ನೀನೇ ನೀನಲ್ಲ…! – ಎ.ಎನ್.ರಮೇಶ್ ಗುಬ್ಬಿ“ಇದು ನಾನೆಂಬ ‘ನಾನು’ ನಿತ್ಯವೂ ನನ್ನೊಳಗೇ ನಾನೇ ಹೇಳಿಕೊಳ್ಳಬೇಕಾಗಿರುವ ಕವಿತೆ. ನನ್ನೊಳಗಿನ ನಾನೇ ಅನುದಿನ ಅನುಕ್ಷಣ ಹಾಡಿಕೊಳ್ಳಬೇಕಾಗಿರುವ ನಿರ್ಭಾವುಕ ಭಾವಗೀತೆ. ಇಲ್ಲಿ ನಾನೆಂದರೆ ನಾನು ಮಾತ್ರವೇ ಅಲ್ಲ, ನಾನು ನೀವು ಎಲ್ಲ. ಇಲ್ಲಿ ಆಳಕ್ಕಿಳಿದಷ್ಟೂ ಅರ್ಥವಿಸ್ತಾರಗಳ ವ್ಯಾಪ್ತಿಯಿದೆ. ಅರ್ಥೈಸಿದಷ್ಟೂ ಅರಿವು ಆಧ್ಯಾತ್ಮಗಳ ದೀಪ್ತಿಯಿದೆ. ಅನಂತ ಬೆಳಕಿನ ಸೂಕ್ತಿಯಿದೆ. ಏನಂತೀರಾ..?” – ಪ್ರೀತಿಯಿಂದ ಎ.ಎನ್.ರಮೇಶ್. ಗುಬ್ಬಿ.

ಭಾಷೆ ನಿನದಲ್ಲ ಲಿಪಿ ನಿನದಲ್ಲ
ಕೂಡಿಸಿ ಬರೆದ ಸೆಲೆಯಷ್ಟೆ ನಿನದು
ನಾನೇ ಮಿಗಿಲೆಂಬ ಮದವೇಕೋ.?

ಹೂವು ನಿನ್ನದಲ್ಲ ದಾರ ನಿನ್ನದಲ್ಲ
ಪೋಣಿಸುವ ಕಲೆಯಷ್ಟೆ ನಿನದು
ನಾನೇ ಹಾರವೆಂಬ ಜಂಭವೇಕೋ.?

ಶೃಂಗ ನಿನದಲ್ಲ ಹಾದಿ ನಿನದಲ್ಲ
ಏರಿದಾ ನಡೆಯಷ್ಟೆ ನಿನದು
ನಾನೇ ಶಿಖರವೆಂಬ ಹುಂಬತನವೇಕೋ.?

ಪಾಯ ನಿನದಲ್ಲ ಸೂರು ನಿನದಲ್ಲ
ನಡುವಿನ ಬದುಕಷ್ಟೆ ನಿನದು
ಸೌಧವೇ ನನದೆಂಬ ಮೌಢ್ಯವೇಕೋ.?

ಭೂತ ನಿನದಲ್ಲ ಭವಿಷ್ಯ ನಿನದಲ್ಲ
ಈದಿನ ಈಕ್ಷಣವಷ್ಟೆ ನಿನದು
ನಾನೇ ಅಮರನೆಂಬ ಜಾಡ್ಯವೇಕೋ.?

ಕಾಲ ನಿನದಲ್ಲ ಕಾಯ ನಿನದಲ್ಲ
ನಾಲ್ಕುದಿನದ ಉಸಿರಷ್ಟೆ ನಿನದು
ನಾನೇ ಸ್ಥಿರವೆಂಬ ಭ್ರಾಂತಿಯೇಕೋ.?

ಬತ್ತಿ ನಿನದಲ್ಲ ತೈಲ ನಿನದಲ್ಲ
ಹೊತ್ತಿಸಿದ ಕಿಡಿಯಷ್ಟೆ ನಿನದು
ನಾನೇ ಬೆಳಕೆಂಬ ಭ್ರಮೆಯೇಕೋ.?

ಆಚೆ ನೀನಿಲ್ಲ ಈಚೆಯೂ ನೀನಿಲ್ಲ
ನಿನ್ನೊಳಗಿನ ನೀನೇ ನೀನಲ್ಲ
ನಾನು ನನದೆಂಬ ಭುಕ್ತಿಯೇಕೋ.?


  • ಎ.ಎನ್.ರಮೇಶ್. ಗುಬ್ಬಿ (ಲೇಖಕರು, ಕವಿಗಳು), ಕೈಗಾ

0 0 votes
Article Rating

Leave a Reply

0 Comments
Inline Feedbacks
View all comments
0
Would love your thoughts, please comment.x
()
x
%d bloggers like this:
Aakruti Kannada

FREE
VIEW