‘ವಚನವಾಣಿ’ ಪುಸ್ತಕ ಪರಿಚಯ – ರೂಪಶ್ರೀ ಶಶಿಕಾಂತ್



ಶಿಕ್ಷಕ ಟಿ.ಪಿ. ಉಮೇಶ್ ಅವರ ‘ವಚನವಾಣಿ’ ಪುಸ್ತಕದ ಕುರಿತು ಲೇಖಕಿ ರೂಪಶ್ರೀ ಶಶಿಕಾಂತ್ ಅವರು ಬರೆದಿದ್ದಾರೆ.ಪುಸ್ತಕದಲ್ಲಿ ಪ್ರಜಾಪ್ರಭುತ್ವ, ಕನ್ನಡ ಭಾಷೆ, ಬಗ್ಗೆ ಬರೆದಿರುವ ವಚನಗಳು ಅಮೋಘವಾಗಿದ್ದು,ಈ ಪುಸ್ತಕವನ್ನು ತಮ್ಮ ಶಿಷ್ಯರಿಗೆ ಅರ್ಪಣೆ ಮಾಡಿರುವುದು ಲೇಖಕರ ವಿಶೇಷಗುಣ, ಮುಂದೆ ಓದಿ…

ಪುಸ್ತಕ : ವಚನವಾಣಿ
ಲೇಖಕರು: ಟಿ.ಪಿ. ಉಮೇಶ್
ಪ್ರಕಾಶನ: ಲೇಖನ ಪ್ರಕಾಶನ

ಟಿ.ಪಿ. ಉಮೇಶ್ ಅವರ ‘ವಚನವಾಣಿ’ ಪುಸ್ತಕ ತಮ್ಮೊಳಗಿರುವ ಭಕ್ತಿ, ಪರಮಾತ್ಮನ ಅರಿವು, ಲೋಕದಲ್ಲಿ ನಡೆಯುತ್ತಿರುವ ಕೆಟ್ಟ ರಾಜಕೀಯದ ಬಗ್ಗೆ ಇರುವ ಜಿಗುಪ್ಸೆ, ರೈತರ ಬಗೆಗಿರುವ ಕಾಳಜಿ, ಧರ್ಮಪತ್ನಿಯ ಬಗೆಗಿರುವ ಪ್ರೀತಿ, ವಿಶ್ವಾಸ ಮತ್ತು ನೀವು ಅವರಿಗೆ ಕೊಟ್ಟಿರುವ ಸ್ಥಾನ ಎಲ್ಲವನ್ನೂ ನಿಮ್ಮ ವಚನಗಳಲ್ಲಿ ನೋಡಿ ಮೂಕವಿಸ್ಮಿತಳಾಗಿರುವೆ.

ಸಾವಿನ ಬಗ್ಗೆ ನೀವು ಬರೆದಿರುವ ಎಲ್ಲಾ ವಚನಗಳೂ ಸತ್ಯವನ್ನು ಬಿಚ್ಚಿಟ್ಟಿವೆ. ಸಾವು ಕೇವಲ ಭಾವದಿಂದ ಬಿಡುಗಡೆ ಅಷ್ಟೆ ಏನು? ಎಂಬ ನಿಮ್ಮ ಪ್ರಶ್ನೆ, ಎಷ್ಟೊಂದು ಪ್ರಶ್ನೆಗಳನ್ನು ತನ್ನೊಳಗೆ ಹೊತ್ತಿದೆ. ಸಾವಿನ ನಂತರ ಏನಾಗುವುದು? ಮುಂತಾಗಿ ಚಿಂತನೆ ಮೂಡಿಸುವುದು. ಮತ್ತೊಂದು ವಚನದಲ್ಲಿ ಸಾವು ನೋವೋ ನಲಿವೋ ಎಂಬ ಪ್ರಶ್ನೆ ಇಟ್ಟಿದ್ದೀರಿ. ಬಹಳ ಮಾರ್ಮಿಕವಾಗಿದೆ. ಕೆಟ್ಟ ರೋಗದಿಂದ ಬಳಲುವವರಿಗೆ ಸಾವು ಬಿಡುಗಡೆ ಎಂದು ತೋರಿದರೆ, ಆರೋಗ್ಯವಾಗಿದ್ದವರು ಇದ್ದಕ್ಕಿದ್ದಂತೆ ಸತ್ತಾಗ ಅವರ ಬಾಂಧವರಿಗಾಗುವ ಕಷ್ಟ ಅಷ್ಟಿಷ್ಟಲ್ಲ.

ಸಾವೆಂಬುದು ಅಮೃತ ಘಳಿಗೆ ಎಂಬ ವಚನದಲ್ಲಿ ಸಾವು ನಾಳೆ ಹುಟ್ಟಬೇಕಿರುವ ಮಹಾ ಬೆಳಗು ಎಂದಿರುವುದು ವೇದಾಂತದ ತತ್ವ ತೋರಿಸುತ್ತದೆ. ಎಲೆಯನ್ನು ತಿನ್ನುವ ಹುಳು ಪಕ್ಕದ ಎಲೆಯನ್ನು ಹಿಡಿದುಕೊಂಡು, ತಾನು ತಿಂದ ಎಲೆಯನ್ನು ಬಿಟ್ಟು ಮುನ್ನಡೆವಂತೆ ಜೀವ ಮುಂದಿನ ದೇಹ ಹಿಡಿದುಕೊಂಡು ಈ ದೇಹ ಬಿಡುತ್ತಾನೆ ಎಂದು ತಿಳಿಸಿರುವ ಸತ್ಯ ಈ ಸಾಲಿನಲ್ಲಿ ವ್ಯಕ್ತವಾಗಿದೆ.

ಹಣದ ಬಲದಿಂದ ಎಲ್ಲಾ ಗಳಿಸುವವರನ್ನು ನೋಡಿ ಹಣವಿಲ್ಲದ ಲೋಕ ಸೃಷ್ಟಿಸುವ ಬೇಡಿಕೆಯ ವಚನ ಅಮೋಘವಾಗಿದೆ.

ಅನೇಕ ವಚನಗಳಲ್ಲಿ “ನೀನಲ್ಲದೆ ಬೇರೇನು ಬೇಡ” ಎಂಬ ಆತ್ಮನಿವೇದನೆ ಶರಣಾಗತಿ ತುಂಬಿದೆ. ಅನುಭವಿಸಿ ಹಾಡುವಂತಹ ಸುಂದರ ಕೀರ್ತನೆಗಳೇ ಆಗಿವೆ ಈ ವಚನಗಳು.

ವಿದ್ಯಾರ್ಥಿಗಳಿಗೆ, ವಿಜಯೀ ವಿದ್ಯಾರ್ಥಿ ವಚನದಲ್ಲಿ ಹೇಗೆ ಓದಿದರೆ ಜಯ ಸಿಕ್ಕೇ ಸಿಗುತ್ತದೆ ಎಂದು ತಿಳಿಸಿದರೆ; ವಿದ್ಯಾರ್ಥಿಗಳಿಗೆ ಪ್ರೇರೇಪಣೆ ವಚನದಲ್ಲಿ ಗುರು ಮತ್ತು ಶಿಷ್ಯ ಇಬ್ಬರಲ್ಲೂ ಶಿಸ್ತು, ಶ್ರದ್ಧೆ ಸನ್ನಡತೆ ಸಂಯಮ ಪ್ರೇರೇಪಿಸು ಎಂದು ತಮ್ಮ ಆರಾಧ್ಯ ದೈವದಲ್ಲಿ ಪ್ರಾರ್ಥಿಸಿರುವುದು ಅತ್ಯಂತ ಸೂಕ್ತವಾಗಿದೆ. ಈ ಗುಣಗಳೇ ಈಗ ಬಹಳ ಅಪರೂಪವಾಗಿದ್ದು, ಮಾನವನ ಗುಣದ ಅವನತಿಗೆ ಕಾರಣವಾಗಿದೆ.

ಇನ್ನು ಈ ನಶ್ವರ ದೇಹಕ್ಕೆ ಮಾನವ ಮಾಡುವ ಉಪಚಾರ, ಅಲಂಕಾರ, ಪಡುವ ಅಹಂಕಾರ ಎಲ್ಲವನ್ನೂ ಟೀಕಿಸಿ ಬರೆದಿರುವ ಶಾಶ್ವತದ ಪುತ್ಥಳಿಯಲ್ಲ ಎಂಬ ವಚನ ಕಣ್ಣ ತೆರೆಸುವ ಸಾಲಿನಿಂದ ಕೂಡಿದೆ.

(ವಚನವಾಣಿ ಕೃತಿ ಲೇಖಕರು ಟಿ.ಪಿ. ಉಮೇಶ್ )

ಪ್ರಜಾಪ್ರಭುತ್ವ, ಕನ್ನಡ ಭಾಷೆ, ಬಗ್ಗೆ ಬರೆದಿರುವ ವಚನಗಳೂ ಅಮೋಘವಾಗಿವೆ. ಶಿವ… ಶಿವ… ಶಿವ… ಎಂದು ಶಿವನ ಅಂಚಿಂತ್ಯಾದ್ಭುತ ಗುಣ ಮಹಿಮೆ ವರ್ಣಿಸಿರುವ ವಚನ ಪ್ರಾರ್ಥಿಸುವವರೆಲ್ಲರಿಗೂ ಪ್ರತಿದಿನದ ಪ್ರಾರ್ಥನೆ ಆಗಲು ಯೋಗ್ಯವಾಗಿದೆ.

ಸೃಷ್ಟಿ ಸ್ಥಿತಿ ಮಾಡುವ ಅವನೇ ಲಯ ಮಾಡುವವ ಎಂಬ ಸತ್ಯವು ನಿನ್ನ ಸೃಷ್ಟಿಯಲು ನಾಶ ವಚನ ಅದ್ಭುತವಾಗಿ ತೋರಿಸಿದೆ. ಒಟ್ಟಾರೆ ಈ ನೂರೊಂದು ವಚನಗಳನ್ನು ಓದಿ ಮನಸ್ಸಿಗೆ ಬಹಳ ಸಂತೋಷವಾಯಿತು. ಒಂದೊಂದು ವಚನದಲ್ಲೂ ಅನೇಕ ಗಹನ ತತ್ವಗಳು, ವಿಚಾರಗಳು, ನಿತ್ಯ ಸತ್ಯಗಳು ಅಡಗಿವೆ.



ಭಗವಂತನ ಸಂಪೂರ್ಣ ಕೃಪೆ ನಿಮ್ಮ ಮೇಲಿದೆ. ಹೀಗೆ ಹೆಚ್ಚು ಹೆಚ್ಚು ವಚನಗಳು, ಕವನ, ಲೇಖನಗಳು ನಿಮ್ಮಿಂದ ಭಗವಂತನ ಕೃಪೆಯಿಂದ ಮೂಡಲಿ ಎಂದು ಆಶಿಸುತ್ತೇನೆ.

ಈ ಪುಸ್ತಕ ನಿಮ್ಮ ಶಿಷ್ಯರಿಗೆ ಅರ್ಪಣೆ ಮಾಡಿರುವುದು ನೋಡಿ ಬಹಳ ಸಂತೋಷವಾಯಿತು. ಗುರುವಾದವರು ತಮ್ಮ ಶಿಷ್ಯರನ್ನು ಪ್ರೀತಿಸಿದಾಗ ಮಾತ್ರ ಅವರ ಒಳಿತಿಗೆ ಶ್ರಮಿಸಿ, ಅವರಿಂದ ಅದ್ಭುತ ಸಾಧನೆ ಮಾಡಿಸಲು ಸಾಧ್ಯ.


  • ರೂಪಶ್ರೀ ಶಶಿಕಾಂತ್

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW