‘ಸಿರಿಗೌರಿಗೆಡೆಗಿಟ್ಟು ಹಣ್ಣು ಹಂಪಲನೆಲ್ಲ, ತವರೂರ ಶ್ರೇಯಸ್ಸು ಬೇಡುತಿಹಳು’…ಕವಿ ಚನ್ನಕೇಶವ ಜಿ ಲಾಳನಕಟ್ಟೆ ಅವರು ಬರೆದಿರುವ ಕವನವನ್ನು ತಪ್ಪದೆ ಮುಂದೆ ಓದಿ…
ಸಿರಿಗೌರಿ ರೂಪದಲಿ ನನತಂಗಿ ಕಂಡಿಹಳು
ತವರುಡುಗೆ ಬಾಗಿನವ ನೀಡಿರುವೆನು
ಸರಿದೂರ ಸಾಗಿರಲು ಕೊಟ್ಟು ಬಾಗಿನವನ್ನು
ತಿರುತಿರುಗುತಣ್ಣನನೆ ನೋಡುತಿಹಳು
ಹರಿಶಿನವು ಕುಂಕುಮವ ಮೊದಲು ಪೂಜೆಯಲಿಟ್ಟು
ಮುತ್ರೈದೆ ಭಾಗ್ಯಕ್ಕೆ ಮೊರೆತಿರುವಳು
ಸಿರಿಗೌರಿಗೆಡೆಗಿಟ್ಟು ಹಣ್ಣು ಹಂಪಲನೆಲ್ಲ
ತವರೂರ ಶ್ರೇಯಸ್ಸು ಬೇಡುತಿಹಳು
ಹರನರಸಿ ಬುವಿಯೆಡೆಗೆ ಬಾಯೆಂದು ಕರೆಯುತ್ತ
ಗಜಮುಖಗು ಪೂಜಿಸುತ ಮೊರೆಯುತಿಹಳು
ಹರಸೆಂದು ಸೆರಗೊಡ್ಡಿ ಬಾಗುತಲಿ ವರಬೇಡಿ
ಪರಿಪರಿಯ ಪದಗಳು ಹಾಡುತಿಹಳು
ಧರೆಗಿಂದು ಸಡಗರವು ಗೌರಿ ಬರುವನು ತಿಳಿದು
ಹಸಿರಾಗಿ ಕಂಗೊಳಿಸಿ ನಳನಳಿಸಿತು
ಕರಿಗಡುಬು ಮೋದಕವು ಹೋಳಿಗೆಯು ಕಜ್ಜಾಯ
ನೈವೇದ್ಯ ಮಾಡುತಲಿ ಬಡಿಸುತಿಹಳು.
- ಚನ್ನಕೇಶವ ಜಿ ಲಾಳನಕಟ್ಟೆ