‘ಆ ಹುಡುಗಾಟ’ ಪುಸ್ತಕ ಪರಿಚಯ -ಮಾರುತಿ ಗೋಪಿಕುಂಟೆ

ವೈಜ್ಞಾನಿಕ ಲೇಖಕರಾದ ಪ. ನಾ. ಹಳ್ಳಿ ಹರೀಶ್ ಕುಮಾರ್ ಅವರ ‘ಆ ಹುಡುಗಾಟ’ ಲೇಖನ ಸಂಕಲನದ ಕುರಿತು ಶಿಕ್ಷಕ, ಕವಿ ಮಾರುತಿ ಗೋಪಿಕುಂಟೆ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಪುಸ್ತಕ : ಆ ಹುಡುಗಾಟ
ಲೇಖಕರು : ಪ. ನಾ. ಹಳ್ಳಿ ಹರೀಶ್ ಕುಮಾರ್
ಪ್ರಕಾರ : ಲೇಖನಗಳ ಸಂಕಲನ

ಇತ್ತೀಚೆಗಷ್ಟೇ ಬಿಡುಗಡೆಗೊಂಡು ಓದುಗರ ಕೈ ಸೇರಿದ ಮಿತ್ರರಾದ ಪ. ನಾ. ಹಳ್ಳಿ ಹರೀಶ್ ಕುಮಾರ್ ರವರ ವೈಚಾರಿಕ ಲೇಖನಗಳ ಸಂಕಲನವನ್ನು ಸ್ನೇಹ ಪೂರ್ವಕವಾಗಿ ಕಳಿಸಿಕೊಟ್ಟಿದ್ದರು. ಅಕ್ಷರದ ಬಂಧಕ್ಕಿರುವ ಸ್ನೇಹವಿದು.

ಮೂಲತಃ ಶಿಕ್ಷಕರಾದ ಹರೀಶ್ ರವರು ಅನೇಕ ಲೇಖನಗಳನ್ನು ಬರೆದು ಈಗಾಗಲೇ ಹೆಸರು ಮಾಡಿದ್ದಾರೆ. ಇವರು ವಿಜ್ಞಾನ ಶಿಕ್ಷಕರಾಗಿದ್ದರಿಂದ ಅನೇಕ ವೈಜ್ಞಾನಿಕ ಲೇಖನಗಳನ್ನು ಬರೆದು ಅವು ಪತ್ರಿಕೆಯಲ್ಲಿ ಪ್ರಕಟಗೊಂಡಿವೆ ಮತ್ತು ಅನೇಕ ಕತೆಗಳನ್ನು ರೈತರ ಬದುಕಿನ ಲೇಖನಗಳನ್ನು ಬರೆದು ಒಳ್ಳೆಯ ಬರಹಗಾರರು ಎಂದೆ ಹೆಸರಾಗಿದ್ದಾರೆ. ಅವರು ಆಗಾಗ ಪತ್ರಿಕೆಗಳಿಗೆ ಬರೆದ ಅನೇಕ ಲೇಖನಗಳ ಸಂಕಲನ ಈಗ ‘ಆ ಹುಡುಗಾಟ’ ವಾಗಿ ನಮ್ಮ ಕೈ ಸೇರಿದೆ ಹಾಗಂತ ಇದು ಹುಡುಗಾಟದ ಲೇಖನಗಳಿಗೆ ಸೀಮಿತ ಎಂದುಕೊಳ್ಳಬೇಡಿ. ಇಲ್ಲಿನ ಲೇಖನಗಳು ವೈಚಾರಿಕತೆಯನ್ನು ಹೇಳುತ್ತವೆ. ಬದುಕುವುದನ್ನು ತಿಳಿಸುತ್ತವೆ. ನಮ್ಮ ನಡತೆಯ ಬಗ್ಗೆ ಕಿವಿಮಾತು ಹೇಳುತ್ತವೆ. ಮದುವೆಯ ಬಗ್ಗೆ ನಮ್ಮ ಸಂಪ್ರದಾಯದ ಹಿಂದಿನ ವೈಜ್ಞಾನಿಕ ಹಿನ್ನೆಲೆ ತಿಳಿಸುತ್ತವೆ.

ಯುವ ಸಮುದಾಯದಿಂದ ಕನ್ನಡ ಕಟ್ಟುವ ಬಗೆ ತಿಳಿಸುತ್ತವೆ. ಈ ಸಂಕಲನದಲ್ಲಿ ಎಲ್ಲಾ ವಿಷಯಗಳ ಬಗ್ಗೆಯೂ ಚರ್ಚಿಸಲಾಗಿದೆ. ಪುಸ್ತಕವನ್ನು ಹಿಡಿದರೆ ಸಾಕು ಸರಾಗವಾಗಿ ಓದಿಸಿಕೊಂಡು ಹೋಗುತ್ತವೆ.ಲೇಖಕರ ಅನುಭವಕ್ಕೆ ಬಂದ ಪ್ರಸಂಗಗಳಲ್ಲಿ ನಮಗೂ ಹೀಗೆಯೆ ಆಗಿತ್ತು ಅಲ್ವ ಅನಿಸುವಂತೆ ಒಂದೆರಡು ಘಟನೆಗಳ ಬಗ್ಗೆ ವಿವರಿಸುತ್ತಾ ಹೋಗುತ್ತಾರೆ.

ಬಹಳ ಮುಖ್ಯವಾಗಿ ಲೇಖಕರ ಹೇಳಿಕೊಂಡಂತೆ ವೈಚಾರಿಕ ಲೇಖನಗಳ ಸಂಗ್ರಹವಾದರೂ ಮದುವೆ, ಮಕ್ಕಳು, ಕೋರ್ಟ್ ಸಂಸಾರ, ಸಂಗಾತಿ, ಹೊಂದಾಣಿಕೆ, ದಾಂಪತ್ಯ, ಆಡಳಿತ, ರೈತ, ಹೀಗೆ ಹಲವಾರು ವಿಷಯಗಳ ಮೇಲೆ ಬೆಳಕು ಚೆಲ್ಲುತ್ತಾರೆ. ಅನೇಕ ಕಡೆಗಳಲ್ಲಿ ಶೀರ್ಷಿಕೆಯ ವಿಷಯಗಳಿಗೆ ಸಂಬಂಧಪಟ್ಟಂತೆ ವಿವರವಾದ ಮಾಹಿತಿ ಕೊಡುತ್ತಾರೆ. ಮತ್ತು ಬದುಕುವ ರೀತಿಯನ್ನು ಅಥವಾ ತಿಳಿಯಬೇಕಾದ ವಿವರಗಳ ಬಗ್ಗೆ ತಿಳಿಸುತ್ತಾರೆ ಅದರಲ್ಲಿ ಕೆಲವು ಉಯಿಲಪ್ಪೊ ಉಯಿಲು, ಬೌನ್ಸಿಚೆಕ್ ಗೆ ಸುಗ್ರೀವಾಜ್ಞೆ, ಹಾಸಿಗೆ ಇದ್ದಷ್ಟು ಕಾಲು ಚಾಚು, ಸಂತೋಷ ಬೇಕೆ ಹೀಗೆ ಮಾಡಿ, ಧಾರ್ಮಿಕ ಮತ್ತು ಸಾಂವಿಧಾನಿಕ ನೆಲೆಗಟ್ಟಿನಲ್ಲಿ ವಿವಾಹ, ಪವರ್ ಆಫ್ ಅಟಾರ್ನಿ ಇತ್ಯಾದಿ ವಿವಾಹ ದಾಂಪತ್ಯಕ್ಕೆ ಸಂಬಂಧಪಟ್ಟ ಲೇಖನಗಳು ನಮ್ಮ ಸಂಪ್ರದಾಯದ ಬಗ್ಗೆ ಹೆಮ್ಮೆ ಮೂಡಿಸುವಂತೆ ಮಾಡುತ್ತವೆ. ಹಿರಿಯರ ಬಗ್ಗೆ ಗೌರವಾದರಗಳು ಹೆಚ್ಚುವಂತೆ ಮಾಡುತ್ತವೆ. ಸ್ತ್ರೀ ಸಮಾನತೆಯ ಬಗ್ಗೆ, ಅತ್ಯಾಚಾರದ ಪಿಡುಗಿಗೆ ಮುಕ್ತಿ ನೀಡಬೇಕಾದರೆ ನಾವು ಸಮಾಜ ಅನುಸರಿಸಬೇಕಾದ ಅಥವಾ ಯೋಚಿಸಬೇಕಾದ ಮಾತುಗಳು ಬುದ್ದಿ ಹೇಳಿದಂತಿವೆ. ಕಳೆದು ಹೋಗುತ್ತಿರುವ ಜಾನಪದ ಕಲೆ ಹಗಲುವೇಷದ ಬಗ್ಗೆ ಬರೆಯುತ್ತ ನಾವು ಜಾನಪದ ಕಲೆಗಳನ್ನು ಉಳಿಸಿಕೊಳ್ಳಬೇಕಾದ ಅಗತ್ಯತೆಯನ್ನು ಇದರಿಂದ ಅವರ ಬದುಕು ಅನಾಥಗುತ್ತಿರುವುದನ್ನು ಸೂಕ್ಷ್ಮವಾಗಿ ತಿಳಿಸಿದ್ದಾರೆ. ಹೀಗೆ ಅನೇಕ ವಿಷಯಗಳ ಬಗ್ಗೆ ಇಲ್ಲಿ ಹೇಳಲಾಗಿದೆ ಇಂತದೊಂದು ಪುಸ್ತಕ ಮನೆಯಲ್ಲಿದ್ದರೆ ಚಂದ ಅನಿಸುವುದುಂಟು.

ಆ ಹುಡುಗಾಟ ಎನ್ನುತ್ತಲೆ ಗಂಭೀರವಾದ ವಿಷಯಗಳ ಬಗ್ಗೆ ಚರ್ಚಿಸುತ್ತಲೆ ವೈಚಾರಿಕತೆಯ ಒಳಹುಗಳನ್ನು ನಮ್ಮಲ್ಲಿ ಮೂಡಿಸಲು ಈ ಕೃತಿ ಯಶಸ್ವಿಯಾಗಿದೆ. ಇದನ್ನು ಓದುವ ಓದಿಸುವ ಖುಷಿ ನಮ್ಮ ನಿಮ್ಮದೂ ಆಗಲಿ.

ಮಿತ್ರರಾದ ಪ ನಾ ಹಳ್ಳಿ ಹರೀಶ್ ಕುಮಾರ್ ರವರಿಂದ ಇನ್ನಷ್ಟು ಕೃತಿ ಕನ್ನಡ ಸಾರಸ್ವತ ಲೋಕಕ್ಕೆ ಅರ್ಪಣೆಯಾಗಲಿ ಎಂಬುದು ನನ್ನ ಹಾರೈಕೆ. ಶುಭವಾಗಲಿ


  • ಮಾರುತಿ ಗೋಪಿಕುಂಟೆ. ಶಿಕ್ಷಕರು ಹಾರೋಗೆರೆ

0 0 votes
Article Rating

Leave a Reply

1 Comment
Inline Feedbacks
View all comments
ಪ ನಾ ಹಳ್ಳಿ ಹರೀಶ್ ಕುಮಾರ್

ನಿಮ್ಮ ಪ್ರೋತ್ಸಾಹಕ್ಕಾಗಿ ಧನ್ಯವಾದಗಳು 🙏🏻🙏🏻

Home
News
Search
All Articles
Videos
About
1
0
Would love your thoughts, please comment.x
()
x
%d
Aakruti Kannada

FREE
VIEW