ಹಳ್ಳಿ ಬದುಕಿನ ಸಿರಿ ಸೊಬಗಿನ ಮನೆಗಳು ಈಗ ಬಿಕೋ..ಬಿಕೋ…

ಒಂದು ಕಾಲದಲ್ಲಿ ವೈಭವದಿಂದ ಬಾಳಿ ಬೆಳಗಿದ ಮನೆಗಳು ಈಗ ವೃದ್ಧಾಪ್ಯದಲ್ಲಿ ಹಿರಿಯ ಜೀವಗಳಿಗಷ್ಟೇ ಆಶ್ರಯವಾಗಿದೆ. ಅಂತಹ ಮನೆ ನೋಡಿದಾಗ ಮನಸ್ಸು ತಲ್ಲಣವಾಗುತ್ತದೆ. ಈ ಕುರಿತು ನಾಗೇಂದ್ರ ಸಾಗರ್ ಅವರು ಬರೆದ ಲೇಖನವನ್ನು ತಪ್ಪದೆ ಮುಂದೆ ಓದಿ…

ಇಲ್ಲಿ ಹಾಕಿದ ಮೊದಲ ಚಿತ್ರ ಜಾಲತಾಣದಿಂದ ಹೆಕ್ಕಿ ತೆಗೆದದ್ದು.. ಬಹಳ ಸಮಯದಿಂದ ನನ್ನನ್ನು ಬಹಳವೇ ಕಾಡಿಸುತ್ತಿದೆ.. ನಮ್ಮ ಮಲೆನಾಡು ಹಾಗೂ ಕರಾವಳಿ ಕಡೆಯ ಹಳ್ಳಿ ಬದುಕಿನ ವಾಸ್ತವ ಚಿತ್ರಣವನ್ನು ಅನಾವರಣಗೊಳಿಸಿದೆ..

ಮಲೆನಾಡಿನ ಪ್ರತಿ ಹಳ್ಳಿಗಳಲ್ಲಿ ಒಂದಾದರೂ ಇಂತಹ ದುರವಸ್ಥಿತ ಮನೆಗಳನ್ನು ನೀವು ಕಾಣಬಹುದು.. ಒಂದು ಕಾಲದಲ್ಲಿ ವೈಭವದಿಂದ ಬಾಳಿ ಬೆಳಗಿದ್ದ ಮನೆಗಳಲ್ಲಿ ವೃದ್ಧಾಪ್ಯದಲ್ಲಿ ಇರುವ ಹಿರಿಯ ಜೀವಗಳನ್ನಷ್ಟೇ ಕಾಣಬಹುದು..

ಮೊದಲ ಚಿತ್ರದಲ್ಲಿ ಕಣ್ಣಿಗೆ ರಾಚುವ ಮನೆಯನ್ನು ನೋಡಿ. ಶಿಥಿಲಗೊಂಡ ಬಾಗಿಲು, ಕಿಟಕಿ, ಅಡ್ಡೆ ಚೌಕಟ್ಟುಗಳು.. ಮೇಲೆ ಹತ್ತಿ ಸರಿಪಡಿಸುವವರೇ ಇಲ್ಲದ ಕಾರಣಕ್ಕೆ ಇದ್ದಂಗೆ ಇತ್ತು ಬಿಡು ಎಂದೇ ಹೇಳುವ ಮಂಗಳೂರು ಹೆಂಚಿನ ಮೇಲುಪ್ಪರಿಗೆ ಮನೆ.. ಹೆರೆಸಿ ತೆಗೆವವರು ಇಲ್ಲದ ಕಾರಣಕ್ಕೆ ಹಾವಸೆ ಬೆಳೆದು ಈ ಮನೆಯಲ್ಲಿ ಜನವಸತಿ ಇದೆಯೇ ಎಂದು ಪ್ರಶ್ನಿಸುವ ಮೆಟ್ಟಿಲುಗಳು.. ಒಂದು ಕಾಲಕ್ಕೆ ರಾಜಗಂಬಂದಂತೆ ಇದ್ದ ಮನೆಯೆದುರಿನ ಕಂಬಗಳೂ ದುರವಸ್ಥೆಯಲ್ಲಿದೆ.. ಎಲ್ಲಕಿಂತ ಮನೆಯ ಪ್ರಧಾನ ಬಾಗಿಲಿನ ಹಿಂದೆ ಹೆಚ್ಚಿನ ಯಾವ ನಿರೀಕ್ಷೆಗಳೂ ಇಟ್ಟುಕೊಂಡಿರದ ಹಿರಿಯ ಜೀವ…

ಫೋಟೋ ಕೃಪೆ :google

ಜಗತ್ತಿನ ಯಾವುದೇ ಅಷ್ಟೈಶ್ವರ್ಯಗಳನ್ನು ಹಳ್ಳಿ ಬದುಕಿನ ಸಿರಿ ಸೊಬಗಿನ ಎದುರು ನಿವಾಳಿಸಿ ಎಸೆಯಬೇಕು ಎನ್ನುವ ಮನಸ್ಥಿತಿ ಇರಿಸಿಕೊಂಡ ನನ್ನಂತಹ ಅತಿರೇಕಿಗಳನ್ನು ಕೂಡ ಈ ಚಿತ್ರ ಅಣಕಿಸುತ್ತಿದೆ.. ಕ್ಷಣಕಾಲ ವಿಚಲಿತಗೊಳಿಸುತ್ತದೆ. ದಿಗಿಲು ಬೀಳಿಸುತ್ತದೆ.. ಅಣಕಿಸುತ್ತದೆ.. ಇನ್ನು ಹತ್ತಿಪ್ಪತ್ತು ವರ್ಷಗಳಲ್ಲಿ ಹಳ್ಳಿಗೆ ಹಳ್ಳಿಗಳೇ ರಾಹುಗ್ರಸ್ತವಾಗುವ ಅಪಾಯ ಅಲ್ಲಗಳೆಯಲಾಗದು…

ಹೀಗೆಯೇ ಕೃಷಿ ಉದ್ದೇಶಕ್ಕೆ ಕೊಪ್ಪ ಸಮೀಪದ ಹಳ್ಳಿಯ ಒಂದು ಮನೆಗೆ ಹೋಗಿದ್ದೆ.. ಸುಮಾರು ಇಪ್ಪತ್ತೈದು ವರ್ಷಗಳಿಂದ ಬಳಕೆಯಲ್ಲಿ ಇರುವ ಮನೆಯದು.. ಈಗ ನಾಲ್ಕೈದು ವರ್ಷಗಳಿಂದ ಹೋಗಲಾಗಿರಲಿಲ್ಲ.. ಮನೆಯ ಅವಸ್ಥೆಯನ್ನು ನೋಡಿ ಮನಸ್ಸು ಮುಮ್ಮಲ ಮರುಗಿತು.. ಒಂದು ಕಾಲಕ್ಕೆ ಹತ್ತಾರು ಕುಟುಂಬಗಳಿಗೆ ಆಶ್ರಯ ಕೊಟ್ಟ ಮನೆಯದು, ಸುತ್ತಮುತ್ತಲ ಹತ್ತಾರು ಊರುಗಳಲ್ಲಿ ಇರುವ ಮಕ್ಕಳಿಗೆ ವೇದಾಧ್ಯಯನಕ್ಕೆ ಅವಕಾಶವಿದ್ದ ವಾಡೆಯದು.. ಮನೆ ವಠಾರದಲ್ಲಿ ಸಾವಿರಾರು ಮಂದಿ ನಡೆದುಕೊಳ್ಳುವ ನಾಲ್ಕೈದು ದೇವಳಗಳಿವೆ. ಪುರೋಹಿತರ ಮನೆಗಳಿವೆ. ಹಲವು ಸ್ಥಿತ್ಯಂತರಗಳನ್ನು ನೋಡಿಯೂ ನಿರ್ಲಿಪ್ತವಾಗಿ, ಪ್ರಶಾಂತವಾಗಿ ಹರಿಯುತ್ತಿರುವ ತುಂಗಾ ನದಿ..

ಫೋಟೋ ಕೃಪೆ :google

ಈಗ ಮನೆಯಲ್ಲಿ ಕೈಯಲ್ಲಿ ಹತ್ತಿ ಹರಿಯದ ನಿವೃತ್ತಿ ಅಂಚಿನ ಗಂಡ ಹೆಂಡಿರಿಬ್ಬರೇ ಇದ್ದಾರೆ.. ಈ ಮನೆಯ ಪುನರುಜ್ಜೀವನ ಇನ್ನು ನಮ್ಮಿಂದ ಆಗದು, ಮುಂದಿನ ಕತೆ ದೇವರೇ ಬಲ್ಲರು ಎಂದು ಕೂತಿರುವ ಹಿರಿಯ ಜೀವಗಳು..

ಇಲ್ಲ. ಹೀಗಾಗಲು ಬಿಡಬಾರದು.. ನನ್ನಿಂದ ಏನಾದರೂ ಕೆಲಸ ಆಗಬೇಕು ಎಂದು ಮನಸ್ಸು ಹೇಳುತ್ತಿದೆ… ಏನೇನು ಆಗುತ್ತೋ ನೋಡೋಣ..

ಹಳ್ಳಿಗೆ ಹಳ್ಳಿಯೇ ಹರೆಯದ ಹುಡುಗರಿಗೆ ಕಾಯುತ್ತಿದೆ..

ಮೊದಲಾದರೆ ಹಬ್ಬ ಹುಣ್ಣಿಮೆಗಳಿಗಾದರೂ ಶಹರದಲ್ಲಿ ನೆಲೆಕಂಡ ಹುಡುಗರು ಊರಿಗೆ ಬಂದು ಹಿರಿಯ ಜೀವಗಳಿಗೆ ನಲಿವು ಕೊಟ್ಟು ಹೋಗುತ್ತಿದ್ದರು.. ಈಗ ಅದಕ್ಕೂ ಕಷ್ಟ ಆಗಿದೆ.. ಹಬ್ಬಕ್ಕೆ ಹಿರಿಯ ಜೀವಗಳೇ ಮಕ್ಕಳಿರುವಲ್ಲಿ ಹೋಗಿ ಬರುವ ಪರಿಸ್ಥಿತಿ ಬಂದಿದೆ..

ಎರಡು ವರ್ಷದ ಹಿಂದೆ ಕೊರೋನಾ ಬಂದು ಹುಡುಗರ ಮನಸ್ಸು ಬದಲಾಗಿದೆ ಎಂದು ಕೊಂಡಿದ್ದೆವು.. ಈಗ ಇವೆಲ್ಲ ಸುಳ್ಳೆನ್ನಿಸುತ್ತದೆ… ಕೊರೋನಾ ಬಿಡಿ ಪ್ರಳಯ ಬಂದರೂ ಪರಿಸ್ಥಿತಿ ಬದಲಾಗುವುದಿಲ್ಲ…


  • ನಾಗೇಂದ್ರ ಸಾಗರ್

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading