‘ಅಪ್ಪನ ಅಂಗಡಿ’ – ಮಂಜಯ್ಯ ದೇವರಮನಿಆ ಕಾಲದಲ್ಲಿ ಮನೆಗಳಲ್ಲಿ ತಿಂಡಿ ಮಾಡುತ್ತಿರಲಿಲ್ಲ. ಜೋಳದ ರೊಟ್ಟಿ, ಕೆಂಪಿಂಡಿ, ಉಳ್ಳಿಕಾಳು ಪಲ್ಯ, ಅಂಬಲಿ ನಿತ್ಯದ ಆಹಾರವಾಗಿದ್ದವು. ಹುಡುಗರು ಅಪ್ಪನ ಅಂಗಡಿಗೆ ಬಂದು ತಮಗೆ ಬೇಕಾದ ತಿಂಡಿಯನ್ನು ಮಾಡಿಸಿಕೊಂಡು ತಿನ್ನುತ್ತಿದ್ದರು. ಅಮ್ಮ ಅವರಿಗೆಲ್ಲ ಚಿಕ್ಕಮ್ಮ ಆಗುತ್ತಿದ್ದಳು.ಹೀಗೆ ಅಪ್ಪನ ಅಂಗಡಿ ಕತೆಯನ್ನು ಲೇಖಕ ಮಂಜಯ್ಯ ದೇವರಮನಿ ಅವರು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ಮುಂದೆ ಓದಿ…

ಅಪ್ಪ ಹೊಸ ಹೊಸ ವಸ್ತುಗಳನ್ನು, ತಿನಿಸುಗಳನ್ನು, ಆಟಿಕೆಗಳನ್ನು, ಯಂತ್ರಗಳನ್ನು ಬೆನ್ನೂರಿನ ಸಂತೆಯಿಂದ ತರುತ್ತಿದ್ದ. ಇವೆಲ್ಲಾ ಊರಿನ ಜನಗಳ ಕುತೂಹಲಕ್ಕೆ ಕಾರಣವಾಗಿದ್ದವು. ಅಪ್ಪನ ಅಂಗಡಿ ಒಂದು ರೀತಿಯಲ್ಲಿ ಮನೋರಂಜನೆಯ ಕೇಂದ್ರವಾಗಿತ್ತು. ಮನೋರಂಜನೆಗೆ ಟಿವಿ, ಸುದ್ದಿ ಸಮಾಚಾರಕ್ಕೆ ನ್ಯೂಸ್ಪೇಪರ್, ಸಂಗೀತಕ್ಕೆ ಟೇಪ್ ರಿಕಾರ್ಡರ್, ತಿಂಡಿ ತಿನಿಸುಗಳಿಗೆ ಹೋಟೆಲ್, ರೋಗ ರುಜಿನಗಳಿಗೆ ಮೆಡಿಕಲ್ ಶಾಪ್ ಹಬ್ಬ-ಹುಣ್ಣಿಮೆಗಳಿಗೆ ದಿನಸಿ, ಒಟ್ಟಿನಲ್ಲಿ ಮದುವೆ ಮುಂಜಿಯಿಂದ ತಿಥಿ ಕಾರ್ಯಗಳವರೆಗೂ ದಿನಸಿ ಕೊಡುತ್ತಿದ್ದ. ‘ಎಂಟೆತ್ತಿನ ಕಮತಕ್ಕಿಂತ ಕುಂಟು ಅಂಗಡಿ ಲೇಸು’ ಎಂಬ ಗಾದೆ ಮಾತಿನಂತೆ ಜಮೀನುದಾರರು ಕೂಡಾ ಅಪ್ಪನ ಅಂಗಡಿಯಲ್ಲಿ ಉದ್ರಿ ಮಾಡಿದ್ದರು.

ಊರಲ್ಲಿ ಎಂಥ ಜಮೀನ್ದಾರನೆಂದರು ಸುಗ್ಗಿ ಮುಂದೆ ಒಂದು ರೂಪಾಯಿ ಇರುತ್ತಿರಲಿಲ್ಲ. ಅವರೇನಿದ್ದರೂ ಪೀಕು ಬಂದಮೇಲೆ ದುಡ್ಡಿನ ಮುಖ ನೋಡಬೇಕಾಗಿತ್ತು. ಆಗಿನ ಪೀಕುಗಳಾದರೂ ಏನು ಗೊತ್ತಾ… ಅವೇ ನವಣೆ ಸಾಮೆ, ರಾಗಿ, ಜೋಳ, ಶೇಂಗಾ. ಹೆಚ್ಚೆಂದರೆ ರೊಕ್ಕದ ಪೀಕು ಹತ್ತಿ. ಹತ್ತಿ ಬೆಳೆದಾಗ ಮಾತ್ರ ಕೈಯಲ್ಲಿ ಸ್ವಲ್ಪ ದುಡ್ಡುಡಾತ್ತಿದ್ದವು. ಉಳಿದಂತೆ ಅಪ್ಪನ ಅಂಗಡಿಯೇ ಗತಿ. ವರ್ಷಕ್ಕೊಮ್ಮೆ ಅಪ್ಪನ ಉದ್ರಿ ಮುಟ್ಟಿಸಿದರೆ ಆಯಿತು.

ಫೋಟೋ ಕೃಪೆ : google

ಇಂತಹ ವೇಳೆಯಲ್ಲಿ ಮಗಳು ಮೈನೆರೆತರೆ, ಕಂಕಣ ಕೂಡಿ ಬಂದರೆ ಎಂತಹ ಜಮೀನ್ದಾರನು ಕೂಡ ಅಪ್ಪನ ಬಳಿ ಉದ್ರಿ ಕೇಳಬೇಕಾಗಿತ್ತು. ಅಪ್ಪ ಕೂಡ ಊರಿಗೆಲ್ಲ ಉದ್ರಿ ಕೊಟ್ಟು ಕೊಟ್ಟು ಸೋತಿರುತ್ತಿದ್ದ. ವ್ಯವಹಾರ ಕುತ್ರಾಸ್ಸು ಆಗಿರುತ್ತಿತ್ತು. ಆಗ ತಾಯಂದಿರು ಅಮ್ಮನ ಬಳಿ ಬಂದು ‘ಮಗಳ ಲಗ್ನ ಕೂಡಿಬಂದೇತಿ ಗಿರಿಜವ್ವ ದೊಡ್ಡ ಮನಸು ಮಾಡು… ಜಗದಣ್ಣಗೆ ಕೊಡೋಕೆ ಹೇಳು ಪೀಕು ಬರುತ್ತಲೇ ಮುಟ್ಟಿಸಿ ಬಿಡ್ತಿವಿ’ ಅಂತಾ ಕೇಳಿಕೊಳ್ಳುತ್ತಿದ್ದರು. ಅಮ್ಮನ ಮನಸು ಕರಗಿ ಅಪ್ಪನನ್ನು ಒಪ್ಪಿಸುತ್ತಿದ್ದಳು. ಅಮ್ಮನ ಮಾತೃ ಹೃದಯದಿಂದ ಎಷ್ಟೋ ಹೆಣ್ಣು ಮಕ್ಕಳು ಲಗ್ನವಾಗಿದೆ.

ಮದುವಿಯಾಗಿ ಗಂಡನ ಮನೆಗೆ ಹೋದ ಹೆಣ್ಣುಮಕ್ಕಳು ಪಂಚಮಿ ಇಲ್ಲವೇ ಶಿವರಾತ್ರಿಗೆ ತವರಿಗೆ ಬಂದ್ರೆ ಮೊದಲು ಗಿರಿಜಮ್ಮನ ಮಾತಾಡಿಸಿಕೊಂಡು ಬರ್ತೀವಿ ಅಂತಾ ಅವ್ವನ ಬಳಿ ಬರ್ತಿದ್ರು. ಕಷ್ಟ ಸುಖ ಮಾತಾಡಿ ಚಾ ಮಂಡಕ್ಕಿ ತಿಂದು ಹುಡಿ ತುಂಬಿಸಿಗೆಂದು ಕಾಲು ಬಿದ್ದು ಹೋಗತ್ತಿದ್ದರು.

ಅಪ್ಪ ವ್ಯವಹಾರದಲ್ಲಿ ನಿಪುಣ. ತನ್ನ ಓದಿನಲ್ಲಿ ಎಂದೂ ವ್ಯವಹಾರ ಅಧ್ಯಯನ ಓದಿಲ್ಲದಿದ್ದರೂ ವ್ಯವಹಾರ ಕಲೆ ಕಲಿತಿದ್ದ. ಅಂಗಡಿಯಲ್ಲಿ ಯಜಮಾನ ಮನುಷ್ಯರು ಟಿವಿ ನೋಡುತ್ತಾ ಕೂತರೆ ವ್ಯಾಪಾರವಾಗುವುದಿಲ್ಲ ಎಂಬುದನ್ನು ಅರಿತಿದ್ದ ಅಪ್ಪ ವಯಸ್ಸಿನ ಹುಡುಗರ ಮನ ಗೆದ್ದಿದ್ದ. ಯಜಮಾನ ಮನುಷ್ಯರು ಹೆಚ್ಚೆಂದರೆ ಅಡಿಕೆ ಎಲೆ ತಂಬಾಕು ನಾಕು ಬೀಡಿ ಇಷ್ಟೇ ತೆಗೆದುಕೊಳ್ಳುತ್ತಿದ್ದರು. ಹರೆಯದ ಹುಡುಗರಾದರೆ ಕೆಜಿ ಅವಲಕ್ಕಿ, ಕೆಜಿ ಮೈಸೂರುಪಾಕು, ಕೆಜಿ ಕೊಬ್ಬರಿಚಿನ್ನಿ ಬೇಕಾದದ್ದನ್ನು ಕೇಳಿ ಮಾಡಿಸಿಕೊಂಡು ತಿನ್ನುತ್ತಿದ್ದರು. ಆ ಕಾಲದಲ್ಲಿ ಮನೆಗಳಲ್ಲಿ ತಿಂಡಿ ಮಾಡುತ್ತಿರಲಿಲ್ಲ. ಜೋಳದ ರೊಟ್ಟಿ, ಕೆಂಪಿಂಡಿ, ಉಳ್ಳಿಕಾಳು ಪಲ್ಯ, ಅಂಬಲಿ ನಿತ್ಯದ ಆಹಾರವಾಗಿದ್ದವು. ದಿನ ಒಂದೇ ರೀತಿಯ ಕೂಳನ್ನು ತಿಂದು ತಿಂದು ಹುಡುಗರ ಬಾಯಿಗಳು ಜಡ್ಡುಗಟ್ಟಿಹೋಗಿದ್ದವು. ಉಪ್ಪಿಟ್ಟು, ಅವಲಕ್ಕಿ, ವಡೆ, ಬಜ್ಜಿ ಇವುಗಳು ನೌಕರಸ್ಥರೂ ಮತ್ತು ಪಟ್ಟಣಿಗರು ಮಾತ್ರ ಮಾಡಿಕೊಂಡು ತಿನ್ನುವ ಖಾದ್ಯಗಳೆಂದು ನಂಬಿದ್ದ ಕಾಲವದು. ಮನೆಯಲ್ಲಿ ಕೇಳಿದರೆ ಮಾಡಿಕೊಡುತ್ತಿರಲಿಲ್ಲ. ಹಳ್ಳಿಗಳಲ್ಲಿ ಇವುಗಳನ್ನು ಮಾಡಬೇಕಾದರೆ ಜೆಲ್ಲಿ ಪುಟ್ಟಿಗಳೇ ಬೇಕಿತ್ತು. ನಮ್ಮ ಹಳ್ಳಿ ಜನ ಏನೇ ತಿಂದರೂ ಹೊಟ್ಟೆ ತುಂಬಾ ತಿನ್ನುವ ಚಾಳಿ ಅಲ್ಲವೇ… ಹಾಗಾಗಿ ಇವುಗಳನ್ನೆಲ್ಲಾ ವರ್ಷದಲ್ಲಿ ಒಮ್ಮೆ ಇಲ್ಲವೇ ಎರಡು ಬಾರಿ ಮಾತ್ರ ಮಾಡುತ್ತಿದ್ದರು. ಆದ್ದರಿಂದ ಹುಡುಗರು ಅಪ್ಪನ ಅಂಗಡಿಗೆ ಬಂದು ತಮಗೆ ಬೇಕಾದ ತಿಂಡಿಯನ್ನು ಮಾಡಿಸಿಕೊಂಡು ತಿನ್ನುತ್ತಿದ್ದರು. ಅಮ್ಮ ಅವರಿಗೆಲ್ಲ ಚಿಕ್ಕಮ್ಮ ಆಗುತ್ತಿದ್ದಳು.

ಫೋಟೋ ಕೃಪೆ : google

ತನ್ನ ಮಕ್ಕಳಂತೆ ಎಲ್ಲರಿಗೂ ರುಚಿ ರುಚಿಯಾಗಿ ಮಾಡಿಕೊಡುತ್ತಿದ್ದಳು. ತಮಗಿಷ್ಟವಾದುದನ್ನು ತಿಂದು ಉದ್ರಿ ಲೆಕ್ಕ ಹಚ್ಚುತ್ತಿದ್ದರು. ಈಗಿನಂತೆ ಅಂದಿನ ಕಾಲದ ಹುಡುಗರಿಗೆ ಪಾಕೆಟ್ ಮನಿ ಇರುತ್ತಿರಲಿಲ್ಲ. ಚಿಕ್ಕವರು ದೊಡ್ಡವರನ್ನ ದುಡ್ಡು ಕೇಳುವಂತಿರಲಿಲ್ಲ. ದುಡ್ಡು ಕೇಳಬಾರದು ಎನ್ನುವ ಒಂದು ಗ್ರಾಮ್ಯ ಸಂಸ್ಕೃತಿ ಜಾರಿಯಲ್ಲಿತ್ತು. ‘ಮನೆಯಲ್ಲಿ ತಿಂದು ಉಂಡು ಮತ್ಯಾಕ ದುಡ್ಡು’ ಎಂದು ಪ್ರಶ್ನಿಸುತ್ತಿದ್ದರು. ದುಡ್ಡು ಕೇಳುವುದು ಕೂಡ ಒಂದು ಅಪರಾಧವೆಂಬಂತೆ ಭಾವಿಸಲಾಗುತ್ತಿತ್ತು. ಕೈಯಲ್ಲಿ ದುಡ್ಡಾಡಿದರೆ ಹುಡುಗರು ಕೆಟ್ಟು ಹೋಗುತ್ತಾರೆ ಎಂಬುದು ಹಿರಿಯರ ಲೆಕ್ಕಾಚಾರ. ಆದ್ದರಿಂದ ಯಾವ ಹುಡುಗರು ಹಿರಿಯರ ಬಳಿ ದುಡ್ಡು ಕೇಳಲು ಮುಂದೆ ಬರುತ್ತಿರಲಿಲ್ಲ. ಹಾಗಾದರೆ ಉದ್ರಿಯನ್ನು ಹೇಗೆ ತೀರಿಸುತ್ತಿದ್ದರು ಎಂಬುದು ನಿಮ್ಮ ಪ್ರಶ್ನೆ… ಹೇಳುತ್ತೇನೆ ಕೇಳಿ… ತಮ್ಮ ಹೊಲದಲ್ಲೇ ಬೆಳೆದ ಹತ್ತಿ ಬಿಳಿಜೋಳ ಮೆಣಸಿನಕಾಯಿಯನ್ನು ರಾತ್ರೋ ರಾತ್ರಿ ಕಣದಿಂದ ಕದ್ದು ಅಪ್ಪನ ಅಂಗಡಿಗೆ ಹಾಕುತ್ತಿದ್ದರು. ಅಂಗಡಿಯ ವ್ಯಾಪಾರ ಹಗಲಿಗಿಂತ ರಾತ್ರಿಯೇ ಚೆನ್ನಾಗಿ ನೆಡೆಯುತ್ತಿತ್ತು. ಇದು ತಪ್ಪಲ್ಲವೇ ಎಂಬ ಪ್ರಶ್ನೆ ಮೂಡುತ್ತಿತ್ತಾದರೂ ಅವರೇನು ಬೇರೆಯವರ ಮನೆಯಿಂದ, ಹೊಲದಿಂದ, ಕಣದಿಂದ ಕದ್ದು ತರುತ್ತಿರಲಿಲ್ಲವಲ್ಲ…! ತಮ್ಮ ಮನೆಯಲ್ಲೇ ಕೈ ಮಾತಿ ಮಾಡುತ್ತಿದ್ದರು. ಆದರೂ ಹುಡುಗರು ಮಾಡುವುದು ತಪ್ಪೆ! ಖರ್ಚಿಗೆ ಒಂದಿಷ್ಟು ದುಡ್ಡು ಕೊಟ್ಟಿದ್ದಾರೆ. ಹೀಗೀಕೆ ಮಾಡುತ್ತಿದ್ದರು ಅಲ್ಲವೇ? ಇದೆಲ್ಲಾ ಗೊತ್ತಿದ್ದ ತಂದೆ-ತಾಯಿಗಳು ಕೂಡಾ ಕೆಲವೊಮ್ಮೆ ಸುಮ್ಮನಿರುತ್ತಿದ್ದರು. ಕೆಲವು ಹುಡುಗರು ಬೇರೆಯವರ ಹೊಲದಿಂದ ಕಣದಿಂದ ಲೂಟಿ ಮಾಡುತ್ತಿದ್ದರು. ಇವರಲ್ಲಿಯು ಕೆಲವರು ತೈಮೋರರು ಇದ್ದರು. ಕದ್ದು ಸಿಕ್ಕಿಹಾಕಿಕೊಂಡು ದಂಡ ತೆರುತ್ತಿದ್ದರು. ಬಸವಣ್ಣ ದೇವರಗುಡಿ ವಿಚಾರಣಾ ನ್ಯಾಯಾಲಯವಾಗಿರುತ್ತಿತ್ತು. ತೈಮೋರರಿಗೆ ತಕ್ಕ ಶಿಕ್ಷೆಯಾಗುತ್ತಿತ್ತು. ಆದರೆ ಅಪ್ಪನನ್ನು ಮಾತ್ರ ಸಾಕ್ಷಿಗೆ ಕರೆಯುತ್ತಿರಲಿಲ್ಲ. ತಮ್ಮ ಮಕ್ಕಳ ಅಭಿಲಾಷೆಗೆ ಇದ್ದೊಂದು ತಾಣವಾದ ಅಪ್ಪನ ಅಂಗಡಿಯನ್ನು ಅವರು ಗುರಿ ಮಾಡುತ್ತಿರಲಿಲ್ಲ. ‘ತಾವು ಕೂಡಾ ಹರೆಯದಲ್ಲಿ ಅದೆ ಕಸುಬುನ್ನು ಮಾಡಿದವರಲ್ಲವೇ’ ಎಂದು ಹಿರಿಯರು ಸುಮ್ಮನಾಗುತ್ತಿದ್ದರು.ಊರಿನ ಹಿರಿಯರು, ಪಂಚರು, ಹಿರಿತಲೆಗಳು ಹೆಚ್ಚು ಹೊತ್ತು ಟಿವಿ ಮುಂದೆ ಅಂಗಡಿಯಲ್ಲಿ ಕುಳಿತಿರುವುದರಿಂದ ಅಪ್ಪನ ವ್ಯಾಪಾರಕ್ಕೆ ಕತ್ರಿ ಬೀಳುತ್ತಿತ್ತು. ಆದ್ದರಿಂದ ಅಪ್ಪ ಒಂದು ಉಪಾಯವನ್ನು ಮಾಡುತ್ತಿದ್ದ. ನೀರು ಕಡೆ ಹೋಗಿ ಬರುತ್ತೇನೆ ಅಂತ ಸುಳ್ಳು ಹೇಳಿ ಫೀಸು ತೆಗೆದು ಬರುತ್ತಿದ್ದ. “ಅಯ್ಯೋ ಕರೆಂಟು ಹೋತು ನಡ್ರಿ ಇನ್ನು ಏನಿದ್ರೂ ಸಂಜಿಮುಂದ ದೀಪ ಮುಡಿಸೋತ್ತಿಗೆ ಬರೋದು” ಅಂತೇಳಿ ಗೆದ್ದಿಲು ಹತ್ತಿದ್ದ ತಮ್ಮ ಕುಂಡಿಗಳನ್ನು ತವಲ್ಲಿನಿಂದ ಕೊಡವಿಕೊಂಡು ಮನೆಕಡೆ ಹೋಗುತ್ತಿದ್ದರು. ಮನೆಗೆ ಹೋಗಿ ನೋಡಿದ್ರೆ ಕರೆಂಟು ಇರುತ್ತಿತ್ತು ‘ಹಾಳಾದ ಸೊಳೆಮಗ ಯಾವಾಗ ತೆಗಿತಾನ ಯಾವಾಗ ಹಾಕ್ತಾನ ಒಂದು ತಿಳಿಯೋಲ್ಲ. ಮತ್ತಿನ್ನೇನು ಹೋಗೋದು ತ್ಯೆಗಿ” ಎಂದು ಕೆಲಸಕ್ಕೆ ಕೈ ಹಚ್ಚುತ್ತಿದ್ದರು.

ಇದನ್ನೇ ಕಾಯುತ್ತಿದ್ದ ಹುಡುಗರು ಅಪ್ಪನ ಅಂಗಡಿಗೆ ಲಗ್ಗೆ ಹಾಕುತ್ತಿದ್ದರು. ಅಪ್ಪ ಅಂಗಡಿಯಲ್ಲಿ ಮಾಯಾ ಕನ್ನಡಿಯೊಂದನ್ನು ನೇತುಹಾಕಿದ್ದ. ಇದು ಹುಡುಗರಿಗೆ ಹೊರಗಿನಿಂದ ಬರುವವರನ್ನು ತೋರಿಸುತ್ತಿತ್ತು. ಬೀಡಿ, ಸಿಗರೇಟು, ಗುಟ್ಕಾ ಕೆಟ್ಟ ಚಟ ಮಾಡುವಾಗ ಯಾರಾದರೂ ಹಿರಿಯರು ಪಟ್ಟನೆ ಬಂದರೆ ಅಡಗಿಕೊಳ್ಳಲು ನೇರವಾಗುತ್ತಿತ್ತು.


  • ಮಂಜಯ್ಯ ದೇವರಮನಿ,  (ವೃತ್ತಿಯಲ್ಲಿ ಸರಕಾರಿ ಶಾಲಾ ಶಿಕ್ಷಕ. “ಕರಿಜಾಲಿ ಮರ” ಪ್ರಕಟಿತ ಕಥಾಸಂಕಲನ. ಚಾರಣ ಮತ್ತು ಚಿತ್ರಕಲೆ ನೆಚ್ಚಿನ ಹವ್ಯಾಸಗಳು) ಸಂಗಾಪುರ.

0 0 votes
Article Rating

Leave a Reply

0 Comments
Inline Feedbacks
View all comments
0
Would love your thoughts, please comment.x
()
x
%d bloggers like this:
Aakruti Kannada

FREE
VIEW