ಸ್ನಾತಕೋತ್ತರ ಪದವಿಯಲ್ಲಿ ಆಫ್ರೀಕನ್ ಸಾಹಿತ್ಯವನ್ನು ಚುರು ಪಾರು ಓದಿಕೊಂಡ ನೆನಪು. ಚಿನುವಾ ಅಚಿಬೆ, ವೋಲೆ ಸೋಯಿಂಕಾ, ಗೆಬ್ರಿಯಲ್ ಒಕಾರಾ, ಪೆಡ್ರಿಕ್ ಡೊಗ್ಲಾಸರ ಬಗ್ಗೆ ಸ್ವಲ್ಪ ಓದಿದ ನೆನಪನ್ನು ಮರುಕಳಿಸಿದ್ದು ವೋಲೆ ಸೋಯಿಂಕಾ ವಾಚಿಕೆ- ಮಾಲಾ.ಮ.ಅಕ್ಕಿಶೆಟ್ಟಿ, ಮುಂದೆ ಓದಿ…
ವೋಲೆ ಸೋಯಿಂಕಾನ ಕೆಲವು ಕವಿತೆಗಳು, ಭಾಷಣ, ಸಂದರ್ಶನ, “ಸಾವು ಮತ್ತು ರಾಜನ ಕುದುರೆ ಸವಾರ” ನಾಟಕ, ಲೇಖಕರ ಮತ್ತು ಅನುವಾದಕರ ಮಾತುಗಳನ್ನು ವೋಲೆ ಸೋಯಿಂಕಾ ವಾಚಿಕೆ ಒಳಗೊಂಡಿದೆ.
ಪುಸ್ತಕ: ವೋಲೆ ಸೋಯಿಂಕಾ ವಾಚಿಕೆ
ಆಯ್ಕೆ ಮತ್ತು ಅನುವಾದ: ಜ.ನಾ.ತೇಜಶ್ರೀ
“ಕಳೆದುಹೋದ ಕವಿತೆಗಳು”, “ಅನಿಸುತ್ತಿದೆ ನನಗೆ ಮಳೆ ಬರಲಿದೆ ಎಂದು” ಕವಿತೆಗಳು ಗಮನ ಸೆಳೆದರೆ, ಭಾಷಣವು ಬದಲಾಗುತ್ತಿರುವ ಭಯದ ಕುರಿತಾಗಿದೆ. ಸಂದರ್ಶನದಲ್ಲಿ ಸೋಯಿಂಕಾ ಬಾಲ್ಯದಿಂದ ಹಿಡಿದು, ಈಗಿನ ಯುವಬರಹಗಾರರಿಗೆ ಕೊಡುವ ಕೆಲ ಮಾರ್ಗದರ್ಶನಗಳನ್ನು ಒಳಗೊಂಡಿದೆ. ತನ್ನನ್ನು ಸುಮ್ಮನೆ ಸೋಮಾರಿ ಬರಹಗಾರ ಎಂದುಕೊಳ್ಳುವ ಸೋಯಿಂಕಾ, ನಿಜಾರ್ಥದಲ್ಲಿ ಬರೆಯಲು ಕುಳಿತರೆ ಮುಗಿಸುವವರೆಗೂ ಪಾತ್ರಗಳ ಬಿಡಲ್ಲವೆಂದು ಹೇಳುತ್ತಾರೆ. ಹೊಸ ಬರಹಗಾರರಿಗೆ ಸಲಹಾತ್ಮಕವಾಗಿ ಒಂದು ಬುಟ್ಟಿಯನ್ನು ರೆಡಿ ಮಾಡಿಕೊಳ್ಳಿ ಎನ್ನುವ ಇವರು, ತಿರಸ್ಕೃತ ಚೀಟಿಗಳನ್ನು ಹಾಕಿಕೊಳ್ಳಲು ಹೇಳುತ್ತಾರೆ. ಬರೆಯುವುದನ್ನು ಈ ಪರಿ ಮುಂದುವರೆಸಬೇಕೆಂದರೆ ಆ ತಿರಸ್ಕೃತ ಬುಟ್ಟಿ ತುಂಬಿ ತುಳುಕಬೇಕು ಮತ್ತು ನಮ್ಮ ಬರವಣಿಗೆ ಸಾಗ್ತಾ ಇರಬೇಕು ಎನ್ನುತ್ತಾರೆ. ಜೊತೆಗೆ ಸಿದ್ಧಾಂತಗಳಲ್ಲಿ ಮೈಮರೆಯಬೇಡಿ ಅಂತನೂ ಸೂಚಿಸುತ್ತಾರೆ.
ಬ್ರಿಟಿಷ್ ಅಧಿಪತ್ಯದಲ್ಲಿ ನೈಜೀರಿಯಾದಲ್ಲಿ ನಡೆದ ಸತ್ಯ ಘಟನೆ ನಾಟಕದ ವಸ್ತು. ಯೊರೂಬಾ ಸಂಪ್ರದಾಯಕತೆ ನಾಟಕದ ತಿರುಳು.ಬುಡಕಟ್ಟು ಸಂಪ್ರದಾಯಗಳಿಗೆ ಅದರದೇ ಆದ ವೈಶಿಷ್ಟ್ಯವಿದೆ. ಇಂಥದ್ದೇ ಬುಡಕಟ್ಟಿನ ರಾಜನೊಬ್ಬ ಸಾಯುತ್ತಾನೆ. ಸಂಪ್ರದಾಯದಂತೆ, ರಾಜನ ಕುದುರೆ ಸವಾರನೂ ರಾಜನೊಂದಿಗೆ ಅಂತಿಮ ಪಯಣವನ್ನು ಮುಂದುವರೆಸಬೇಕು. ಅದಕ್ಕೆ ಆ ಸವಾರ ತನ್ನನ್ನು ತಾನು ಕೊಂದುಕೊಳ್ಳಬೇಕು ಅಥವಾ ಆತ್ಮಹತ್ಯೆ ಮಾಡಿಕೊಳ್ಳಬೇಕು. ರಾಜನಿಗೆ ಆತ್ಮೀಯರಾದ ನಾಯಿ, ಕುದುರೆ ಈಗಾಗಲೇ ಕೊಲ್ಲಲ್ಪಟ್ಟು ಮರಣ ಹೊಂದಿರುತ್ತವೆ. ರಾಜನ ಅಂತಿಮ ಪಯಣದಲ್ಲಿ ಇವರು ಇರಬೇಕೆಂದು ಅನಿವಾರ್ಯ. ದಾರಿಯಲ್ಲಿ ಒಂಟಿಯಾಗಿ ಇರಬಾರದೆಂದು, ಸಂವಹನ ಸರಿಯಾಗಿರಬೇಕೆಂದು, ಬೇಗನೆ ಮುಕ್ತಿ ಸಿಕ್ಕು ಸ್ವರ್ಗದ ಬಾಗಿಲು ತೆರೆಯಬೇಕೆಂದು ಈ ಪದ್ಧತಿ. ಹೀಗೆ ಮಾಡುವುದರಿಂದ ಇಡೀ ಬುಡಕಟ್ಟು ಸಮುದಾಯಕ್ಕೆ ಒಳ್ಳೆಯದಾಗುತ್ತದೆಂಬ ನಂಬಿಕೆ. ಇದನ್ನು ಆ ಸಮುದಾಯ ಪ್ರೀತಿಯಿಂದ ಒಪ್ಪಿರುವುದು ಮತ್ತು ಕುದುರೆ ಸವಾರ ಅತ್ಯಾನಂದದಿಂದ ಸಾಯಲು ಒಪ್ಪಿಕೊಳ್ಳುವುದು ಆಶ್ಚರ್ಯವನ್ನುಂಟುಮಾಡುತ್ತದೆ. ರಾಜನೊಂದಿಗೆ ಸವಾರ ಸಾಯಬೇಕೆಂದು ಕಡ್ಡಾಯ ಸಂಪ್ರದಾಯ. ಅದುವರೆಗೂ ಆ ಸಂಪ್ರದಾಯಕ್ಕೆ ಯಾವುದೇ ತೊಂದರೆಯಾಗಿರಲಿಲ್ಲ. ಸವಾರನ ಮರಣಾನಂತರ ಆತನ ಹಿರೆಮಗ ಅದರ ಸ್ಥಾನವನ್ನು ತುಂಬಿ ಮುಂದೆ ಬರುವ ಹೊಸ ರಾಜನಿಗೆ ಸವಾರನ ಪಾತ್ರವನ್ನು ವಹಿಸಬೇಕು. ಮತ್ತದೇ ಸಂಪ್ರದಾಯದ ಕಡ್ಡಾಯ.
ಜಿಲ್ಲಾಧಿಕಾರಿಯಾಗಿ ಬಂದ ಸೈಮನ್ ಮತ್ತು ಆತನ ಹೆಂಡತಿ ಜೇನ್ ಳಿಗೆ ಇದೆಲ್ಲ ಕ್ರೂರ ಮತ್ತು ಅಸಂಬದ್ಧ ಪದ್ದತಿಯಂತೆ ಕಾಣುತ್ತದೆ.ಸವಾರ ಎಲೆಸನ್ನ ಮಗ ಒಲುಂಡೆ ವೈದ್ಯಕೀಯ ಶಿಕ್ಷಣವನ್ನು ಪಡೆಯಲು ಬೇರೆಡೆಗೆ ಕಳಿಸುವ ವ್ಯವಸ್ಥೆಯನ್ನು ಜಿಲ್ಲಾಧಿಕಾರಿ ಸೈಮನ್ ಎಲೆಸಿನ್ನ ವಿರುದ್ಧವಾಗಿ ಮಾಡಿರುತ್ತಾನೆ.ಇದು ಎಲೆಸಿನ್ನ ಕೋಪಕ್ಕೆ ಕಾರಣವಾಗಿರುತ್ತದೆ. ವೈದ್ಯಕೀಯ ಶಿಕ್ಷಣ ಮತ್ತು ಆತನಿರುವ ಪ್ರದೇಶ ಆತನಲ್ಲಿ ಯಾವ ಬದಲಾವಣೆಯನ್ನೂ ತಂದಿರಲ್ಲ. ಅದೇ ಬುಡುಕಟ್ಟು ಸಂಪ್ರದಾಯಕ್ಕೆ ಜೋತು ಬಿದ್ದವನಿರುತ್ತಾನೆ. ಇದು ಸೈಮನ್ ಮತ್ತು ಜೇನಳಿಗೆ ಆಘಾತವನ್ನುಂಟುಮಾಡುತ್ತದೆ. ಈ ಮಧ್ಯೆ ಒಲುಂಡೆ ಅಪ್ಪನ ಅಂತ್ಯಸಂಸ್ಕಾರಕ್ಕೆ ಬಂದಿರುತ್ತಾನೆ.
ಭಾರತದಲ್ಲಿ ಬ್ರಿಟಿಷರು ನಮ್ಮಲ್ಲಿರುವ ಸತಿ ಸಹಗಮನ, ಬಾಲ್ಯವಿವಾಹ,ಮೂಢನಂಬಿಕೆ ಮತ್ತು ಹಲವು ಅನಿಷ್ಟ ಪದ್ಧತಿಗಳನ್ನು ಅಳಿಸಿಹಾಕಲು ಮತ್ತು ಶಿಕ್ಷಣವನ್ನು ಎಲ್ಲರಿಗೂ ಕೊಡಲು ಪ್ರಯತ್ನಿಸಿದಂತೆ ಜಿಲ್ಲಾಧಿಕಾರಿ ಸೈಮನ್ ಕುದುರೆ ಸವಾರನ ಆತ್ಮಹತ್ಯೆಯನ್ನು ಆ ರಾತ್ರಿಯೇ ಮಾಡಿಕೊಳ್ಳದಂತೆ ಆ ಸ್ವಲ್ಪ ವೇಳೆ ತಡೆದು ರೂಮಿನಲ್ಲಿ ಕೂಡಿ ಹಾಕುತ್ತಾನೆ. ಅದರಲ್ಲಿ ಯಶಸ್ವಿಯೂ ಆಗುತ್ತಾನೆ. ಆದರೆ ಆ ತಡೆ ತಾತ್ಕಾಲಿಕವಾಗಿರುತ್ತದೆ. ಅಲ್ಲಿ ಯಾರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ? ನಿಜವಾಗಲೂ ಸಂಪ್ರದಾಯದ ಅನುಸರಣೆಯಾಗುತ್ತದೆಯಾ?… ಓದಿಯೇ ತಿಳಿಯಬೇಕು.
ನೈಜೀರಿಯಾದ ಸಂಪ್ರದಾಯ ಬುಡಕಟ್ಟು, ಒಡಪಿನಿಂದ ಕೂಡಿದ ಭಾಷೆ, ಪಾತ್ರಗಳ ಸಂಭಾಷಣೆ, ಪ್ರೆಜ್ ಸಿಂಗರ್ ನ ಮಾತುಗಳು ಮತ್ತು ಪ್ರತಿ ಪಾತ್ರ ಸಮರ್ಥಿಸಿಕೊಳ್ಳುವುದು ಗಮನ ಸೆಳೆಯುತ್ತದೆ. ಸಾಯುವ ಮುನ್ನ ಸವಾರನ ಕೊನೆಯ ಆಸೆಯೆನೆಂದು ಜನ ಕೇಳಿದಾಗ, ಹದಿಹರೆಯದ ಯುವತಿಯನ್ನು ಮದುವಣಗಿತ್ತಿಯನ್ನಾಗಿ ಬಳಸುವುದು ಆತ ಇನ್ನೂ ಪ್ರಾಪಂಚಿಕ ಜೀವನದಿಂದ ಮುಕ್ತನಾಗದಿದ್ದದ್ದು ತಿಳಿಯುತ್ತದೆ. ಸಾಯುವ ವ್ಯಕ್ತಿ ಅದನ್ನು ತ್ಯಜಿಸುವುದು ಕಡ್ಡಾಯವಾಗಿರುತ್ತದೆ. ಮನುಷ್ಯನ ಶಿಕ್ಷಣ, ತಿಳಿವಳಿಕೆ, ಸಂಪ್ರದಾಯಗಳು ಮತ್ತು ಬದಲಾವಣೆಯ ಗಾಳಿ ಇವೆಲ್ಲದರ ಮಧ್ಯೆ ತಿಕಲಾಟ ನಡೆದಿದೆ ಈ ನಾಟಕದಲ್ಲಿ.
ಸೋಯಿಂಕಾನ ಕೃತಿಗಳ ವಾಸ್ತವತೆಯನ್ನು ” ನಿರಾಶಾವಾದಿ” ಎನ್ನುವ ವಿಮರ್ಶಕರನ್ನು ಕಟುವಾಗಿ ಟೀಕಿಸಿದ ಸೋಯಿಂಕಾ, ನಕಾರಾತ್ಮಕ ಕ್ರಿಯೆಯ ಶಕ್ತಿಯನ್ನು ಒಪ್ಪಿಕೊಂಡು ಅದನ್ನು ಮೀರುವ ಪ್ರಯತ್ನ ಮಾಡಬೇಕೆನ್ನುತ್ತಾನೆ.
ಪುಸ್ತಕ ಕಳಿಸಿಕೊಟ್ಟ ಮುದುರಾಜ್ ಬಾಣದ ಮತ್ತು ಪುಸ್ತಕ ಪ್ರಕಟಿಸಿದ ವೈಷ್ಣವಿ ಪ್ರಕಾಶನಕ್ಕೂ ಧನ್ಯವಾದಗಳು.
- ಮಾಲಾ.ಮ.ಅಕ್ಕಿಶೆಟ್ಟಿ, ಬೆಳಗಾವಿ.