‘ಅಮ್ಮನೆಂದರೆ ಅದೊಂದು ಬೆರಗು’ ಕವನ – ಮಾರುತಿ ಗೋಪಿಕುಂಟೆ

ಕವಿ ಮಾರುತಿ ಗೋಪಿಕುಂಟೆ ಅವರ ಲೇಖನಿಯಲ್ಲಿ ಅರಳಿದ ಅಮ್ಮನ ಕುರಿತಾದ ಸುಂದರ ಕವನ ತಪ್ಪದೆ ಓದಿ…

ಅಮ್ಮನ ಕಾವಲಿಯ
ರೊಟ್ಟಿಯ ಘಮ, ಕರಿದ ಚಕ್ಕುಲಿಯ ಸವಿ
ಸಂಡಿಗೆ, ಅಪ್ಪಳ ಒಂದೇ ಎರಡೇ
ತರಾವರಿಗಳೆಲ್ಲ ನಾಲಿಗೆಗೆ ಆಪ್ತ
ಆದರೆ ಹಣವಿರಲಿಲ್ಲ, ಭರಪೂರ ಒಲವಿತ್ತು
ಅಮ್ಮನ ಕೈ ಸುಟ್ಟ ಗೆರೆಗಳಲ್ಲೂ
ಒಲವು ತುಂಬಿದ ಮುದುರುಗಳೆ
ಅದಕ್ಕೆ ಅಮ್ಮನೆಂದರೆ
ಅದೊಂದು ಬೆರಗು, ಏಕೆಂದರೆ
ಅಮ್ಮ ಎಂದರೆ ಅಮ್ಮ ಅಷ್ಟೆ!
ಸರಿಸಾಟಿಯಿಲ್ಲ.

ಅಮ್ಮನ ನೋಡಿದಾಗಲೆಲ್ಲಾ, ನನಗನಿಸುವುದು,
ಅಮ್ಮ ಭೂಮಿ ತೂಕದವಳು
ಕರುಣೆ ತುಂಬಿದ ಒಡಲು
ಬರಿದಾಗದಂತೆ ಒಪ್ಪ ಓರಣವಾಗಿ
ಕಾಪಿಟ್ಟು, ಜತನವಾಗಿಸಿದವಳು
ಕಷ್ಟಗಳೆಲ್ಲಾ ಕಡಲ ಅಲೆಗಳಂತೆ
ಬಡಿದು ಬಡಿದು ದೇಹವನೆ
ನುಂಗಿ ನೊಣೆದರೂ, ಗಟ್ಟಿ ನೆಲೆಯೂರಿ
ಚೈತನ್ಯವಾದವಳು
ಅದಕ್ಕೆ ಅಮ್ಮನೆಂದರೆ
ಅದೊಂದು ಬೆರಗು ಏಕೆಂದರೆ
ಅಮ್ಮ ಎಂದರೆ ಅಮ್ಮ ಅಷ್ಟೆ!
ಸರಿಸಾಟಿಯಿಲ್ಲ.

ಅಮ್ಮನ ನೋಡಿದಾಗಲೆಲ್ಲಾ
ನನಗನಿಸುವುದು, ಅಮ್ಮ ಹಸಿವನ್ನು
ಗೆದ್ದವಳೆಂದು
ಹಸಿವ ಒಡಲೊಳುದಿಗಿಟ್ಟು
ತಟ್ಟೆಯ ತುಂಬ ಅನ್ನವನಿಟ್ಟು
ನಗುನಗುತ್ತಲೆ ಚಂದಿರನ
ತೋರಿಸಿ, ಕೈ ತುತ್ತು ನೀಡಿದವಳು
ಹಸಿದ ಒಡಬಾನಲಕ್ಕೆ
ತಣ್ಣೀರು ಕುಡಿದು, ನಗುವ ಚೆಲ್ಲಿ
ಹಸಿವನ್ನು ಮರೆಮಾಚಿದವಳು
ಅದಕ್ಕೆ ಅಮ್ಮನೆಂದರೆ
ಅದೊಂದು ಬೆರಗು, ಏಕೆಂದರೆ
ಅಮ್ಮ ಎಂದರೆ ಅಮ್ಮ ಅಷ್ಟೆ!
ಸರಿಸಾಟಿಯಿಲ್ಲ.

ಅಮ್ಮನ ನೋಡಿದಾಗಲೆಲ್ಲಾ
ನನಗನಿಸುವುದು,
ಅಮ್ಮ ನನ್ನೆದೆಯ ಬೆಳಗು
ಕಷ್ಟಗಳ ಗಾಢಾಂದಕಾರದಲ್ಲೂ
ಚಿಮಣಿ ದೀಪವ ಹಿಡಿದು
ಬದುಕಿನುದ್ದಕ್ಕೂ ದಾರಿ ತೋರಿ
ನಡೆಸಿದವಳು, ಬದುಕು ಕಟ್ಟಿ ಕೊಟ್ಟವಳು
ಅದಕ್ಕೆ ಅಮ್ಮನೆಂದರೆ
ಅದೊಂದು ಬೆರಗು, ಏಕೆಂದರೆ
ಅಮ್ಮ ಎಂದರೆ ಅಮ್ಮ ಅಷ್ಟೆ!
ಸರಿಸಾಟಿಯಿಲ್ಲ.


  • ಮಾರುತಿ ಗೋಪಿಕುಂಟೆ – ಸಿರಾ ತಾಲ್ಲೂಕು ತುಮಕೂರು ಜಿಲ್ಲೆಯ ಗೋಪಿಕುಂಟೆ ಗ್ರಾಮ ನನ್ನ ಹುಟ್ಟೂರು. ಸಾಹಿತ್ಯವೆಂದರೆ ಬಲು ಪ್ರೀತಿ. ಕವಿತೆ ಬರೆಯುವ ಹಂಬಲ. ನನ್ನ ಅನೇಕ ಕವಿತೆಗಳು ಪತ್ರಿಕೆಯಲ್ಲಿ ಪ್ರಕಟವಾಗಿವೆ ಸಾಹಿತ್ಯದ ಬೇರೆ ಬೇರೆ ಪ್ರಕಾರಗಳಲ್ಲಿ ತೊಡಗಿಸಿ ಕೊಂಡಿದ್ದೇನೆ. ಕತೆ ಲಲಿತಪ್ರಬಂಧ ಬರೆಯುವ ಹವ್ಯಾಸವು ಇದೆ “ಎದೆಯ ನೆಲದ ಸಾಲು” ಕವಿತೆ ಸಂಕಲನ ಪ್ರಕಟಣೆಯ ಹಾದಿಯಲ್ಲಿದೆ. 

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW