ಅವಳೇನು ವೇಶ್ಯೆಯಾಗಲು ಹೊರಟವಳಲ್ಲ

ಆಕೆ ಆಸೆ ಪಟ್ಟು ಹಾಸಿಗೆ ಏರಲಿಲ್ಲ. ಅವಳ ಕೆಟ್ಟ ಪರಿಸ್ಥಿತಿ ಅವಳಿಗೆ ವೇಶ್ಯೆಯಾಗುವಂತೆ ಮಾಡಿತು. ಅವಳ ಪರಿಸ್ಥಿತಿಯನ್ನು ಲಾಭಪಡೆದವರು ಈ ಕೆಟ್ಟ ಸಮಾಜದಲ್ಲಿನ ಪುರುಷರು. ವೇಶ್ಯೆ ವೃತ್ತಿಯಿಂದ ಹೊರಗೆ ಬಂದರೆ ಸಮಾಜ ಅವಳನ್ನು ಒಪ್ಪುತ್ತದೆಯೇ ?ಎಲ್ಲರಂತೆ ಅವಳನ್ನು ಸ್ವೀಕರಿಸುತ್ತದೆಯೇ?. ಯುವ ಲೇಖಕ ವಿಕಾಸ್. ಫ್. ಮಡಿವಾಳರ ಅವರು ಬರೆದ ಒಂದು ಹೆಣ್ಣುಮಗಳೊಬ್ಬಳ ಅಸಹಾಯಕತೆಯ ನೈಜ್ಯ ಬದುಕಿನ ಚಿತ್ರಣವನ್ನು ತಪ್ಪದೆ ಓದಿ…

ಅವಳೇನು ಬೇಕಂತ ವೇಶ್ಯೆಯಾಗಲಿಲ್ಲ. ಅವಳ ದೇಹವನ್ನ ಕಿತ್ತು ತಿನ್ನಲು ಕಾದಿದ್ದ ಹದ್ದುಗಳು ಅವಳನ್ನು ವೇಶ್ಯೆಯಾಗಿ ಮಾಡಿದರು. ಅವಳೇನು ಸೌಂದರ್ಯವತಿಯೆಂದು ಬೀಗಲಿಲ್ಲ. ಆದರೆ ಅವಳ ರೂಪವೇ ಅವಳಿಗೆ ದೊಡ್ಡ ಶತ್ರುವಾಯಿತು. ಎಲ್ಲವನ್ನು ಬಿಟ್ಟು ಬದುಕನ್ನು ಸಾಗಿಸಿದರು ಜನ ಅವಳನ್ನು ಕೆಟ್ಟ ದೃಷ್ಠಿಯಿಂದ ನೋಡುವುದನ್ನು ಬಿಡಲಿಲ್ಲ. ಎಲ್ಲರೂ ಅವಳ ದೇಹವನ್ನು ಹೋಗಳಿದರೆ ಹೊರತು, ಅವಳ ಮನಸ್ಸನ್ನಲ್ಲ.

ಇದು ಕಥೆಯೋ ವ್ಯಥೆಯೋ ನಾ ಅರಿಯೆ?. ಈ ಕಥೆಯ ನಾಯಕಿಯ ಹೆಸರು ಲಕ್ಷ್ಮಿ (ಹೆಸರು ಬದಲಿಸಲಾಗಿದೆ). ಹೆಸರಲ್ಲೆನಿದೆಯೋ ಅದು ಅವಳ ಬದುಕಲ್ಲಿರಲಿಲ್ಲ. ಕೆಳಗಿನ ಜಾತಿಯವರು ಎಂಬ ಕಾರಣಕ್ಕೆ, ಹಳ್ಳಿಯ ಜನರು ಅವಳ ಕುಟುಂಬದವರನ್ನು ಊರ ಆಚೆಯಿಟ್ಟರು. ಕೆರೆದಂಡೆಯ ಸಮೀಪದಲ್ಲಿದ್ದ ತಾಂಡಾದ ಒಂದು ಸಣ್ಣ ಗುಡಿಸಿಲಿನಲ್ಲಿ ಲಕ್ಷ್ಮಿಯ ಕುಟುಂಬ ವಾಸವಾಗಿತ್ತು. ಆಕೆಯ ತಂದೆ ಬೆಳಗ್ಗೆಯಿಂದ ರಾತ್ರಿಯವರೆಗೆ ದುಡಿದು ಬರುತ್ತಿದ್ದರು. ಆದರೆ ದುಡಿದು ಸಂಪಾದಿಸಿದ ಹಣ ಎರಡು ಹೊತ್ತಿನ ಊಟಕ್ಕೂ ಸಾಲುತ್ತಿರಲಿಲ್ಲ. ತಾಯಿ ನಾಲ್ಕೈದು ಮನೆಯ ಪಾತ್ರೆಗಳನ್ನು ತಿಕ್ಕುತ್ತಿದ್ದರು. ಇಬ್ಬರು ತಂಗಿಯರು ಇನ್ನು ಚಿಕ್ಕವರು, ಮುದ್ದಾಗಿ ಬೆಳೆಯುತ್ತಿದ್ದರು. ಲಕ್ಷ್ಮಿಗೆ ಓದು ತಲೆಗೆ ಹತ್ತದ ಕಾರಣ ೪ ನೇಯ ತರಗತಿಗೆ ಶಾಲೆ ಬಿಟ್ಟಳು. ಅಮ್ಮನ ಜೊತೆ ಪಾತ್ರೆ ತಿಕ್ಕುವ ಕೆಲಸಕ್ಕೆ ಹೋದಳು. ಬೆಳಗ್ಗೆ ಎದ್ದು ಕಸಗುಡಿಸಿ ಅನ್ನಕ್ಕೆ ಇಟ್ಟು ಪುಟ್ಟ ತಂಗಿಯರನ್ನು ಶಾಲೆಗೆ ಬಿಟ್ಟು, ಅಮ್ಮನಿಗೆ ಕೆಲಸದಲ್ಲಿ ನೆರವಾಗುವುದು ದೈನಂದಿನ ಚಟುವಟಿಕೆಯಾಯಿತು. ದಿನಕಳೆದಂತೆ ಮಗಳು ದೊಡ್ಡವಳಾಗಿದ್ದಾಳೆಂದು ತಿಳಿದ ಆಕೆಯ ಪಾಲಕರು ತಮ್ಮ ಹತ್ತಿರದ ಸಂಬಂಧಿಯ ಜೊತೆ ಮದುವೆ ಮಾಡಿಸಿದರು. ಮದುವೆಯಾದಾಗ ಆಕೆಗೆ ಕೇವಲ ೧೫ ವರ್ಷವಾಗಿತ್ತು. ಹೀಗೆ ಲಕ್ಷ್ಮಿಯ ಬಾಲ್ಯ ಮುಗಿದಿತ್ತು.

ಮದುವೆಯಾದ ಕೆಲ ದಿನಗಳ ನಂತರ ದುಡಿಮೆಗಾಗಿ ಆಕೆಯ ಗಂಡ ಹಳ್ಳಿ ಬಿಟ್ಟು ಪೇಟೆ ಸೇರಿದ. ಅದಾದಮೇಲೆ ಲಕ್ಷ್ಮಿಯನ್ನು ತನ್ನೆಡೆಗೆ ಕರೆಸಿಕೊಂಡ. ಅವನು ಮನೆ ಕಟ್ಟುವ ಕೆಲಸಕ್ಕೆ ಹೋದರೆ ಅವಳು ಹೋಟೆಲಿನಲ್ಲಿ ಕೆಲಸಕ್ಕೆ ಸೆರಿದಳು. ಬೆಳಗ್ಗೆಯಿಂದ ಸಂಜೆಯವರೆಗೆ ದುಡಿದು ಬರುತ್ತಿದ್ದ ಪ್ರೀತಿಯ ಗಂಡನಿಗಾಗಿ ರುಚಿ ರುಚಿಯಾದ ಅಡುಗೆ ಮಾಡಿ ಊಟ ಬಡಿಸಿ, ಅವನ ಎದೆಯ ಮೇಲೆ ಮಲಗುವುದೆಂದರೆ ಲಕ್ಷ್ಮಿಗೆ ಏನಿಲ್ಲದ ಖುಷಿ. ಆಕೆಯ ಗಂಡನು ಹಾಗೆ ಇದ್ದ. ಯಾವುದೆ ಕೆಟ್ಟ ಚಟವಿರಲಿಲ್ಲ, ದುರ್ಜನರ ಸಂಘವಿರಲಿಲ್ಲ. ತಾನಾಯಿತು ತನ್ನ ಕೆಲಸವಾಯಿತು ಎಂದು ಬದುಕಿದ್ದ. ವಾರಕೊಮ್ಮೆ ಸಿಗುವ ರಜೆಗೆ ಅವಳನ್ನು ಕರೆದುಕೊಂಡು ಊರು ಸುತ್ತುತ್ತಿದ್ದ. ಬಂಗಾರ ಬೆಳ್ಳಿ ಕೊಡಿಸಲಾಗದಿದ್ದರು ಇದ್ದಿದ್ದರಲ್ಲೆ ಆಕೆಯ ಆಸೆಯನ್ನು ಇಡೆರಿಸುತ್ತಿದ್ದ. ಹಬ್ಬ ಹರಿದಿನಗಳು ಬಂತೆಂದರೆ ಅವರ ಮನೆ ಅರಮನೆಯಂತೆ ಕಾಣುತಿತ್ತು. ಬಡತನ ಕಾಡುತ್ತಿದ್ದರೂ ನೆಮ್ಮದಿಗೆ ಕೊರತೆ ಇರಲಿಲ್ಲ. ಅವರ ಖುಷಿಯನ್ನು ಹೆಚ್ಚಿಸಲು ಮನೆಗೆ ಮತ್ತೊಂದು ಅತಿಥಿಯ ಆಗಮನವಾಯಿತು. ಲಕ್ಷ್ಮಿ ಒಂದು ಹೆಣ್ಣು ಮಗುವಿಗೆ ಜನ್ಮ ಕೊಟ್ಟಳು. ಕಂದಮ್ಮನಿಗೆ ಮಾತು ಬಂದು ಅಮ್ಮ ಎಂದು ಕರೆದಾಗ ಅವರಿಗಾದ ಸಂತೋಷವನ್ನು ವರ್ಣಿಸಲಾಗದು. ಆದರೆ ಆ ಕುಟುಂಬ ಸಂತಸದಿಂದಿರುವುದು ಆ ದೇವರಿಗೆ ಇಷ್ಟವಿರಲಿಲ್ಲ. ಕೆಲಸಮಾಡಲು ಹೊಗಿದ್ದ ಗಂಡ ೧೦ನೆ ಮಹಡಿಯಿಂದ ಬಿದ್ದು ಹೆಣವಾಗಿ ಬಂದ. ಹಣೆಗೆ ಕುಂಕುಮ ಹಚ್ಚುವವನು ಮೈತುಂಬ ರಕ್ತದೊಕುಳಿಯನ್ನು ಆಡಿ ಬಂದಿದ್ದ. ಕೈಗೆ ಬಳೆ ಹಾಕಿದವನು ಕೊನೆಗೆ ಅದೆ ಬಳೆಗಳನ್ನು ಒಡೆಯುವುದನ್ನು ನೋಡುತ್ತ ಮಲಗಿದ್ದ. ಅವಳ ಖುಷಿಗೆ ಕಾರಣನಾಗಿದ್ದವನು ಈಗ ಅವಳ ದುಃಖಕ್ಕೆ ಕಾರಣವಾಗಿದ್ದ. ಕೊನೆವರೆಗೂ ಜೊತೆಗಿರುವೆನೆಂದು ಭಾಷೆ ಕೊಟ್ಟು ಮಣ್ಣಲ್ಲಿ ಮಣ್ಣಾಗಿ ಹೋಗಿದ್ದ.

ಗಂಡ ತೀರಿಕೊಂಡು ೬ ತಿಂಗಳು ಆಗಿತ್ತು. ಅವನಿಲ್ಲದ ದುಃಖ ಇನ್ನೂ ಕಾಡುತ್ತಿತ್ತು. ಮನೆ ನಡೆಸಲು ತುಂಬಾ ಕಷ್ಟವಾಗಿತ್ತು. ತಾಯಿ ಮಗಳ ಸಂಕಟವನ್ನು ಕೇಳುವವರು ಯಾರು ಇರಲಿಲ್ಲ. ಆಗಲೆ ಲಕ್ಷ್ಮಿಗೆ ಮತ್ತೊಂದು ಸಮಸ್ಯೆ ಎದುರಾಯಿತು. ಆಕೆಯ ಗಂಡ ಮನೆ ನಡೆಸಲು ಆ ಊರಿನ ಶ್ರಿಮಂತ ರಾಜಕಾರಣಿಯ ಬಳಿ ಸಾಲ ಮಾಡಿದ್ದ. ಅಸಲಿಗೆ ಬಡ್ಡಿ ಸೇರಿ ಸಾಲದ ಮೊತ್ತ ಹೆಚ್ಚಾಯಿತು. ಸಾಲವನ್ನು ಈ ತಕ್ಷಣ ತೀರಿಸು ಇಲ್ಲದಿದ್ದರೆ ನಿಮ್ಮ ಮನೆಯನ್ನು ಸರ್ವನಾಶ ಮಾಡುತ್ತೇನೆಂದು ಆ ರಾಜಕಾರಣಿ ಹೆದರಿಸಿದ. ಗಂಡನಿಲ್ಲದ ಹೆಂಗಸೆಂದು, ಅವಳನ್ನು ಉಪಯೋಗಿಸಲು ಇಲ್ಲಸಲ್ಲದ ಪ್ರಯತ್ನಗಳು ನಡೆದವು. ಕಿರಾಣಿ ಅಂಗಡಿಯವನಿಂದ ಹಿಡಿದು ಆಕೆಗೆ ಕೆಲಸಕೊಟ್ಟ ಯಜಮಾನ ಅವಳನ್ನು ಅನುಭವಿಸಲು ಪಿಡಿಸಿದರು. ಅವಳು ಆಗದು ಎಂದಾಗ ಬೇರೆ ರೀತಿಯಿಂದ ತೊಂದರೆ ಕೊಡಲು ಶುರು ಮಾಡಿದರು. ಅವಳ ಅಂಧವನ್ನು ಸವಿಯಲು ಪಿತೂರಿಗಳು ನಡೆದವು. ಸಾಲಗಾರರು ಮನೆ ಮುಂದೆ ಬಂದು ಜಗಳವಾಡಿದರು. ಕೆಲಸ ಕೊಟ್ಟ ಯಜಮಾನ ದುಡ್ಡು ಕೊಡದೆ ಪೀಡಿಸಿದ. ಕೈಲಾಗದ ಹೆಂಗಸು ಅದೆಷ್ಟು ತೊಂದರೆಗಳನ್ನು ಎದುರಿಸಲು ಸಾಧ್ಯ? ಎಲ್ಲವನ್ನು ಸಹಿಸಿಕೊಂಡರೂ ತೊಂದರೆಗಳು ಬರುವುದು ನಿಲ್ಲಲಿಲ್ಲ. ತನಗಲ್ಲದಿದ್ದರು ಮಗುವಿನ ಹಸಿವು ನೀಗಿಸಲು ಸಾಲ ಕೊಟ್ಟ ರಾಜಕಾರಣಿಯ ಮಂಚ ಏರಲು ನಿರ್ಧರಿಸಿದಳು. ಆ ರಾತ್ರಿ ದೀಪ ಆರಿತ್ತು, ಕಣ್ಣಲ್ಲಿ ನೀರು ತುಂಬಿತ್ತು, ಸೆರಗು ಜಾರಿತ್ತು, ಕೊನೆಗೆ ಅವಳ ಬದುಕೆ ಹಾಳಾಗಿತ್ತು. ಆ ತಲೆಹಿಡುಕ ಅವಳನ್ನು ಅನುಭವಿಸಿದ್ದಲ್ಲದೆ ತನ್ನ ಸಂಗಡಿಗರಿಗೂ ಹಂಚಿಬಿಟ್ಟ. ಹೀಗೆ ಲಕ್ಷ್ಮಿಯ ಬದುಕು ನೀಚರ ಶಡ್ಯಂತ್ರಕ್ಕೆ ಬಲಿಯಾಗಿ ವೇಶ್ಯತನದ ಬದುಕಿಗೆ ಕಾಲಿಟ್ಟಿತು.

ಆ ನರಕವೆ ಹಾಗಿತ್ತು. ಎಲ್ಲರು ಆಕೆಯ ಮಾಂಸದ ಮುದ್ದೆಯನ್ನು ಕಿತ್ತು ತಿನ್ನಲು ಕಾಯುತಿದ್ದರು. ದೀಪ ಆರಿಸಿ ದೇಹ ಸವೆದವರು ಆಕೆಗೆ ಸುಟ್ಟು ಗಾಯ ಮಾಡಿದರು. ಸುಖ ಉಣ್ಣಲು ಬಂದವರು ಆಕೆಯ ಕೆನ್ನೆಗೆ ಬೆರಳಚ್ಚು ಮೂಡಿಸಿದರು. ಕೊಟ್ಟ ಬಿಡುಗಾಸಿಗೆ ದರ್ಪವ ತೋರಿ ಹಾದರದವಳೆಂದು ಕೇವಲವಾಗಿ ಮಾತಾಡಿದರು. ಎಲ್ಲರು ಅವಳನ್ನು ಅನುಭವಸಿದರೆ ಹೊರತು ಅವಳ ನೋವಿಗೆ ಯಾರು ಸ್ಪಂದಿಸಲಿಲ್ಲ. ಅವರೆಲ್ಲರಿಗೂ ಈಕೆ ಆಟದ ಗೊಂಬೆಯಾಗಿದ್ದಳು.

ಲಕ್ಷ್ಮಿಗೆ ಆ ಕೆಲಸ ಇಷ್ಟವಿಲ್ಲದಿದ್ದರು ತನ್ನ ಮಗಳ ಭವಿಷ್ಯಕ್ಕಾಗಿ, ಆಕೆಯ ಬದುಕಿಗಾಗಿ ವೇಶ್ಯಾವಾಟಿಕೆಯ ಜಗತ್ತಿಗೆ ಕಾಲಿಡಬೇಕಾಯಿತು. ಮಗಳು ದೊಡ್ಡವಳಾದ ಮೇಲೆ ಎಲ್ಲಿ ಇಂತಹ ನರಕಕ್ಕೆ ಅವಳು ಕೂಡ ಸಿಲುಕಿಕೊಳ್ಳುವಳೆಂಬ ಭಯಕ್ಕೆ ಎಲ್ಲವನ್ನು ಬಿಟ್ಟು ಮತ್ತೆ ಅವರಿವರ ಮನೆಯಲ್ಲಿ ಕೆಲಸಕ್ಕೆ ಹೋದಳು. ಆಕೆ ಎಲ್ಲವನ್ನು ಮರೆತರೂ ಈ ಸಮಾಜ ಆಕೆಯನ್ನು ನೋಡುವ ದೃಷ್ಟಿ ಬದಲಿಸಲಿಲ್ಲ. ತರಕಾರಿ ಅಂಗಡಿಗೆ ಹೋದರೆ ‘ಬರ್ತಿಯಾ’ ಅಂತ ಕಾಡಿಸುವ ಪುಂಡರು. ಕೆಲಸಕ್ಕೆ ಹೋದಾಗ ಕೆಟ್ಟ ಭಾವನೆಯಿಂದ ನೋಡುವ ಯಜಮಾನ. ನಮ್ಮ ಸಮಾಜದವರಂತೂ ಅವಳನ್ನು ‘ಮೂರು ಬಿಟ್ಟವಳು’ ಎಂದು ಉಗಿದರೆ ಹೊರತು ಅವಳ ದು:ಖಕ್ಕೆ ಯಾರು ಧನಿಯಾಗಲಿಲ್ಲ. ಅವಳ ಕಷ್ಟಕ್ಕೆ ಯಾರು ನೆರವಾಗಲಿಲ್ಲ.

ಈಗ ಲಕ್ಷ್ಮಿ ಅದೆ ಬೀದಿ ದಿಪಗಳ ನಡುವೆ ಇರುವ ಮನೆಯಲ್ಲಿ ಬದುಕುತ್ತಿದ್ದಾಳೆ. ಮಗಳನ್ನು ಓದಿಸಿ ದೊಡ್ಡ ಕಂಪನಿಯಲ್ಲಿ ಕೆಲಸ ಕೊಡಿಸಿದ್ದಾಳೆ. ಎಲ್ಲವನ್ನು ಮರೆತು ಹೊಸ ಬದುಕು ಕಟ್ಟಿಕೊಂಡಿದ್ದಾಳೆ. ಆದರೆ ಮಲಗುವಾಗ ಕಾಡುವ ಕರಾಳ ರಾತ್ರಿಯ ನೆನಪುಗಳಿಗೆ ಹೆದರಿ ಬದುಕು ಸಾಗಿಸುತ್ತಿದ್ದಾಳೆ.

ಲಕ್ಷ್ಮಿ ಬೇಕೆಂದು ವೇಶ್ಯೆಯಾದಳೋ ಇಲ್ಲ ಪರಿಸ್ಥಿತಿ ಹಾಗೆ ಮಾಡಿಸಿತೋ ಗೊತ್ತಿಲ್ಲ. ಆದರೆ ಆಕೆ ಹೀಗಾಗಲೂ ನಾವು ಕೂಡ ಕಾರಣರು. ನಮ್ಮ ಸಮಾಜವೇ ಹಾಗೆ, ಕೋಟಿ ರೂಪಾಯಿಗೆ ಮಂಚ ಹತ್ತುವವಳನ್ನು ಹೊಗಳಿ ಆಕೆಯ ಅಭಿಮಾನಿ ಎಂದು ಸ್ಟೆಟಸ್ ಹಾಕುತ್ತೇವೆ. ಅದೇ ಹೊಟ್ಟೆಪಾಡಿಗಾಗಿ ಮಂಚ ಏರಿದವಳನ್ನು ವೇಶ್ಯೆ ಎಂದು ಕೀಳಾಗಿ ಕಾಣುತ್ತೇವೆ. ಇಬ್ಬರಲ್ಲೂ ಇರುವ ವ್ಯತ್ಯಾಸವಿಷ್ಟೇ ಅವಳು ಕೋಟಿಗೆ ಬೆಲೆ ಬಾಳಿದಳು. ಇವಳು ಒಂದು ಹೊತ್ತಿನ ಊಟಕ್ಕೆ ಪರದಾಡಿದಳು. ಎಲ್ಲರೂ ಲಕ್ಷ್ಮಿಯ ದೇಹವನ್ನು ಸವೆದರೆ ಹೊರತು ಅವಳ ಮನಸ್ಸನ್ನಲ್ಲ. ಅವಳ ದೇಹವನ್ನು ಅನುಭವಿಸಲು ಕಾದಿದ್ದ ನೀಚರು ಅವಳನ್ನು ವೇಶ್ಯೆಯಾಗಿ ಮಾಡಿದರೆ ಹೊರತು, ಅವಳೇನು ವೇಶ್ಯೆಯಲ್ಲ.

ನಾನು ಯಾವುದೇ ವೇಷ್ಯಾವಟಿಕೆಗೆ ಉತ್ತೇಜನ ನೀಡುತ್ತಿಲ್ಲ. ಆ ನರಕವನ್ನು ಬಿಟ್ಟು ಹೊಸ ಬದುಕನ್ನು ಕಟ್ಟಿಕೊಳ್ಳಲು ಕನಸು ಕಾಣುತ್ತಿರುವವರನ್ನು ಪ್ರೋತ್ಸಾಹಿಸುತ್ತಿದ್ದೇನೆ. ಅವರಿಗೂ ನಮ್ಮಂತೆ ಭಾವನೆಗಳಿವೆ, ಬದುಕುವ ಹಕ್ಕಿದೆ. ಯಾವುದೋ ಕಾರಣಕ್ಕೆ ಏನೊ ಮಾಡಿದರೆಂದು ಕೊನೆವರೆಗೂ ಅವರನ್ನು ಕೇವಲವಾಗಿ ನೋಡುವುದು ತಪ್ಪು. ಯಾರಾದರು ಅದನ್ನೆಲ್ಲಾ ಬಿಟ್ಟು ಹೊಸ ಬದುಕು ಕಟ್ಟಿಕೊಳ್ಳುತ್ತಾರೆಂದರೆ, ಅವರಿಗೆ ನಿಮ್ಮ ಕೈಲಾದಷ್ಟು ಸಹಾಯ ಮಾಡಿ. ಅವರೇನು ದುಡ್ಡು ಕೇಳುವುದಿಲ್ಲ, ಅವರ ನೋವಿಗೆ ಸ್ಪಂದಿಸುವ ಜೀವವನ್ನು ಬಯಸುತ್ತಾರಷ್ಟೆ.

ಅವೆಲ್ಲವನ್ನು ಮರೆತು ಹೊಸ ಕನಸುಗಳನ್ನು ಕಾಣುತ್ತಿದ್ದಾರೆ. ಆ ಕನಸಿಗೆ ನೀರೆರೆದು ಬೆಂಬಲಿಸಿ. ಆಗ ಅವರ ಪಾಲಿಗೆ ನೀವೇ ದೇವರಾಗುತ್ತೀರಿ.


  • ವಿಕಾಸ್. ಫ್. ಮಡಿವಾಳರ

2.7 3 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW