ಒಮ್ಮೆ ಮನವಿಟ್ಟು ಆಲಿಸು ಗೆಳತಿ…ಪರಸ್ಪರ ಅಭಿಪ್ರಾಯಗಳ ಗೌರವಿಸದಿದ್ದರೆ ನಿಶ್ಚಯಿಸುವ ಪ್ರತಿ ಅಂಶವು ಗೊಂದಲಕ್ಕೀಡಲ್ಲವೆ…ರಶ್ಮಿಪ್ರಸಾದ್ (ರಾಶಿ) ಅವರ ಲೇಖನಿಯಲ್ಲಿ ಅರಳಿದ ಸುಂದರ ಕವನವನ್ನು ತಪ್ಪದೆ ಮುಂದೆ ಓದಿ…
ಒಮ್ಮೆ ಕಿವಿಕೊಟ್ಟು ಕೇಳು ಗೆಳತಿ
ನಡೆಯಬೇಕಾದ ದಾರಿಯಿನ್ನು ಹಿರಿದಿಹುದು
ಸಾಂಗತ್ಯದ ಸಂಹವನವೇ ಇಲ್ಲದೇ
ಒಬ್ಬರಿಗೊಬ್ಬರು ಅನುಸರಿಸದೇ ಹೋದರೆ
ಇಡುವ ಪ್ರತಿ ಹೆಜ್ಜೆಯೂ ಭಾರವಾದೀತಲ್ಲವೇ…
ಒಮ್ಮೆ ಮನವಿಟ್ಟು ಆಲಿಸು ಗೆಳತಿ
ಪಯಣದಲಿ ಏರಿಳಿತಗಳು ಹಲವಿಹುದು
ಮುಕ್ತಭಾವದಲಿ ನಿರ್ಧಾರಗಳ ನಿರ್ಧರಿಸದೆ
ಪರಸ್ಪರ ಅಭಿಪ್ರಾಯಗಳ ಗೌರವಿಸದಿದ್ದರೆ
ನಿಶ್ಚಯಿಸುವ ಪ್ರತಿ ಅಂಶವು ಗೊಂದಲಕ್ಕೀಡಲ್ಲವೆ…
ಒಮ್ಮೆ ಗಮನವಿಟ್ಟು ನೋಡು ಗೆಳತಿ
ಜೀವನದ ಸವಾಲುಗಳು ಸಾಕಷ್ಟಿಹುದು
ಸುಖ ದುಃಖಗಳಲಿ ಸಮಭಾಗಿಗಳಾಗಿದ್ದು
ಸಾವಧಾನ ಸಮಾಧಾನ ತಳೆಯದಿದ್ದರೆ
ಮಾನಸಿಕ ಸಮತೋಲನ ಹಾಳಾದಂತಲ್ಲವೇ…
ಪ್ರಾಂಜಲ ಚಿತ್ತದಿಂದೊಮ್ಮೆ ಈಕ್ಷಿಸು ಗೆಳತಿ
ಕೇವಲ ಇಂದು ನಾಳೆಯ ಬಂಧವಲ್ಲವಿದು
ಬದುಕಿನುದ್ದಕ್ಕು ಸಾಗಬೇಕಾದ ಸಾಂಗತ್ಯವಿದು
ಬಂಧಗಳಲ್ಲಿ ಸೆರೆಯಿರದೆ ಉಪೇಕ್ಷಿಸುವಂತಾದರೆ
ಸಂಬಂಧಗಳ ಉಳಿವೆಲ್ಲಿ.?ಸಂವೇದನೆಗಳಿಗೆ ಬೆಲೆಯೆಲ್ಲಿ.?
ಅಹಮ್ಮಿಕೆ ಬಿಟ್ಟೊಮ್ಮೆ ಆಲೋಚಿಸು ಗೆಳತಿ
ಬಾಳಬಾಂದಳದ ಈ ಪಯಣದಲಿ
ನಾವಿಬ್ಬರು ಬಂಡಿಯ ಜೋಡಿ ಚಕ್ರದಂತೆ
ಜೊತೆಯಾಗಿ ಹೆಜ್ಜೆಯಿಟ್ಟರೆ ಹಾದಿ ಸುಗಮವಲ್ಲವೇನು.!
ನಗುತ ಸಾಗಿದರೆ ಸುಮ ಹಾಸುವಂತಲ್ಲವೇನು.!
ನಲಿಯುತ ಮುನ್ನೆಡೆದರೆ ಬಾಳು ಅರಳುವುದಿಲ್ಲವೇನು.!!
- ರಶ್ಮಿಪ್ರಸಾದ್ (ರಾಶಿ)
