ಛಾಯೆಗಳ ಮಾಯೆಯಲ್ಲಿ ನೆನಪುಗಳಿಗೆ ಶಾಸನ ಬರೆಯುವ ಎಲ್ಲಾ ಛಾಯಾಗ್ರಾಹಕ ಬಂಧುಗಳಿಗೂ ವಿಶ್ವ ಛಾಯಾಗ್ರಹಣ ದಿನದ ಹಾರ್ದಿಕ ಶುಭಾಶಯಗಳು …
ಛಾಯೆ, ಗ್ರಹಣ, ಬೆಳಕು
ಎಲ್ಲ ಎಲ್ಲವೂ ಸೇರಿ ಸರಕೂಡಿ
ಪಾಕವಾಗಬೇಕು ಮೆದುಳಲಿ
ಕಂಡ, ಕಾಡಿದ, ಕಾಡುವ ನೆನಪುಗಳೆಲ್ಲವೂ ಅನಾವರಣಗೊಂಡು
ಚಿತ್ರಾಂಕಿತವಾಗಬೇಕು
ಮೆದುಳಿನ ಭಿತ್ತಿಯೊಳಗೆ
ಬರೀ ನೋಟಕ್ಕೆ ದಕ್ಕುವುದಿಲ್ಲ
ಚಿತ್ರಗಳ ಛಾಯೆ ಅದೊಂದು ಮಾಯೆ
ಒಲಿಸಿಕೊಳ್ಳಬೇಕು ಧ್ಯಾನದಲಿ
ಮೌನದಲಿ ಏಕಾಂತದಲ್ಲಿ
ದಕ್ಕಿದ ಚಿತ್ರಗಳೆಲ್ಲವೂ ಮೂಸೆಯೊಳಗೆ ಹದಗೊಂಡು
ಹಾಗೇ ಅರ್ಥ ಕಾಣಿಸುವ ಪಕ್ವತೆಗೆ
ಪಕ್ಕಾಗುವವರೆಗೂ….
ಹಾಗೆಯೇ ಪುಷ್ಪಿಸಿ ಫಲಿಸಿ, ಹೊಸ ಬೀಜಾಂಕುರವಾಗುವವರೆಗೂ
ಗರ್ಭೀಕರಿಸಿಕೊಳ್ಳಬೇಕು
ನಿಭಾಯಿಸಬೇಕು ತಾಳ್ಮೆಯಿಂದ
ಅದು ಕಲ್ಪಿಸಿದ ವಿಸ್ಮಯವನ್ನು ಆವಾಹಿಸಿಕೊಳ್ಳುವವರೆಗೂ
ಪ್ರತಿಷ್ಠಾಪನೆಗೆ ಯೋಗ್ಯವಾಗುವವರೆಗೂ
ಒಂದು ಅನೂಹ್ಯ ಘಳಿಗೆಯಲ್ಲಿ ಅದು ತನ್ನದೇ ಅಲ್ಲವೇನೋ
ಅನಿಸುತ್ತಾ….
ಲೋಕಾರ್ಪಣೆಗೆ ಪರಿಪೂರ್ಣಗೊಳ್ಳುವವರೆಗೂ
ಸುಲಭವಲ್ಲ ಚಿತ್ರಗಳನ್ನು ಅದರ
ಅಂತರಂಗದ ಕಸುವಿನೊಂದಿಗೆ
ಪ್ರಸವಿಸುವುದು.
ಬಸಿರು ,ಹೆರಿಗೆ,ಶಿಶುಪಾಲನೆ ಎಲ್ಲವೂ ಸವಾಲೇ….
ಮುದ್ದು ಮಗುವೊಂದು ಅಂಗಳದಲ್ಲಿ ಆಡುತ್ತಾ ನಂದಗೋಕುಲವನ್ನು
ಧರೆಗೆ ಇಳಿಸುವವರೆಗೂ…
ಬಾಳುವ ಬಾಳಿದ ಬಾಳಲಿ
ಎನಿಸುವ ಚಿತ್ರಗಳೆಲ್ಲವೂ ಹೀಗೇ
ಕರ್ಮಠದಲ್ಲಿ ಕಾಯಬೇಕು, ಬೇಯಬೇಕು
ತಪೋಸಾಧನೆಯಲ್ಲಿ…
- ಶಿವದೇವಿ ಅವನೀಶಚಂದ್ರ