“ದಿ ಸಿಗ್ನಲ್ ಮ್ಯಾನ್” ನಾಟಕದ ಕುರಿತು ನನ್ನ ಅಭಿಪ್ರಾಯ

‘ದಿ ಸಿಗ್ನಲ್ ಮ್ಯಾನ್’ ಬೆರಳು ಮಾಡಿ ಗುಡ್ಡದತ್ತ ತೋರಿಸುತ್ತಿದ್ದದ್ದು, ಹೇಳುತ್ತಿದ್ದದ್ದು ಏನು?…ಅವನಲ್ಲಿದ್ದ ಗಾಬರಿಗೆ ಕಾರಣವೇನು ? …ದಿ ಸಿಗ್ನಲ್ ಮ್ಯಾನ್ ಕತೆ ಮುಂದೇಯಿತು… ಕುತೂಹಲಕಾರಿ ನಾಟಕ ‘ದಿ ಸಿಗ್ನಲ್ ಮ್ಯಾನ್’ ಕುರಿತು ಶಾಲಿನಿ ಹೂಲಿ ಪ್ರದೀಪ್ ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ನಾಟಕ : “ದಿ ಸಿಗ್ನಲ್ ಮ್ಯಾನ್”
ಮೂಲ : ಚಾರ್ಲ್ಸ್ ಡಿಕೆನ್ಸ್ (‘ಡೆತ್ ಆನ್ ದ ರೆಯಿಲ್ಸ್’)
ಕನ್ನಡಕ್ಕೆ ರಚನೆ : ಜಿ ವಿ ಶಿವಾನಂದ  (ಭ್ರಮೆ)
ನಿರ್ದೇಶನ : ಪೂರ್ಣಚಂದ್ರ ತೇಜಸ್ವಿ
ದಿಗ್ಧರ್ಶನ : ಕೋಟೆ ಅನಂತ್
ನಾಟಕದ ಅವಧಿ : ಒಂದೂವರೆ ಘಂಟೆ

ಜಿ ವಿ ಶಿವಾನಂದ

‘ಓಯ್…ನೀನೇ ….ಅಲ್ಲೇ ನಿಲ್ಲು…ಬರಬೇಡಾ ಹೋಗೂ’…
‘ಓಯ್…ನೀನೇ ….ಅಲ್ಲೇ ನಿಲ್ಲು…ಬರಬೇಡಾ ಹೋಗೂ’…

ಆ ದೂರದಲ್ಲಿದ್ದ ಗುಡ್ಡದ ಕೆಂಪು ಬೆಳಕಿನಲ್ಲಿ ಸುರಂಗದಿಂದ ಮುಖ ಮುಚ್ಚಿಕೊಂಡು ಸಿಗ್ನಲ್ ಮ್ಯಾನ್ ಗೆ ಸಿಗ್ನಲ್ ಕೊಡುತ್ತಿದ್ದ ಆ ಅನಾಮಿಕ ವ್ಯಕ್ತಿ ಯಾರು?… ಎನ್ನುವ ರೋಚಕ ಕಥೆಯೊಂದಿಗೆ “ದಿ ಸಿಗ್ನಲ್ ಮ್ಯಾನ್” ನಾಟಕ ಶುರುವಾಯಿತು.

ರೈಲು ಬರುವ ಮುಂಚೆ ಹಿಂದಿನ ಸ್ಟೇಷನ್ ನವರು ರೈಲು ಬರುವುದನ್ನು ಕರೆಯ ಮುಖಾಂತರ ರೇಲ್ವೆ ಸಿಗ್ನಲ್ ಮ್ಯಾನ್ ಗೆ ತಿಳಿಸುತ್ತಾರೆ. ಆತ ರೈಲು ಬರುವಾಗ ಬೆಳಕಿನ ದೀಪ ಹಿಡಿದು ಮುಂದಿನ ದಾರಿ ಸುರಕ್ಷಿತವಾಗಿಯೋ, ಇಲ್ಲವೋ ಎಂದು ಸಿಗ್ನಲ್ ಕೊಡುತ್ತಾನೆ. ಇದು ಸಿಗ್ನಲ್ ಮ್ಯಾನ್ ಕೆಲಸವಾಗಿರುತ್ತದೆ.

ಈ ನಾಟಕದಲ್ಲಿ ಬರುವ ಮುಖ್ಯ ಪಾತ್ರಧಾರಿ ರಂಗಣ್ಣ ಸಿಗ್ನಲ್ ಮ್ಯಾನ್. ಈತನಿಗೆ ಭೂತಕಾಲದಲ್ಲಿ ನಡೆಯುವ ಘಟನೆಗಳು ಮುಂಚಿತವಾಗಿ ತಿಳಿಯುತ್ತಿತ್ತಾ?… ಅಥವಾ ಒಂಟಿಯಾಗಿ ಇದ್ದು ಇದ್ದು ಅವನ ತಲೆ ಕೆಟ್ಟು ಏನೇನೋ ಮಾತಾಡುತ್ತಿದ್ದನಾ?…ನಾಟಕ ಆರಂಭವಾಗಿ ಎಷ್ಟೋ ಹೊತ್ತಾದರೂ ಪ್ರೇಕ್ಷಕನಿಗೆ ಗೊತ್ತಾಗುವುದಿಲ್ಲ. ಆದರೆ ಇದು ದೆವ್ವದ ಕತೆಯಾ?… ಸಸ್ಪೆನ್ಸ್ ಕತೇನಾ?… ಎನ್ನುವ ಒಂದು ಹುಳ ಮಾತ್ರ ತಲೆಯಲ್ಲಿ ಕೊನೆಯ ತನಕ ಓಡಾಡುತ್ತದೆ. ನಾಟಕದ ಕೊನೆಯಲ್ಲಿ ಏನಾಗುತ್ತದೆ ಎನ್ನುವ ಕುತೂಹಲ ಮಾತ್ರ ಪ್ರೇಕ್ಷಕನಲ್ಲಿ
‘ದಿ ಸಿಗ್ನಲ್ ಮ್ಯಾನ್’ ಕಾಯ್ದುಕೊಂಡಿತು. ನಾಟಕದ ಕೊನೆಗೆ ಕತೆಯಲ್ಲಿ ಕೆಂಪು ದೀಪದ ಮಧ್ಯೆದಲ್ಲಿ ಬರುತ್ತಿದ್ದ ಧ್ವನಿ ಯಾರದು… ಏನು… ಎತ್ತ….ಎಲ್ಲವೂ ತಿಳಿಯುತ್ತದೆ. ಆ ಕುತೂಹಲವನ್ನು ನಿಮಗೂ ಇರಲಿ ಎಂದು ಕತೆಯನ್ನು ನಾನು ಇಲ್ಲಿ ಅರ್ಧಕ್ಕೆ ನಿಲ್ಲಿಸುತ್ತೇನೆ.

ಇಂಗ್ಲಿಷ್ ಲೇಖಕ ಚಾರ್ಲ್ಸ್ ಡಿಕೆನ್ಸ್ ಅವರು ಬರೆದ “ಡೆತ್ ಆನ್ ದ ರೆಯಿಲ್ಸ್” ಕತೆಯನ್ನು ಆಧಾರವಾಗಿಟ್ಟುಕೊಂಡು “ದಿ ಸಿಗ್ನಲ್ ಮ್ಯಾನ್ 1971” ಹೆಸರಿನಲ್ಲಿ ಕನ್ನಡದಲ್ಲಿ ಸಿನಿಮಾ ಕೂಡಾ ಬಂತು. ಇದರ ನಿರ್ದೇಶಕರಾಗಿ, ಮುಖ್ಯ ಪಾತ್ರದಲ್ಲಿ ಪ್ರಕಾಶ ಬೆಳವಾಡಿ ಅವರು ಕಾಣಿಸಿಕೊಂಡಿದ್ದಾರೆ. ಇತ್ತೀಚಿಗೆ ಇದು ಬೆಂಗಳೂರು ಸಿನಿಮಾ ಫೆಸ್ಟಿವಲ್ ನಲ್ಲಿ ಜನರ ಮನ್ನಣೆಯನ್ನು ಪಡೆದುಕೊಂಡಿತು. ಆದರೆ ಒಂದು ಇಂಗ್ಲೀಷ್ ಕತೆಯನ್ನು ಕನ್ನಡಕ್ಕೆ ಅನುವಾದ ಮಾಡುವುದಷ್ಟೇ ಅಲ್ಲ, ಎರಡೇ ಪಾತ್ರಗಳನ್ನು ಇಟ್ಟುಕೊಂಡು ಸಂಭಾಷಣೆ ಕಟ್ಟಿ, ಪ್ರೇಕ್ಷಕನ ಮುಂದೆ ಒಂದೂವರೆ ಗಂಟೆ ರಂಗದ ಮೇಲೆ ತರುವುದು ಕಷ್ಟದ ಕೆಲಸ. ಅದನ್ನು ಪ್ರೇಕ್ಷಕರ ಮುಂದೆ ಯಶಸ್ವಿಯಾಗಿ ತಂದದ್ದು ಜಿ ವಿ ಶಿವಾನಂದ ಅವರು. ಶಿವಾನಂದ ಅವರು ‘ಭ್ರಮೆ’ ಎಂದು ನಾಟಕಕ್ಕೆ ಹೆಸರಿಟ್ಟಿದ್ದರು. ನವೋದಯ ತಂಡ ಪ್ರೇಕ್ಷಕನ ಮನಸ್ಸಿಗೆ ಹತ್ತಿರವಾಗುವಂತೆ ನಾಟಕದಲ್ಲಿ ಕೊಂಚ ಬದಲಾವಣೆಯನ್ನು ಮಾಡಿಕೊಂಡು ದಿ ಸಿಗ್ನಲ್ ಮ್ಯಾನ್ ಹೆಸರಿನಲ್ಲಿ ರಂಗದ ಮೇಲೆ ತಂದರು.

ಇನ್ನೂ ನಾಟಕದಲ್ಲಿ ಮುಖ್ಯ ಪಾತ್ರದಲ್ಲಿ ಪೂರ್ಣಚಂದ್ರ ತೇಜಸ್ವಿ ಸಿಗ್ನಲ್ ಮ್ಯಾನ್ ಆಗಿ ಕಾಣಿಸಿಕೊಂಡರೆ, ಶಂಕರ್ ಅವರು ಸಿಗ್ನಲ್ ಮ್ಯಾನ್ ನ ಕತೆ ಕೇಳುವ ವ್ಯಕ್ತಿಯಾಗಿ ಕಾಣಿಸಿಕೊಂಡರು. ರಂಗಣ್ಣ ಎನ್ನುವ ಮಧ್ಯಮ ವಯಸ್ಕನ ಪಾತ್ರದಲ್ಲಿ ಪೂರ್ಣ ಅವರು ತಮ್ಮ ನೈಜ್ಯ ಅಭಿನಯದಿಂದ ಪಾತ್ರಕ್ಕೆ ಜೀವ ತುಂಬಿದ್ದರು. ಅವರ ಧ್ವನಿಗೆ ಮೈಕ್ ಅವಶ್ಯಕತೆಯೇ ಬೇಕಿರಲಿಲ್ಲ. ಅಷ್ಟು ಸ್ಪಷ್ಟವಾಗಿ ಸಂಭಾಷಣೆ ಪ್ರೇಕ್ಷಕನಿಗೆ ಕೇಳಿಸಿತು. ಶಂಕರ್  ಅವರು ಕೂಡಾ ಸಹಜ ನಟನೆಯಿಂದ ಪ್ರೇಕ್ಷಕರ ಮನಗೆದ್ದರು.

“ದಿ ಸಿಗ್ನಲ್ ಮ್ಯಾನ್” ರಂಗಣ್ಣ, “ಸಿಂಗಲ್ ಮ್ಯಾನ್” ಆಗಿ ಪ್ರೇಕ್ಷಕರನ್ನು ಅವರಿಸಿ ಬಿಡುತ್ತಾನೆ. ರಂಗಣ್ಣ ಪರರ ಮೇಲೆ ತೋರಿಸುವ ಕಾಳಜಿ, ಪ್ರೀತಿ ಕೊನೆಗೆ ತನ್ನ ತ್ಯಾಗ ಪ್ರೇಕ್ಷಕನನ್ನು ಭಾವುಕರನ್ನಾಗಿ ಮಾಡಿಬಿಡುತ್ತದೆ.

ಕೊನೆಯದಾಗಿ ಬೆಳಕಿನ ವಿನ್ಯಾಸದ ಬಗ್ಗೆ ಒಂದೆರಡು ಮಾತು ಇಲ್ಲಿ  ಹೇಳದಿದ್ದರೆ ತಪ್ಪಾಗುತ್ತೆ. ಈ ನಾಟಕದಲ್ಲಿ ಮುಖ್ಯ ಜೀವಾಳು ರೈಲು. ರೈಲು ರಾತ್ರಿ ಸಮಯದಲ್ಲಿ ಹಳಿಯ ಮೇಲೆ ಹೋಗುವಾಗ ಹೊರಗಿನಿಂದ ನೋಡುಗನಿಗೆ ಬೆಳಕು, ಕತ್ತಲು ಹೇಗೆ ಪಲ್ಲಟಗಳು ಕಣ್ಣಿಗೆ ಕಾಣುತ್ತದೆಯೋ… ಹಾಗೆಯೇ ಪ್ರೇಕ್ಷಕನ ಕಣ್ಣಿಗೆ ಕಟ್ಟುವಂತೆ ರೈಲು ಬರುವ ಸಂದರ್ಭದಲ್ಲಿ ಬೆಳಕಿನ ವಿನ್ಯಾಸವನ್ನು ರಘು ನಂದನ್ ಅವರು ಮಾಡಿದ್ದು ನೋಡಿ…ಆಶ್ಚರ್ಯದಿಂದ ಪ್ರೇಕ್ಷಕರು ಅಬ್ಬಬ್ಬಾ…ಎಂದದ್ದು ಸುಳ್ಳಲ್ಲ. ರಂಗದದಲ್ಲಿ ಇಂತಹ ಬೆಳಕಿನ ವಿನ್ಯಾಸ ಪ್ರೇಕ್ಷಕನ ಗಮನ ಸೆಳೆಯುತ್ತವೆ. ರಘು ನಂದನ್ ಅವರ ಕೈಚಳಕಕ್ಕೆ ಶಬ್ಬಾಸ್ ಗಿರಿ ಕೊಡಲೇ ಬೇಕು.

ಒಟ್ಟಾರೆಯಾಗಿ ನವೋದಯ ತಂಡದಿಂದ ಮೂಡಿಬಂದ ‘ದಿ ಸಿಗ್ನಲ್ ಮ್ಯಾನ್’ ನಾಟಕ ಪ್ರೇಕ್ಷಕನ ಗೆದ್ದಿತು. ತಂಡಕ್ಕೆ ಶುಭವಾಗಲಿ…


  • ಶಾಲಿನಿ ಹೂಲಿ ಪ್ರದೀಪ್

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW