ಫೇಸ್ಬುಕ್ ಲ್ಲಿ ಸಿಕ್ಕ ಅಣ್ಣ… – ಹರ್ಷಿಯಾ ಕನ್ನಡತಿ

ನನ್ನ ಬರಹಗಳಿಗೆ ಉದ್ದೂದ್ದ ಪ್ರತಿಕ್ರಿಯೆ ನೀಡುತ್ತಿದ್ದ, ನಾನು ಕಣ್ಣಿಗೆ ಕಂಡರೂ ಕಾಣದಂತೆ ಸುಮ್ಮನಿರುತ್ತಿದ್ದೆ, ಆಮೇಲೆ ಮೆಸ್ಸೆಂಜರ್ ನಲ್ಲಿ ಮೆಸ್ಸೇಜ್ ಹಾಕಿದ, ಹೀಗೆ ಬೆಳೆದ ಬಾಂಧವ್ಯ ಈಗ ಅಣ್ಣ ತಂಗಿಯಾಗಿ ಗಟ್ಟಿಯಾಗಿ ನಿಂತಿದೆ, ಮುಂದೆ ಓದಿ ಹರ್ಷಿಯಾ ಕನ್ನಡತಿ ಅವರ ಪ್ರೀತಿಯ ಅಣ್ಣನ ಕತೆಯನ್ನು ತಪ್ಪದೆ ಓದಿ….

ನಾನಿಂದು ಬರೆಯಲು ಹೊರಟಿರುವುದು ನನ್ನ ಬದುಕಿನಲ್ಲಿರುವ ವಿಶೇಷ ವ್ಯಕ್ತಿಯ ಬಗ್ಗೆ…

ಸಾಮಾನ್ಯವಾಗಿ ಒಂದು ಮಾತಿದೆ: ‘ತಂಗಿಯು ಹುಟ್ಟಿದ ದಿನ ಅಣ್ಣನ ಪದವಿ ಹುಟ್ಟಿತು’ ಎಂದು, ಆದರೆ ನನ್ನ ಬದುಕಿನಲ್ಲಿ ತಂಗಿ ಅನ್ನೊ ಸ್ಥಾನಕ್ಕೆ ನೆಲೆ ಬೆಲೆ ಬಂದಿದ್ದು ಫೇಸ್ಬುಕ್ ನಲ್ಲಿ ದೊರೆತ ಮೊದಲ ಅಣ್ಣನಿಂದ ಆ ಮಾತು ಎಷ್ಟು ನಿಜ ಅಲ್ವ, ಪ್ರತಿಯೊಬ್ಬ ಹೆಣ್ಣಿನ ಮೊದಲ ಸ್ನೇಹಿತ ಒಬ್ಬ ಅಣ್ಣನೇ ಆಗಿರ್ತಾನಂತೆ. ನಾನು ಹಲವು ವರ್ಷಗಳಿಂದ ಎಫ್ ಬಿ ಬಳಸುತ್ತಿದ್ದೇನೆ. ನನ್ನ ಪಾಡಿಗೆ ನಾನು ತೋಚಿದ್ದು ಬರೆದುಕೊಂಡು ಇದ್ದೆ. ಯಾರೊಂದಿಗೂ ಸಂಭಾಷಿಸುತ್ತಿರಲಿಲ್ಲ. ಯಾರ ಉತ್ತರಗಳಿಗೂ ಪ್ರತ್ಯುತ್ತರ ಕೊಡುತ್ತಿರಲಿಲ್ಲ.

ಅಪರೂಪಕ್ಕೊಂದೆಂಬಂತೆ ಬರಹಗಳನ್ನು ಬರೆದುಕೊಂಡು ನಮ್ಮ ಶಾಲೆಯಲ್ಲಿ ನಡೆಯುತ್ತಿದ್ದ ಕಾರ್ಯಕ್ರಮಗಳ ವರದಿಗಳನ್ನು ಪ್ರಕಟಿಸಿಕೊಂಡು ಇದ್ದೆ. ಒಂದು ದಿನ ಮಾತೃಭೂಮಿ ರಜನಿಕಾಂತ್ ಎಂಬ ಹೆಸರಿನಿಂದ ಒಂದು ಸ್ನೇಹ ವಿನಂತಿ ಬರುತ್ತದೆ. ಪ್ರೊಫೈಲ್ ಪರಿಶೀಲಿಸಿದಾಗ ದೇವರ ಪಟವಿತ್ತು. ಜೊತೆಗೆ ಹೆಸರು ಕನ್ನಡದಲ್ಲಿತ್ತು…. ಕನ್ನಡದ ಮೇಲಿದ್ದ ಅಭಿಮಾನದ ಕಾರಣದಿಂದ ವಿನಂತಿಯನ್ನು ದೃಢೀಕರಿಸಿದೆ. ಮೊದಮೊದಲು ಇವನು ಶುಭರಾತ್ರಿ ಸಂದೇಶಗಳನ್ನು ಕಳುಹಿಸುತ್ತಿದ್ದ. ಯಾವುದಕ್ಕೂ ಉತ್ತರಿಸುತ್ತಿರಲಿಲ್ಲ. ನನ್ನ ಬರಹಗಳಿಗೆ ಬರುತ್ತಿದ್ದ. ನಾ ಯಾರಿಗೂ ಉತ್ತರಿಸದಿದ್ದದ್ದನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ. ಒಮ್ಮೆ ಕೇಳಿಯೇ ಬಿಟ್ಟ, ಸಿಸ್ಟರ್ ನೀವು ಏಕೆ ಯಾರ ಉತ್ತರಗಳಿಗೂ ಪ್ರತಿಕ್ರಿಯೆ ಕೊಡಲ್ಲ? ಎಂದು. ನಂತರದ ದಿನಗಳಲ್ಲಿ ಎಲ್ಲರ ಪ್ರತಿಕ್ರಿಯೆಗಳಿಗೂ ಒಟ್ಟಾರೆಯಾಗಿ ಧನ್ಯವಾದಗಳು ಹೇಳುವುದನ್ನು ಮಾತ್ರ ರೂಢಿಸಿಕೊಂಡೆ. ಪಾಪ ಈ ನನ್ನಣ್ಣನಿಗೆ ಅದೂ ಸರಿ ಕಾಣಲಿಲ್ಲ. ಆಗ ಇನ್ಬಾಕ್ಸಿಗ್ಬಂದು ದೀದಿ, ನೀವು ಹೀಗೆ ಎಲ್ಲರಿಗೂ ಒಟ್ಟಾಗಿ ಶುಭಾಶಯ ಹೇಳಿದರೆ ಅವರ ಅಭಿಪ್ರಾಯಗಳನ್ನು ಕಡೆಗಣಿಸಿದಂತಾಗುತ್ತದೆ. ಎಲ್ಲರಿಗೂ ಉತ್ತರ ಕೊಡುವುದನ್ನು ರೂಢಿಸಿಕೊಳ್ಳಿ ಎಂದು. ಆಗ ನಾನು ಅಕ್ಕ ಅಲ್ಲ, ತಂಗಿ ಅನ್ನಿ ಸರ್ ಸಾಕು ಎಂದು ಉತ್ತರಿಸಿದೆ. ಅವನು ಸಹೋದರಿ ಎಂದೇ ಕರೆಯುತ್ತಿದ್ದ ಆದರೆ ನಾನು ಸರ್ ಎಂದೇ ಕರೆಯುತ್ತಿದ್ದೆ. ಈ ಸಂಭಾಷಣೆಯ ನಂತರದ ಬರಹಗಳಲ್ಲಿ ಎಲ್ಲರಿಗೂ ಚಿಕ್ಕ ಚಿಕ್ಕ ಶಬ್ದಗಳಲ್ಲಿ ಉತ್ತರ ಕೊಡಲು ಪ್ರಾರಂಭಿಸಿದೆ. ಒಮ್ಮೆ ಯಾವುದೋ ಬರಹಕ್ಕೆ ಇನ್ನೇನೋ ಇಷ್ಟೂದ್ದ ಕಮೆಂಟ್ ಬರ್ದಿದ್ದ. ಆಗ ನಾನು ಬರಹ ಎಷ್ಟಿದ್ಯೊ ಅಷ್ಟಕ್ಕೂ ಮಾತ್ರ ಉತ್ತರ ಕೊಡಿ ಹೆಚ್ಚುವರಿ ವಿಚಾರಗಳು ಇಲ್ಲಿ ಅನಗತ್ಯ ಅನ್ನೊ ಅರ್ಥದಲ್ಲಿ ಕಠಿಣವಾಗಿಯೇ ಉತ್ತರಿಸಿದ್ದೆ. ಅವನ ಜಾಗದಲ್ಲಿ ಬೇರೆ ಯಾರಾದ್ರು ಇದ್ದಿದ್ರೆ ಇವಳ ಸಹವಾಸ ಬೇಡಪ್ಪ ಎಂದು ನನ್ನ ಬರಹಗಳ ಕಡೆ ತಿರುಗಿಯೂ ನೋಡ್ತಿರಲಿಲ್ಲ. ಆದರೆ ಇವನು ಬರಹಗಳಿಗೆ ಬರೋದನ್ನ ನಿಲ್ಲಿಸಲಿಲ್ಲ. ಇನ್ನೊಂದ ಬರಹಕ್ಕೆ ಹಿಂದಿಯಲ್ಲಿ ಉತ್ತರಿಸಿದ್ದ. ಕನ್ನಡದಲ್ಲಿ ಉತ್ತರ ಕೊಡಿ ಸರ್ ಅಂದಿದ್ದೆ. ಆಗಲು ನನ್ನ ಮಾತನ್ನು ಸಹಿಸ್ಕೊಂಡು ಸುಮ್ಮನಿದ್ದ. ಪುರುಷರೆಂದರೆ ಅಷ್ಟಕಷ್ಟೆ ಅನ್ನೊ ಭಾವದಲ್ಲಿದ್ದ, ನಾನು ಸಹಜವಾಗಿ ಇವನ ಹತ್ರನು ಎಷ್ಟು ಕೇಳಿದರೆ ಏನು ಕೇಳಿದರೆ ಅಷ್ಟಕ್ಕೆ ಮಾತ್ರ ಉತ್ತರ ಕೊಟ್ಟು ಸುಮ್ಮನಿರುತ್ತಿದ್ದೆ.

ಫೋಟೋ ಕೃಪೆ : google

ಒಮ್ಮೆ ರಕ್ಷಾಬಂಧನ ಹಬ್ಬ ಬಂದಿತ್ತು. ಸಿಸ್ಟರ್ ನಿಮ್ಮ ಭಾವಚಿತ್ರ ಬಳಸಿಕೊಳ್ಳಬಹುದಾ ಎಂದು ಕೇಳಿದ್ದ. ಅದುವರೆಗೂ ಸರ್ ಎಂದು ಕರೆಯುತ್ತಿದ್ದ ನಾನು ಆ ದಿನದಿಂದ ಅಣ್ಣ ಎಂದು ಕರೆಯಲು ಪ್ರಾರಂಭಿಸಿದೆ. ಬಳಸಿಕೊಳ್ಳಿ ಅಣ್ಣ ಎಂದೆ. ಈ ನಂಬಿಕೆನ ಕೊನೆವರೆಗೂ ಉಳಸ್ಕೊಳ್ತೀನಿ ಸಿಸ್ಟರ್ ಎಂದು ಉತ್ತರಿಸಿದ. ರಕ್ಷಾಬಂಧನದ ದಿನ ನೋಡ್ತೀನಿ ಎಷ್ಟೊಂದು ಜನ ಸೋದರಿಯರು. ಹೋ ….ಇವನಿಗೆ ನಾಡಿನ ತುಂಬ ಅಕ್ಕ ತಂಗಿಯರು ಎಂಬ ವಿಷ್ಯ ಅಂದೇ ಗೊತ್ತಾಯ್ತು. ನಿಮಗೂ ಶುಭಾಶಯಗಳು ಅಣ್ಣ ಎಂದು ಹೇಳಿ ಉತ್ತರಿಸಿದೆ. ನನ್ನನ್ನು ನಿಮ್ಮ ಸೋದರಿಯರಲ್ಲಿ ಒಬ್ಬಳೆಂದು ಭಾವಿಸಿದ್ದಕ್ಕಾಗಿ ಧನ್ಯವಾದಗಳು ಅಣ್ಣ ನಿಮಗೆ ಎಂದು ಉತ್ತರಿಸಿದೆ…

ರಕ್ಷಾಬಂಧನ ಹಬ್ಬದ ಪ್ರಭಾವವೋ ಏನೊ ನಮ್ಮ ಬಾಂಧವ್ಯವು ದಿನಗಳೆದಂತೆ ವೃದ್ದಿಸುತ್ತಾ ಹೋಯಿತು. ಶಿಕ್ಷಕರ ದಿನಾಚರಣೆಯ ದಿನ ನನ್ನ ನಂಬರ್ ಗೆ ಕರೆ ಮಾಡಿದ್ದ. ನಾನು ಶಾಲೆಗೆ ಫೋನ್ ತೆಗೆದುಕೊಂಡು ಹೋಗ್ತಿರಲಿಲ್ಲ ಹಾಗಾಗಿ ಮೊದಲ ಬಾರಿ ಅಮ್ಮ ಮಾತಾಡಿದ್ರು. ನಾ ಶಾಲೆಯಿಂದ ಕಾರ್ಯಕ್ರಮ ಮುಗಿಸಿಕೊಂಡು ಬಂದ ಮೇಲೆ ಅಮ್ಮ ಹೇಳಿದ್ರು ನಿನಗೊಂದು ಕರೆ ಬಂದಿತ್ತು ಬಂದ ಮೇಲೆ ಮಾಡಕ್ ಹೇಳ್ತಿನಿ ಅಂತ್ಹೇಳಿ ಫೋನಿಟ್ಟೆ ಅಂದರು. ನಾನು ಮತ್ತೆ ಆ ನಂಬರ್ ಗೆ ಪ್ರಯತ್ನ ಪಡ್ತೀನಿ ಸ್ವಿಚ್ ಆಫ್ ಬರ್ತಿದೆ. ಇವರ್ಯಾರೊ ನನ್ ತರಹ, ನಾ ಫೋನ್ ಆನ್ ಇಟ್ಟು ಶಾಲೆಗ್ ಹೋದ್ರೆ ಇವರ್ಯಾರೊ ಸ್ವಿಚ್ ಆಫೇ ಮಾಡ್ಕೊಂಡ್ಬಿಟಿದ್ದಾರೆ ಅಂತ ಬೈಕೊಂಡು ಸುಮ್ನಾದೆ. ಅಂದೇ ಮೆಸ್ಸೆಂಜರ್ ಮೆಸೇಜ್ ಬಂತು. ನಾ ಕರೆ ಮಾಡಿದ್ದೆ ಅಮ್ಮ ಹೇಳಿದ್ರು ಮಗಳು ಶಾಲೆಗ್ ಹೋಗಿದ್ದಾಳೆ ಬಂದ ಮೇಲೆ ಹೇಳ್ತಿನಿ ಅಂತ. ನಾನು ನೀವೇ ಸುಳ್ಳು ಹೇಳ್ತಿದ್ದೀರಿ ಅಂದ್ಕೊಂಡೆ ಅಂದ. ಮತ್ತೆ ಸಂಜೆ ಮಾಡಿದ್ದ ಆಗ ಮಾತಾಡ್ದೆ ಅಮ್ಮ ಮಗಳು ಒಂದೇ ತರಹ ಮಾತಾಡ್ತೀರಾ ಅಂದ. ಶಿಕ್ಷಕರ ದಿನಕೆ ಶುಭಾಶಯ ಹೇಳಿ ಫೋನ್ ಟ್ಟ. ಈ ಘಟನೆಯ ನಂತರ ನಮ್ಮ ಮಾತು – ಕತೆ – ಚರ್ಚೆಗಳು ಹೆಚ್ಚಾದವು. ವಿಚಾರಗಳಿಲ್ದೆ ಇದ್ರೂ ಸೃಷ್ಟಿ ಮಾಡ್ಕೊತಾ ಇದ್ವಿ, ನಮ್ಮ ಸಂಭಾಷಣೆಯಲ್ಲಿ ಸಾಮಾಜಿಕ ವಿಚಾರಗಳು, ಶೈಕ್ಷಣಿಕ ವಿಚಾರಗಳು, ಧಾರ್ಮಿಕ, ಸಾಂಸ್ಕೃತಿಕ, ಪೌರಾಣಿಕ, ಐತಿಹಾಸಿಕ, ಪ್ರಚಲಿತ ವಿದ್ಯಮಾನಗಳು ಹೀಗೆ ಒಂದೇ? ಎರಡೇ? ಎಲ್ಲ ರೀತಿಯ ವಿಚಾರಗಳ ಅವಲೋಕನವಾಗುತ್ತಿದ್ದವು. ಇವತ್ತಿಗೂ ಆ ಚರ್ಚೆಗಳನ್ನು ಹಾಗೆಯೇ ಉಳಿಸಿಕೊಂಡಿದ್ದೇನೆ. ಏನಾದ್ರು ಅದಕ್ ಸಂಬಂಧಿಸಿದ ವಿಷ್ಯ ಬೇಕಾದಾಗ ಓಪನ್ ಮಾಡ್ಕೊತೀನಿ. ಹುಡುಕಿಕೊಳ್ತೀನಿ.

ಹೆಚ್ಚು ಏಕಾಂತ ಬಯಸುತ್ತಿದ್ದ ನನಗೆ ಎಲ್ಲರ ಜೊತೆ ಬೆರೆಯುವಂತೆ ಪ್ರೇರೇಪಿಸಿದ್ದು ನನ್ನಣ್ಣ. ಇವನ ಮೂಲಕನೆ ಅನರ್ಘ್ಯ ರತ್ನಗಳಂತಿದ್ದ ದೊಡ್ಡ ಸ್ನೇಹವಲಯವೇ ಪರಿಚಯವಾಯ್ತು. ಅವರೆಲ್ಲರ ಪ್ರೋತ್ಸಾಹಕ್ಕೂ, ಸ್ಪೂರ್ತಿಗೂ, ಪ್ರೇರಣೆಗೂ ಅಣ್ಣನೇ ಕಾರಣ. ಅದುವರೆಗೂ ಒಬ್ಬಳೇ ಕೂತು ಅಳುತ್ತಾ ಕಾಲಕಳೆಯುತ್ತಿದ್ದ ನಾನು ನಗುವುದನ್ನು ಕಲಿತದ್ದೇ ನನ್ನಣ್ಣ ಸಿಕ್ಕ ಮೇಲೆ. ಅವನ ಸ್ನೇಹ ಬಳಗದ ಜೊತೆ ಬೆರೆಯುತ್ತಾ ಇತರೆ ಕಹಿ ಘಟನೆಗಳನ್ನೆಲ್ಲ ನಿರ್ಲಕ್ಷಿಸಲು ಪ್ರಾರಂಭಿಸಿದೆ. ಅವನ ಮೂಲಕ ಅದೆಷ್ಟೋ ಜನ ತಂದೆ ತಾಯಿ ಸಮಾನರು, ಗುರುಗಳು, ಅಕ್ಕಂದಿರು, ಅಣ್ಣಂದಿರು, ತಮ್ಮಂದಿರು, ತಂಗಿಯರು, ಸೋದರ ಮಾವ, ದೊಡ್ಡಪ್ಪ, ಚಿಕ್ಕಪ್ಪ ಹೀಗೆ ಫೇಸ್ ಬುಕ್ ನ ಬಂಧುಗಳೇ ಒಂದು ದೊಡ್ಡ ಕುಟುಂಬದ ಪರಿ ಆಗಿಬಿಟ್ಟಿದೆ. ಎಲ್ಲ ಬಂಧುಗಳಿಗೂ ಇವನೇ ಸಂಪರ್ಕ ಕೊಂಡಿ. ಅಣ್ಣ ತಂಗಿ ನಡುವೆ ಜಗಳವಾದರೆ ಗೆಲ್ಲೋದು ತಂಗಿನೆ ಅನ್ನೊ ಮಾತಿದೆ. ಆದರೆ ನಮ್ಮ ವಿಚಾರದಲ್ಲಿ ಅದು ಉಲ್ಟಾ … ನನ್ನ ಮತ್ತು ಅಣ್ಣನ ನಡುವೆ ಸಾಮಾನ್ಯವಾಗಿ ಯಾವುದಾದರೂ ವಿಚಾರಕ್ಕೆ ಭಿನ್ನಾಭಿಪ್ರಾಯ ಉಂಟಾದರೆ ಸೋಲೋದು ಈ ತಂಗಿನೇ… ಗೆಲ್ಲೋದು ನನ್ನಣ್ಣನೇ…ಎಲ್ಲ ವಿಷಯಗಳಲ್ಲೂ ಗೆಲುವು ಅವನದೇ ಆಗ್ಬೇಕು ಎಂದೇ ನಾನೂ ಸಹ ಬಯಸೋದು. ನಮ್ಮ ನಡುವೆ ವಿಚಾರಗಳ ವಿನಿಮಯವೇ ಹೆಚ್ಚಾಗಿರುತ್ತೆ.

ಸರ್ ಎಂದು ಕರೆಯುತ್ತಿದ್ದ ನಾನು ಅಣ್ಣ ಹೋಗಿ ಬನ್ನಿ ಎಂದು ಕರೆಯುತ್ತಾ ಕ್ರಮೇಣ ಅವನದೇ ಒತ್ತಾಯಕ್ಕೆ ಏಕವಚನದಲ್ಲಿ ಕರೆಯುವ ಹಾಗಾಗಿದೆ…ಅದು ಬಹಳ ಕಷ್ಟಪಟ್ಟು ಅಭ್ಯಾಸ ಮಾಡಿಕೊಳ್ಳಬೇಕಾಯಿತು.

ಈ ರೀತಿ ಮುಂದುವರಿದ ನಮ್ಮ ಬಾಂಧವ್ಯ ಇಂದು ಅದೆಷ್ಟು ಆಪ್ತತೆ ಮನೆ ಮಾಡಿದೆಯೆಂದರೆ ನಮ್ಮ ತಂದೆಯವರು, ತಾಯಿಯವರು ಇವನನ್ನು ಹಿರಿಯ ಮಗ ಎಂದೇ ಭಾವಿಸಿದ್ದಾರೆ. ಕೆಲವೊಂದು ವಿಷಯಗಳಲ್ಲಿ ನಿರ್ಧರಿಸೋದು ಕಷ್ಟ ಎನಿಸಿದಾಗ ಅಣ್ಣನ್ನ ಕೇಳಿ ನಿರ್ಧಾರ ಮಾಡು ಎಂದು ಅವರೇ ಸಲಹೆ ಕೊಡುತ್ತಾರೆ. ಅಣ್ಣನ್ನ ಕೇಳದೆ ಮುಂದುವರಿಯಬೇಡ ಎಂದು ಎಚ್ಚರಿಸುತ್ತಾರೆ. ನೀನಿವತ್ತು ಖುಷಿ ಖುಷಿಯಾಗಿದ್ಯ ಅಂದರೆ ಅದಕ್ಕೆ ಮುಖ್ಯ ಕಾರಣ ನಿನ್ನಣ್ಣ ಅನ್ನೋದ್ಮಾತ್ರ ಮರಿಬೇಡ ಅಂತ ಆಗಾಗ ನೆನಪಿಸುತ್ತಿರುತ್ತಾರೆ.

ಹೌದು ಬಂಧುಗಳೇ ಅಣ್ಣ ಬಂದ್ಮೇಲೆ ನನ್ನ ಬದುಕು ಹೊಸ ತಿರುವನ್ನು ಪಡೆದುಕೊಳ್ತು, ಕತ್ತಲಿನಿಂದ ಬೆಳಕಿನೆಡೆಗೆ, ಅಳುವಿನಿಂದ ನಗುವಿನೆಡೆಗೆ, ದುಃಖದಿಂದ ಸಂತಸದೆಡೆಗೆ, ನೋವಿನಿಂದ ನಲಿವಿನೆಡೆಗೆ ನನ್ನ ಕರೆದೊಯ್ದಿದ್ದು ನನ್ನಣ್ಣ…

ದೇವರಂತ ಗೆಳೆಯ ಬೇಕು ಅನ್ನೊ ಹಾಡಿನ ಸಾಹಿತ್ಯ ಬದಲಿಸಿ ದೇವರಂಥ ಅಣ್ಣ ಬೇಕು ಎಂದು ಈ ನನ್ನಣ್ಣ ಸಿಗಕ್ಮುಂಚೆ ಹಾಡಿಕೊಳ್ತಿದ್ದೆ. ಆದರೆ ನಿಜವಾಗ್ಲೂ ದೇವರಂತಹ ಅಣ್ಣನೇ ಸಿಗ್ತಾನೆ ಅಂತ ಕನಸ್ನಲೂ ಊಹಿಸಿರಲಿಲ್ಲ.

ಇಂಥ ಅಣ್ಣನನ್ನು ದೊರಕಿಸಿಕೊಟ್ಟಿದ್ದಕ್ಕೆ ಈ ಫೇಸ್ಬುಕ್ ಗೆ ನಾನು ಧನ್ಯವಾದಗಳು ಹೇಳ್ತೀನಿ.

ನೂರಾರು ಅಕ್ಕ ತಂಗಿಯರಿಗೆ ಸೋದರನಾಗಿರುವ ನನ್ನಣ್ಣ ನನಗೆ ಜೀವನ ಕೊಟ್ಟವನು. ಬದುಕಲ್ಲಿ ಛಲ ಹುಟ್ಟಿಸಿದವನು. ಏನೇ ಅಡತಡೆಗಳೆದುರಾದರೂ ಎದುರಿಸುವ ಧೈರ್ಯ ಹುಟ್ಟಿಸಿದವನು. ಎಷ್ಟೇ ಕಷ್ಟದ ಪರಿಸ್ತಿತಿಯೂ ಸಹ ಈಗ ಕಷ್ಟ ಎಂಬ ಭಾವನೆ ಬರುವುದೇ ಇಲ್ಲ. ಅಷ್ಟು ಸುಲಲಿತವಾಗಿ ಆ ಕಷ್ಟಗಳನ್ನೂ ಎದುರಿಸಿ ಕಾರ್ಯ ಸಾಧಿಸಿಕೊಳ್ಳಬಲ್ಲೆ. ಅಂಥ ಆತ್ಮಬಲ ಹೆಚ್ಚಲು ಕಾರಣವೇ ನನ್ನಣ್ಣ.

ಫೋಟೋ ಕೃಪೆ : winni

ಕೆಲವೊಂದು ನಿರ್ಣಾಯಕ ತೀರ್ಮಾನಗಳು ಇವನ ಅಮೂಲ್ಯ ಸಲಹೆಗಳ ಕಾರಣ ಬದಲಾಗಿ ಹೊಸ ತಿರುವು ಪಡೆದುಕೊಂಡಿವೆ. ಇವನ ಮಾತೆಂದರೆ ಹಾಗೆ,ತಿರಸ್ಕರಿಸಲು ಮನಸೇ ಬರಲ್ಲ.

ಇನ್ನು ಇವನ ಬರೆಹಗಳಿಗೆ ಸೋಲದವರಿಲ್ಲ. ಅಷ್ಟು ವಿಭಿನ್ನವಾದ ಶೈಲಿಯಲ್ಲಿ ಬರೆಯುತ್ತಾನೆ. ಕೈ ಬರೆಹವೂ ಕೂಡ ಹಾಗೆಯೆ ಮುತ್ತು ಪೋಣಿಸಿದ ಹಾಗಿವೆ ಇವನ ಅಕ್ಷರಗಳು. ಇವನ ಸ್ವಹಸ್ತಾಕ್ಷರದ ನುಡಿಮುತ್ತುಗಳನ್ನು ಉಡುಗೊರೆಯಾಗಿ ಪಡೆದ ನಾನೇ ಭಾಗ್ಯವಂತೆ.

ಅಣ್ಣ ನನಗೆ ಸ್ವಂತ ಅಣ್ಣ ಇಲ್ಲ ಎಂಬ ಬೇಸರ ಇಂದು ನನಗೆ ಒಂದಿನಿತೂ ಇಲ್ಲ ಕಣೋ. ನೀನು ಸ್ವಂತ ಅಣ್ಣನಿಗಿಂತನೂ ಹೆಚ್ಚಿನ ಪ್ರೀತಿ ಮಮತೆ ವಾತ್ಸಲ್ಯಗಳನ್ನು ಕೊಟಿದಿಯ.. ಈ ಜನ್ಮಕಿಷ್ಟು ಸಾಕು. ಅಣ್ಣ ತಂಗಿ ಅಂದರೆ ರಕ್ತ ಹಂಚಿಕೊಂಡೇ ಹುಟ್ಟಿರಬೇಕು ಎಂಬ ನಿಯಮವೇನೂ ಇಲ್ಲ.. ಆ ಪವಿತ್ರವಾದ ಭಾವನೆಯಿರುವವರೆಲ್ಲರೂ ಅಣ್ಣ ತಂಗಿನೆ ಎಂಬುದನ್ನು ನೀನು ನಿರೂಪಿಸಿ ತೋರಿಸಿದ್ದಿಯ.

ಆತ್ಮವಿಶ್ವಾಸದ ಪ್ರತಿರೂಪ, ನಂಬಿಕೆಗೆ ಮತ್ತೊಂದು ಹೆಸರು, ಸೋದರಿಕೆ ನಿರ್ವಹಣೆಯಲ್ಲಿ ಎತ್ತಿದ ಕೈ. ಸಮಾಜ ಸೇವೆಗೂ ಸೈ, ಸಾಹಿತ್ಯ ಬರೆಹಕ್ಕೂ ಜೈ, ಶಿಕ್ಷಣಪ್ರೇಮಿ, ಕರುನಾಡ ಅಮ್ಮಂದಿರಿಗೆಲ್ಲ ಕರುಳಿನ ಕುಡಿ, ನಾಡಿನ ಎಲ್ಲ ಸೋದರಿಯರಿಗೂ ಪ್ರೀತಿಯ ಸೋದರ, ಶಿಷ್ಯರ ಮೆಚ್ಚಿನ ಗುರು, ಗುರು ವೃಂದಕ್ಕೆ ಪ್ರೀತಿಯ ಶಿಷ್ಯ. ನನ್ನೊಲುಮೆಯ ಸೋದರ, ವಾತ್ಸಲ್ಯದ ಗಣಿ, ಮಮತೆಗೆ ಧಣಿ. ತಪ್ಪು ಮಾಡಿದಾಗ ತಿದ್ದುವ ಗುರುವೂ ಆಗುತ್ತಾನೆ, ಸಲಹೆಗಾರನೂ ಆಗುತ್ತಾನೆ, ಸ್ಪೂರ್ತಿಯ ಚಿಲುಮೆಯೂ ಆಗುತ್ತಾನೆ, ಅಣ್ಣ ಅಂದರೆ ಇವನು ನನ್ನ ಪಾಲಿಗೆ ಕೇವಲ ಅಣ್ಣ ಮಾತ್ರ ಅಲ್ಲ ಅನ್ನೊದನ್ನ ಆಗಾಗ ತನ್ನ ಕೆಲಸಗಳ ಮೂಲಕ ತಿಳಿಸ್ಕೊಡ್ತಾ ಇರ್ತಾನೆ.

ಒಟ್ಟಾರೆಯಾಗಿ ಅಣ್ಣ ಅಂದರೆ ಹೇಗಿರಬೇಕು? ಎಂಬ ಪ್ರಶ್ನೆಗೆ ಉತ್ತರವಾಗಿ ನನ್ನಣ್ಣನ ಹಾಗಿರಬೇಕು ಅಂತ ಉದಾಹರಣೆ ಕೊಡಬಹುದು… ಮಾತಾಡುವಾಗಲೂ ಅಷ್ಟೆ, ಯಾವ ಸಂದರ್ಭದಲ್ಲಿ ಯಾರ ಬಳಿ ಹೇಗೆ ಮಾತಾಡಬೇಕು? ಎಷ್ಟು ಮಾತಾಡಬೇಕು? ಅನ್ನೋದನ್ನೂ ಇವನಿಂದ ತಿಳಿಯಬಹುದು. ಒಬ್ಬ ಶಿಕ್ಷಕನಲ್ಲಿ ಇರಬೇಕಾದ ಎಲ್ಲ ಗುಣಗಳನ್ನೂ ನಾನು ಇವನಲ್ಲಿ ಕಂಡೆ… ಜಾತ್ಯಾತೀತ ಮನೋಭಾವದ ವ್ಯಕ್ತಿತ್ವ ಇವನದು. ಎಲ್ಲರನ್ನೂ ಸಮಾನವಾಗಿ ಕಾಣುತ್ತಾನೆ . ಕಿರಿಯರಲಿ ಪ್ರೀತಿ, ಕಾಳಜಿ. ಹಿರಿಯರಲ್ಲಿ ಗೌರವ ತುಸು ಹೆಚ್ಚೇ ಇದೆ. ತಾಳ್ಮೆ,, ಸಹನೆಗಳಂತೂ ಮೇರೆ ಮೀರಿ ಹೊಂದಿದ್ದಾನೆ.

ನಮ್ಮ ಬಾಂಧವ್ಯ ಹೆಚ್ಚಾದಂತೆಲ್ಲ ನಮ್ಮ ನಡುವೆ ಅಂತರ ಸೃಷ್ಟಿಸುವ ಹುನ್ನಾರಗಳೂ ಸಾಕಷ್ಟು ನಡೆದವು. ಅಣ್ಣನ ಬಳಿ ಏನು ಹೇಳಿದರೊ ಬಿಟ್ಟರೊ ಅದು ನನಗೆ ತಿಳಿಯದು. ಆದರೆ ನನ್ನ ಬಳಿ ಮಾತ್ರ ಅವನ ಬಗ್ಗೆ ಅಪಪ್ರಚಾರಗಳು , ಅವನಲ್ಲಿಲ್ಲದ ಅವಗುಣಗಳ ವರ್ಣನೆಗಳು ಪ್ರಾರಂಭವಾದವು… ಆದರೆ ಆ ಹುನ್ನಾರಗಳು ಹೆಚ್ಚಾದಷ್ಟೂ ನಮ್ಮ ಬಾಂಧವ್ಯವೂ ಗಟ್ಟಿಯಾಗತೊಡಗಿತು. ಚಿವುಟಿದಷ್ಟೂ ಚಿಗುರಿದ ಹಾಗೆ, ನಮ್ಮ ಬಾಂಧವ್ಯಕ್ಕೆ ಕಲ್ಲು ಹಾಕುವ ಪ್ರಯತ್ನಗಳು ನಡೆದಾಗಲೆಲ್ಲ ಆ ಕಲ್ಲುಗಳ ಹಾದಿಯಲ್ಲೇ ಹೂವಿನ ವಾತ್ಸಲ್ಯದ ದಾರಿ ನಿರ್ಮಾಣ ಮಾಡಿಕೊಂಡೆವು.

ಜಾತಿ, ಮತ, ಪಂಥಗಳೆಲ್ಲ ಎಳೆದು ತಂದರೂ ನಮ್ಮನೊಂದಿಂಚೂ ದೂರ ಮಾಡಲು ಸಾಧ್ಯವೇ ಆಗಿಲ್ಲ. ಕಾರಣ ಅವನು ಏನು ಹೇಗೆ ಎಂದು ನನಗೆ ಗೊತ್ತು. ನಾನೆಂಥವಳೆಂದು ಅವನಿಗೂ ಗೊತ್ತು.. ಹಾಗಾಗಿ ಮೂರನೆಯವರ ಮಾತುಗಳಿಗಿಲ್ಲಿ ಆಸ್ಪದವಿಲ್ಲದಂತಾಯಿತು. ಅಣ್ಣ ತಂಗಿಯ ಪವಿತ್ರ ಬಾಂಧವ್ಯಕೆ ಮಸಿಬಳಿಯುವ ಪ್ರಯತ್ನಕೆ ಕೈ ಹಾಕಿದವರಿಂದು ಜಾಣ ಮೌನವಹಿಸಿದ್ದಾರೆ.

ನಮ್ಮ ಬಾಂಧವ್ಯಕೆ ಜಾತಿ ಧರ್ಮಗಳ ಗೋಡೆಯಿಲ್ಲ, ಮೇಲು ಕೀಳು ಎಂಬ ಭೇದವಿಲ್ಲ, ಬಡವ ಬಲ್ಲಿದನೆಂಬ ತಾರತಮ್ಯವಿಲ್ಲ. ಶಿಕ್ಷಿತ ಅಶಿಕ್ಷಿತ ಎಂಬ ಮನೋಭಾವವಿಲ್ಲ. ಎಲ್ಲರೂ ಒಂದೇ ಎಂಬ ಸಹಿಷ್ಣುತಾ ಭಾವ ನಮ್ಮದು. ಎಲ್ಲರೂ ನಮ್ಮವರೇ ಎಂಬ ಸಮನ್ವಯ ಭಾವ ನಮ್ಮದು.

“ರತ್ನಕ್ಕೆ ಕಲ್ಲಿನ ಕವಚ,
ಚಿನ್ನಕ್ಕೆ ಮಣ್ಣಿನ ಕವಚ,
ಮುತ್ತಿಗೆ ಚಿಪ್ಪಿನ ಕವಚ,
ತಂಗಿಗೆ ಅಣ್ಣನೇ ರಕ್ಷಾ ಕವಚ…”

(ನನ್ನ ಪ್ರತಿಯೊಂದು ಯಶಸ್ವಿ ಹೆಜ್ಜೆಗಳಲ್ಲು ಇವನ ಪ್ರೇರಣೆಯದೇ ಸಿಂಹಪಾಲು)

ನಮ್ಮನ್ನು ಒಂದೇ ತಾಯಿ ಹೆತ್ತದಿರಬಹುದು, ರಕ್ತಸಂಬಂಧಿಗಳೂ ಅಲ್ಲದಿರಬಹುದು, ಮನದಲ್ಲಿರುವ ಅಣ್ಣ ತಂಗಿ ಎಂಬ ಭಾವನೆಯೇ ಸಾಕು… ನಮ್ಮ ಬಾಂಧವ್ಯ ಹೀಗೆಯೇ ಶಾಶ್ವತವಾಗಿರಲಿ. ನಿನ್ನ ಕನಸುಗಳೆಲ್ಲ ನನಸಾಗಲಿ. ಯಾವ ನೋವು ಸಂಕಟಗಳೂ ನಿನ್ನ ತಾಕದಿರಲಿ. ಮುಂಬರುವ ಎಲ್ಲ ವರ್ಷಗಳೂ ಹರುಷದಿಂದ ಕೂಡಿರಲಿ… ಕೊನೆಯವರೆಗೂ ಹೀಗೆ ನನ್ನ ಜೊತೆಯಿರು ಅಣ್ಣ.

ಲೋ ಅಣ್ಣಾ… ಏನೋ ಇದು ಎಷ್ಟು ಪ್ರಯತ್ನಪಟ್ರೂ ಬರೆಹಕೆ ಪೂರ್ಣವಿರಾಮ ಇಡಕಾಗ್ತಿಲ್ವಲ್ಲ. ಬಲವಂತವಾಗಿ ನಾನೇ ನಿಲಿಸ್ತೀನಿ.. ನನ್ನೀ ದೀರ್ಘ ಬರೆಹನ ಸಹಿಸ್ಕೊಬಿಡು.
ಇನ್ನೊಂದ್ಮಾತು ಹೇಳೋದು ಮರೆತಿದ್ದೆ, ಇತ್ತೀಚೆಗೆ ಸಾಮಾಜಿಕ ಜಾಗೃತಿ ಮೂಡಿಸುವ ಬರೆಹಗಳೇ ಬರ್ತಿಲ್ಲ ನಿನ್ನಿಂದ… ಇನ್ಮುಂದೆ ಅಂತಹ ಬರಹಗಳು ಹೆಚ್ಚು ಬರಲಿ ಅನ್ನೊ ಆಶಯ ನಿನ್ನ ತಂಗಿದು. ಮರಿಬೇಡ…

ಮತ್ತೊಮ್ಮೆ ಮಗದೊಮ್ಮೆ ತಡವಾಗಿ ಜನ್ಮದಿನದ ಶುಭಾಶಯಗಳು ಅಣ್ಣ.. ಯಾವಾಗಲೂ ನಗುನಗುತ ಖುಷಿಖುಷಿಯಾಗಿರು ಮುದ್ದು ಅಣ್ಣ.
ನಿನ್ನ ತಂಗಿ


  • ಹರ್ಷಿಯಾ ಕನ್ನಡತಿ – ಶಿಕ್ಷಕಿ, ಲೇಖಕಿ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW