ಕವಿಯತ್ರಿ ಮಧುರಾ ಮೂರ್ತಿ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವನ ತಪ್ಪದೆ ಓದಿ…
ನನ್ನೊಳಗೇ ಅಡಗಿರುವ ನಿನ್ನ ಗುರುತಿಸದೆ
ಕುರುಡ ನಾನಾದೆನೋ ಹರಿಯೇ…
ಹಸಿದು ಬಂದವರಿಗೆ ಅನ್ನವನು ಕೊಡದೆ
ದಣಿದು ಬಂದವರ ಬಾಯಾರಿಕೆ ನೀಗದೆ
ಹೆತ್ತವರ ಸೇವೆಯನು ಮನದಿಂದ ಮಾಡದೆ
ನಿನ್ನ ನೋಡುವ ದಾರಿ ನಾನರಿಯಲಿಲ್ಲ
ಸದ್ಗುಣದಿ ನೀನಿರಲು ಗುರುತಿಸದೆ ಹೋದೆ
ಬೆಟ್ಟಗುಡ್ಡವನಲೆದು ನಿನ್ನ ನಾ ಹುಡುಕಿದೆ
ತಿಮಿರವನು ಆದರಿಸಿ ಬೆಳಕನ್ನು ಬಯಸುತ್ತ
ಅಜ್ಞಾನಿ ನಾನಾಗಿ ಒಳಗಣ್ಣು ತೆರೆಯಲಿಲ್ಲ
ಎಲ್ಲ ದಿಕ್ಕುಗಳಲ್ಲೂ ಅಲೆದಲೆದು ಸಾಕಾಗಿ
ದೇವನಿರುವನೆ ಎಂಬ ಸಂಶಯವ ಸೇರಿ
ಅವೀವೇಕದ ಅಂಧಕಾರದಲಿ ಬಾಳ ನಡೆಸುತ್ತ
ಸತ್ಯ ಧರ್ಮವೇ ನೀನೆಂದು ನಾ ತಿಳಿಯಲಿಲ್ಲ
ರಾಗದ್ವೇಷವ ಸೇರಿ ಮತಿಹೀನ ನಾನಾದೆ
ಹೊತ್ತಿರುವೆ ಕಲ್ಮಶ ಕೂಡಿರುವ ಅಸ್ತಿಭಾರ
ಬಿತ್ತದೆಯೆ ನನ್ನೊಳಗೆ ಮಾನವೀಯತೆಯನ್ನು
ಕಣಕಣದಿ ಇದ್ದರೂ ನಿನ್ನ ಕಾಣಬಹುದೇನು ?
ತೋರುವ ಕರುಣೆ ಮಮತೆಯಲಿ ನೀನಿದ್ದೆ
ತ್ಯಾಗ ಪ್ರಾಮಾಣಿಕ ಗುಣದಿ ಅಡಗಿದ್ದೆ
ನೀತಿ ಮಾರ್ಗವ ತೋರುತ್ತ ಎನಗೆ
ಒಳಗಣ್ಣು ತೆರೆಸಿ ಕಾಪಾಡು ಪ್ರಭುವೇ..!!
- ಮಧುರಾ ಮೂರ್ತಿ