‘ಶಾಂತಿ ಸದನ’ ಸಣ್ಣಕತೆ – ವಸುಧಾಪ್ರಭು

ಗೋಪಾಲರಾಯರ ಮನೆಯ ಹೆಸರು ‘ಗೋಪಾಲ ಸದನ’ ಇತ್ತು. ರಾಯರ ಮಗ ಆಸ್ಟ್ರೇಲಿಯಾದಿಂದ ವಾಪಾಸ್ ಮನೆಗೆ ಬಂದಾಗ ‘ಶಾಂತಿ ಸದನ’ ವಾಗಿತ್ತು. ಯಾಕೆ ಗೊತ್ತಾ?… ತಪ್ಪದೆ ಓದಿ ವಸುಧಾಪ್ರಭು ಅವರ ಮಿನಿಕತೆ….

ತಾಯಿಯ ಅಂತ್ಯಕ್ರಿಯೆಯನ್ನು ಮುಗಿಸಿ ಮುಂದಿನ ಕೆಲಸಕ್ಕೆ ನಿಲ್ಲದೆ ತಂದೆಗೆ ಸಾಷ್ಟಾಂಗ ನಮಸ್ಕಾರವನ್ನು ಮಾಡಿ ರಜೆ ಇಲ್ಲ ಎಂದು ಮಗ ವೇಣು ಆಸ್ಟ್ರೇಲಿಯಾಕ್ಕೆ ಹೊರಟು ನಿಂತಿದ್ದು ನೋಡಿ ಗೋಪಾಲರಾಯರ ಹೃದಯ ಬಾಯಿಗೆ ಬಂದಂತಾಗಿತ್ತು. ಆದರೂ ತನ್ನ ಅಧೀರತನವನ್ನು ತೋರಗೊಡದೆ ಮಗನನ್ನು ಬೀಳ್ಕೊಟ್ಟರು. ಮೊಮ್ಮಗನ ಪರೀಕ್ಷೆಯ ನೆವವನ್ನು ಒಡ್ಡಿ ಸೊಸೆ ಬಂದಿರಲಿಲ್ಲ.

ಹೋಗುವಾಗ ಆರು ತಿಂಗಳು ಬಿಟ್ಟು ಬರುತ್ತೇನೆ. ಮನೆಯ ವಿಲೇವಾರಿ ಮಾಡೋಣ ಹಾಗೂ ನೀವು ನಮ್ಮೊಂದಿಗೆ ಬರಲೂ ಬಹುದು. ಸ್ವತಂತ್ರರಾಗಿ ಇರಲೂ ಬಹುದು” ಎಂದು ಮಗ ಹೇಳಿದ ಮಾತುಗಳು ಕಿವಿಯಲ್ಲಿ ಗುಂಯ್ಗುಡುತಿದ್ದವು.

ಫೋಟೋ ಕೃಪೆ : google

ಈಗ ಮಡದಿ ಸತ್ತು ಎರಡು ತಿಂಗಳಾಗಿತ್ತು. ಕಾಟಾಚಾರಕ್ಕೆ ಮಗ ಕರೆ ಮಾಡುತಿದ್ದರೂ ಸೊಸೆ ಮಾತ್ರ ಬಾಯ್ತುಂಬಾ ಮಾವ ಅಂತ ಕರೇತಾನೇ ಇರಲಿಲ್ಲ. ಅಲ್ಲಿ ಹೋದರೆ ತನ್ನ ಅವಸ್ಥೆ ಏನಾದೀತು ಎಂಬ ಸ್ಪಷ್ಟ ಚಿತ್ರಣ ರಾಯರ ಎದುರಿಗಿತ್ತು. ಈಗ ಮನೆಯನ್ನು ಅರ್ಧ ಕೆಡವಿ ತನ್ನ ಗೆಳೆಯರ ಸಹಾಯದಿಂದ ಗೋಪಾಲರಾಯರು ಮನೆಗೆ ಒಂದು ಹೊಸ ರೂಪವನ್ನು ಕೊಟ್ಟಿದ್ದರು.

ಒಂದು ದಿನ ಹೇಳಿದಂತೆ ಆಸ್ಟ್ರೇಲಿಯಾದಿಂದ ಮಗ ಬಂದು ಗೇಟಿನ ಬಳಿ ನಿಂತಿದ್ದ. ಬದಲಾದ ಮನೆಯ ಸ್ವರೂಪ ಹಾಗೂ ಹೆಸರನ್ನು ನೋಡಿ ದಂಗಾದ. ಹಿಂದಿನ ಗೋಪಾಲ ಸದನ ಹೋಗಿ ಶಾಂತಿ ಸದನ ಎಂದು ಹೆಸರು ಬದಲಾಗಿತ್ತು. ಮನೆಯ ಹೊರಗೆ ಇಬ್ಬರು ವಯಸ್ಸಾದ ವ್ಯಕ್ತಿಗಳು ಕುರ್ಚಿಯನ್ನು ಹಾಕಿ ಕುಳಿತು ಇವನನ್ನು ನೋಡಿ ” “ಯಾರು ಬೇಕು” ಎಂದು ಕೇಳಿದಾಗ ಮಗನ ಜೀವ ಬಾಯಿಗೆ ಬಂದಿತ್ತು. ಅಷ್ಟರಲ್ಲಿ ದೂರದಲ್ಲಿ ‌ಅಪ್ಪ ಗೋಪಾಲರಾಯರನ್ನು ಕಂಡು ” ಅಪ್ಪಾ “ಎಂದು ಕರೆದ ಮಗನನ್ನು ಕಂಡು “ಸಾವಿತ್ರಿ ಸಾವಿತ್ರಿ” ಎಂದು ಕರೆದ ಗೋಪಾಲರಾಯರು‌ ” ಅತಿಥಿಗಳು ಬಂದ್ಯಾರ ನೀರಡಿಕೆ ಕೊಟ್ಟು ಉಪಚರಿಸು” ಅಂದಾಗ ಮಗ ಮತ್ತೂ ಭೂಮಿಗಿಳಿದು ಹೋದ.

ಹೊರಗೆ ಬಂದ ಸಾವಿತ್ರಿ ಯಾರೆಂದು ತಿಳಿಯದೆ ” ಬನ್ನಿ ” ಎಂದು ಕರೆದಾಗ ಗೋಪಾಲರಾಯರು ಮುಂದೆ ಬಂದು ” ಇವಳು ಸಾವಿತ್ರಿ, ಆಕೆಯೂ ಅನಾಥೆ, ನಾನೂ ಅನಾಥ ಈಗ ಒಬ್ಬರಿಗೊಬ್ಬರು ಆಧಾರ, ಅಷ್ಟೇ ಅಲ್ಲ ಯಾರೂ ಇಲ್ಲದ ಅನಾಥರಿಗೆ ಇದುವೇ ಶಾಂತಿ ಸದನ” ಎಂದು ಹೇಳಿ ಮುಂದೆ ಹೋದರು. ಮಗ ಬಂದ ದಾರಿಗೆ ಸುಂಕವಿಲ್ಲದಂತೆ ಜಿನುಗುತಿದ್ದ ಕಣ್ಣೀರನ್ನು ಒರೆಸಿ ವಾಪಸು ಹೊರಟ. ಮನೆಯನ್ನು ಮಾರಿ ಬಂದ ಹಣದಲ್ಲಿ ತಂದೆಯನ್ನು ಆಶ್ರಮಕ್ಕೆ ಸೇರಿಸಿ ಉಳಿದ ಹಣವನ್ನು ತನ್ನ ಹೆಸರಿನಲ್ಲಿ ಇಡುವ ಅವನ ಪ್ಲಾನ್ ನ್ನು ರಾಯರು ಬುಡ ಮೇಲು ಮಾಡಿದ್ದರು.


  • ವಸುಧಾಪ್ರಭು, ಮುಂಬೈ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading