ಅಖಂಡ ಚೇತನಕ್ಕೆ ಒಂದು ಭಕ್ತಿಪೂರ್ವಕ ನಮನ

ಸುಭಾಷ್ ಚಂದ್ರಬೋಸ್ ! ನೀ ಚಿರಂತನ…ನಿವೃತ್ತ ಶಿಕ್ಷಕಿ ಶಿವದೇವಿ ಅವನೀಶಚಂದ್ರ ಅವರಿಂದ ನುಡಿ ನಮನ, ತಪ್ಪದೆ ಮುಂದೆ ಓದಿ…

ಭಾಸವಾಗುವುದಲ್ಲ ನೀ ಆವಾಹನೆಯಾಗುವುದು
ನೆನೆದೊಡನೆ
ಧಮನಿಧಮನಿಯಲಿ ಬಿಸಿನೆತ್ತರುಕ್ಕಿಸುವುದು
‘ಕದಂ ಕದಂ ಬಢಾಯೇ ಜಾ
ಖುಷಿ ಕಾ ಗೀತ್ ಗಾಯೇಜಾ’
ಎಂದು ತರುಣರನ್ನು ಬಡಿದೆಬ್ಬಿಸುವುದು,
ಇದು ನಿನಗಾಗಿ ಅಲ್ಲ ಸುಭಾಸ್
ರಾಷ್ಟ್ರಮಾತೆಗಾಗಿ
ನಿನದೇನಿತ್ತು ಸ್ವಾರ್ಥ…
ನಿನ್ನ ದೇಹದ ಕಣಕಣರಲೂ
ಸ್ವಾತಂತ್ರ್ಯದ ತುಡಿತ…
‘ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ’ ಎಂದು ಕರೆಕೊಟ್ಟ ವೇದಾಂತ ಕೇಸರಿಯ ಸಿಂಹಗರ್ಜನೆ
ನಿದ್ದೆಗೆಡಿಸಿತು ನಿನ್ನ….
ಭಾರತದ ಸ್ವಾಭಿಮಾನವೇ ಮೂರ್ತಿವೆತ್ತಂತಿದ್ದ ನಿನ್ನ
ಯೋಧತ್ವ
ಆಳುವ ಕಪಟಿಗಳಿಗೂ ಸಿಂಹಸ್ವಪ್ನವಾಯಿತಲ್ಲ
ವಿದ್ಯಾರ್ಥಿ ದೆಸೆಯಲ್ಲಿಯೇ ತಂಡ ಕಟ್ಟಿದೆ ನಾಯಕತ್ವ ಮೆರೆದೆ…
ಗೃಹಬಂಧನದಿಂದ ತಪ್ಪಿಸಿಕೊಂಡು ಪ್ರಾಣವನ್ನು ಪಣವಿಟ್ಟು ನೂರಾರು ಮೈಲಿ ರಹಸ್ಯಯಾನ ಮಾಡಿ
ದೇಶಾಂತರ ಮಾಡಿದೆ.ಕ್ರೂರಿಯೆನಿಸಿದ ಹಿಟ್ಲರನನ್ನು ಪ್ರಭಾವಿಸಿದ ಅಮೋಘ ವ್ಯಕ್ತಿ ನೀನು..ಉನ್ನತ ಹುದ್ದೆಗೆ ಅರ್ಹತೆ ಗಳಿಸಿ ಗುಲಾಮಗಿರಿಯ ಅಧಿಕಾರವನ್ನು ನಿಷ್ಠುರವಾಗಿ
ತಿರಸ್ಕರಿಸಿದೆ.

ತಾಯ ಬಂಧವಿಮುಕ್ತಿಯೊಂದೇ ನಿನ್ನ ಅಪೂರ್ವ ಕನಸಾಗಿತ್ತು.ರೇಡಿಯೋ ಜಪಾನ್ ಮೂಲಕ ಸಂದೇಶ ಪ್ರಸಾರ ಮಾಡಿ ದೇಶಪ್ರೇಮಿಗಳಿಗೆ ಹೋರಾಟದ
ಕರೆಯಿತ್ತೆ.

ನಿನ್ನ ‘ಜೈಹಿಂದ್’ ಘೋಷವಾಕ್ಯ ಎಂದೆಂದಿಗೂ ಜ್ವಲಂತ
“ಆಜಾದ್ ಹಿಂದ್” ಪಕ್ಷ ನಿನ್ನ ಸಾಮರ್ಥ್ಯದ ಕನ್ನಡಿ
“ಝಾನ್ಸಿ ರೆಜಿಮೆಂಟ್” ಮಹಿಳಾ ಶಕ್ತಿಯ ಬಗೆಗೆ ನಿನ್ನ ಭರವಸಯ ದ್ಯೋತಕ !
ಸ್ವತಂತ್ರ ಪರ್ಯಾಯ ಸರ್ಕಾರ ರಚಿಸಿ , ಸ್ವಾತಂತ್ರ್ಯದ ಬೆಳಕು ಭಾರತದ ನೆಲವನ್ನು ಬೆಳಗುವ ಮೊದಲೇ ‌ನಿನ್ದದೇ ಸಚಿವ ಮಂಡಲವನ್ನು ರಚಿಸಿ ವಿದೇಶೀ ನೆಲದಲ್ಲಿ ಸ್ವತಂತ್ರ ಆಡಳಿತದ ಸಿದ್ಧತೆ ನಡೆಸಿದ ವೀರ ಸೇನಾನಿ ನೀನು….
ಧರ್ಮ ಸಮನ್ವಯತೆಯ ಸಾಕಾರ.

ನಿನ್ನ ‘ದೆಲ್ಲಿ ಚಲೋ’ ಘೋಷಣೆಯ ಕಸುವಿಗೆ ಆಂಗ್ಲರ ಸಾಮ್ರಾಜ್ಯದ ಬುಡವನ್ನೇ ಅಲುಗಿಸುವ ಅಸಾಮಾನ್ಯ ಶಕ್ತಿಯಿತ್ತು.ನೀನು ಉಗ್ರವಾದಿಯಾಗಿದ್ದಕ್ಕೇ ಭಾರತ ನೇತಾರರ ಕೆಂಗಣ್ಣಿಗೆ ಗುರಿಯಾದೆ.ಭಿನ್ನಾಭಿಪ್ರಾಯವಿದ್ದರೂ ಗಾಂಧೀಜಿಯವರೂ ,’ನಾನು ಜೀವನದಲ್ಲಿ ನೆನಪಿನಲ್ಲಿಟ್ಟುಕೊಳ್ಳುವುದು ಸುಭಾಸ್ನನ್ನು ಮಾತ್ರ’ಎಂದು ಅಭಿಮಾನದಿಂದ ಪ್ರಶಂಸಿಸಿದ್ದು ಸುಳ್ಳಲ್ಲ.

ಸಿಂಹದ ಮರಿಯಂತೆ ಬದುಕಿ ಸ್ವಾತಂತ್ರ್ಯದ ಆಕಾಂಕ್ಷೆಯನ್ನು ತೀವ್ರವಾಗಿ ಈಡೇರಿಸಿದ ನಿನ್ನ ದೇಶಪ್ರೇಮ ಸರಿಸಾಟಿಯಿಲ್ಲದ್ದು.ನೀನು ಭಾರತದ ಸ್ವಾತಂತ್ರ್ಯ ಸಿಂಹಾಸನದಲ್ಲಿ ವಿರಾಜಮಾನನಾಗುವ ಅವಕಾಶ ವಂಚಿತಗಿದ್ದು ಭಾರತೀಯರ ದೌರ್ಭಾಗ್ಯವೇ ಸರಿ.

ನಿನ್ನಂತೆ ಇರಬೇಕು ಪ್ರತಿ ಭಾರತೀಯ..ಹಾಗಿದ್ದರೆ ಸಮಗ್ರತೆಗೆಲ್ಲಿ ಧಕ್ಕೆ!
ನಿತ್ಯ ಅಖಂಡವಾದೀತು ಭಾರತ.
ನಿನ್ನ ಸ್ಮರಣೆಯೇ ಶ್ವಾಸವಾಗಲಿ
ಭಾರತೀಯರ ಎದೆಯಲ್ಲಿ..!

ನಿತ್ಯ ಸ್ಫೂರ್ತಿದಾಯಕ ಮಹಾ ಚೇತನವಾಗಿ ಭಾರತದ ಆತ್ಮಶಕ್ತಿ, ಹೇ ನಿರ್ಭೀತ ಇನ್ನೂ ಬೇಕೆನಿಸುವ ನಲವತ್ತೆರಡರ ಹರಯದಲ್ಲೇ ನಮಗಾಗಿ ಪ್ರಾಣತೆತ್ತ ನಿನಗೆ ಹೃತ್ಪೂರ್ವಕ ನಮನಗಳು. ಭಾರತ ಸ್ವಾತಂತ್ರ್ಯದ ನೀಲಾಂಜನದಲ್ಲಿ ನಿನ್ನ ದೇಶಭಕ್ತಿಯ ತೈಲವಿದೆ ಸುಭಾಷ್ ಚಂದ್ರಬೋಸ್ ! ನೀ ಚಿರಂತನ…


  • ಶಿವದೇವಿ ಅವನೀಶಚಂದ್ರ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW