಿದ್ದ ಹಿಲ್ಡಾ ಪ್ರತೀಕಾರದ ಮನೋಭಾವದಿಂದ ಕಾಳಿಂಗ ಊರಿನಲ್ಲಿ ಇಲ್ಲದಿರುವಾಗ ಪುಣ್ಯಕೋಟಿ ತಳಿಯ ಹಸುವನ್ನು ಕೊಲ್ಲಿಸಿ ತಿಂದುಬಿಡುತ್ತಾಳೆ.
ರಹಸ್ಯವಾಗಿ ಮಾಡಿದರೂ ಈ ವಿಷಯ ತಾಯಮ್ಮ ಮತ್ತು ಊರಿನವರಿಗೆ ತಿಳಿದುಬಿಡುತ್ತದೆ. ಅವರು ಕ್ರೋಧದಿಂದ ತಾಯಮ್ಮನ ಮುಂದಾಳತ್ವದಲ್ಲಿ ಬಂದು ಕಾಳಿಂಗನಿಗೆ ಆಟಕಾಯಿಸಿ ಕೊಳ್ಳುತ್ತಾರೆ. ದಂಡವನ್ನು ಕಟ್ಟುವಂತೆಯೂ,ಶುದ್ಧಿಯಾಗ ಬೇಕೆಂದೂ, ಕಲ್ಯಾಣಿಯಲ್ಲಿ ನೀರನ್ನು ತೆಗೆಯ ಬಾರದೆಂದೂ ನಿರ್ಬಂಧಿಸುತ್ತಾರೆ. ಕತ್ತಲಲ್ಲಿ ಅವನ ಹೊಗೆಸೊಪ್ಪಿನ ತೋಟವನ್ನು ಪೂರ್ತಿಯಾಗಿ ಹಾಳುಗೆಡವುತ್ತಾರೆ.
ಈ ಸಮಯದಲ್ಲಿ ಕಾಳಿಂಗನ ಅನುಸರಣೆ ಹಿಲ್ಡಾಳಿಗೆ ಅಸಮಾಧಾನವನ್ನು ತರುತ್ತದೆ.
ಕಾಳಿಂಗ ವೆಂಕಟರಮಣನಿಗೆ ನೀಡಿದ ದತ್ತಿ ಜಮೀನನ್ನು ಹಿಂತೆಗೆದುಕೊಳ್ಳುವುದಾಗಿ ಹೆದರಿಸುತ್ತಾನೆ. ಗೋಹತ್ಯೆ ನಿಷೇಧಕ್ಕೆ ಸಹಿ ಸಂಗ್ರಹಣೆ ಮಾಡಿದ ವಿವಾದದಲ್ಲಿ ಕೆಲಸಕ್ಕೆ ರಾಜೀನಾಮೆ ಕೊಟ್ಟಿದ್ದರೂ ಸಹ ಬೆದರದೆ ದತ್ತಿ ಪತ್ರವನ್ನು ತಂದು ಕಾಳಿಂಗನ ಮುಂದೆ ಬಿಸಾಡುತ್ತಾನೆ. ಈ ಮಧ್ಯೆ ಹಸುಗಳನ್ನುವೆಂಕಟರಮಣನಿಗೆ ದಾನ ಮಾಡಿ ತಾಯಮ್ಮ ಸಾಯುತ್ತಾಳೆ .ಹಿಲ್ಡಾ ಊರಿಗೆ ಹಿಂತಿರುಗುವುದಾಗಿ ಕಾಳಿಂಗನಿಗೆ ಬೆದರಿಸುತ್ತಾಳೆ.
ತಾಯವ್ವನ ಹಾಗೆ ಇರುವ ಮಗುವಿಗೆ ಅವಳು ಜನ್ಮನೀಡುತ್ತಾಳೆ. ಮಗುವಿಗೆ ಮೂರು ತಿಂಗಳು ಆದಾಗ ಸ್ತನದ ಹುಣ್ಣಿನಿಂದ ಮಗುವಿಗೆ ಹಾಲು ನೀಡಲಾಗದೆ ತತ್ತರಿಸುತ್ತಾಳೆ.ಮಗು ಬಾಟಲ್ ಹಾಲು ಒಲ್ಲದೆ ಅತ್ತಾಗ ವೆಂಕಟರಮಣನ ಮೊರೆಹೋಗಿ ಪುಣ್ಯಕೋಟಿ ಹಸುವಿನ ಹಾಲಿಗಾಗಿ ಕಾಳಿಂಗ ಅಂಗಲಾಚುತ್ತಾನೆ.
ಜೋಯಿಸ ನಿನ್ನ ಸಂತತಿ ಸಾಯಲಿ ಎಂದು ದೇವರಲ್ಲಿ ಬೇಡುತ್ತೇನೆ ,ಇಲ್ಲವಾದಲ್ಲಿ ಅವುಗಳ ಹೊಟ್ಟೆಯಲ್ಲಿ ಹುಟ್ಟುವ ಮಕ್ಕಳು ಸಹ ಗೋಹತ್ಯೆಯನ್ನು ಮಾಡುತ್ತಾರೆ ಎಂದು ನಿರ್ದಯೆಯಿಂದ ನಿರಾಕರಿಸುತ್ತಾನೆ. ಕಡೆಗೂ ಮಾನವೀಯತೆಯ ದೃಷ್ಟಿಯಿಂದ ಪುಣ್ಯಕೋಟಿ ಹಸುವನ್ನು ನೀಡುತ್ತಾನೆ. ಮಗು ಹಾಲು ಕುಡಿದು ತೃಪ್ತವಾಗುತ್ತದೆ.
ಇದರಿಂದ ಜ್ಞಾನೋದಯಗೊಂಡ ಕಾಳಿಂಗ ತಾನು ಮಾರಿದ ನಿಷ್ಪ್ರಯೋಜಕ ಹಸುಗಳ ಬೆನ್ನತ್ತಿ ಬಾಂಬೆಗೆ ಹೋಗುತ್ತಾನೆ. ಕಸಾಯಿಖಾನೆಯಲ್ಲಿ ಘೋರ ದೃಶ್ಯ ಕಂಡು ತತ್ತರಿಸುತ್ತಾನೆ.ತನ್ನತಪ್ಪನ್ನುಅರಿತು ಕೊಳ್ಳುತ್ತಾನೆ .ಎಲ್ಲಾ ಹಸುಗಳು ತನ್ನದೆಂದು ಭ್ರಮಾಧೀನ ನಾಗುತ್ತಾನೆ.ತನ್ನ ನಡತೆಯಿಂದಲೇ ತಾಯಿ ಸತ್ತಳು ಎಂಬ ಸತ್ಯ ಕೊನೆಗೂ ಅವನಿಗೆ ಅರಿವಾಗುತ್ತದೆ. ಅಲ್ಲಿಂದ ಊರಿಗೆ ವಾಪಸಾಗುತ್ತಾನೆ.
ಅವರ ೧೯೬೮ ನೇ ಇಸ್ವಿಯ ಈ ಕಾದಂಬರಿ ಇಂದಿಗೂ ಪ್ರಸ್ತುತ. ಇಂದಿನ ವಿವಾದದ ಕೇಂದ್ರಬಿಂದುವಾಗಿರುವ ಗೋಹತ್ಯೆ ಈ ಕಾದಂಬರಿಯ ಪ್ರಧಾನ ವಸ್ತು. ಭೈರಪ್ಪನವರು ಗೋಹತ್ಯೆಯ ವಿರೋಧವಾಗಿ ನಿಂತಿದ್ದು ವಿವಾದದ ಮೂಲವಾಗಿ ಬಿಟ್ಟಿತ್ತು. ಹಿಂದೂ ಮೂಲಭೂತವಾದಿ ಎಂಬ ಹಣೆಪಟ್ಟಿ ಹಚ್ಚಿಸಿಕೊಂಡು ಸಹ ಹಿಂದೂ ಧರ್ಮದ ಶ್ರೇಷ್ಠ ಗುಣಗಳನ್ನು ಎತ್ತಿಹಿಡಿಯುತ್ತಾರೆ .ಇದು ಸೋ-ಕಾಲ್ಡ್ ಬುದ್ಧಿಜೀವಿಗಳು ಕಣ್ಣು ಕೆಂಪಾಗಿಸುತ್ತದೆ.
ಮಾಂಸಾಹಾರ ಸೇವಿಸಬಹುದಾದರೆ ಗೋಮಾಂಸ ಏಕೆ ಬೇಡ ಎನ್ನುವವರಿಗೆ ಈ ಕಾದಂಬರಿ ಉತ್ತರ ಕೊಟ್ಟೀತು. ಗೋವನ್ನು ಪ್ರಾಣಿಯಂತೆ ಈ ಮನೆ ಹೆಣ್ಣುಮಗಳಾಗಿ ಭಾವಿಸುವ ಭಾರತೀಯರಿಗೆ ಇದೊಂದು ಬುಕ್ ಮಾರ್ಕ್ ಎನ್ನಬಹುದು .ಇದೊಂದು ತೀರಾ ಕಳಪೆ ಕಾದಂಬರಿ ಎನ್ನುವವರು ಉಂಟು .ಆದರೆ ಕಾದಂಬರಿಯ ನಿಜವಾದ ನಾಯಕ “ಹಸು” ಎಂದು ಕಾಣುವುದಂತೂ ಸುಳ್ಳಲ್ಲ .ವೆಂಕಟರಮಣ ಜೋಯಿಸರು ಗೋವಿನ ಪರವಾಗಿ ದಿಟ್ಟವಾಗಿ ಹೋರಾಟ ಮಾಡುವ ರೀತಿ ಬೆರಗಾಗಿಸುತ್ತದೆ. ಗೋವು ಮಾನವನ ಆಹಾರಕ್ಕಾಗಿ ,ಹಾಲಿಗಾಗಿ ಎಂದು ಪ್ರತಿಪಾದಿಸುವ ಕಾಳಿಂಗ ಮರಳಿ ತನ್ನ ತಾತನ ಧರ್ಮಶ್ರದ್ಧೆಗೇ ಶರಣಾಗುವುದು ನಮಗೆ ಬೆರಗು ಹಾಗೂ ನೆಮ್ಮದಿ ಮೂಡಿಸುತ್ತದೆ.
ಇಲ್ಲಿ ತಬ್ಬಲಿ ಯಾಗುವುದು ಹಿಲ್ಡಾ ಕೊಂದ ಪುಣ್ಯಕೋಟಿ ಹಸುವಿನ ಕರುವೋ, ದೇಶಬಿಟ್ಟು ದೇಶದಲ್ಲಿ ತನ್ನವರಿಲ್ಲದೇ ತನ್ನ ವಿಚಾರಗಳಿಗೆ ಕಾಳಿಂಗನನ್ನು ಸೇರಿಸಿ ಎಲ್ಲರೂ ವಿರೋಧಿ ಆಗುವುದರಿಂದ ಹಿಲ್ಡಾಳೋ ಅಥವಾ ತನ್ನ ವಿಚಾರ ಶ್ರದ್ಧೆಯ ದಿಕ್ಕನ್ನೇ ಬದಲಿಸಿಕೊಳ್ಳುವ ಕಾಳಿಂಗನೋ ಎಂಬ ಜಿಜ್ಞಾಸೆ ಮಾತ್ರ ನನ್ನಲ್ಲಿ ಉತ್ತರವಿಲ್ಲದ ಪ್ರಶ್ನೆಯಾಗಿ ನಿಂತಿದೆ. ನಿಜಕ್ಕೂ ತಬ್ಬಲಿಯು ಯಾರು?
- ಮಮತಾ ವೆಂಕಟೇಶ್