‘ಬಡತನದ ಬಗ್ಗೆ ಬರೆಯುವುದಕ್ಕೂ ಬಡತನವನ್ನು ಅನುಭವಿಸುವುದಕ್ಕೂ ಬಹಳವೇ ವ್ಯತ್ಯಾಸವಿರುತ್ತದೆ. ಶ್ರೀ ಸದಾಶಿವರವರ ಮಾತಿನಲ್ಲೇ ಹೇಳುವುದಾದರೆ ಅನ್ನದ ಹಸಿವೆಯ ಜೊತೆಗೆ ಜ್ಞಾನದ ಹಸಿವು ಸೇರಿದಾಗ ನಡೆದ ಹಾದಿಯ ವಾಸನೆಯಲ್ಲಿ ‘ಇರುವುದು ಒಂದೇ ರೊಟ್ಟಿ’ ಕಾವ್ಯಗಳು ರೂಪಗೊಂಡಿವೆ’. – ಎನ್.ವಿ.ರಘುರಾಂ,ಪುಸ್ತಕ ಪರಿಚಯವನ್ನು ತಪ್ಪದೆ ಮುಂದೆ ಓದಿ….
ಶೀರ್ಷಿಕೆ- ಇರುವುದು ಒಂದೇ ರೊಟ್ಟಿ.
ಕವಿ- ಡಾ.ಸದಾಶಿವ ದೊಡಮನಿ.
ಕಾವ್ಯ ಪ್ರಕಾರ- ಕವನ ಸಂಗ್ರಹ
ಪ್ರಕಟನೆ- ಚಂದ್ರಭಾಗ ಪ್ರಕಾಶನ, ಇಳಕಲ್ಲು (2021)
ಬೆಲೆ: ರೂ.120/-
‘ಇರುವುದು ಒಂದೇ ರೊಟ್ಟಿ- ನಾ ಕಂಡಂತೆ’
‘ಆತ ಕೆಲಸ ಮುಗಿಸಿಕೊಂಡು ಮನೆಯ ಒಳಗಡೆ ಬಂದು ನೆಲದ ಮೇಲೆ ಉರಳಿಕೊಂಡ. ಖಾಲಿ ಕೈಯಲ್ಲಿ ಬರುವುದು ಆತನಿಗೇನೂ ಹೊಸದಲ್ಲ, ಅವನ ಮನೆಯವರಿಗೂ ಹೊಸದಲ್ಲ. ಕೋಣೆಯ ಮೂಲೆಯಲ್ಲಿ ಕೂತ. ‘ ಮಲಗಿಕೊಳ್ಳಿ’ ಎಂದಳಾಕೆ. ಹಾಗೆ ನೆಲದ ಮೇಲೆ ಅಡ್ಡಾದ. ಉಳಿದ ಒಂದು ರೊಟ್ಟಿಯ ಹಿಟ್ಟನ್ನು ತಟ್ಟಿ ತಂದು ಆತನ ಎದೆಯ ಮೇಲೆ ಹಾಕಿದಳು. ಆ ರೊಟ್ಟಿ ಬಗ್ ಎಂದು ಬೆಂಕಿ ಹತ್ತಿಕೊಂಡು ಉರಿಯಲು ಪ್ರಾರಂಭವಾಯಿತು ……… ‘ ಗಾಬರಿಯಿಂದ ಎಚ್ಚರವಾಯಿತು. ಕನಸದು ಎಂದು ಮನಕ್ಕೆ ಗೊತ್ತಾದರೂ ಇದೇನಿದು ಎಂದು ಕೆಲವು ಕ್ಷಣಗಳು ಗಲಿಬಿಲಿಯಾಗಿದ್ದು ನಿಜ. ಮತ್ತೆ ಸ್ವಲ್ಪ ಹೊತ್ತು ಹೊರಳಾಡಿ ಎದ್ದೆ. ಇದು ಬಹುಶಃ ನಿನ್ನೆ ತಡ ರಾತ್ರಿಯವರೆಗೆ ಓದಿದ ಪುಸ್ತಕದ ಪ್ರಭಾವೇ?….ಗೊತ್ತಿಲ್ಲ!
‘ಇರುವುದು ಒಂದೇ ರೊಟ್ಟಿ’
ಮಲೆನಾಡಿನವನಾದ ನಾನು ಅಪರೂಪಕ್ಕೆ ಜೋಳದ ರೊಟ್ಟಿ ತಿನ್ನುವುದು. ಹಾಗಾಗಿ ಒಂದು ಒಣಗಿದ ಜೋಳದ ರೊಟ್ಟಿಯನ್ನು ತಕ್ಕಡಿಯ ಬಲ ಭಾಗದಲ್ಲಿ ಇಟ್ಟು ಅದನ್ನು ಎತ್ತರದಲ್ಲಿ ತೋರಿಸಿ, ‘ಇರುವುದು ಒಂದೇ ರೊಟ್ಟಿ’ ಎಂಬ ಶೀರ್ಷಿಕೆಯ ಮುಖಪುಟವಿರುವ ಪುಸ್ತಕ ಕುತೂಹಲ ಮೂಡಿಸಿತು. ಕೈಯಲ್ಲಿ ಹಿಡಿದು ನೋಡಿದಾಗ ಅಲ್ಲೊಂದು ವಾಟರ್ ಮಾರ್ಕ ನಲ್ಲಿ ಇರುವಂತ ಬುದ್ಧನ ಮುಖ ಕಾಣಿಸಿತು. ಮೈಯೆಲ್ಲಾ ಮೂಳೆಗಳು ಮಾತ್ರ. ಇನ್ನು ಸ್ವಲ್ಪ ಹತ್ತಿರದಿಂದ ಗಮನಿಸಿ ನೋಡಿದರೆ ಅತಿ ಸಣ್ಣದಾದ ಕರುಳು ಕೂಡ ಕಾಣುತ್ತದೆ. ಅಷ್ಟು ದೊಡ್ಡ ಮನುಷ್ಯನಿಗೆ ಅಷ್ಟು ಸಣ್ಣ ಕರುಳು ಎಂದೆನಿಸಿತು. ಆ ‘ಇರುವ ಒಂದು ರೊಟ್ಟಿ’ ಕೂಡ ಅವನ ಬಾಯಿಯ ಮಟ್ಟದಲ್ಲೇ ಇದ್ದರು ಕೂಡ, ಸಾಕಷ್ಟು ದೂರದಲ್ಲಿತ್ತು. ಆಗ ಈ ಪುಸ್ತಕದಲ್ಲಿ ಎನೋ ವಿಶೇಷವಿದೆ ಅನಿಸಿತು. ಸಾಮಾನ್ಯವಾಗಿ ಕಾದಂಬರಿಗಳನ್ನು ಇಷ್ಟ ಪಡುವ ನಾನು ಈ ಕವನ ಸಂಕಲನ ತೆಗೆದುಕೊಂಡು ಓದಿದೆ. ಇದೊಂದು ವಿಶೇಷ ಕವನ ಸಂಕಲನವೇ ಸರಿ.
ನಾನು ಮೊದಲು ಓದಿದ್ದೆ ಶೀರ್ಷಿಕೆಯ ಕವನ. ‘ಇರುವ ಒಂದು ರೊಟ್ಟಿಯನ್ನು ಅರ್ಧ ಮಾಡಿ ತಮ್ಮ ಮತ್ತು ತಂಗಿಗೆ ಒಂದೊಂದು ಭಾಗ ಕೊಟ್ಟು, ನಾನು ಗುಟುಕು ನೀರು ಕುಡಿದೆ. ಅಕ್ಕ ಚರಗಿ ತಳದಲ್ಲಿನ ಹನಿ ನೀರಿಗೆ ನಾಲಿಗೆ ಒಡ್ಡಿದರೆ, ಅಮ್ಮ ಮತ್ತು ಅಪ್ಪ ಒಣ ಉಗಳು ನುಂಗಿ ಮಲಗಿದರು’ ಎನ್ನುವ ಅರ್ಥ ಬರುವ ಸಾಲುಗಳಿಂದ ಕವನ ಪ್ರಾರಂಭವಾಯಿತು. ಆ ಮುಖಪುಟದ ಚಿತ್ರ ಈಗ ಮತ್ತೆ ಎದುರಿಗೆ ಬಂತು. ಅಪ್ಪ, ಅಮ್ಮನಲ್ಲಿ ಜೊಲ್ಲು ಬರುವಷ್ಟು ಕೂಡ ತ್ರಾಣ ಉಳಿದಿಲ್ಲದೇ ಇರುವುದನ್ನು ಆ ಮೂಳೆಯು ಪ್ರತಿನಿಧಿಸಿದರೆ, ಕೆಲವು ದಿನಗಳಿಂದ ಈ ಸ್ಥಿತಿ ಇರುವುದರ ದ್ಯೋತಕವಾಗಿ ಆ ಹಿಡಿಯಷ್ಟು ಕರುಳು ಕಾಣಿಸುತ್ತದೆ. ಕವನ ಮುಂದುವರಿದು…
‘ಉರಿವ ಎದೆಯ ಒಲೆಯ ಮೇಲೆ
ಕನಸುಗಳ ರೊಟ್ಟಿ ಸುಟ್ಟು
ಕರುಳ ಕುಡಿಗಳನು ಸಲುಹುತ್ತ
ನಗುನಗುತ್ತಲೇ ಬಾಳುವ ಅವ್ವ
ಯಾವ ದೇವರುಗಳಿಗೂ ಕಮ್ಮಿ ಅಲ್ಲ
ಅಪ್ಪ, ಅಮ್ಮನ ಹೊರತು ಅನ್ಯ ದೇವರುಗಳು
ನನಗೆ ಕಾಣುವುದೇ ಇಲ್ಲ.’
ಕವನದ ಸಾಲುಗಳಲ್ಲಿ ಮತ್ತು ಆ ಮೂಳೆಯೇ ಪ್ರಧಾನವಾದ ಮುಖಪುಟದ ಮುಖದಲ್ಲೂ ಬುದ್ಧನ ಶಾಂತತೆ ಕಾಣುತ್ತದೆ. ಕವನದಲ್ಲಿ ಆ ಶಾಂತತೆ ಇದ್ದರೂ, ಓದಿದವರಿಗೆ ಈ ಸಾಲುಗಳಿಂದ ಮೇಲೆ ಹೇಳಿದ ಕನಸು ಬಿದ್ದು ಬೆಚ್ಚಿ ಬೀಳಿಸಿದರೆ ಆಶ್ಚರ್ಯವಿಲ್ಲ!.
‘ಕವಿ ರೊಟ್ಟಿಯೊಂದಿಗೆ ಮಾತನಾಡುತ್ತಿದ್ದಾರೆ. ರೊಟ್ಟಿ ಲೋಕದೊಟ್ಟಿಗೆ ಮಾತನಾಡುತ್ತದೆ. ಹೀಗಾಗಿ ಕವಿ ಜೀವಮುಖಿಯಾಗಿರುವುದು ಇವರು ಬರೆದ ಸಾಲುಗಳು ಸಾಕ್ಷಾತ್ಕರಿಸುತ್ತವೆ’ ಎಂದು ಮುನ್ನುಡಿಯಲ್ಲಿ ಶ್ರೀಯುತ ಸುಬ್ಬು ಹೊಲೆಯಾರ್ ಹೇಳಿದ್ದಾರೆ.
ಇಲಕಲ್ಲಿನ ಶ್ರೀ ವಿಜಯ ಮಹಾಂತೇಶ್ ಮಹಾವಿದ್ಯಾಲಯದಲ್ಲಿ ಕನ್ನಡ ಸಹಾಯಕ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿರುವ ಡಾ.ಸದಾಶಿವ ದೊಡಮನಿಯವರ 2021ರಲ್ಲಿ ಪ್ರಕಟವಾದ ಅವರ ಎರಡನೇಯ ಕವನ ಸಂಕಲನವಿದು. ಈ ಕವನ ಸಂಕಲನ ಐವತ್ತು ಕವನಗಳ ಒಂದು ವಿಶಿಷ್ಟವಾದ ಪುಸ್ತಕ. ‘ಅವ್ವ’ ಕವನದ ಮೂಲಕ ‘ಜೀವನದಲ್ಲಿ ನೋವನ್ನು ಉಂಡು-ಉಟ್ಟರೂ ಬಂದು-ಬಳಗಕ್ಕೆ ಬೇವಿನ ಮರದ ನೆರಳಾದಾಕೆ’ ಎಂದು ಹೇಳಿ ತಾಯಿಯನ್ನು ನೆನೆಯುತ್ತಾ, ಅಪ್ಪನ ಶ್ರಮದಲ್ಲಿ ತೋಡಿದ ಊರಿನ ಬಾವಿ-ಕೆರೆಗಳಲ್ಲಿ ಇರುವ ನೀರನ್ನು ತಾವು ಮುಟ್ಟಿ ಕುಡಿಯದೇ ಇರುವ ಸ್ಥಿತಿಯನ್ನು ನೆನಪಿಸಿ, ಅಸ್ಪೃಶ್ಯತೆಯ ಮುಖವನ್ನು ತೆರೆದಿಡುತ್ತಾ ಅಪ್ಪನನ್ನು ನೆನೆಯುತ್ತಾ ಈ ಕವನ ಸಂಕಲನವನ್ನು ಅಮ್ಮ ಮತ್ತು ಅಪ್ಪರಿಗೆ ಅರ್ಪಿಸಿದ್ದಾರೆ.
ಬಡತನದ ಬಗ್ಗೆ ಬರೆಯುವುದಕ್ಕೂ ಬಡತನವನ್ನು ಅನುಭವಿಸುವುದಕ್ಕೂ ಬಹಳವೇ ವ್ಯತ್ಯಾಸವಿರುತ್ತದೆ. ಆ ಬಡತನಕ್ಕೆ ಅಸ್ಪೃಶ್ಯತೆಯ ನಂಟು ಸೇರಿದರೆ ಅನ್ನದ ಹಸಿವು ಮತ್ತು ಜ್ಞಾನದ ಹಸಿವು ತೀರಿಸುವ ಮಾರ್ಗ ಕಠಿಣವಾಗುತ್ತದೆ. ಶ್ರೀ ಸದಾಶಿವರವರ ಮಾತಿನಲ್ಲೇ ಹೇಳುವುದಾದರೆ ಅನ್ನದ ಹಸಿವೆಯ ಜೊತೆಗೆ ಜ್ಞಾನದ ಹಸಿವು ಸೇರಿದಾಗ ನಡೆದ ಹಾದಿಯ ವಾಸನೆಯಲ್ಲಿ ಈ ಕಾವ್ಯಗಳು ರೂಪಗೊಂಡಿವೆ. ಅವರೇ ಹೇಳಿರುವಂತೆ ಬದುಕಿನ, ಸಮಾಜದ ಬಿಕ್ಕಟ್ಟುಗಳು, ಜೀವಪರ ಕಾಳಜಿಯ ನಿಲುವುಗಳು ಕಾವ್ಯದ ಧ್ವನಿಯಾಗಿದೆ. ಇನ್ನೊಂದು ವೈಶಿಷ್ಟ್ಯವೆಂದರೆ ಅವು ಸರಳವಾಗಿದೆ. ಅತಿಯಾದ ಉಪಮೆ, ರೂಪಕ, ಸಂಕೇತ ಇತ್ಯಾದಿಗಳಿಂದ ಭಾಗದೇ ‘ನಿರಾಭರಣ ಸುಂದರಿ’ಯಾಗಿ ಸಹಜತೆಯ ಬಂದವೇ ಕಾವ್ಯದ ಶಕ್ತಿಯಾಗಿ ಮೈದಾಳಿದೆ.
ಡಾ.ಸದಾಶಿವ ದೊಡಮನಿಯವರು ಜನಿಸಿದ್ದು 22.7.77ರಲ್ಲಿ. ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಬೂದಿಹಾಳ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಕನ್ನಡದಲ್ಲಿ ಎಂ.ಎ ಪದವಿ ಜೊತೆಗೆ ‘ಧಾರವಾಡ ಮತ್ತು ಹಲಸಂಗಿ ಗೆಳೆಯರ ಗುಂಪು : ಒಂದು ಸಾಂಸ್ಕೃತಿಕ ಅಧ್ಯಯನ’ ಎನ್ನುವ ವಿಷಯದ ಮೇಲೆ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಇವರ ಪ್ರಥಮ ಕವನ ಸಂಕಲನ ‘ನೆರಳಿಗೂ ಮೈಲಿಗೆ’ 2009ರಲ್ಲಿ ಪ್ರಕಟವಾಗಿತ್ತು. ಇದರ ಜೊತೆಗೆ ‘ಧರೆ ಹತ್ತಿ ಊರಿದೊಡೆ’ (ಸಂಯುಕ್ತ ಕವನ ಸಂಕಲನ-2003), ‘ದಲಿತ ಸಾಹಿತ್ಯ ಸಂಚಲನ'(ಸಂಪಾದನೆ-2011), ‘ಪ್ರತಿ ಸ್ಪಂದನ'(ವಿಮರ್ಶೆ-2012) ಮತ್ತು ಡಾಕ್ಟರೇಟ್ ಪದವಿಯ ಮಹಾ ಪ್ರಬಂಧದ ಪ್ರಕಟನೆ(2014) ಮಾಡಿದ್ದಾರೆ. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಫೇಲೋಷಿಪ್ ಅಡಿಯಲ್ಲಿ ‘ಗದಗ ಜಿಲ್ಲೆಯ ಸುಗಮ ಸಂಗೀತ ಬೆಳವಣಿಗೆ ಮತ್ತು ಕೊಡುಗೆ’ ಕುರಿತು ಸಂಶೋಧನಾ ಪ್ರಬಂಧವನ್ನು ಸಲ್ಲಿಸಿದ್ದಾರೆ.
‘ಇರುವುದು ಒಂದೇ ರೊಟ್ಟಿ’ ಕವನದಲ್ಲಿ ಬಡತನದ ಅನಾವರಣ ಒಂದು ಕಡೆಯಾದರೆ, ‘ ಬುದ್ಧ, ನಿನ್ನ ಪ್ರೀತಿಯ ಪರಿ ಅರ್ಥವೇ ಆಗಲಿಲ್ಲ ನಮಗೆ’ ಎನ್ನುವ ಕವನದಲ್ಲಿ
‘….ಪ್ರೀತಿಯನ್ನು ಹಂಚಿ, ಪ್ರೀತಿಯನ್ನು ಬೇಡುವ ಕೈಯಲ್ಲಿ
‘ಮದ್ದು ಗುಂಡುಗಳ ಹಂಚುತ್ತಿದ್ದೇವೆ
ಮನುಷ್ಯತ್ವವನ್ನು ಕೊಲ್ಲುತ್ತಿದ್ದೇವೆ….’
ಎಂದು ಹೇಳುತ್ತಾ ಬುದ್ಧನ ತತ್ವ-ಆದರ್ಶಗಳಿಗೆ ಹುಸಿ ಭಾಷ್ಯ ಬರೆಯುತ್ತಿರುವ ಬಗ್ಗೆ ಎಚ್ಚರಿಸುತ್ತಾ ಬದಲಾಗುತ್ತಿರುವ ಸಮಾಜದ ಮನೋಭಾವನೆ ಅನಾವರಣ ಮಾಡುತ್ತಾರೆ. ಮುಂದುವರಿದು, ‘ಮನಸ್ಸುಗಳು ತುಂಬಾ ಮಲಿನವಾಗಿದೆ ಗೆಳೆಯಾ’ ಕವನದಲ್ಲಿ ‘ವಿವೇಕದ ಸಾಣಿ’ ಹುಡುಕುತ್ತಿದ್ದೇನೆ ಎನ್ನುತ್ತಾರೆ.
ಇವೆಲ್ಲದರ ಮಧ್ಯೆ ಮಗಳು ‘ಅಪೂರ್ವ’ಳ ಆಗಮನ ಸಂತಸ ಹೆಚ್ಚಿದರೆ, ಮಗಳು ‘ಸಂಸ್ಕೃತಿ’ಯ ಮೂಲಕ ಹಂಚಿ ತಿನ್ನುವ ಗುಣದ ಮಹತ್ವ ಸಾರಿದ್ದಾರೆ. ಅಕಾಲದಲ್ಲಿ ಅಗಲಿದ ‘ತಮ್ಮನಿಗೆ’ ಅಕ್ಷರಾಂಜಲಿ ಸಮರ್ಪಿಸಿದ್ದಾರೆ.
‘ಅನ್ನ ದೊರೆಗಳೇ’ ಕವನದಲ್ಲಿ ರೈತರಿಗೆ ‘ಸಾವಿನ ಸಹೋದರರಾಗದಿರಿ’ ಎಂಬ ಕಳಕಳಿಯ ಮನವಿಯಿದೆ. ‘ಕಟ್ಟುವ ಮುನ್ನ’ ಕವನದಲ್ಲಿ
ಮಂದಿರ-ಮಸೀದಿ
ಗುಡಿ-ಚರ್ಚುಗಳ
ಕಟ್ಟುವ ಮುನ್ನ
ಕಟ್ಟಿಕೊಳ್ಳಿರೋ…..
ನಿಮ್ಮ ಮನವ
ಜೇನು ಗುಣವ…
ಎಂದು ಹೇಳುತ್ತಾ ಎಲ್ಲರ ಮನದಲಿ ಪ್ರೀತಿ-ಶಾಂತಿ ಮೊಳೆಯಲಿ ಎಂದು ಆಶಿಸಿದ್ದಾರೆ.
‘ಬಸವಣ್ಣ’ ಕವನದಲ್ಲಿ ವಿಶ್ವಗುರುವಿಗೆ ‘ಮಾತಿಗೂ-ಬರಹಕ್ಕೂ ನಿಲುಕದ ಓಂಕಾರದ ಉಸಿರು’ ಎಂದು ಹೇಳುತ್ತಾ ನಮಿಸಿದ್ದಾರೆ. ‘ಗಾಂಧೀ ಸ್ಮೃತಿ’ಯಲ್ಲಿ ‘ಗಾಂಧೀ ನೆನಪಾಗುವ ನಮಗೆ ಗಾಂಧೀ ತತ್ವಾದರ್ಶಗಳು ನೆನಪಾಗುವುದಿಲ್ಲ, ಏಕೆಂದರೆ ಅವುಗಳನ್ನು ಗಾಂಧಿಯ ಹಿಂದೆಯೇ ಅಜ್ಞಾತವಾಸಕ್ಕೆ ಕಳುಹಿಸಿದ್ದೇವೆ’ ಎನ್ನುತ್ತಾ ಖೇದ ವ್ಯಕ್ತ ಪಡಿಸುತ್ತಾರೆ.
ದಾರಿಯಲ್ಲಿ ಬಾಲೆಯೊಬ್ಬಳು ಆಡುತ್ತಿರುವ ದೊಂಬರಾಟ ನೋಡಿ
‘ಬಟ್ಟೆಗೆ ಒಂದು ಎಳೆ ದಾರ ಹಾಕಲು
ಅಲ್ಲಲ್ಲ ಸೂಜಿಗೆ ದಾರ ಪೋಣಿಸಲೂ
ನನಗೆ ಬೇಕು ನೀನು
ಅವಳು ಹರಿದ ಬದುಕನ್ನೇ
ಹೊಲಿಯುತ್ತಿದ್ದಾಳೆ
ಹಸಿದ ಒಡಲಿಗೆ ಅನ್ನವೀಯುತ್ತಿದ್ದಾಳೆ
ಅವ್ವ
ಅವ್ವ ನೋಡೇ….’
ಎಂದು ಹೇಳುತ್ತಾ ಕಟ್ಟಿರುವ ಹಗ್ಗದ ಮೇಲೆ ಗಾಲಿಯಲ್ಲಿ ನಡೆಯುವ ಅವಳದು ‘ಭೂಮಿ ತೂಕದ ನಡಿಗೆ’ ಎಂದು ಅದೇ ಶೀರ್ಷಿಕೆಯ ಕವನದಲ್ಲಿ ಹೇಳುತ್ತಾರೆ.
‘ಭರವಸೆ’ ಕವನದಲ್ಲಿ ‘ಸೋತ ಸ್ವರಗಳಲಿ ಸಾಗುವುದು ಬದುಕೇ?’ ಎಂದು ಕೇಳುತ್ತಾ ‘ಮುನಿಸು-ಮತ್ಸರ ಬಿಟ್ಟು, ಎಲ್ಲರೊಳು ಒಂದಾಗಿ ಭರವಸೆಯಲಿ ಮುಂದೆ ಸಾಗು’ ಎಂದು ಹೇಳುತ್ತಾರೆ.
ಇದರ ಜೊತೆಗೆ ಜೀವನ ಮತ್ತು ಪ್ರೀತಿ ಅನೇಕ ಕವನಗಳಲ್ಲಿ ಉಸಿರು ಪಡೆದುಕೊಂಡಿದೆ.
‘ಬಿಸಿಲ್ಗುದುರೆ’ ಕವನದಲ್ಲಿ ‘ಒಲವಿನ ಹೂ ತುಳಿದು ನೀನು ಹೋದೆ ಎಲ್ಲಿಗೆ?’ ಎಂದು ಕೇಳುತ್ತಾ, ‘ಉಸಿರಿನ ಮಾತು’ ಕವನದಲ್ಲಿ ‘ನನ್ನ ಉಸಿರಿನ ಮಾತು ನಿನಗ ಅರ್ಥ ಆದಷ್ಟು ಬ್ಯಾರೆ ಯಾರಿಗರ ಅರ್ಥ ಆಕೈತೇನ ಹೇಳು’ ಎಂದು ಹೇಳುತ್ತಾ, ”ಜೀವ-ಭಾವ’ ಕವನದಲ್ಲಿ
‘ಉಸಿರಿಗೆ
ಒಮ್ಮೆ ಉಸಿರು ತಾಗಿಸು
ಜೀವ ಮರಳುತ್ತದೆ’ ಎಂದು ಹೇಳಿ ಕೊನೆಯಲ್ಲಿ
‘ಹೃದಯಕ್ಕೆ
ತುತ್ತು ಭಾವ ಉಣ್ಣಿಸು
ಕವಿತೆ ಹೆರುತ್ತದೆ’
ಎಂದು ಹೇಳಿ ಜೀವ-ಜೀವನ ಪ್ರೀತಿಯನ್ನು ಸಾರಿ ಹೇಳಿದ್ದಾರೆ.
ಮುಂದುವರೆದು ‘ಕನ್ನಡಿ’ ಕವನದಲ್ಲಿ
‘ನಿನ್ನ
ಕಣ್ಣ ಕನ್ನಡಿಯೊಳಗ
ಪ್ರೀತಿ, ನಂಬಿಕೆ, ವಿಶ್ವಾಸದ ಹೊಳೀನ
ಅದರಾಗ ಮಿಂದಷ್ಟು
ನನ್ನ ಮೈ-ಮನಸ್ಸು ಮತ್ತಷ್ಟು
ಶುದ್ಧ ಆಗತೈತಿ’
ಎಂದು ಹೇಳುತ್ತಾ ‘ನನ್ನ ನಿಜವಾದ ಬಿಂಬ ಕಾಣುವುದು ನಿನ್ನ ಕಣ್ಣ ಕನ್ನಡಿಯಲ್ಲಿ’ ಎಂದು ಹೇಳಿದ್ದಾರೆ.
‘ಇರುವುದು ಒಂದೇ ರೊಟ್ಟಿ’ ಕವನ ಸಂಕಲನದ ಕವಿ ಡಾ.ಸದಾಶಿವ ದೊಡಮನಿ
‘ನೀರು ಅತ್ಯಂತ ಮೃದು ಮತ್ತು ಕಠಿಣವಾದದ್ದು’ ಎಂದು ಬ್ರೆಕ್ಟ್ ಹೇಳಿದ ಸಾಲನ್ನು ನೆನಪಿಸಿಕೊಂಡು ‘ಈ ಸಂಕಲನದ ಸಾಲುಗಳಲ್ಲಿ ಅತ್ಯಂತ ಮೃದುತ್ವ ಮತ್ತು ಕಾಠಿಣ್ಯವಿದೆ’ ಎಂದು ಮುನ್ನಡಿಯಲ್ಲಿ ಶ್ರೀ ಸುಬ್ಬು ಹೊಲೆಯಾರ್ ರವರು ಹೇಳಿದ ಮಾತು ಮತ್ತು ‘ಇದೊಂದು ಸಮಾಜ ಮುಖಿಯಾದ ಆಶಯಗಳನ್ನು ಹೊತ್ತು ತಂದ ಸಂಕಲನವಾಗಿದೆ’ ಎಂದು ಬೆನ್ನುಡಿಯಲ್ಲಿ ಡಾ.ಅರವಿಂದ ಮಾಲಗತ್ತಿಯವರು ಹೇಳಿರುವುದು ಸರಿಯಾಗಿದೆ.
ಈ ಪಸ್ತಕದ ಇನ್ನೊಂದು ವಿಶೇಷ ಶ್ರೀಯುತ ಸುಬ್ಬು ಹೊಲೆಯಾರ್ ರವರು ಬರೆದ ಮುನ್ನಡಿ ಮತ್ತು ಡಾ.ಅರವಿಂದ ಮಾಲಗತ್ತಿಯವರು ಬರೆದ ಬೆನ್ನುಡಿ. ಇವೆರಡು ಫ್ರೌಢ ಬರಹಗಳು. ಈ ಬರಹಗಳು ಕವಿಮನವನ್ನು ಎಳೆ, ಎಳೆಯಾಗಿ ಬಿಚ್ಚಿಡುವುದರ ಜೊತೆಗೆ ಇರುವ ಕೆಲವು ಕೊರತೆಗಳನ್ನು ಹೋಗಲಾಡಿಸುವ ದಾರಿ ಕೂಡ ತೋರಿಸುತ್ತದೆ.
ಈ ಪುಸ್ತಕದ ಅರ್ಥವತ್ತಾದ ಮುಖಪುಟ ವಿನ್ಯಾಸಗೊಳಿಸದವರು ಶ್ರೀ ಟಿ.ಎಫ್. ಹಾದಿಮನಿಯವರು. ಕವನಗಳ ಜೊತೆಯಾಗಿ ಬಂದಿರುವ ಸುಂದರ ರೇಖಾ ಚಿತ್ರಗಳನ್ನು ಬಿಡಿಸಿದವರು ಶ್ರೀ ಜಬೀವುಲ್ಲಾ ಎಮ್. ಅಸದ್ ರವರು.
ಕವನ ಸಂಕಲನ ಓದಿದ ನಂತರ ‘ಅವ್ವ ಅಳುಕದ ಅಕ್ಷರ’, ‘ನಮ್ಮ ಅನುಮತಿ ಇಲ್ಲದೆ ಉಸಿರಾಡುತ್ತಿದ್ದಾರೆ ಎಂದು ಜುಲ್ಮಾನೆ ಹಾಕುತ್ತಾರೆ’, ‘ಭಯದ ಬೆಂಕಿಯಲ್ಲಿ ಈ ಜೀವ ಕುದ್ದು ಕುದ್ದು ಅನ್ನವಾಗಿದೆ’, ‘ಮುಂಜ-ಮುಂಜಾನೆಯೇ ಹೊಟ್ಟೆಯಲ್ಲಿಯೇ ಸೂರ್ಯ ಉರಿಯುತ್ತಿದ್ದ’, ‘ಬೇರೆ ಕೊಡಲೇನು ಇಲ್ಲ ನನ್ನ ಬಳಿ, ಬರೀ ನೆನಪುಗಳ ಕರ್ಜೂರ ಪ್ರೀತಿ ಬಟ್ಟಲಲ್ಲಿ ನೆನಸಿಟ್ಟು ತಂದಿರುವೆ’,….ಹೀಗೆ ಅನೇಕ ಕವನಗಳ ಸಾಲುಗಳು ಕಣ್ಣು ಮುಂದೆ ಮೆರವಣಿಗೆ ಮಾಡುತ್ತ ಸಾಗುವುದರ ಜೊತೆಗೆ ಮನದಲ್ಲಿ ಧ್ವನಿಯಾಗಿ ಮಾರ್ಪಾಡಾಗುತ್ತದೆ. ಹಾಗಾಗಿ ಕವನದ ಧ್ವನಿಯು ನಮ್ಮ ಕಣ್ಣನ್ನು ಕೆಲವೆಡೆ ಮಂಜಾಗಿಸುವುದರ ಜೊತೆಗೆ ಮನವನ್ನು ಚಿಂತನೆಗೆ ಹಚ್ಚುತ್ತದೆ. ಬಹುಶಃ ಈ ಕಾರಣಗಳಿಂದ ‘ಈ ಮುನ್ನಡಿ, ಬೆನ್ನುಡಿಗಳ ಮೀರಿದ ಒಂದು ಭಾವಕೋಶ ಇಲ್ಲಿದೆ’ ಎಂದು ಮುನ್ನಡಿಯಲ್ಲಿ ದಾಖಲಿಸಿದ್ದಾರೆ.
ಉತ್ತಮ ಕವನ ಸಂಕಲನ ಕೊಟ್ಟ ‘ರೊಟ್ಟಿ ಕವಿ’ ಡಾ.ಸದಾಶಿವ ದೊಡಮನಿಯವರಿಗೆ ಅಭಿನಂದನೆಗಳು ಮತ್ತು ಅವರ ಮುಂದಿನ ಕವನ ಸಂಕಲನ ‘ಇರುಳ ಬಾಗಿಲ ಕಣ್ಣ ದೀಪ’ಕ್ಕೆ ಕಾತುರದಿಂದ ಕಾಯುತ್ತೇನೆ.
- ಎನ್.ವಿ.ರಘುರಾಂ, ನಿವೃತ್ತ ಅಧೀಕ್ಷಕ ಅಭಿಯಂತರ(ವಿದ್ಯುತ್), ಕ.ವಿ.ನಿ.ನಿ., ಬೆಂಗಳೂರು.