1000 ರೂಪಾಯಿ ಕೊಡುವಿರಾ ಟೀಚರ್?

೧೦೦೦ ರೂಪಾಯಿ ಕೊಡುವಿರಾ ಟೀಚರ್?…ಕೊಡಬೇಡಿ ಟೀಚರ್… ಮತ್ತೆ ಅವನು ಕ್ಲಾಸಿಗೂ ಬರಲ್ಲಾ ಎನ್ನುತ್ತಿದ್ದರು ಇತರೆ ಟೀಚರ್ …ಆದರೆ ಆ ಹುಡುಗನಿಗೆ ಆ ಟೀಚರ್ ನಂಬಿಕೆಯಿಂದ ೧೦೦೦ ರೂಪಾಯಿ ಕೊಟ್ಟರು, ಮುಂದೇನಾಯಿತು ತಪ್ಪದೆ ಓದಿ…

ಕ್ಲಾಸಿನಲ್ಲಿ ಅತಿ ಹೆಚ್ಚು ರಜೆ ಮಾಡುವ ಹುಡುಗ ಈ ಹುಡುಗ ನನ್ನತ್ರ ಯಾಕೆ ದುಡ್ಡು ಕೇಳುತ್ತಿದ್ದಾನೆ ? ಆ ಟೀಚರ್ ಮನಸ್ಸಲ್ಲಿ ಕೇಳಿಕೊಂಡರು. ಕೊಡಬೇಡಿ ಟೀಚರ್… ಮತ್ತೆ ಅವನು ಕ್ಲಾಸಿಗೂ ಬರಲ್ಲಾ… ನಿಮ್ಮ ಹಣವನ್ನೂ ಕೊಡಲ್ಲ… ಆ ಹುಡುಗ ಶಾಂತಾ ಟೀಚರ್ ಹತ್ತಿರ ದುಡ್ಡು ಕೇಳುತ್ತಿರುವುದನ್ನು ಕೇಳಿಸಿಕೊಂಡ ಆಶಾ ಟೀಚರ್ ಹೇಳಿದರು.

ಖಂಡಿತವಾಗಿಯೂ ವಾಪಾಸ್ ಕೊಡುವೆ ಟೀಚರ್. ಬೇರೆ ಯಾರೂ ಸಹಾಯ ಮಾಡಲಿಲ್ಲ ಟೀಚರ್. ಆ ಹುಡುಗ ಪುನಃ ಬೇಡಿದ. ಯಾಕೆ ಅಂತ ಕೂಡಾಕೇಳದೆ ಶಾಂತಾ ಟೀಚರ್ ಬ್ಯಾಗ್ ನಿಂದ ಸಾವಿರ ರುಪಾಯಿಗಳನ್ನು ತೆಗೆದು ಕೊಟ್ಟರು. ಖಂಡಿತವಾಗಿಯೂ ಈ ಹಣ ವಾಪಸ್ ಕೊಡುತ್ತೇನೆ ಟೀಚರ್ ಅಂತ ಹೇಳಿ ಆ ಹುಡುಗ ಓಡಿ ಮರೆಯಾದ. ಕೆಲವು ದಿನಗಳು ಕಳೆದವು. ಆ ಹುಡುಗ ಕ್ಲಾಸಿಗೆ ಬರಲೇ ಇಲ್ಲ. ಶಾಂತ ಟೀಚರ್ ಯೋಚಿಸಿದರು. ಆ ಹುಡುಗ ನನಗೆ ಮೋಸ ಮಾಡಿದನೇ? ಯಾಕೆ ಅಂತಾದರೂ ಕೇಳಿ ದುಡ್ಡು ಕೊಡಬಹುದಿತ್ತು. ಹೋಗಲಿ ಪರವಾಗಿಲ್ಲ… ಆಕೆ ಸ್ವತಃ ಹೇಳಿಕೊಂಡರು.

ಒಂದು ದಿನ ಶಾಂತಾ ಟೀಚರ್ ಮಾರ್ಕೆಟ್ ನಲ್ಲಿ ಆ ಹುಡುಗನನ್ನು ನೋಡಿದರು. ಹೊರೆ ಹೋರುವ ಕೆಲಸ ಮಾಡುತ್ತಿದ್ದ. ಟೀಚರನ್ನು ನೋಡಿದ ಕೂಡಲೆ ಮುಗುಳ್ನಗುತ್ತಾ ಟೀಚರ್ ನ ಹತ್ತಿರ ಬಂದ. ಟೀಚರ್ ಯಾಕೆ ಇಲ್ಲಿ ಬಂದಿದ್ದು? ನನ್ನನ್ನು ಹುಡುಕುತ್ತಾ ಹೊರಟಿದ್ದೀರಾ ಹೇಗೆ? ನಾಳೆ ಒಂದು ದಿನ ಕೂಡಾ ಕೆಲಸ ಮಾಡಿದರೆ ನಿಮ್ಮ ಹಣವನ್ನು ಕೊಡುವೆ. ತಡವಾಗಿದ್ದಕ್ಕೆ ಕ್ಷಮಿಸಿ. ಏನು ಹೇಳಬೇಕೆಂದು ತೋಚದೆ ಟೀಚರ್ ಹಾಗೇ ನಿಂತುಬಿಟ್ಟರು.

ಆ ಹುಡುಗನ ಹೆಸರು ರಾಜು. ಸ್ವಲ್ಪ ಹೊತ್ತಿನ ಮೌನದ ಬಳಿಕ ಟೀಚರ್ ಕೇಳಿದರು –

ಟೀಚರ್ : ಯಾಕೆ ರಾಜು ಶಾಲೆಗೆ ಬರುತ್ತಾ ಇಲ್ಲ?.

ರಾಜು : ಇನ್ನು ಬರಲ್ಲಾ ಟೀಚರ್. ಮನೆಯಲ್ಲಿ ಅಕ್ಕ ಒಬ್ಬಳೇ ಇರೋದು. ಅವತ್ತು ಅಮ್ಮನಿಗೆ ಸೌಖ್ಯವಿಲ್ಲದ ಕಾರಣ ಟೀಚರ್ ನಿಂದ ಹಣ ಪಡೆದದ್ದು. ಆದರೆ… ಅಮ್ಮ ನಮ್ಮನ್ನು ಅಗಲಿದರು. ಆಕೆ ಬದುಕಬಹುದೆಂಬ ಚಿಕ್ಕ ಆಸೆಯಿತ್ತು.ಹಲವಾರು ಜನರ ಹತ್ರ ಅಮ್ಮನಿಗೆ ಔಷಧ ತರಲು ದುಡ್ಡನ್ನು ಸಾಲ ಕೇಳಿದೆ. ಎಲ್ಲೂ ಸಿಗದಿದ್ದಾಗ ಬೇರೆ ದಾರಿ ಕಾಣದೆ ಟೀಚರ್ ಬಳಿ ಬಂದು ಹಣ ಪಡೆದು ಅಮ್ಮನನ್ನು ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ನಮ್ಮನ್ನು ಬಿಟ್ಟು ಹೊರಟೋದರು.

ಹೇಳುವಾಗ ರಾಜುವಿನ ಕಂಠ ಗದ್ಗರಿಸಿತು… ರಾಜು ಮುಂದುವರಿಸುತ್ತಾ ಹೇಳಿದ. ಒಂದು ಅಂಗಡಿಯಲ್ಲಿ ಕೆಲಸಕ್ಕೆ ಸೇರಿಕೊಂಡೆ ಟೀಚರ್. ಅಕ್ಕನನ್ನು ಚೆನ್ನಾಗಿ ನೋಡಿಕೊಳ್ಳಬೇಕು… ಅಲ್ಲಿ ಸಿಗುವ ಸಂಬಳದ ಜೊತೆಗೆ ಹೀಗೆ ಹೊರೆಹೋರುವ ಕೆಲಸದಲ್ಲೂ ಒಂದಿಷ್ಟು ದುಡ್ಡು ಖರ್ಚಿಗೆ ಅಂತ ಸಿಗುತ್ತಿದೆ… ಹೇಗಾದರೂ ಬದುಕಬೇಕಲ್ಲ ಟೀಚರ್…

ಟೀಚರ್ : ರಾಜು ನೀನು ಕಲಿಯಬೇಕು.ಆತ ಆಶ್ಚರ್ಯ ದಿಂದ ಇನ್ನು ಅದೆಲ್ಲ ಆಗಲ್ಲ ಟೀಚರ್…

ಟೀಚರ್ : ಯಾಕೆ ಆಗಲ್ಲ ರಾಜು ? ಆಗಬೇಕು. ನೀನು ನಾಳೆ ಸಂಜೆ ಮನೆಗೆ ಬರಬೇಕು. ನೀನು ಮಿಸ್ ಮಾಡಿಕೊಂಡ ಪಾಠಗಳನ್ನು ನಾನು ಹೇಳಿಕೊಡುತ್ತೇನೆ… ನಿನಗೆ ಕಲಿಯಲು ಒಳ್ಳೆಯ ಬುದ್ದಿ ಇದೆ. ಸ್ವಲ್ಪ ನಿನ್ನ ಮನಸಿನ ಒತ್ತಡವನ್ನೆಲ್ಲಾ ಕಡಿಮೆ ಮಾಡಿ ಕಲಿಯಬೇಕು. ಒಳ್ಳೆಯ ಮಾರ್ಕ್ ಗಳಿಸಿ ಪಾಸಾಗಬೇಕು. ಅಷ್ಟು ಹೇಳಿ ರಾಜುವಿನ ರಿಪ್ಲೈ ಗೆ ಕಾಯದೆ ಟೀಚರ್ ನಡೆದು ಸಾಗಿದರು.

ಮರುದಿನ ಸಂಜೆ ರಾಜು ತನಗೆ ಸಿಕ್ಕಿದ ಸಂಬಳದೊಂದಿಗೆ ಟೀಚರ್ ನ ಮನೆ ತಲುಪಿದ‌. ರಾಜು ಟೀಚರಿಗೆ ಸಾವಿರ ರೂಪಾಯಿಗಳನ್ನು ಮೊದಲು ಕೊಡಲು ಲೆಕ್ಕ ಮಾಡುತ್ತಿರುವಾಗ ಟೀಚರ್ ತಡೆದು ಇದು ಈಗ ನಿನ್ನತ್ರ ಇರಲಿ. ನಾನು ಮತ್ತೆ ನಿನ್ನಿಂದ ಕೇಳಿ ಪಡೆಯುವೆ ಅಂದರು.

ರಾಜು : ಟೀಚರ್ ನನಗೋಸ್ಕರ ಯಾಕೆ ಕಷ್ಟಪಡುತ್ತಿದ್ದೀರಾ…? ನಾನು ನನ್ನ ಕೆಲಸದಲ್ಲಿ ಹೊಂದಿಕೊಂಳ್ಳುತ್ತಿದ್ದೇನೆ..

ಟೀಚರ್ :
ನನಗೆ ಕಷ್ಟವಾ..?? ಹಾಗಂತ ಯಾರು ಹೇಳಿದ್ದು?? ಜ್ಞಾನವನ್ನು ಹಂಚಿಕೊಡುವುದು ಒಬ್ಬ ಗುರುವಿನ ಕರ್ತವ್ಯವಾಗಿದೆ… ನೋಡು ರಾಜು ನೀನು ಹಾಗೇನೂ ಚಿಂತಿಸಬಾರದು. ಕಲಿತು ಒಳ್ಳೆಯ ನೆಲೆಯನ್ನು ಕಂಡುಕೊಳ್ಳಬೇಕು…

ರಾಜು : ಆಸೆಯಿದೆ ಟೀಚರ್… ಆದರೆ , ನನ್ನ ಅವಸ್ಥೆ…. ಅದಕಾರಣವೇ ಕಲಿಕೆ ಬೇಡ ಅಂತ ನಿರ್ಧರಿಸಿರೋದು… ಈಗ ತಾವು ಹೇಳುವಾಗ ಏನೋ ಒಂದು ಭರವಸೆ ಮೂಡುತ್ತಿದೆ.. ಯಾರಾದರೂ ನನಗೆ ಸಹಾಯ ಮಾಡಿಯಾರು ಅಂತ ಅನಿಸುತ್ತಿದೆ…

ಟೀಚರ್ : ನಿನ್ನಿಂದ ಖಂಡಿತವಾಗಿಯೂ ಸಾಧ್ಯ. ನಿನ್ನ ಮೇಲೆ ನನಗೆ ನಂಬಿಕೆಯಿದೆ. ಕಲಿತು ಒಳ್ಳೆಯ ಮಾರ್ಕ್ ನೊಂದಿಗೆ ಪಾಸಾಗಿ, ಜೀವನದಲ್ಲಿ ಒಳ್ಳೆಯ ನೆಲೆಯನ್ನು ಕಂಡುಕೊಳ್ಳಬೇಕು. ಅದುವೇ ನೀನು ನನಗೆ ಕೊಡುವ ಗುರುದಕ್ಷಿಣೆ….

ಹಾಗೇ ರಾಜು ಕಲಿಯಲಾರಂಬಿಸಿದ.. ಬಹಳ ಬೇಗನೇ ಒಂದು ಛಲದೊಂದಿಗೆ ಪಾಠಗಳನ್ನು ಅರ್ಥಮಾಡಿಕೊಂಡು, ಪರೀಕ್ಷೆಯಲ್ಲಿ ಉಳಿದ ವಿದ್ಯಾರ್ಥಿಗಳನ್ನು ಹಿಂದಿಕ್ಕಿ ಕ್ಲಾಸಿನಲ್ಲಿ ಮೊದಲ ಸ್ಥಾನವನ್ನು ಗಿಟ್ಟಿಸಿಕೊಂಡ… ಶಾಂತಾ ಟೀಚರ್ ನ ಪ್ರೀತಿಯ ಶಿಷ್ಯನಾಗಿ ಬದಲಾದ.. ರಾಜುವಿಗೆ ಶಾಂತಾ ಟೀಚರ್ ಕೇವಲ ಟೀಚರ್ ಆಗಿರಲಿಲ್ಲ… ಅಮ್ಮನೂ ಆಗಿದ್ದರು.
ಹೀಗಿರುವಾಗ ಟೀಚರ್ ನ ಪತಿ ವಿದೇಶದಲ್ಲಿದ್ದು ಪತಿಯ ಒತ್ತಾಯದ ಮೇರೆಗೆ ಶಾಂತಾಟೀಚರ್ ಮತ್ತು ಮಕ್ಕಳು ವಿದೇಶಕ್ಕೆ ಹೋಗಲು ನಿರ್ಧರಿಸಿದರು. ವಿಷಯ ತಿಳಿದ ರಾಜು ಟೀಚರ್ ನ ಮನೆಗೆ ಓಡೋಡಿ ಬಂದ.

ರಾಜು : ಟೀಚರ್… ತಾವು ಕೂಡಾ ನನ್ನನ್ನು ಒಂಟಿಯಾಗಿಸಿ ಹೊರಟಿದ್ದೀರಾ…? ರಾಜುವಿನ ಕಣ್ಣುಗಳು ತುಂಬಿತು…

ಟೀಚರ್ : ಹೋಗಲೇಬೇಕಾದ ಅನಿವಾರ್ಯತೆ ಇದೆ ರಾಜು . ನೀನು ಯಾವತ್ತೂ ಒಂಟಿಯಾಗಲಾರ… ನನ್ನ ಪ್ರಾರ್ಥನೆ ಎಂದೆಂದಿಗೂ ನಿನ್ನ ಜೊತೆ ಇರುತ್ತದೆ. ಚೆನ್ನಾಗಿ ಕಲಿಯಬೇಕು ಆಯಿತಾ… ಶಾಂತಾ ಟೀಚರಿನ ದುಃಖದ ಕಟ್ಟೆ ಒಡೆಯಿತು. ಬೇರೇನೂ ರಾಜುವಿನತ್ರ ಹೇಳಲು ಟೀಚರಿಗೆ ಇರಲಿಲ್ಲ. ರಾಜುವಿನ ಮನೆಯ ಖರ್ಚು ಮತ್ತು ವಿದ್ಯಾಭ್ಯಾಸದ ಖರ್ಚುಗಳಿಗಾಗಿ ಟೀಚರ್ ತನ್ನ ಗೆಳತಿಯೊಬ್ಬಳ ಹತ್ತಿರ ಒಂದಿಷ್ಟು ದುಡ್ಡನ್ನು ಕೊಟ್ಟು ಹೋಗಿದ್ದರು.

ಕಾಲಚಕ್ರವು ಉರುಳಿತು. ಶಾಂತಾ ಟೀಚರ್ ನ ಪತಿಯ ವಿಯೋಗವು ಟೀಚರ್ ನ ಬದುಕಿನಲ್ಲಿ ದೊಡ್ಡ ಬಿರುಗಾಳಿಯನ್ನೇ ಸೃಷ್ಟಿಮಾಡಿತು… ಕಷ್ಟಗಳು ಏನೆಂದು ಅರಿಯದೆ ಬದುಕಿದ ತನ್ನ ಮಕ್ಕಳಿಗೆ ಟೀಚರ್ ಭಾರವಾಗತೊಡಗಿದರು. ಅಮ್ಮನನ್ನು ನೋಡಿಕೊಳ್ಳುವವರು ಯಾರು? ಎಂಬ ವಿಷಯದಲ್ಲಿ ಮಕ್ಕಳು ಪರಸ್ಪರ ಜಗಳಾಡತೊಡಗಿದರು. ಕೊನೆಗೆ ಅಮ್ಮನನ್ನು ಊರಿನಲ್ಲಿರುವ ವೃದ್ಧಾಶ್ರಮದಲ್ಲಿ ಬಿಡಲು ನಿರ್ಧರಿಸಿದರು.

ಶಾಂತಾ ಟೀಚರ್ ಮನಸ್ಸಲ್ಲಿ ಅಂದುಕೊಂಡರು. ಹುಟ್ಟಿದ ಊರಲ್ಲೇ ಸಾಯಬಹುದಲ್ಲಾ ಅಂತ ತನ್ನನ್ನು ತಾನೇ ಸಂತೈಸಿಕೊಂಡರು…. ಮಕ್ಕಳ ಮಾತುಗಳನ್ನು ಅನುಸರಿಸದೆ ಬೇರೆ ದಾರಿಯೂ ಇರಲಿಲ್ಲ. ವರ್ಷಗಳ ನಂತರ ವಿದೇಶದಿಂದ ವಾಪಾಸ್ಸಾದ ಶಾಂತಾ ಟೀಚರ್ ವೃದ್ದಾಶ್ರಮದಲ್ಲಿ ಇತರ ಅಮ್ಮಂದಿರ ಜೊತೆ ಬಹು ಬೇಗ ಹೊಂದಿಕೊಂಡರು. ಒಂದು ದಿನ ಅಲ್ಲಿನ ಕೆಲಸದಾಕೆ ಅಮ್ಮು ಬಂದು ಹೇಳಿದಳು – ಶಾಂತಾ ಟೀಚರಿಗೆ ಒಬ್ಬರು ವಿಸಿಟರ್ ಇದ್ದಾರೆ. ಯಾರು ಅಂತ ನೋಡಲು ಅಮ್ಮುವಿನ ಜೊತೆ ವರಾಂಡಾಕ್ಕೆ ಹೋದರು…
ಟೀಚರ್….. ಆತ ಮುಗುಳ್ನಗುತ್ತಾ ಕರೆದ.

ರಾಜು…..!! ಎಷ್ಟು ದೊಡ್ಡವನಾಗಿ ಬಿಟ್ಟಿದ್ದೀಯಾ…!!

ರಾಜು : ಟೀಚರ್ ನಿಮ್ಮ ರಾಜು ಈಗ ಕೇವಲ ರಾಜು ಅಲ್ಲಾ… ಡಾಕ್ಟರ್ ರಾಜುವಾಗಿದ್ದಾನೆ… ಆತ ಟೀಚರ್ ನ ಕೈಗಳನ್ನು ಹಿಡಿದು ಒತ್ತುತ್ತಾ ಹೇಳಿದ. ಸಂತೋಷದಿಂದ ಟೀಚರ್ ನ ಕಣ್ಣುಗಳಲ್ಲಿ ಆನಂದಬಾಷ್ಪವು ತುಂಬಿತು.

ರಾಜು : ಯಾಕೆ ಟೀಚರ್ ಅಳುತ್ತಿದ್ದೀರಾ…? ಆತ ಟೀಚರ್ ನ ಕಣ್ಣುಗಳನ್ನು ಒರೆಸಿದ.

ಟೀಚರ್ :
 ಸಂತೋಷದಿಂದ ಕಣ್ಣುಗಳು ತುಂಬಿದ್ದು ರಾಜೂ… ಸಾಯೋದಕ್ಕೆ ಮುಂಚೆ ನಿನ್ನನ್ನು ನಾನು ಅಂದುಕೊಂಡ ಹಾಗೇ ಒಳ್ಳೆಯ ನೆಲೆಯಲ್ಲಿ ನೋಡಲು ಸಾಧ್ಯವಾಯಿತಲ್ಲಾ…. ಟೀಚರ್ ಆತನ ತಲೆಯನ್ನು ಪ್ರೀತಿಯಿಂದ ಸವರಿದರು….

ರಾಜು:  ನಾನು ಬಂದದ್ದು ನಿಮ್ಮನ್ನು ಕರಕ್ಕೊಂಡು ಹೋಗೋಕೆ… ನೀವು ಇರಬೇಕಾದದ್ದು ಇಲ್ಲಿ ಅಲ್ಲ…. ಅನಾಥತ್ವದ ನಡುವಿನಲ್ಲಿ ಬೆಳೆದು, ಒಬ್ಬಳು ತಾಯಿಗೆ ಕೊಡಬೇಕಾದ ಎಲ್ಲಾ ಸ್ನೇಹವನ್ನೂ ಕೂಡಿಟ್ಟು ನನ್ನ ಪತ್ನಿ ನಿಮಗಾಗಿ ಕಾಯುತ್ತಿದ್ದಾಳೆ… ಅಜ್ಜಿ ಕಥೆಗಳನ್ನು ಕೇಳುತ್ತಾ ಮಲಗಿ ನಿದ್ರಿಸಲು ಕಾತುರದಿಂದ ಕಾಯುತ್ತಿದ್ದಾರೆ ನನ್ನ ಮುದ್ದು ಮಕ್ಕಳು…. ಹೋಗೋಣ ಹೊರಡಿರಿ….

ಟೀಚರ್ :
ಕಂದಾ…. ಟೀಚರ್ ನ ಕಣ್ಣುಗಳು ತುಂಬಿ ತುಳುಕಿದವು…

ರಾಜು
: ಇನ್ನು ಈ ಮಗ ಇರುವಷ್ಟು ದಿನ ನಿಮ್ಮ ಈ ಕಣ್ಣುಗಳು ಒದ್ದೆಯಾಗಲು ಬಿಡಲಾರೆ…. ಆತ ಟೀಚರ್ ನ ಕೈಯನ್ನು ಜೋರಾಗಿ ಒತ್ತಿ ಹಿಡಿದು ಹೇಳಿದ… ಆ ಹಿಡಿತದಲ್ಲಿ ಸ್ನೇಹ, ನಂಬಿಕೆ, ಆಶ್ರಯ, ಧೈರ್ಯ, ಆತ್ಮವಿಶ್ವಾಸ ಎಲ್ಲವೂ ಅಡಗಿತ್ತು…. ಒಬ್ಬಳು ಅಮ್ಮನಿಗೆ ಕೊಡುವುದಕ್ಕೆ ಕೂಡಿಟ್ಟ ಸ್ನೇಹವೆಲ್ಲಾ ಆತನ ಕಣ್ಣುಗಳಲ್ಲಿ ಆ ಟೀಚರ್ ಕಂಡರು………


ಕೃಪೆ:ನಲಿ-ಕಲಿ ವಾಟ್ಸ್ ಆ್ಯಪ್ ಗ್ರೂಪ್
ಸಂಗ್ರಹ:ವೀರೇಶ್ ಅರಸಿಕೆರೆ.
ಲೇಖಕರು ಗೊತ್ತಿಲ್ಲ , ಗೊತ್ತಿದ್ದರೆ ದಯವಿಟ್ಟು ತಿಳಿಸಿ…

0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW