‘ತುಸು ಎಚ್ಚರಿಕೆ ಬೇಕು’….ಯಾವುದಕ್ಕೆ ಅನ್ನೋದನ್ನ ಕವಿ ಡಾ. ಲಕ್ಷ್ಮಣ ಕೌಂಟೆ ಅವರು ಬರೆದ ಕವಿತೆಯನ್ನು ಓದಿ…
ತಂತಿಯ ಬಿಗುವು
ಸಡಿಲುಗೊಂಡಿದ್ದರೆ
ಬೆಣೆಯ ತುಸು ತಿರುಗಿಸಿ
ಬಿಗಿಗೊಳಿಸಿದರಾಯಿತು..
ಅಪಸ್ವರ ಹೊಮ್ಮುವುದು
ಅದು ಹೇಗೆ ಸಾಧ್ಯ ಹೇಳು!!
ವೈಣಿಕ ನಾನೇ ನಿನ್ನೆದೆ ವೀಣೆಯ
ಸರಿಗಮ ರಾಗದಲಿ
ಸರಾಗದಿ ನುಡಿಸುವವನು
ಹಿಂದೆಯೇ ಹೇಳಿಕೊಟ್ಟಿರುವೆ
ಬಿಗುಗೊಳಿಸುತ್ತಿರು
ನುಡಿಸುವ ಮೊದಲು ಎಂದು!!
ತಟವಟ ಬಿಗಿಯುವುದು ಬೇಡ
ತಂತು ತುಂಡಾದೀತು
ಒಮ್ಮೆ ತುಂಡಾಯಿತೋ
ಅದನ್ನು ಪುನಃ ಜೋಡಿಸುವುದೆಂತು..
ಜೋಡಿಸಿದರೂ
ನುಡಿಸಿದಾಗಲೊಮ್ಮೆ
ಅಪಸ್ವರವೇ ಹೊಮ್ಮುವುದು..
ತುಸು ಎಚ್ಚರಿಕೆ ಬೇಕು
ಗಾಜಿನಂತಹ ಬದುಕಿಗೆ
ನಿರ್ಲಕ್ಷ್ಯತೆ ಹಾಳು ಮಾಡೀತು
ಕ್ಷಣ ಮೈ ಮರೆತರೂ..!!
- ಡಾ. ಲಕ್ಷ್ಮಣ ಕೌಂಟೆ (ಕವಿ, ಲೇಖಕರು, ಉಪನ್ಯಾಸಕರು) ಕಲಬುರಗಿ.
