ವರ್ತಮಾನದ ತಲ್ಲಣ, ಸ್ತ್ರೀ ಸಂವೇದನೆಯ ಪ್ರತಿಧ್ವನಿ (ಭಾಗ೧)

ಸಮಾಜ ಯಾವಾಗಲೂ ಹೆಣ್ಣನ್ನು ತನ್ನ ಅಧಿಪತ್ಯದಲ್ಲಿ ಇಟ್ಟುಕೊಳ್ಳಲು ಬಯಸುತ್ತದೆ. ಇದು ಇತಿಹಾಸವಾದರು ಸರಿಯೇ ಇಂದಿನ ಸಮಕಾಲಿನ ಜಗತ್ತಾದರೂ ಸರಿಯೇ, ಶಿಕ್ಷಣ ಮತ್ತು ಉದ್ಯೋಗದಿಂದ ಅವಳು ಬದಲಾವಣೆಯಾಗಿ ಸ್ವಾವಲಂಬಿಯಾಗಿ ಬದುಕಲು ಪ್ರಯತ್ನಿಸಿದಷ್ಟು ವ್ಯಾಘ್ರವಾಗಿ ಪುರುಷಪ್ರಧಾನ ವ್ಯವಸ್ಥೆಗಳು ಅವಳ ಮೇಲೆ ಮುಗಿ ಬೀಳುತ್ತವೆ ಮತ್ತು ಅವಳ ಜೈವಿಕ ವ್ಯತ್ಯಾಸಗಳನ್ನು ದೊಡ್ಡದು ಮಾಡಿ ಆರ್ಭಟಿಸುತ್ತವೆ.

ಈ ಸಮಯದಲ್ಲಿ ಕೆಲ ಯುವ ದನಿಗಳು ಸಮಾಜದಲ್ಲಿ ಹೆಣ್ಣು ಮತ್ತು ಹೆಣ್ಣಿನ ಸುತ್ತ ಇರುವ ವ್ಯವಸ್ಥೆಯನ್ನು, ಅಲ್ಲಿರುವ ಕಟ್ಟುಪಡುಗಳು, ಟೀಕೆಗಳು ಹಾಗೂ ತಾವು ಅವುಗಳನ್ನು ಮೀರಿ ಬದುಕು ಕಟ್ಟಿಕೊಂಡ ಬಗೆಯನ್ನು ತಮ್ಮದೇ ಆದ ದನಿಯಲಿ ಅವಲೋಕಿಸಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

  • ಧ್ವನಿ : ನಯನ ಶ್ರೀನಿವಾಸ್ , ವಾಣಿಜ್ಯೋದ್ಯಮಿ, ಸೂಕ್ಷ್ಮ ಜೀವಶಾಸ್ತ್ರಜ್ಞೆ, ರಾಜಕೀಯ ವಿಶ್ಲೇಷಕಿ.

ಆಚಾರ- ವಿಚಾರಗಳು ನಮ್ಮ ಪೂರ್ವಜರು ಹಾಕಿಕೊಟ್ಟ ಬುನಾದಿಗಳು ಹಾಗೂ ಸದೃಢ ಬದುಕಿನ ಮೌಲ್ಯಗಳು. ಇವುಗಳು ಹೆಣ್ಣಿಗಾಗಲಿ, ಗಂಡಿಗಾಗಲಿ ವರವಾಗಬೇಕೇ ಹೊರತು ಹೊರೆಯಾಗಿ ಉಸಿರು ಕಟ್ಟುವಂತೆ ಇರಬಾರದು.

ತುಂಬು ಕುಟುಂಬದಲ್ಲಿ ಹುಟ್ಟಿ ಬೆಳೆದು ಇಷ್ಟರ ಮಟ್ಟಿನ ಬದುಕು ಕಟ್ಟಿಕೊಂಡಿರುವ ನನಗೆ, ನಮ್ಮ ಆಚಾರ ವಿಚಾರಗಳು ಅದ್ಭುತ ಪರಿಕಲ್ಪನೆಗಳಾಗಿ ಕಂಡಿವೆ ಹಾಗೂ ಹೆಮ್ಮೆಯಾಗಿಯೇ ಉಳಿದಿವೆ. ನನ್ನ ದೃಷ್ಟಿಯಲ್ಲಿ ಹೆಣ್ಣಿಗೆ ಸ್ವಾತಂತ್ರ್ಯವೆಂದರೆ ನನ್ನದು ಮತ್ತು ನನ್ನವರನ್ನು ಮೀರಿ ಬೆಳೆಯುವುದಲ್ಲ. ನಮ್ಮವರೊಡನೆ ನಮ್ಮ ಅಸ್ಮಿತೆಯೊಂದಿಗೆ ಬೆಳೆಯುವುದೇ ಸ್ವಾತಂತ್ರ್ಯ.

ದೌರ್ಜನ್ಯದ ಬಗ್ಗೆ ಭಾಷಣ ಮಾಡುವವರ ತಪ್ಪಲ್ಲ, ಕೇಳುವವರು ಮೂರ್ಖರಷ್ಟೆ.! ನನ್ನ ಪ್ರಕಾರ ಹೇಳುವುದಾದರೇ “She is her own strength” (ನಾವೇ ನಮ್ಮ ಅಪ್ರತಿಮ ಶಕ್ತಿ). ನಮ್ಮ ಕಷ್ಟಕ್ಕೆ, ನೆಡೆಯುತ್ತಿರುವ ದೌರ್ಜನ್ಯಕ್ಕೆ ನಾವೇ ಸಿಡಿದೇಳಬೇಕೇ ಹೊರತು, ಬೊಗಳೆ ಭಾಷಣಗಳನ್ನು ಕೇಳುತ್ತ ಚಪ್ಪಾಳೆ ಹೊಡೆಯುವದಲ್ಲ.

ನಮ್ಮ ಆತ್ಮವಿಶ್ವಾಸ ಮತ್ತು ಜೀವನ, ನಮ್ಮತನವನ್ನು ಅಭಿನಂದಿಸುವಂತೆ ಇರಬೇಕೇ ಹೊರತು ಅನುಮಾನಿಸುವಂತಲ್ಲ. ಟೀಕಿಸುವವರಿಗೆ ಹೆಣ್ಣು, ಗಂಡು, ಪ್ರಾಣಿ, ಪಕ್ಷಿಯ ವ್ಯತ್ಯಾಸವೇ ಇರುವುದಿಲ್ಲ.

“ಹಾರೋ ಹಕ್ಕಿಗೆ ಹಾದರ ಕಟ್ಟಿದರು” ಎಂಬಂತೆ ಒಬ್ಬರು ಬೆಳೆಯುತಿದ್ದಾರೆ ಎಂದರೆ ತುಳಿಯುವವರೇ ಹೆಚ್ಚು. ಅದರಲ್ಲೂ ಹೆಣ್ಣು ಸ್ವಾವಲಂಬಿಯಾಗಿ ತನ್ನ ದಾರಿಯಲ್ಲಿ ಸಾಗುತ್ತಿದ್ದಾಳೆ ಎಂದರೆ ಟೀಕೆಯ ಮಹಾಪೂರದ ಹರಿದು ಬರುತ್ತದೆ.

ಟೀಕೆಗೆ ನಮ್ಮ ಯಶಸ್ಸೆ ಉತ್ತರ!

ಅಲ್ಲದೆ ನಾವು ಸಮಾಜದಲ್ಲಿ ಕಾಣುತ್ತಿರುವ ಹೆಣ್ಣು ಜಗದ ಬಹುದೊಡ್ಡ ನಿರಾಶೆ ಎಂದರೆ ಹೆಣ್ಣು ಜೀವಗಳ ಅರ್ಧ ಕನಸುಗಳು ಸಾಯುವುದೇ “ನೋಡಿದವರು ಏನನ್ನುತ್ತಾರೆ” ಎಂಬ ಮುರ್ಖ ಯೋಚನೆಯಿಂದ. ಇವತ್ತಿನ ನಮ್ಮ ಒಂದು ಹೆಜ್ಜೆ ಇನ್ನು ಐವತ್ತು ವರ್ಷಗಳ ನಂತರವೂ ನಮಗೆ ಸರಿ ಕಾಣುತ್ತೆ ಎಂದರೆ ಅದು ಪ್ರಪಂಚ ಒಪ್ಪಿದರೂ ಒಪ್ಪದೇ ಇದ್ದರೂ ಅದು ಸರಿ ಎಂಬ ನಿಲುವು ನಮ್ಮದಾಗಿರಬೇಕು.

ಹೆಣ್ಣು ಮದುವೆಯಾದರೂ, ಗಂಡ ಸತ್ತರೂ, ತಾಯಿಯಾದರೂ ಆಕೆ ಹೆಣ್ಣೇ. ಅವಳ ಜೀವನ ಅವಳದು. ಹೆಣ್ಣಿಗೆ ಹುಟ್ಚಿನ ಜೊತೆ ನಿರ್ಬಂಧ ಎಂಬುದು ಉಚಿತವಾಗಿಯೇ ಬರುತ್ತದೆ. ಅದನ್ನು ಮೆಟ್ಟಿ ನಿಲ್ಲುವುದೇ ನಿಜವಾದ ಸಾಧನೆ, ಸಾಧಿಸಿ ಸವೆಯಬೇಕೆ ಹೊರತು ಸೋತು ಸಾಯಬಾರದು.

***********

  • ಧ್ವನಿ : ದೀಪಾ ಕೆ. ಬಿ, ಬೆಂಗಳೂರು

ಹೆಣ್ಣಿನ ಮಾತು ಅವಳ ಸ್ವಾತಂತ್ರ್ಯ ರಾಜಕೀಯಬೇಕಾದ ದಾಳವಾಗಿ ಪ್ರಯೋಗವಾಗುತ್ತದೆ . ಹೆಣ್ಣನ್ನು ಸಾಂಸ್ಕೃತಿಕವಾಗಿ ಶೋಷಿಸುವುದನ್ನು ಪುರಾಣ, ಇತಿಹಾಸ ಮತ್ತು ಇಂದಿಗೂ ನಾವು ಕಾಣುತ್ತಿದ್ದೇವೆ.

ಜನಗಳಿಗೆ ಪ್ರಜ್ಞೆಯನ್ನು ಮೂಡಿಸುವುದಕ್ಕಾಗಿ ತಮ್ಮ ಬದುಕನ್ನು ಮುಡುಪಾಗಿಟ್ಟು ಹೋರಾಡಿದ ಪಿ.ಲಂಕೇಶ್ ಅಂತಹ ಚಿಂತಕರು, ಬರಹಗಾರರು ಇಂದು ನಮ್ಮಲ್ಲಿ ಇಲ್ಲ. ಅವರಿಂದ ಅದೆಷ್ಟೋ ತೆರೆ ಮರೆಯ ಲೇಖಕರು ಹೊರ ಬಂದರು, ಗಟ್ಟಿಯಾಗಿ ಸಮಾಜದ ಅಂಕುಡೊಂಕುಗಳನ್ನು ಪ್ರಶ್ನೆ ಮಾಡಿ ಬರೆಯಲು ಶುರು ಮಾಡಿದರು.

ಆದರೆ ಇಂದು ಕಾಲ ಗಣನೀಯವಾಗಿ ಬದಲಾಗಿದೆ. ಹೆಣ್ಣಿನ ಶೋಷಣೆ ದೌರ್ಜನ್ಯ ಮುಗಿಲು ಮುಟ್ಟಿದೆ. ಹೆಣ್ಣು ಹೀಗೆ ಇರಬೇಕು, ಹೀಗೆ ಬದುಕಬೇಕು ಎಂದು ಹೇಳುವವರು ನಿಯಮ ಮಾಡಿದವರು ಯಾರು?. ಹೇಳುವವರಿಗೆ ಮೊದಲು ತಮ್ಮ  ಕ್ಷೇತ್ರದಲ್ಲಿ ತಾವು ಏನು ಮಾಡಿದ್ದೇವೆ ಯಾವ ರೀತಿಯಾಗಿ ಜನಪರ ಕಾರ್ಯಗಳನ್ನು ಕೈಗೊಂಡಿದ್ದಾರೆ. ಎಷ್ಟೋ ಬಾರಿ ಸದನಕ್ಕೆ ಹಾಜರಾಗಿದ್ದಾರೆ ಎಂಬ ಮಾಹಿತಿಯನ್ನು ಜನರಿಗೆ ನೀಡುತ್ತಾರಾ?.

ಇದು ನಮ್ಮ ಪ್ರಶ್ನೆ ನಾವು ಎಂದರೆ ಅವರುಗಳಿಗೆ ಮತ ನೀಡಿ ಗೆಲ್ಲಿಸಿದ ಜನರ ಪ್ರಶ್ನೆ, ಹೆಣ್ಣು ತನ್ನ ಅಸ್ಮಿತೆಯನ್ನು ಕಾಪಾಡಿಕೊಳ್ಳಲು ಇಂದಿಗೂ ಪರದಾಡಬೇಕಾಗಿದೆ. ಪದವಿ ಮುಗಿಸಿದ ನಂತರ ವಿವಾಹ,ಉದ್ಯೋಗ, ಆಂತರಿಕ ಖಿನ್ನತೆ, ಕೌಟುಂಬಿಕ ಸಮಸ್ಯೆಗಳು ಹೆಣ್ಣುಮಕ್ಕಳನ್ನು ಇನ್ನಿಲ್ಲದಂತೆ ಕಾಡುತ್ತಿವೆ.

ಕಾಲ ಸರಿಯುವ ಮುನ್ನವೇ ಮುದಿ ತನಕ ಕಾಡುತ್ತಿದೆ. ಹಲವಾರು ರೋಗಗಳ ಗೂಡಾಗಿ ದೇಹ. ಪರಿವರ್ತನೆಯಾಗುತ್ತಿದೆ. ಸರಾಸರಿ ಯುವ ಸಮುದಾಯ ಆತ್ಮಹತ್ಯೆಗೆ ಶರಣಾಗುತ್ತಿದೆ. ಈ ಬಗ್ಗೆ ಯಾರಿಗೂ ಚಿಂತೆ ಇಲ್ಲ, ಒಂದೆಡೆ ಕಾಡು ತನ್ನ ಪ್ರದೇಶವನ್ನು ಕಡಿಮೆ ಮಾಡಿಕೊಳ್ಳುತ್ತಿದೆ. ಕಾಡು ಪ್ರಾಣಿಗಳಿಗೆ ಆಹಾರವಿಲ್ಲದೆ, ನಾಡಿಗೆ ಬಂದು ಜನರನ್ನು ಹಿಂಸೆ ಮಾಡುತ್ತಿವೆ. ಹಲವಾರು ಸಮಸ್ಯೆಗಳು ಚರ್ಚಿಸಲು ಇವೆ. ಪರಿಹಾರ ಮಾಡಲು ಸಮಸ್ಯೆಗಳ ಸರಮಾಲೆ ಕಾದು ಕುಳಿತಿವೆ. ಈ ಬಗ್ಗೆ ಪ್ರಶ್ನೆ ಮಾಡೋದು ಅಥವಾ ಕಾರ್ಯ ಆರಂಭವನ್ನು ಮಾಡುವುದನ್ನು ಬಿಟ್ಟು ಅನಗತ್ಯ ಸಂಘರ್ಷಗಳನ್ನು ಹುಟ್ಟು ಹಾಕುತ್ತಾರೆ.

ಮೊದಲೆಲ್ಲ ಹೆಣ್ಣು ದೈಹಿಕವಾಗಿ ದಂಡಿಸಿದ್ದರೆ ಈಗ ಬುದ್ಧಿಯಿಂದ ಪ್ರಜ್ಞಾಪೂರ್ವಕವಾಗಿ ದಂಡಿಸುತ್ತಿದ್ದಾರೆ. ಕೌಟುಂಬಿಕ ಮೌಲ್ಯ ಹಾಗೂ ಸಾಮಾಜಿಕ ಕಟ್ಟುಪಾಡುಗಳು ಎಲ್ಲವನೂ ಹೆಣ್ಣಿನ ಮೇಲೆ ಒತ್ತಾಯವಾಗಿ ಹೇರಿಕೆ ಮಾಡಿ ಸಂಭ್ರಮಿಸುವ ಸಮಾಜ ನನ್ನ ಪ್ರಕಾರ ಅದು ಬಲಹೀನ ಸಮಾಜ
ನಮ್ಮ ನ್ನು ನಮ್ಮಂತೆ ಇರಲು ಬಿಡುವುದೇ, ಗೌರವಿಸುವ ಕಾಳಜಿ ಮಾಡುವ, ಮಮತೆಯ ಮಡಿಲು ನೀಡುವುದೇ ಪ್ರಜ್ಞಾವಂತ ಸಮಾಜ.


  • ಬರಹ : ರೇಷ್ಮಾ ಗುಳೇಡಗುಡ್ಡಕರ್

1 1 vote
Article Rating

Leave a Reply

0 Comments
Inline Feedbacks
View all comments
Home
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW