ಎಲ್ಲರ ಮನೆಯ ಹಂಚಿನ ಕೆಳಗೆ ಗುಬ್ಬಿಗಳು ಖಾಯಂ ಗೂಡು ಕಟ್ಟಿಕೊಂಡು ಬಿಡುತಿದ್ದವು. ಚಿಂವ್ ಗುಟ್ಟುವಿಕೆ.. ಪುಟ್ಟ ಪುಟ್ಟ ಕಾಲು.. ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದವು ಆದರೆ ಇಂದು ಮನುಷ್ಯ ತನ್ನ ಸ್ವಾರ್ಥಕ್ಕೆ ಎಲ್ಲವನ್ನೂ ಹಾಳು ಮಾಡಿ ಮಣ್ಣು ಮಾಡುತ್ತಿದ್ದಾನೆ.. ಕೊನೆಗೆ ತಾನು ಕೂಡ ಮಣ್ಣೇ ಸೇರುತ್ತೇನೆ ಎಂಬುದ ಮರೆತಿದ್ದಾನೆ ಎನ್ನುವ ಎಚ್ಚರಿಕೆ ಘಂಟೆಯನ್ನು ಚೇತನ್ ಗವಿಗೌಡ ಅವರು ತಮ್ಮ ಲೇಖನದ ಮೂಲಕ ಜನರಿಗೆ ಜಾಗೃತಿ ಮೂಡಿಸಿದ್ದಾರೆ, ತಪ್ಪದೆ ಓದಿ…
ಬೆಂಗಳೂರಿನಿಂದ ಕೇವಲ ನೂರು ಕಿಲೋಮೀಟರ್ ವ್ಯಾಪ್ತಿಯಲ್ಲಿರುವ ಒಂದು ಪುಟ್ಟ ಊರು.. ಎತ್ತ ನೋಡಿದರೂ ಹಸಿರ ಸಿರಿಯ ಹೊದ್ದು ಮಲಗಿರುವ ಭೂ ತಾಯಿ.. ಮುಗಿಲೆತ್ತರಕ್ಕೆ ಬೆಳೆದು ನಿಂತ ತೆಂಗಿನಮರಗಳು. ರಾಗಿಯ ತೆನೆ ನೋಡುಗರ ಕಣ್ ಸೆಳೆಯುತ್ತಿತ್ತು.. ಹಸು, ಎಮ್ಮೆ, ಕೋಳಿ, ಆಡು, ಕುರಿ ಇವೆಲ್ಲಾ ಜೀವನದ ಒಂದು ಭಾಗವೇ ಆಗಿ ಹೋಗಿದ್ದವು.. ತಣ್ಣನೆ ಗಾಳಿಯಲಿ ಬೆಳದಿಂಗಳ ಬೆಳಕಲ್ಲಿ ಚುಕ್ಕಿ ತಾರೆಗಳ ಏಣಿಸುತ್ತ ಕುಳಿತುಕೊಳ್ಳುತ್ತಿದ್ದ ಬಾಲ್ಯದ ದಿನಗಳವು.. ಇಂದು ಬೆಂಗಳೂರು ನಗರದಲ್ಲಿ ಬಹು ಮಹಡಿಯ ಕಟ್ಟಡದಲ್ಲಿ ವಾಸವಾಗಿದ್ದರು ಆ ನೆಮ್ಮದಿಯ ನಿದ್ದೆ ಬಾರದು.. ಊರ ಹೊರಗಿನ ಮಾವಿನ ತೋಟದ ಬೇಲಿ ಹಾರಿ ಕದ್ದು ತರುತಿದ್ದ ಮಾವಿನ ಕಾಯಿ, ನೆಲ್ಲಿಕಾಯಿ ಇಂದು ಮಾರುಕಟ್ಟೆಯಲ್ಲಿ ದುಡ್ಡು ಕೊಟ್ಟು ತಂದು ತಿಂದರೂ ಆ ರುಚಿ ಸಿಗದು..
ಈಜು ಬಾರದಿದ್ದರೂ ಕೆರೆಯಲ್ಲಿ ಆಡುತ್ತಿದ್ದ ಆಟಗಳು.. ಸ್ನೇಹಿತರೆಲ್ಲ ಸೇರಿ ಮಾಡುತಿದ್ದ ತುಂಟಾಟಗಳು, ಕ್ರಿಕೆಟ್, ಕಣ್ಣಮುಚ್ಚಾಲೆ, ಲಗೋರಿ, ಜುಟಾಟ ಇವೆಲ್ಲಾದರ ಸ್ಥಾನವನ್ನ ಇಂದು ಜಂಗಮವಾಣಿ ಎನ್ನುವ ಒಂದು ಪುಟ್ಟ ಸಾಧನ ಎಲ್ಲರನ್ನೂ ತನ್ನ ಕೈಬೊಂಬೆ ಮಾಡಿಕೊಂಡು ಬಿಟ್ಟಿದೆ..
ಕೇವಲ ಹತ್ತು ಹದಿನೈದು ವರ್ಷಗಳ ಅಂತರದಲ್ಲಿ ಏನೆಲ್ಲಾ ಬದಲಾವಣೆ ಎಂದು ಯೋಚಿಸುತ್ತ ಕುಳಿತಿದ್ದಾಗ ನೆನಪಾಗಿದ್ದು.. ನಮ್ಮೂರಿನ ಹಂಚಿನ ಮನೆ..!
ಫೋಟೋ ಕೃಪೆ : flickr
ಎಲ್ಲರ ಮನೆಯ ಹಂಚಿನ ಕೆಳಗೆ ಗುಬ್ಬಿಗಳು ಖಾಯಂ ಗೂಡು ಕಟ್ಟಿಕೊಂಡು ಬಿಡುತಿದ್ದವು. ಬೆಳಗಿನ ಅಲರಾಂ ಕೋಳಿಯ ಕೂಗಿನ ಜೊತೆಗೆ, ಗುಬ್ಬಿಯ ಕಲರವ..
ಕೋಳಿಗೆ ರಾಗಿ ಮತ್ತು ಅಕ್ಕಿಯ ನುಚ್ಚುನ್ನ ಹಾಕಿದ್ದರೆ ಗುಬ್ಬಿಯು ತನ್ನದು ಪಾಲಿದೆ ಎಂಬಂತೆ ತನ್ನ ಪುಟ್ಟ ಕೊಕ್ಕಿನಿಂದ ಹೆಕ್ಕಿ ಹೆಕ್ಕಿ ತಿನ್ನುತ್ತಿದದ್ದು.. ಒಂದೆರಡು ಗುಬ್ಬಿ ಹೋಗಿ ತನ್ನೆಲ್ಲ ಪರಿವಾರವನ್ನೇ ಅಲ್ಲಿಗೆ ಕರೆದುಕೊಂಡು ಬಂದು ಚಿಂವ್ ಚಿಂವ್ ಸದ್ದು ಮಾಡುತ್ತಾ ಅಕ್ಕಿಯ ನುಚ್ಚುನ್ನ ಹೆಕ್ಕುತಿದ್ದವು.. ಅದನ್ನು ನೋಡುವುದೇ ಒಂದು ಸೌಭಾಗ್ಯ..!
ಅದರ ಕಲರವ.. ಚಿಂವ್ ಗುಟ್ಟುವಿಕೆ.. ಪುಟ್ಟ ಪುಟ್ಟ ಕಾಲು.. ಆಕರ್ಷಣೆಯ ಕೇಂದ್ರ ಬಿಂದು.
ತೆಂಗಿನ ನಾರು, ಹುಲ್ಲುಕಡ್ಡಿಗಳನ್ನ ತಂದು ಮನೆಯ ಹಂಚಿನ ಕೆಳಗೆ ಪುಟ್ಟದಾಗಿ ವೃತ್ತಕಾರದಲ್ಲಿ ಒಂದು ಗೂಡು ಕಟ್ಟಿಕೊಂಡು ಮೊಟ್ಟೆ ಇಡುತಿತ್ತು.. ಆ ಮೊಟ್ಟೆಯ ಕದಿಯಲು ನಮ್ಮನೆಯ ಕಳ್ಳ ಬೆಕ್ಕೊಂದು ಸದಾ ಹೊಂಚು ಹಾಕಿ ಸಂಚು ಮಾಡಿ ಕೂರುತಿತ್ತು.. ಅದೆಷ್ಟೋ ಬಾರೀ ಗುಬ್ಬಿಯ ಮೊಟ್ಟೆಗಳನ್ನ ಕದ್ದು ತಿಂದು.. ಕೆಲವೊಮ್ಮೆ ಕೆಳಕ್ಕೆ ಬೀಳಿಸಿ ಹೊಡೆದು ಹಾಕಿದನ್ನು ಗಮನಿಸಿದ್ದೇನೆ.
ಫೋಟೋ ಕೃಪೆ : flickr
ಆ ಸಮಯದಲ್ಲಿ ಆ ಕಳ್ಳ ಕಂದು ಬೆಕ್ಕಿಗೆ ನಾಲ್ಕು ಭಾರಿಸಿದ್ದೇನೆ.. ಅದರ ಉಗುರುಗಳಲ್ಲಿ ಪರಚಿಸಿಯೂ ಕೊಂಡಿದ್ದೇನೆ. ಗೂಡು ಕಟ್ಟಿದ ಗುಬ್ಬಿಗಳು ಗೂಡಿನಲ್ಲಿ ಕಾವು ಕೊಟ್ಟು ಮರಿ ಮಾಡಿ ನಂತರ ಒಂದೊಂದೇ ಕಾಳುಗಳನ್ನ ಹೆಕ್ಕಿ ತಮ್ಮ ಮರಿಗಳ ಬಾಯಲ್ಲಿ ಹೋಗಿ ಹಾಕುತಿದ್ದದ್ದು ರೋಮಾಂಚನ.. ವಿಸ್ಮಯ..!
ದೇವಸ್ಥಾನದ ಗರ್ಭಗುಡಿಯ ಬಾಗಿಲಲ್ಲಿ, ರಾಗಿ ಹೊಲದ ನಡುವೆ, ಮನೆಯ ಮುಂದೆ, ಅಂಚಿನ ಕೆಳಗೆ, ಹಿತ್ತಲ ಗಿಡದ ಮೇಲೆ ಸಾಲುಗಟ್ಟಿ ಕುಳಿತು ಕೊಳ್ಳುತ್ತಿದ್ದವು.. ಅವುಗಳು ತಮ್ಮ ಪುಟ್ಟ ಪುಟ್ಟ ರೆಕ್ಕೆ ಬಡಿದು ಪುರ್ರನೇ ಹಾರುತಿದ್ದದ್ದು, ಆ ಪುಟ್ಟ ರೆಕ್ಕೆ, ಕೊಕ್ಕಿನ ಆಕರ್ಷಣೆ.. ಮರಿಗಳನ್ನ ಹಾರೈಕೆ ಮಾಡುತಿದ್ದದ್ದು ಇವೆಲ್ಲಾ ನೆನಪಿನ ಪುಟದೋಳಗಿಂದ ಎದ್ದು ಬಂದು ರೆಕ್ಕೆಯ ಬಡಿದು ಇಂದು ಚಿಂವ್ ಗುಟ್ಟಿದಂತೆ ಭಾಸ..!
ಆದ್ರೆ ವಿಧಿಯ ಲಿಖಿತವೇ ಬೇರೆ..
ಅಂದು ಹಸಿರ ಸೀರೆ ತೊಟ್ಟು ಮಿಂಚುತಿದ್ದ ಭೂತಾಯಿಯ ಸೀರೆಯ ಕಳಚಿ ಮನುಷ್ಯ ತನ್ನ ದುರಾಸೆಗೆ ಕಾರ್ಖಾನೆ ಮಾಡಲು ಸಂಚು ರೂಪಿಸಿದ್ದಾನೆ.
ವಾಹನಗಳ ಸದ್ದಿಗೆ ಗುಬ್ಬಿಗಳು ಬೆಚ್ಚಿಬಿದ್ದಿದ್ದಾವೆ, ಹಳ್ಳಿ ಮನೆಯ ಮರದ ತೊಲೆ, ಹಂಚುಗಳ ಸ್ಥಾನವನ್ನ ಕಾಂಕ್ರಿಟ್ ಕಟ್ಟಡಗಳು ಕಬಳಿಸಿದ್ದಾವೆ.. ರಾಗಿಯ ಹೊಲ, ತೆಂಗಿನ ತೋಟಗಳು ಕಾರ್ಖಾನೆಯ ಹೊಡೆತಕ್ಕೆ ನಲುಗಿಹೋಗಿವೆ.. ಮೊಬೈಲ್ ಟವರಿನ ವಿಕಿರಣಗಳು ಅವುಗಳ ಜೀವನವನ್ನೇ ನಾಶ ಮಾಡಲು ಮುಂದಿವೆ.. ಗುಬ್ಬಿಗಳ ಚಿಂವ್ ಗುಟ್ಟುವಿಕೆ.. ಅದರ ಲವಲವಿಕೆ ಯೂಟ್ಯೂಬ್ ವಿಡಿಯೋದಲ್ಲಿ ನೋಡಿ ಆನಂದಿಸುವ ಕಾಲ ದೂರದಲ್ಲಿ ಏನಿಲ್ಲ.. ಈಗೀರುವಾಗ ಪಾಪ.. ಆ ಗುಬ್ಬಿ ಎಲ್ಲಿ ತಾನೇ ಗೂಡು ಕಟ್ಟಬೇಕು..!? ತನ್ನ ಆಹಾರ ಎಲ್ಲಿ ಹುಡುಕಬೇಕು..? ಎಲ್ಲಾ ಕಾಲವೇ ಉತ್ತರಿಸಬೇಕು.. ಆದರೆ ಮನುಷ್ಯ ತನ್ನ ಸ್ವಾರ್ಥಕ್ಕೆ ಎಲ್ಲವನ್ನೂ ಹಾಳು ಮಾಡಿ ಮಣ್ಣು ಮಾಡುತ್ತಿದ್ದಾನೆ.. ಕೊನೆಗೆ ತಾನು ಕೂಡ ಮಣ್ಣೇ ಸೇರುತ್ತೇನೆ ಎಂಬುದ ಮರೆತು.
- ಚೇತನ್ ಗವಿಗೌಡ