ಪಶುವೈದ್ಯ ಜಗತ್ತು ಒಂದು ವಿಸ್ಮಯ ಲೋಕ – ಡಾ.ಯುವರಾಜ ಹೆಗಡೆ



ಸೀನ ನಾಯ್ಕರು ಜೀವನಾಧಾರವಾಗಿದ್ದು ಆ ಹೆಚ್.ಎಫ್ ಹಸು. ಅದು ಎಳು 7 ತಿಂಗಳ ಗಬ್ಬವಾದಾಗ ಗರ್ಭಕೋಶಕ್ಕೆ ತೊಂದರೆಯಾಗಿ ಶಸ್ತ್ರಚಿಕಿತ್ಸೆ ಮಾಡುವುದು ಅನಿವಾರ್ಯವಾಯಿತು. ಆಗ ಕರು ಬದುಕುಳಿಯಲಿಲ್ಲ. ಹಸುವು ಕೂಡಾ ಬದುಕುವುದು ಕಷ್ಟವಾಗಿತ್ತು, ಪಶು ವೈದ್ಯರಾದ ಯುವರಾಜ ಹೆಗಡೆ ಅವರು ಅದಕ್ಕೆ ದಯಾಮರಣ ನೀಡುವುದೇ ಉತ್ತಮ ಎಂದು ನಿರ್ಧರಿಸಿದ್ದರು ಕೂಡಾ. ಆದರೆ ಅಚ್ಚರಿಯೊಂದು ಕಾದಿತ್ತು. ಮುಂದೆ ಓದಿ…

ಪಶುವೈದ್ಯ ಜಗತ್ತು ಒಂದು ವಿಸ್ಮಯ ಲೋಕ. ಪಶುವೈದ್ಯನಾಗಿರುವ ನನಗೆ ವೃತ್ತಿಯಲ್ಲಿ ಹಲವಾರು ನಂಬಲ ಸಾಧ್ಯವಾದ ವಿಸ್ಮಯಗಳು ಘಟಿಸುತ್ತಲೇ ಇರುತ್ತವೆ. ಇತ್ತೀಚೆಗೆ ಆರಗ ಪಂಚಾಯತಿ ವ್ಯಾಪ್ತಿಯ ಹಿರೇಗದ್ದೆ ಗ್ರಾಮದ ಸೀನ ನಾಯ್ಕರ #ಹಸು ಅನಿವಾರ್ಯವಾಗಿ ಸಿಸೇರಿಯನ್ ಗೆ ಒಳಪಟ್ಟಾಗ ಅದರ ಆರೋಗ್ಯದಲ್ಲಿ ಉಂಟಾದ ಗಂಭೀರ ಸಮಸ್ಯೆಯನ್ನು ನೋಡಿ ಒಂದೆರಡು ದಿನಗಳಲ್ಲಿ ಸಾವು ಸಂಭವಿಸಬಹುದೆಂದು ಊಹಿಸಿದ್ದರೂ ಆಶ್ಚರ್ಯಕರ ರೀತಿಯಲ್ಲಿ ಹಸು ಬದುಕುಳಿದು ನನ್ನ ವಿಸ್ಮಯ ಜಗತ್ತಿನ ಪುಟಗಳಲ್ಲಿ ಸೇರಿತು.

ದಾಸನಗದ್ದೆ ಸೀನನಾಯ್ಕರು ಬದುಕಿನುದ್ದಕ್ಕೂ ಕಷ್ಟಕೋಟಲೆಗಳನ್ನೇ ಎದುರಿಸಿ ಸಂಸಾರದ ನೋಗವನ್ನು ಎಳೆಯುತ್ತಾ ಕುಟುಂಬದ ಜವಾಬ್ದಾರಿಯನ್ನು ನಿರ್ವಹಿಸಿದವರು. ಕೃಶಕಾಯ , ಸುಕ್ಕುಗಟ್ಟಿದ ತ್ವಚೆ, ಹಣೆಯ ಮೇಲಿನ ನೆರಿಗೆಗಳು ಅವರ ಪರಿಶ್ರಮದ ಬದುಕನ್ನು ಸಾರಿ ಹೇಳುತ್ತಿದ್ದವು. ಬದುಕಿನ ಬಂಡಿ ಎಳೆಯಲು ಹೈನುಗಾರಿಕೆಯೆಂಬ ಉಪಕಸುಬನ್ನು ಅವಲಂಬಿಸಿ ಕಳೆದ ಹದಿನೈದು ವರ್ಷಗಳಿಂದ ಮಿಶ್ರತಳಿ ರಾಸುಗಳ ಸಾಕಾಣಿಕೆ ಮಾಡುತ್ತಿದ್ದವರು.

ಕಳೆದ ತಿಂಗಳು ಮಧ್ಯಾಹ್ನದ ಸಮಯದಲ್ಲಿ ಅವರಿಂದ ಮೊಬೈಲ್ ಕರೆಯೊಂದು ಬಂದಿತ್ತು. ಸಾರ್ …ನಮ್ಮ ಮನೆಯ 7 ತಿಂಗಳು ಗಬ್ಬದ #ಹೆಚ್_ಎಫ್_ಹಸು ನಿನ್ನೆಯಿಂದ ತನ್ನ ಹಿಂಗಾಲನ್ನು ಆಗಾಗ್ಗೆ ಬಡಿದುಕೊಳ್ಳುತ್ತಿದೆ, ಭಯವಾಗ್ತಿದೆ ಬಂದೋಗಿ ಸಾರ್ ಎಂದು ಕೋರಿದ್ದರು. ನನಗಂತೂ ಆ ದಿನ ಪಶು ಆಸ್ಪತ್ರೆಯಲ್ಲಿ ವಿಪರೀತ ಕೆಲಸ. ಹಾಗಾಗಿ ನೋಡುತ್ತೇನೆ ಎಂದಷ್ಟೇ ಹೇಳಿದ್ದೆ. ಸಂಜೆ ಕೆಲಸ ಮುಗಿದಾಗ ತೀರಾ ನಿತ್ರಾಣನಾಗಿದ್ದರೂ ಅರೆಮನಸ್ಸಿನಿಂದಲೇ ಸೀನನಾಯ್ಕರ ಮನೆಯ ಕಡೆ ಬೈಕ್ ತಿರುಗಿಸಿದೆ. ಪ್ರತಿ ದಿನವೂ ರಾತ್ರಿ 9 ಕ್ಕೆ ಮನೆ ಸೇರುವ ಅಭ್ಯಾಸ ಕೈಬಿಟ್ಟು ಚುರುಕಿನಿಂದ ಕೆಲಸ ಪೂರೈಸಿ ಕನಿಷ್ಠ 7 ಗಂಟೆಗಾದರೂ ಮನೆ ತಲುಪುವ ಪ್ರಯತ್ನ ನಡೆದಿತ್ತು. ಬೈಕ್ ಇಳಿದವನೇ ಸೀದಾ ಕೊಟ್ಟಿಗೆಯ ಕಡೆ ನಡೆದವನನ್ನು ಅವರ ಮನೆಯ ನಾಯಿ ಅಡ್ಡಗಟ್ಟಿದಾಗ ತಬ್ಬಿಬ್ಬಾದ ಸೀನನಾಯ್ಕರು ಎಲಾ ಕುನ್ನಿ ಮನೆಗೆ ಬಂದವರ್ಯಾರು ಅಂತ ತಿಳೀದಿಲ್ವ ಹಚ್ ಹಚಾ ಎನ್ನುತ್ತಾ ಅವರು ಕೂಡ ಕೊಟ್ಟಿಗೆಗೆ ದೌಡಾಡಿಸಿದರು. ಒಂದೇ ಉಸಿರಿನಲ್ಲಿ ಕೇಳಿದೆ…… ಏನಾಗಿದೆ ? ಸಾರ್ ಕಾಲು ಕೊಡಕುತ್ತಿದೆ . “ಸರಿ ದನ ಹಿಡ್ಕೊಳ್ಳಿ, ಮಲೆನಾಡಿನ ಮಳೆಗಾಲದಲ್ಲಿ ಮಿಶ್ರ ತಳಿಗಳಿಗೆ ಗೊರಸು ಹೇಸುವುದು ಸಾಮಾನ್ಯ” ಎಂದು ನೋವು ನಿವಾರಕ ಹಾಗೂ ಆಂಟಿಬಯೋಟಿಕ್ ಚುಚ್ಚುಮದ್ದು ನೀಡಿದವನೇ, ಗುಣವಾಗಲು ಎರಡು ದಿನ ಸಮಯ ಬೇಕು ಎಂದು ಮತ್ತೆ ಬೈಕ್ ಏರಿದೆ. ಹೀಗೆ ಹೊರಟವನಿಗೆ ಅದೇಕೋ ವೃತ್ತಿ ಧರ್ಮ ಗುಣಗಳು ತಡೆದು ನಿಲ್ಲಿಸಿದವು. ಇಲ್ಲಾ … “ಆತುರದ ಚಿಕಿತ್ಸೆ ಅಪಾಯಕ್ಕೆ ಆಹ್ವಾನ ” ಎಂದು ಮನಸ್ಸು ಒತ್ತಿ ಹೇಳಿತು. ಹಸುವನ್ನು ಸಾವಕಾಶವಾಗಿ ಮತ್ತಷ್ಟು ಪರೀಕ್ಷಿಸಿ ನೋಡಬೇಕಾದ ಅವಶ್ಯಕತೆ ಇದೆ ಎಂದು ಅರಿತು ಮತ್ತೊಮ್ಮೆ ಕೊಟ್ಟಿಗೆಯ ಕಡೆ ಹೋದೆ. ಹತ್ತು ನಿಮಿಷ ಸಮಾಧಾನದಿಂದ ನಿಂತು ಹಸುವನ್ನು ಗಮನಿಸಿದೆ. ಅದು ಬೆನ್ನು ಮುರಿಯುತ್ತಾ, ಪದೇ ಪದೇ ಮಲಗಿ ಏಳುತ್ತಿತ್ತು. ತನ್ನ ಹಿಂಗಾಲುಗಳನ್ನು ನೋವಿನಿಂದ ಹೊಡೆದುಕೊಳ್ಳುತ್ತಿತ್ತು. “ಅದು ಗಬ್ಬದ ಹಸುವಾದ ಕಾರಣ ಗರ್ಭಕೋಶಕ್ಕೆ ಏನೋ ಗಂಭೀರ ಸಮಸ್ಯೆಯಾಗಿರಬಹುದು” ಎಂದು ಬಲವಾಗಿ ಅನಿಸಲಾರಂಭಿಸಿತು. ಕೈಗೆ ಗ್ಲೊವ್ಸ್ ಹಾಕಿದವನೆ ಗರ್ಭಕೋಶದ ಸ್ಥಿತಿ, ಕರುವಿನ ಚಲನೆ ಹೇಗಿದೆ ಎಂದು ಪರಿಶೀಲಿಸಿದಾಗ ನಿಜಕ್ಕೂ ಬೆರಗಾಯಿತು. ಗರ್ಭಕೋಶ ಸುಮಾರು ಎರಡರಿಂದ ಮೂರು ಸುತ್ತು ತಿರುಗಿ ಹೋಗಿದೆ. ಇದಕ್ಕೆ ನಾವು Torsion ಎಂದು ಹೇಳುತ್ತೇವೆ. ಸಣ್ಣ ಪ್ರಮಾಣದಲ್ಲಿ ಗರ್ಭಕೋಶ ಸುತ್ತುವರೆದಿದ್ದರೆ ಹಸುವನ್ನು ನೆಲದ ಮೇಲೆ ಉರುಳಿಸುತ್ತಾ ಸರಿಪಡಿಸುತ್ತೇವೆ. ಆದರ ಸುಮಾರು 500 ಕೆ ಜಿ ತೂಕದ ಹಸು, ಅಲ್ಲದೆ ಗರ್ಭಕೋಶ ಎರಡು ಮೂರು ಭಾರಿ ತಿರುಗಿಹೋಗಿದೆ . ಇದಕ್ಕೆ ಶಸ್ತ್ರಚಿಕಿತ್ಸೆಯೊಂದೇ ಪರಿಹಾರ ಎಂದು ಸೀನ ನಾಯ್ಕರಿಗೆ ಅರಿಯುವಂತೆ ಹೇಳಿ, ಬೆಳಿಗ್ಗೆ 10 ಗಂಟಗೆ ಸಿಸೇರಿಯನ್ ಶಸ್ತ್ರ ಚಿಕಿತ್ಸೆ ಮಾಡುವುದಾಗಿ ಸಮಯ ನಿಗದಿಗೊಳಿಸಿದೆ. ಶಸ್ತ್ರ ಚಿಕಿತ್ಸೆಯ ಸಾಧಕ ಬಾಧಕಗಳ ಕುರಿತಾಗಿ ವಿವರಿಸಿದಾಗ ಸೀನ ನಾಯ್ಕರು ಚಿಂತಾಕ್ರಾಂತರಾದರು. ವಾರದ ಹಿಂದಷ್ಟೇ ಯಾವುದೋ ಸೋಂಕಿನಿಂದ ಇಷ್ಟೇ ಒಳ್ಳೆಯ ಹಸುವೊಂದು ಮರಣ ಹೊಂದಿತ್ತಂತೆ. ಜೀವನಾಧಾರವಾಗಿದ್ದ ಹಸುಗಳು ಈ ರೀತಿ ಸಮಸ್ಯೆಗೆ ಸಿಲುಕಿದಾಗ ಜೀವನ ನಿರ್ವಹಣೆಯೇ ದುಸ್ಥರ ಎನ್ನುವಷ್ಟರ ಮಟ್ಟಿಗೆ ಆತಂಕ ಅವರಲ್ಲಿ ಮನೆಮಾಡಿದ್ದು ಮುಖದಲ್ಲಿ ಗೋಚರವಾಗುತ್ತಿತ್ತು.

ಫೋಟೋ ಕೃಪೆ : farmersweekly

ನಮ್ಮ ಪಶು ಆಸ್ಪತ್ರೆಗೆ ಆಕಾಶ್ ಎಂಬ #ಹಾಸನ ಪಶುವೈದ್ಯಕೀಯ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಯೊಬ್ಬರು ಕಲಿಯಲು ಬರುತ್ತಾರೆ. ಆಗಾಗ ಅವರು “ಸಾರ್ ನನಗೊಂದು ಸಿಸೇರಿಯನ್ ತೋರಿಸಿಕೊಡಿ” ಎಂದು ಕೇಳಿಕೊಳ್ಳುತ್ತಿದ್ದರು. ಕಲಿಸಲು ಇದೊಂದು ಸದಾವಕಾಶವೆಂದು ಮರುದಿನ ಅವರನ್ನು ಜೊತೆಗೆ ಕರೆದೊಯ್ದೆ. ಸಹಾಯಕರಾಗಿ ಆರಗ ಪಶುಚಿಕಿತ್ಸಾಲಯದ ಸಿಬ್ಬಂದಿಗಳಾದ ಅಕ್ಷಯ ಮತ್ತು ಡಿ. ದರ್ಜೆ ನೌಕರರನ್ನು ಬರಹೇಳಿ ದಾಸನಗದ್ದೆ ತಲುಪಿದೆ. ಇದರ ನಡುವೆ ಸೀನ ನಾಯ್ಕರಿಗೆ ಮತ್ತೊಂದು ಸಮಸ್ಯೆ ಎದುರಾಗಿತ್ತು. ಇತ್ತ ಜೀವನ ನಿರ್ವಹಣೆಗೆ ಆಧಾರವಾಗಿದ್ದ ಹಸು ಸಮಸ್ಯೆಗೆ ಸಿಲುಕಿದ್ದರೆ, ಅತ್ತ ಒಬ್ಬಳೇ ಮಗಳು ಲಕ್ಷ್ಮಿಗೆ ತೀರ್ಥಹಳ್ಳಿಯ ಸರ್ಕಾರಿ ಆಸ್ಪತ್ರೆಯಲ್ಲಿ ಅಂದೇ ಸಿಸೇರಿಯನ್ ಶಸ್ತ್ರ ಚಿಕಿತ್ಸೆಯಾಗಿ ಮೊಮ್ಮಗ ಜನಿಸಿದ್ದಾನೆ. ಮನೆ ಮಗಳನ್ನೂ, ಮೊಮ್ಮಗನನ್ನೂ ನೋಡಲಾಗದ ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ತಂದೆ. ಅಳಿಯ ಇನೀತ್ ಕೂಡ ನನ್ನ ಮೇಲಿನ ಅಭಿಮಾನಕ್ಕೆ ನಮ್ಮ ಸಹಾಯಕ್ಕೆ ನಿಂತರು. ಪರಿಸ್ಥಿತಿಯ ಸೂಕ್ಷತೆಯನ್ನು ಅರಿತ ನಾನು ತಡಮಾಡದೆ ಸುತ್ತಮುತ್ತಲಿನ ಗ್ರಾಮಸ್ಥರನ್ನು ಒಟ್ಟುಗೂಡಿಸಿ ಹಸುವಿನ ಸಿಸೇರಿಯನ್ ಪ್ರಾರಂಭಿಸಿದೆ. ಶಸ್ತ್ರಚಿಕಿತ್ಸೆಯ ಪ್ರತಿಹಂತಗಳನ್ನೂ ಕಲಿಯಲು ಬಂದಿದ್ದ ಆಕಾಶ್ ಗೆ ವಿವರಿಸಲಾರಂಭಿಸಿದೆ. ಅರಿವಳಿಕೆ ನೀಡಿ ಉದರವನ್ನು ಸೀಳಿ ಗರ್ಭಕೋಶವನ್ನು ಮೇಲಕ್ಕೆತ್ತಿದೆ. ಅಯ್ಯೋ…ವಿಧಿಯೇ!!! ಅದಾಗಲೇ ನನ್ನ ಕೈ ಮೀರಿತ್ತು. ಗರ್ಭಕೋಶವು ಹಲವಾರು ಭಾರಿ ಸುತ್ತಿಕೊಂಡಿದ್ದರಿಂದ, ಅದಕ್ಕೆ ರಕ್ತ ಸರಭರಾಜು ಮಾಡುವ ರಕ್ತ ನಾಳಗಳು ನಿಸ್ತೇಜಗೊಂಡು ಕೆಲಸ ನಿಲ್ಲಿಸಿದಂತೆ ಕಂಡುಬಂದಿತು. ಇದರ ಪರಿಣಾಮ ಗರ್ಭಕೋಶ ಕಂದು ಬಣ್ಣಕ್ಕೆ ತಿರುಗಿತ್ತು.

ಫೋಟೋ ಕೃಪೆ : Moocall

ಕರು ಕೊಳೆತು ವಾಸನೆ ಹುಟ್ಟಿತ್ತು. ಆಕಾಶನ ಮುಖವನ್ನೊಮ್ಮೆ ನೋಡಿದೆ. ಗರ್ಭಕೋಶದ ಬಣ್ಣ ಬದಲಾವಣೆಯಾಗಿರುವ ಕಾರಣ ಈ ಹಸು ಬದುಕುಳಿಯುವುದು ಸಾಧ್ಯವಿಲ್ಲ. ಇದಿನ್ನು ವ್ಯರ್ಥ ಪ್ರಯತ್ನ ಮಾಡುವುದು ಬೇಡ. ಇಂತಹ ಹಲವಾರು ಸಂದರ್ಭಗಳನ್ನು ಎದುರಿಸಿದ್ದ ನನಗೆ, ಈ ಹಸು ಉಳಿಯುವುದಿಲ್ಲ ಎಂಬ ಖಾತ್ರಿಯಾಗಿತ್ತು. ಈ ಹಸು ಕೂಡ ನರಳಿ ನರಳಿ ಜೀವ ಬಿಡುತ್ತದೆ. ಅದಕ್ಕಿಂತ ದಯಾಮರಣ ನೀಡುವುದೇ ಸೂಕ್ತ ಎಂಬ ಅಭಿಪ್ರಾಯ ನನ್ನದಾಗಿತ್ತು. ಆದರೆ ಕಲಿಯಲು ಬಂದಿದ್ದ ಆಕಾಶ್ ಮುಖದಲ್ಲಿ ನಿರಾಸೆ ಮೂಡಿತು. ಆತ ಏನೂ ಮಾತನಾಡದೆ ಬೇಸರದಿಂದ ಸುಮ್ಮನಿದ್ದರು. ಅವರಿಗೆ ಶಸ್ತ್ರಚಿಕಿತ್ಸೆಯ ಕ್ರಮಗಳನ್ನು ಕಲಿಸುವ ಏಕೈಕ ಕಾರಣಕ್ಕಾಗಿ ಸಿಸೇರಿಯನ್ನು ಮುಂದುವರೆಸಿ ಅರೆಮನಸ್ಸಿನಿಂದಲೇ ಶಸ್ತ್ರಚಿಕಿತ್ಸೆ ಪೂರ್ಣಗೊಳಿಸಿದೆ . ಸೀನನಾಯ್ಕರನ್ನು ಪಕ್ಕಕ್ಕೆ ಕರೆದು ಇನ್ನು ಕೆಲವೇ ಗಂಟೆಗಳಲ್ಲಿ ಅಥವಾ ಒಂದೆರಡು ದಿನಗಳಲ್ಲಿ ಹಸು ಮರಣಹೊಂದಬಹುದು, ಕ್ಷಮಿಸಿ. ನನ್ನೆಲ್ಲಾ ಪ್ರಯತ್ನ ಮಾಡಿರುವೆ ಇನ್ನು ಇದಕ್ಕೆ ದುಬಾರಿ ಔಷಧ ಕೊಟ್ಟು ನಿಮ್ಮ ಹೊರೆ ಹೆಚ್ಚಿಸಲಾರೆ ಎಂದು ನೀವು ನಿಮ್ಮ ಮಗಳು, ಮೊಮ್ಮಗನನ್ನು ನೋಡಲು ಆಸ್ಪತ್ರೆಗೆ ಹೊರಡಿ ಎಂದು ನನ್ನ ಕೈ ಹಿಸುಕಿಕೊಳ್ಳುತ್ತಾ ಅಸಹಾಯಕ ನುಡಿಗಳನ್ನಾಡಿದೆ.

ಇತ್ತ ವಾರದ ಹಿಂದಷ್ಟೇ ಹಸುವನ್ನು ಕಳೆದುಕೊಂಡು ನಷ್ಟ ಅನುಭವಿಸಿದ್ದರ ಜೊತೆಗೆ ಜೀವನಾಧಾರವಾಗಿದ್ದ ಮತ್ತೊಂದು ಹಸುವೂ ಒಂದೆರಡು ದಿನಗಳಲ್ಲಿ ಮರಣಹೊಂದಬಹುದಾದ ಸನ್ನಿವೇಶ ಒಂದು ಕಡೆಯಾದರೆ ಮತ್ತೊಂದು ಕಡೆ ಮಗಳ ಮೊಮ್ಮಗನ ಆರೋಗ್ಯ ವಿಚಾರಿಸಲು ಹೋಗಲೂ ಅಸಾಹಯಕರಾಗಿದ್ದ ಸೀನನಾಯ್ಕರ ಪರಿಸ್ಥಿತಿ ಕಂಡು ಮರುಗಿದೆ.

(ಪಶುವೈದ್ಯ ಡಾ.ಯುವರಾಜ ಹೆಗಡೆ ಅವರೊಂದಿಗೆ ಸೀನ ನಾಯ್ಕ )

ಒಂದೆರಡು ದಿನಗಳು ಮಾತ್ರ ನಿರೀಕ್ಷೆ ಇಟ್ಟು ಬೇಸರದಲ್ಲಿದ್ದು ನನಗೆ ಐದಾರು ದಿನಗಳಲ್ಲಿ ಹಸುವಿನ ಆರೋಗ್ಯದಲ್ಲಿ ಆಶ್ಚರ್ಯಕರವಾಗಿ ಚೇತರಿಕೆ ಕಾಣಲಾರಂಭಿಸಿ ಕುತೂಹಲ ಹೆಚ್ಚಾಗತೊಡಗಿತ್ತು. ಪ್ರತಿದಿನವೂ ಅದಕ್ಕೆ ಚಿಕಿತ್ಸೆ ನೀಡಲು ತಿಳಿಸಿದ್ದ ಅಕ್ಷಯನಿಗೆ ಫೋನ್ ಮಾಡಿ ಆರೋಗ್ಯ ವಿಚಾರಿಸುತ್ತಿದ್ದೆ. ಎರಡು ವಾರಗಳ ನಂತರ ಭೇಟಿ ನೀಡಿ ಪರೀಕ್ಷಿಸಿದಾಗ ನಂಬಲಾರದಷ್ಟು ಚೇತರಿಕೆ ಕಂಡು ಹಸು 4 ಲೀಟರ್ ಹಾಲು ಕೊಡುವ ಮಟ್ಟಿಗೆ , ಶಸ್ತ್ರಚಿಕಿತ್ಸೆಯ ಗಾಯ ಒಣಗಿ ಗುಣವಾಗುವ ಹಂತ ತಲುಪಿತ್ತು.

ಸೀನನಾಯ್ಕರ ಮಗಳು ಲಕ್ಷಿ

ಸಂತಸದಿಂದ ತಮ್ಮ ಮಗುವನ್ನು ತಂದು ನನಗೆ ತೋರುತ್ತಾ, ನಿಮ್ಮ ದೃಷ್ಟಿ ಬೀರಿದರೆ ಮಗನಿಗೆ ಒಳ್ಳೆಯದಾಗುತ್ತದೆ ಸಾರ್ ಆಶೀರ್ವದಿಸಿ ಎಂದು ಮಗುವನ್ನಿತ್ತರು. ಹರುಷದಿಂದ ಸೀನ ನಾಯ್ಕರು ಏನೋ ಸ್ವಾಮಿ… ಎಲ್ಲಾ ನಿಮ್ಮ ಕೈ ಗುಣ ಎಂದು ಹಾರೈಸುತ್ತಾ ಬೀಳ್ಕೊಟ್ಟರು.

(ಸೀನ ನಾಯ್ಕರ ಕುಟುಂಬ)

ನಮ್ಮ ಪಶುವೈದ್ಯ ಜಗತ್ತೇ ಹೀಗೆ, ಅನೇಕ ವಿಸ್ಮಯಗಳ ಆಗರ. ವೈದ್ಯನಾದ ನಾನು ವಿಶ್ವಾಸ ಕಳೆದುಕೊಂಡಾಗಲೂ, ಹಸು ಅತ್ಯಂತ ಸಂಕಷ್ಟದ ಪರಿಸ್ಥಿತಿಯಲ್ಲೂ ಬದುಕುಳಿದು ನನ್ನ ವೈದ್ಯಕೀಯ ಜ್ಞಾನಕ್ಕೆ ಸವಾಲಗುವ ಮಟ್ಟಿಗೆ ಆಶ್ಚರ್ಯವನ್ನುಂಟುಮಾಡಿತು. ಮುಂದಿನ ಭಾರಿ ಗರ್ಭಧರಿಸುವುದೇ ಎಂದು ಈಗ ಕಾದುನೋಡಬೇಕಿದೆ. ಅದೂ ಸಾದ್ಯವಾದರೆ ಮತ್ತೊಂದು ವಿಸ್ಮಯ ಎಂದು ಭಾವಿಸುವೆ.


  • ಡಾ. ಯುವರಾಜ್ ಹೆಗಡೆ  (ಪಶುವೈದ್ಯರು,ವೈದಕೀಯ ಬರಹಗಾರರು) ತೀರ್ಥಹಳ್ಳಿ

 

 

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW