ಮಲೆನಾಡಿಗರಿಗೆ ಮರಗಳ ಬೆಲೆ ತಿಳಿಯುವುದು ಯಾವಾಗ…?‘ಶಾಲೆಯ ಆವರಣದಲ್ಲಿ ಸಂತೋಷದಿಂದ ತಂದು ನೆಟ್ಟ ಹಣ್ಣಿನ ಗಿಡವನ್ನು ನಿರ್ದಾಕ್ಷಿಣ್ಯವಾಗಿ ಕೂಲಿ ಕಾರ್ಮಿಕನೊಬ್ಬ ಕಿತ್ತು ಎಸೆದಾಗ ಮನಸ್ಸಿಗೆ ಬೇಸರವಾಯಿತು’. – ರಾಘವೇಂದ್ರ ಸಿ. ಗಿಡ ಯಾವುದು ? ಗಿಡಕ್ಕೆ ಏನಾಯಿತು ಮುಂದೆ ಓದಿ…

2021 ಏಪ್ರಿಲ್ 24 ರಂದು ತೀರ್ಥಹಳ್ಳಿಯ ಸಿಬಿನಕೆರೆ ಶಾಲೆಯ ಮಾರ್ಗವಾಗಿ ಚಲಿಸುತ್ತಿರುವಾಗ ಆ ಶಾಲೆಯ ಕಾಂಪೌಂಡಿನ ಗೋಡೆಯ ಮೇಲೆ ಸುಂದರವಾಗಿ ತೀರ್ಥಹಳ್ಳಿ ಸುತ್ತಮುತ್ತ ಇರುವ ಪ್ರವಾಸಿ ತಾಣಗಳ ಚಿತ್ರಗಳನ್ನು ಜಗದೀಶ್ ಶೀಲವಂತಯವರು ಅದ್ಭುತವಾಗಿ ಬರೆಯುತ್ತಿದ್ದರು.

(ತೀರ್ಥಳ್ಳಿ ಮುಖ್ಯ ಬಸ್ ನಿಲ್ದಾಣದ ಕಂಬಗಳ ಮೇಲೆ ಈ ರೀತಿಯ ಚಿತ್ರಕಲೆಯನ್ನು ಬಿಡಿಸಬೇಕು ಎನ್ನುವ ನನದೊಂದು ಕಲ್ಪನೆ ಬಹಳ ವರ್ಷಗಳಿಂದ ಇತ್ತು. ಆದರೆ ಕಾರ್ಯರೂಪಕ್ಕೆ ಬಂದಿರಲಿಲ್ಲ). ಅದನ್ನ ಇವರು ಶಾಲೆಯ ಕಾಂಪೌಂಡಿನ ಮೇಲೆ ಬರಿಯುತ್ತಿರುವುದನ್ನು ಕಂಡು ಬಹಳ ಸಂತೋಷವಾಯಿತು.

ಅವರನ್ನು ಹೋಗಿ ಮಾತನಾಡಿಸಿ ಪ್ರಶಂಸಿಸಿದೆ. ಅಲ್ಲಿರುವ ಮಮತಾ ಟೀಚರ್ ಪರಿಸರದ ಬಗ್ಗೆ ಬಹಳ ಆಸಕ್ತಿ ಹಾಗೂ ಉತ್ಸುಕರಾಗಿದ್ದರು .ಶಾಲೆಯ ಕಾಂಪೌಂಡ್ ನ ಒಳಗೆ ಖಾಲಿ ಜಾಗವನ್ನು ಬಿಟ್ಟಿದ್ದರು. ನಾನು ಅಲ್ಲಿ ಏನು ಮಾಡುತ್ತೀರಾ? ಅಂತ ಕೇಳಿದಾಗ ಅಲ್ಲಿ ಕೆಲವೊಂದು ಗಿಡಗಳನ್ನು ನೆಡಬೇಕೆಂಬ ಆಸೆ ಇದೆ ಅಂತ ಹೇಳಿದರು.
ಅವರ ಆಸಕ್ತಿ ಕಂಡು ಬಹಳ ಸಂತೋಷವಾಯಿತು. ಯಾವ ರೀತಿ ಗಿಡಗಳು ಬೇಕು, ಉದ್ದೇಶವೇನು ಎಂದು ಕೇಳಿದೆ. ನಮಗೆ ಶಾಲೆಯ ಅಕ್ಕ ಪಕ್ಕಗಳಲ್ಲಿ ಹಕ್ಕಿಗಳು ಬಂದು ಕೂರಬೇಕು. ಮಕ್ಕಳು ಅದನ್ನು ನೋಡಿ ಖುಷಿಪಡಬೇಕು. ಹಣ್ಣಿನ ಮರಗಳಾದರೆ ಬಹಳ ಒಳ್ಳೆಯದು ಎಂದು ತಿಳಿಸಿದರು.

ಅದಾಗಲೇ ನಾನು ಸಾಧ್ಯವಾದಷ್ಟು ಶಾಲೆಗಳ ಆವರಣಗಳಲ್ಲಿ ಹಣ್ಣಿನ ಮರಗಳನ್ನು ನೆಡಬೇಕೆಂಬ ಇಚ್ಛೆಯಿಂದ ಕೆಲವು ಶಾಲೆಯ ಸುತ್ತಮುತ್ತಲು ಹಣ್ಣಿನ ಮರಗಳನ್ನು ನೆಟ್ಟು ಬರುತ್ತಿದ್ದೆ. ಇವರ ಮಾತನ್ನು ಕೇಳಿದ ತಕ್ಷಣ ತಡ ಮಾಡದೆ ನರ್ಸರಿಗೆ ಹೋಗಿ ಐದು ಗಸಗಸೆ ಅಥವಾ ಚೆರ್ರಿ ಹಾಗೂ ಒಂದು ಬಾದಾಮಿ ಗಿಡವನ್ನು ತೆಗೆದುಕೊಂಡು ಬಂದೆ ( ದ್ವಾರಕಾ ಹೋಟೆಲ್ ಹತ್ತಿರ ಇರುವ ಮಂಜುಶ್ರೀ ನರ್ಸರಿಯ ಬಾಬಣ್ಣ ಮೊಹಮ್ಮದ್ ಬಾಬು ನನಗಾಗಿ ನನ್ನ ಉದ್ದೇಶಕ್ಕಾಗಿ ಗಿಡಗಳಿಗೆ ಹಣ ನೀಡಿದರು ಸಹ ತೆಗೆದುಕೊಳ್ಳಲಿಲ್ಲ) ಖುದ್ದಾಗಿ ನಾನೇ ಶಾಲೆಯ ಆವರಣದಲ್ಲಿ ನೆಟ್ಟು ಬಂದಾಗ ಏನೋ ಒಂದು ಆತ್ಮತೃಪ್ತಿ, ಸಂತೋಷ, ಉಲ್ಲಾಸ ಮನಸ್ಸಿಗೆ ನೀಡಿತ್ತು ಮಮತಾ ಟೀಚರ್ ಕೂಡ ಸಂತೋಷದಿಂದ ಈ ಕಾರ್ಯದ ಫೋಟೋಗಳನ್ನು ತೆಗೆದಿದ್ದರು.

ನಂತರ ಅವರುಗಳ ಪ್ರೀತಿ ಆರೈಕೆಯಿಂದ ಆ ಗಿಡವು ಕೇವಲ ಒಂದು ವರ್ಷದಲ್ಲಿ ಹಣ್ಣು ಬಿಡುವಷ್ಟು ದೊಡ್ಡದಾಗಿ ಬೆಳೆದಿತ್ತು ಶಾಲೆಯ ಕಾಂಪೌಂಡ್ ಗಿಂತ ಎತ್ತರವಾಗಿ ಬೆಳೆದು ಹೊರಗಿನಿಂದ ನೋಡುವುದಕ್ಕೆ ತುಂಬಾ ಸಂತೋಷವಾಗುತ್ತಿತ್ತು ಶಾಲೆಯ ಮಕ್ಕಳು ಅದರಲ್ಲಿ ಬಿಡುವ ಹಣ್ಣನ್ನು ತಿನ್ನುವಾಗ ಪಡುವ ಖುಷಿಯನ್ನು ಮಮತಾ ಟೀಚರ್ ಹೇಳಿ ಬಹಳ ಖುಷಿ ಪಡುತ್ತಿದ್ದರು.

ಹಾಗೆಯೇ ಆ ಮಕ್ಕಳು ಗಿಡದ ಕೊಂಬೆಗಳನ್ನು ಎಳೆದು ಹಣ್ಣನ್ನು ಕೀಳುವಾಗ ಜಾಗರೂಕತೆಯಿಂದ ಹಣ್ಣನ್ನು ಕೀಳಬೇಕು ಗಿಡಗಳಿಗೂ ಸಹ ನೋವು ಆಗುತ್ತದೆ ಎನ್ನುವ ಬುದ್ಧಿ ಮಾತನ್ನು ಹೇಳುತ್ತಿದ್ದರು.

ಇಷ್ಟೊಂದು ಪ್ರೀತಿಯಿಂದ ಕಾಳಜಿ ವಹಿಸಿ ಗಿಡಗಳನ್ನು ನೋಡಿಕೊಳ್ಳುವವರು ಇರುವಂತೆಯೇ ದಿನಾಂಕ 16 ಜುಲೈ 2022 ಶನಿವಾರದಂದು ರಂದು ಅಲ್ಲಿ ಕೂಲಿ ಕೆಲಸ ಮಾಡುವ ವ್ಯಕ್ತಿಯ ಅಚಾತುರ್ಯದಿಂದ ಬೆಳೆದು ನಿಂತು ಫಲ ಕೊಡುತ್ತಿದ್ದ ಗಿಡಗಳನ್ನು ಬುಡ ಸಮೇತ ಕಡೆದು ಹಾಕಿದ್ದನ್ನು ಕಂಡು ಏನು ಹೇಳಬೇಕು ಎಂದು ತೋಚಲೇ ಇಲ್ಲ.

ಮಮತಾ ಟೀಚರಿಗೆ ಫೋನ್ ಮಾಡಿ ಕೇಳಿದಾಗ ಅವರಿಗೆ ಈ ಬಗ್ಗೆ ಮಾಹಿತಿಯೇ ಇರಲಿಲ್ಲ. ಅವರು ನಂಬುವ ಪರಿಸ್ಥಿತಿಯಲ್ಲೂ ಇರಲಿಲ್ಲ. ನಾನೇ ಫೋಟೋಗಳನ್ನು ಕಳಿಸಿದ ನಂತರ ಅವರು ನಂಬಬೇಕಾಗಿ ಬಂತು. ಕೂಡಲೇ ಶಾಲೆಯ ಮುಖ್ಯ ಉಪಾಧ್ಯಾಯರ ಹತ್ತಿರ ಪ್ರಶ್ನಿಸಿದ್ದಾರೆ. ಅವರಿಂದ ತಿಳಿದು ಬಂದಿದ್ದೇನೆಂದರೆ ಕಾಂಪೌಂಡಿನ ಹೊರಗೆ ಗಿಡಗಳನ್ನು ಸವರಲು ಹೇಳಿದ್ದನ್ನು ಸರಿಯಾಗಿ ಅರ್ಥಮಾಡಿಕೊಳ್ಳದೆ ಬೆಳೆದು ನಿಂತ ಅಷ್ಟು ಗಿಡಗಳನ್ನು ಕಡೆದು ಹಾಕಿ ಬಿಟ್ಟಿದ್ದಾನೆ. ಇದರಿಂದ ಎಲ್ಲರಿಗೂ ಬಹಳ ದುಃಖವಾಗುತ್ತಿದೆ. ನನಗಂತೂ ಪ್ರತಿದಿನ ಆ ರಸ್ತೆಯಲ್ಲಿ ಹೋಗುವಾಗ ಆ ಗಿಡಗಳನ್ನು ನೋಡುತ್ತಾ ಅದೇನೋ ಸ್ಪೂರ್ತಿಯನ್ನು ಪಡೆದ ಅನುಭವ ನೀಡುತ್ತಿತ್ತು. ಇನ್ನಷ್ಟು ಈ ರೀತಿಯ ಕಾರ್ಯಗಳನ್ನು ಮಾಡಲು ಉತ್ತೇಜನ ನೀಡುತ್ತಿತ್ತು.

ಅದೇ ಸ್ಕೂಲಿನಲ್ಲಿ ಇನ್ನಷ್ಟು ಹಣ್ಣಿನ ಗಿಡಗಳನ್ನು ನೆಡುವ ಆಸೆಯಿಂದ ಕೆಲವು ಗಿಡಗಳನ್ನು ಸಹ ತಂದು ಇಟ್ಟಿದ್ದೆ. ಆದರೆ ಈ ಘಟನೆಯಿಂದ ಬಹಳ ದುಃಖವಾಗುತ್ತಿದೆ. ನಮ್ಮ ಕೈಯಲ್ಲಿ ಒಂದು ಗಿಡವನ್ನು ಸಹ ನೆಡಲು ಸಾಧ್ಯವಿಲ್ಲ. ಆದರೆ ನೂರಾರು ಗಿಡಗಳನ್ನು, ಮರಗಳನ್ನು ಯಾವ ದಾಕ್ಷಣ್ಯವು ಇಲ್ಲದೆ ಕಡಿದು ಹಾಕುವ ಮನಸ್ಥಿತಿ ನಮಗೆ ಬಂದಿದೆ ಎಂದರೆ ಇದೆಂಥ ದೌರ್ಭಾಗ್ಯ ಹಾಗೂ ದುರಂತ.

ಇಲ್ಲಿ ನಾನು ಮಾಡಿದೆ ಅಂತ ಹೇಳುವ ಉದ್ದೇಶಕ್ಕಿಂತ ಮಾಡಿದ ಒಂದು ಒಳ್ಳೆಯ ಕೆಲಸ ಹಾಳಾಯಿತಲ್ಲ ಎನ್ನುವ ನೋವು ಹೆಚ್ಚಾಗಿ ಇಲ್ಲಿ ವ್ಯಕ್ತಪಡಿಸಿಕೊಂಡಿದ್ದೇನೆ.
ಇತ್ತೀಚೆಗೆ ಮಲೆನಾಡಿಗರಿಗೆ ಗಿಡಮರಗಳ ಬಗ್ಗೆ ಯಾಕೆ ಇಷ್ಟೊಂದು ಕ್ರೂರತನ ಗೊತ್ತಾಗುತ್ತಿಲ್ಲ. ಕರೋನ ಸಮಯದಲ್ಲಿ ಆಮ್ಲಜನಕವನ್ನು ದುಡ್ಡಿಗಾಗಿ ಕೊಂಡುಕೊಳ್ಳುವ ಪರಿಸ್ಥಿತಿ ಬಂದಿದ್ದರೂ ಸಹ ಆಮ್ಲಜನಕವನ್ನು ನೀಡುವ ಮರ ಗಿಡಗಳನ್ನು ಯಾಕೆ ಕಡಿಯುತ್ತಿದ್ದೇವೆ ಅರ್ಥವಾಗುತ್ತಿಲ್ಲ.

ಕೊನೆಯದಾಗಿ ಇಂತಹ ಅದೆಷ್ಟೇ ತೊಂದರೆಗಳು ಬಂದರೂ ಸಹ ಇದರ ಎರಡರಷ್ಟು ಗಿಡಗಳನ್ನು ನೆಡಬೇಕು ಎನ್ನುವ ಮನಸ್ಥಿತಿ ನಮ್ಮಲ್ಲಿ ಹುಟ್ಟುತ್ತಿದೆ. ಜೊತೆಗೆ ಮಲೆನಾಡಿಗರಿಗೆ ಮರ ಗಿಡಗಳ ಅರಿವು, ಉಪಯೋಗ ಮೂಡಿಸುವ ಪ್ರಯತ್ನ ಕೂಡ ಆಗಬೇಕಾಗಿದೆ.


  • ರಾಘವೇಂದ್ರ ಸಿ  (ಗೋಸಿರಿ ಪಂಚಗವ್ಯ ಹಾಗೂ ಸಾವಯವ ಉತ್ಪನ್ನ ಅಂಗಡಿ ಮಾಲೀಕರು, ಗೋಸಿರಿ ಸೇವಾ ಟ್ರಸ್ಟ್ ತಂಡದ ಆಯೋಜಕರು, ಮುಂದಿನ ದಿನಗಳಲ್ಲಿ ಗೋ ಸಂಪತ್ತನ್ನು ಈ ಟ್ರಸ್ಟ್ ಮೂಲಕ ಒಂದು ಮಾದರಿ ಗೋಶಾಲೆಯನ್ನು ನಿರ್ಮಿಸುವ ಮಹತ್ವಕಾಂಕ್ಷೆಯನ್ನು ಹೊಂದಿರುವ ಯುವ ಸಮಾಜಕಾರ್ಯಕರ್ತರು) ತೀರ್ಥಹಳ್ಳಿ.

0 0 votes
Article Rating

Leave a Reply

0 Comments
Inline Feedbacks
View all comments
0
Would love your thoughts, please comment.x
()
x
%d bloggers like this:
Aakruti Kannada

FREE
VIEW