“ನಿಮಗಿದೋ ಕ್ರಿಸ್ಮಸ್ ಹಬ್ಬದ ಹಾರ್ದಿಕ ಶುಭಾಶಯಗಳೊಂದಿಗೆ ಕಾವ್ಯ ಕಾಣಿಕೆ. ಹೃದ್ಯಭಾವ ತರಂಗಗಳ ಪದಮಾಲಿಕೆ. ಧನ್ಯ ಜೀವಸಂವೇದನೆಗಳ ಸ್ವರಮಾಲಿಕೆ. ಯೇಸುಕ್ರಿಸ್ತನ ದಿವ್ಯಗಾರುಡಿಗಳ ಚಿರಸ್ಮರಣಿಕೆ. ಒಪ್ಪಿಸಿಕೊಳ್ಳಿ..” – ಪ್ರೀತಿಯಿಂದ ಎ.ಎನ್.ರಮೇಶ್.ಗುಬ್ಬಿ.
ಶಿಲುಬೆಗೇರಿಸಿದವರನ್ನೂ ಕ್ಷಮಿಸಿದೆ
ಮೊಳೆ ಜಡಿದವರನ್ನೂ ಮನ್ನಿಸಿದೆ
ಕಲ್ಲು ಹೊಡೆದವರನ್ನೂ ಸೈರಿಸಿದೆ
ಶತೃಗಳಿಗೂ ಒಳಿತನ್ನೇ ಬಯಸಿದೆ.!
ಕಾರುಣ್ಯದ ಜ್ಯೋತಿಯ ಪ್ರಜ್ವಲಿಸಿದೆ
ಸಹನೆಯ ಕಾಂತಿಯ ಪ್ರಖರಿಸಿದೆ
ಪ್ರೀತಿಯ ಹೊಂಬೆಳಕನ್ನು ಪಸರಿಸಿದೆ
ಬುವಿ ಬೆಳಗಲೆಂದೇ ಅವತರಿಸಿದೆ.!
ಕರುಣೆ ಪ್ರೇಮದ ಬಾಳತತ್ವ ಸಾರಿದೆ
ಬದುಕು ಬೆಳಕಿನ ನಿಜಸತ್ವ ತೋರಿದೆ
ಪ್ರೀತಿತ್ಯಾಗದ ಅಮರತ್ವ ಸಾಕ್ಷೀಕರಿಸಿದೆ
ಮಾನವತೆಯಿಂದ ದೈವತ್ವ ಏರಿದೆ.!
ಬದುಕುವಾ ಸತ್ಯ ಮಾರ್ಗ ತೋರಿದ
ಮಹಾನುಭಾವನೇ ನಿನಗಿದೋ ನಮನ
ಬೆಳಕಿನಾ ನಿತ್ಯ ಸ್ವರ್ಗ ಸಾಕ್ಷಾತ್ಕರಿಸಿದ
ಯೇಸುಕ್ರಿಸ್ತನೇ ನೀನೇ ದಿವ್ಯ ಚೇತನ.!
ಬುವಿ ಬೆಳಗಿದ ದೇವನಿಗೆ ಧನ್ಯನಮನ
ಜನ್ಮದಿನಕೆ ಹೃನ್ಮನಗಳ ಶುಭಕಾಮನ
ನಿನ್ನಯಾ ದಯೆ ಕಾಪಿಡಲಿ ಚಿರಂತನ
ಜಗವಾಗಲಿ ನಿತ್ಯ ಸತ್ಯ ಶಾಂತಿಯ ಬನ.!
- ಎ.ಎನ್.ರಮೇಶ್.ಗುಬ್ಬಿ.
