ಅಂಗೈಯಲ್ಲಿ ಪ್ರಪಂಚ (ಭಾಗ- ೨೦)

ಮನಸ್ಥಿತಿ ಎನ್ನುವುದು ನಾವು ಮಾಡುವ ಕೆಲಸದ ಮೇಲೂ ಪರಿಣಾಮ ಬಿರುತ್ತದೆ. ನಾವು ಅತ್ಯಂತ ಶಾಂತಿಯಿಂದ ಇದ್ದರೆ ನಾವು ಮಾಡುವ ಕೆಲಸದಲ್ಲಿ ಕಿರಿಕಿರಿಯಿದ್ದರೂ ಅದನ್ನು ತಾಳ್ಮೆಯಿಂದಲೇ ನಿರ್ವಹಿಸುವ ಶಕ್ತಿ ನಮಗಿರುತ್ತದೆ. ಅಂಕಣಕಾರ್ತಿ ಮಂಗಳ ಎಂ ನಾಡಿಗ್ ಅವರ ‘ಅಂಗೈಯಲ್ಲಿ ಪ್ರಪಂಚ’ ಅಂಕಣದಲ್ಲಿ ‘ಮನಸ್ಥಿತಿ’ ತಪ್ಪದೆ ಮುಂದೆ ಓದಿ…

ಮನಸ್ಥಿತಿ ಎನ್ನುವುದು ಅವರವರ ಮನಸ್ಸಿಗೆ ಸಂಬಂಧಪಟ್ಟಿದ್ದು. ಅದು ಕೆಲವೊಮ್ಮೆ ಪರಿಸ್ಥಿತಿಯನ್ನೂ ಅವಲಂಬಿಸಿರುತ್ತದೆ ಎಂದರೆ ತಪ್ಪಲ್ಲ. ಅವರಿರುವ ವಾತಾವರಣವೂ ಅವರ ಮನಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ. ಇದು ಕಾಲದಿಂದ ಕಾಲಕ್ಕೆ ಬದಲಾಗಲೂಬಹುದು.

ಕೆಲವರಿಗೆ ಅವರಿಗೆ ಮನೆಯಿದೆ, ಕಾರಿದೆ ನನಗಿಲ್ಲವಲ್ಲ ಎಂಬ ಕೊರಗು. ನನಗೆ ಬಾಡಿಗೆ ಮನೆಯಾದರೂ ಇದೆಯಲ್ಲ ಎಂಬ ಯೋಚನೆ ಬರುವುದೇ ಇಲ್ಲ. ಆ ಮನೆ ಕಟ್ಟಲು ಅವರು ಪಟ್ಟ ಪರಿಶ್ರಮ, ಆಸೆ-ಆಕಾಂಕ್ಷೆಗಳನ್ನೆಲ್ಲಾ ಬದಿಗಿಟ್ಟು ಜೀವನವಿಡೀ ಲೆಕ್ಕಾಚಾರದಲ್ಲೇ ಕಳೆದ ಬದುಕು, ಮಾಡಿದ ಸಾಲ, ಯಾವುದೂ ಇವರ ಕಣ್ಣಿಗೆ ಕಾಣಿಸುವುದೇ ಇಲ್ಲ. ಅವರಿಗಿದೆ, ನನಗಿಲ್ಲ ಎಂಬ ಕೊರಗಷ್ಟೇ ಕೊನೆಗೆ ಅವರಲ್ಲುಳಿಯುವುದು.

ಹಲವರು ಬೇರೆಯವರು ಉನ್ನತಿ ಹೊಂದಿದರೆ ಸಂಭ್ರಮಿಸುತ್ತಾರೆ, ಖುಷಿಪಡುತ್ತಾರೆ. ದುಃಖದಲ್ಲಿದ್ದವರಿಗೆ ಸಾಂತ್ವನ ಹೇಳುತ್ತಾರೆ. ಅದರಿಂದ ಪಾರಾಗುವ ಸಾಧ್ಯತೆಯನ್ನು ಅವರ ಮುಂದೆ ತೆರೆದಿಡುತ್ತಾರೆ. ಅದು ಯೋಜನೆಯ ರೂಪದಲ್ಲಾದರೂ ಆಗಬಹುದು ಅಥವಾ ಹಣದ ರೂಪದಲ್ಲಾದರೂ ಆಗಬಹುದು. ಅವರಿಗೆ ಅಗತ್ಯವಿರುವ, ತಮ್ಮ ಕೈಲಾದ ವಸ್ತುಗಳನ್ನು ಕೊಡಿಸುವ ಮೂಲಕವೂ ಇರಬಹುದು. ಇನ್ನು ಕೆಲವರು ಬೇರೊಬ್ಬರ ಉನ್ನತಿಯನ್ನು ನೋಡಿ ಅಸೂಯೆ, ಖಂಡನೆ, ಅಪಪ್ರಚಾರ ಇತ್ಯಾದಿಯಾಗಿ ವರ್ತಿಸುತ್ತಾರೆ. ಕೇಡು ಬಯಸುತ್ತಾರೆ. ಅವರ ದುಃಖದಲ್ಲಿ ಆನಂದ ಕಾಣುತ್ತಾರೆ.

ಫೋಟೋ ಕೃಪೆ : ಅಂತರ್ಜಾಲ

ಸಿಗ್ಮಂಡ್ ಫ್ರಾಯ್ಡ್ ಎನ್ನುವ ಖ್ಯಾತ ಮನೋವಿಜ್ಞಾನಿಯ ಪ್ರಕಾರ ಮನಸ್ಸು ಎನ್ನುವುದು ನೀರಿನಲ್ಲಿರುವ ಮಂಜುಗಡ್ಡೆಯಂತೆ. ಎಂದರೆ ಮೇಲೆ ಕಾಣುವುದು ಪ್ರಜ್ಞೆ , ನೀರೊಳಗೆ ಕಾಣಿಸುವುದು ಉಪಪ್ರಜ್ಞೆ ಮತ್ತು ಕಾಣಿಸದ ಭಾಗ ಪ್ರಜ್ಞಾಹೀನ.

  • ಪ್ರಜ್ಞೆ (Conscious)- ಈಗ ಪ್ರಸ್ತುತ ನಡೆಯುತ್ತಿರುವುದು, ನಮ್ಮ ಗಮನದಲ್ಲಿರುವುದು. ಅಂದರೆ ನೀರಿನ ಮೇಲ್ಭಾಗದಲ್ಲಿ ಕಾಣಿಸುತ್ತಿರುವ ಮಂಜುಗಡ್ಡೆಯಂತೆ.
  • ಉಪಪ್ರಜ್ಞೆ (Subconscious) – ಪ್ರಸ್ತುತ ನಾವು ಯೋಚನೆ ಮಾಡದೇ ಇರುವ ವಿಷಯವನ್ನು ಯಾರಿಂದಲಾದರೂ ಕೇಳಿದರೆ ಅಥವಾ ಓದಿದರೆ ಅದು ಮತ್ತೆ ನಮಗೆ ಮರುಕಳಿಸುವುದು. ಉದಾಹರಣೆಗೆ, ನಾವು ನಮ್ಮ ಮೊಬೈಲ್ ನಂಬರ್ ಬಗ್ಗೆ ಚಿಂತಿಸದೇ ಇರುತ್ತೇವೆ. ಯಾರಾದರೂ ಅದನ್ನು ಕೇಳಿದಾಗ ಅದನ್ನು ನೆನಪಿಸಿಕೊಳ್ಳುತ್ತೇವೆ.
  • ಪ್ರಜ್ಞಾಹೀನ (Unconscious) – ಇದು ನಮ್ಮ ಮನಸ್ಸಿನ ಬಹುದೊಡ್ಡ ಭಾಗ. ನಮ್ಮ ಜೀವನದಲ್ಲಿ ಹಿಂದೆ ನಡೆದಿದ್ದ ಘಟನೆಗಳು ನಮ್ಮ ಮನಸ್ಸಿನಲ್ಲಿ ಹೇಗೆ ಅಡಗಿ ಕುಳಿತಿರುತ್ತವೋ ಹಾಗೆ ಈ ಸ್ಥಿತಿ. ಉದಾಹರಣೆಗೆ, ಚಿಕ್ಕ ವಯಸ್ಸಿನ ನೆನಪುಗಳು, ನಡೆದ ದುರಂತಗಳು ಇವನ್ನೆಲ್ಲಾ ಬೇಕೆಂದೇ ನಮ್ಮ ಮನಸ್ಸು ಬದಿಗೆ ಸರಿಸಿ ಮರೆಸಿರುತ್ತದೆ.

ಮನಸ್ಥಿತಿಯನ್ನು ಒಟ್ಟಾರೆಯಾಗಿ ನಾಲ್ಕು ವಿಧಗಳಲ್ಲಿ ವಿಂಗಡಿಸಬಹುದು. ಅವುಗಳೆಂದರೆ :

  •  ನಾನು ಸರಿಯಿದ್ದೇನೆ – ಬೇರೆಯವರು (ಅಥವಾ ಸಮಾಜ) ಸರಿಯಿಲ್ಲ.
  • ನಾನು ಸರಿಯಿಲ್ಲ – ಬೇರೆಯವರು ಸರಿ (ಉದಾಹರಣೆಗೆ ಕೀಳರಿಮೆ(Depression)
  • ನಾನು ಸರಿಯಿಲ್ಲ – ಪ್ರಪಂಚವೂ ಸರಿಯಿಲ್ಲ
  • ಆರೋಗ್ಯಕರ ನಿಲುವು – ನಾನು ಸರಿ – ಇತರರೂ ಸರಿ
    ( I am ok – you are ok)

ಫೋಟೋ ಕೃಪೆ : ಅಂತರ್ಜಾಲ

ಇದಲ್ಲದೇ ಇನ್ನೂ ಮೂರು ತರದ ಮನಸ್ಥಿತಿಯವರಿರುತ್ತಾರೆ :

 ಉದಾಹರಣೆಗೆ

  • ಕೆಲವರಿಗೆ ಪ್ರಸ್ತುತ ಪರಿಸ್ಥಿತಿಯ ಅರಿವಿರುವುದಿಲ್ಲ. ಅವರಿಗೆ ಬೇಕೆಂದರೆ ಬೇಕಷ್ಟೇ. ಅದು ತಕ್ಷಣಕ್ಕೆ ಸಿಕ್ಕಿದರೆ ಮಾತ್ರ ಅವರು ಸಮಾಧಾನ ಹೊಂದುವುದು.
  • ಇನ್ನು ಕೆಲವರಿಗೆ ಬೇಕು-ಬೇಡಗಳ ಅರಿವಿರುತ್ತದೆ. ತಕ್ಷಣಕ್ಕೆ ಯಾವುದೇ ತೀರ್ಮಾನಕ್ಕೆ ಬರದೇ ಯೋಚಿಸಿ ಮುಂದುವರೆಯುತ್ತಾರೆ. ಉದಾಹರಣೆಗೆ, ಈಗ ಒಂದು ಪುಸ್ತಕ ಬೇಕೆನಿಸಿದರೆ ಅದು ತಕ್ಷಣಕ್ಕೆ ಸಿಗುವುದಿಲ್ಲ ಎಂಬ ಅರಿವಿರುತ್ತದೆ ಅಥವಾ ಹೋಗಿ ತರಲು ಹೊರಗಡೆ ಸುರಿಯುತ್ತಿರುವ ಮಳೆಯಲ್ಲಿ ಸಾಧ್ಯವಿಲ್ಲ ಎಂದು ತಿಳಿದಿರುತ್ತದೆ. ಮುಂದೆ ಸಿಕ್ಕಾಗ ಅವರು ಅದರಲ್ಲಿ ತೃಪ್ತಿ, ಸಮಾಧಾನ ಹೊಂದುತ್ತಾರೆ.
  • ಒಂದಷ್ಟು ಮಂದಿ ಯಾವುದೇ ತೀರ್ಮಾನಕ್ಕೆ ಬರುವ ಮೊದಲು ತುಂಬಾ ಯೋಚಿಸುತ್ತಾರೆ. ಅತೀ ಅವಶ್ಯಕ ಸಮಯದಲ್ಲಿ ಮಾತ್ರ ಗಟ್ಟಿ ನಿರ್ಧಾರ ತಳೆಯುತ್ತಾರೆ. ಇದಕ್ಕೆ ಅವರು ಬೆಳೆದು ಬಂದ ಮನೆಯ ವಾತಾವರಣ, ಜೀವನಮೌಲ್ಯ, ಹೀಗೇ ಬದುಕಬೇಕೆಂದು ಇಟ್ಟುಕೊಂಡ ರೀತಿ-ನೀತಿ ಇವೆಲ್ಲವೂ ಕಾರಣ. ಉದಾಹರಣೆಗೆ, ಒಬ್ಬ ವಿದ್ಯಾರ್ಥಿ ಕಾಲೇಜಿನಲ್ಲಿ ಪಾಠ ಕೇಳುತ್ತಿರುವಾಗ ಇಷ್ಟವಾಗದೇ ಹೊರನಡೆ ಎಂದು ಮನಸ್ಸು ಹೇಳುತ್ತಿದ್ದರೂ ಬೇಡ, ಇದು ನಿನಗೆ ಪರೀಕ್ಷೆಗೆ ತುಂಬಾ ಅಗತ್ಯ ಜೊತೆಗೆ ತಂದೆ-ತಾಯಿ ಇಟ್ಟ ನಂಬಿಕೆಗೆ, ಅವರು ಕಷ್ಟಪಟ್ಟು ದುಡಿದು ಕಟ್ಟಿದ ಹಣಕ್ಕೆ ಮೋಸವಾಗಬಾರದು ಎಂದು ಸುಪ್ತ ಮನಸ್ಸು ಆ ವಿದ್ಯಾರ್ಥಿಯನ್ನು ಎಚ್ಚರಿಸುತ್ತಲೇ ಇರುತ್ತದೆ.

ಈ ಮನಸ್ಥಿತಿ ಎನ್ನುವುದು ನಾವು ಮಾಡುವ ಕೆಲಸದ ಮೇಲೂ ಪರಿಣಾಮ ಬಿರುತ್ತದೆ. ನಾವು ಅತ್ಯಂತ ಶಾಂತಿಯಿಂದ ಇದ್ದರೆ ನಾವು ಮಾಡುವ ಕೆಲಸದಲ್ಲಿ ಕಿರಿಕಿರಿಯಿದ್ದರೂ ಅದನ್ನು ತಾಳ್ಮೆಯಿಂದಲೇ ನಿರ್ವಹಿಸುವ ಶಕ್ತಿ ನಮಗಿರುತ್ತದೆ.

ಹಾಗೇ ಮನುಷ್ಯನೆಂದ ಮೇಲೆ ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರ ಹೀಗೆ ಆರು ಗುಣಗಳು ಇರುತ್ತವೆ. ಇದರಲ್ಲಿ ಯಾವುದು ಅತಿಯಾದರೂ ಕಂಟಕವೇ. ಆದಷ್ಟು ಬೇಡದ ವಿಷಯಗಳನ್ನು ಮನಸ್ಸಿನಿಂದ ಹೊರ ಹಾಕಿದಷ್ಟೂ ನೆಮ್ಮದಿ. ಕೆಲವರು ತಮ್ಮ ಎಲೆಯನ್ನು ನೋಡುವುದಕ್ಕಿಂತ ಬೇರೆಯವರ ಎಲೆಯನ್ನು ನೋಡುವುದೇ ಜಾಸ್ತಿ. ಅವರೇನು ಹಾಕಿಸಿಕೊಂಡರು, ಏನು ತಿಂದರು, ಏನು ಬಿಟ್ಟರು, ಯಾವ ರೀತಿ ತಿನ್ನುತ್ತಾರೆ ಎಂದು. ಹೀಗಿರುವಾಗ ತನ್ನ ಎಲೆ ನೋಡಲು ಪುರುಸೊತ್ತೆಲ್ಲಿ? ಅಂಥವರನ್ನು ತನ್ನ ಮುಂದಿರುವ ಮೃಷ್ಟಾನ್ನ ಭೋಜನ ಸವಿಯಲು ಪಡೆದುಕೊಂಡು ಬಂದಿರದ ಪಾಪಿಗಳೆಂದರೆ ತಪ್ಪಲ್ಲ. (ಇದು ಬರೀ ಊಟದ ವಿಷಯಕ್ಕಲ್ಲ)

ಸದಾ ಬೇರೆಯವರನ್ನು ನೋಡಿ ಕೊರಗುವುದು, ಮರುಗುವುದು, ತನಗೆ ಸಿಕ್ಕದಿದ್ದುದು ಅವರಿಗೂ ಸಿಗಬಾರದೆಂಬ ವಿಕೃತ ಮನಸ್ಸು. ಯಾರು ಎಷ್ಟು ಕೊಟ್ಟರೂ ಇನ್ನಷ್ಟು ಬೇಕೆಂಬ ಹಪಾಹಪಿ, ತೃಪ್ತಿಯಿಲ್ಲದ ಜೀವನ. ತಾನೇನು ಮಾಡಿದ್ದೇನೆ ಅವರಿಗೆ ಎಂದು ಒಮ್ಮೆಯೂ ಯೋಚಿಸದ ಸ್ವಾರ್ಥ. ನನಗಾದರೆ ಯಾವಾಗಲೂ ಕಷ್ಟ, ಹಾಗಂತ ಬೇರೆಯವರು ಮಾಡಿದ್ದಕ್ಕೂ ಬೆಲೆಯಿಲ್ಲ. ಇನ್ನು ಕೆಲವರಿಗೆ ತಾನು ಮಾಡಿದ್ದೆಲ್ಲ ಶ್ರೇಷ್ಠ , ಅದರ ಮುಂದೆ ಬೇರೆಯವರದ್ದೆಲ್ಲ ನಿಕೃಷ್ಟ. ಯಾವಾಗಲೂ ನಾನೇ ಸರಿ. ನಮ್ಮ ಆತ್ಮಾಭಿಮಾನ ಒಳ್ಳೆಯದೇ. ಹಾಗಂತ ಬೇರೆಯವರ ಸ್ವಾಭಿಮಾನಕ್ಕೆ ಪೆಟ್ಟು ಕೊಡುವುದು ಎಷ್ಟರ ಮಟ್ಟಿಗೆ ಸರಿ? ನಮ್ಮ ಕೆಲಸದ ಬಗ್ಗೆ ನಮಗೆ ಹೆಮ್ಮೆ, ಹಾಗಂತ ಬೇರೆಯವರು ಮಾಡುವ ಕೆಲಸದ ಮೇಲೆ ತುಚ್ಛ ಭಾವನೆ ಬೇಡ. ನಮ್ಮ ಕೆಲಸವನ್ನು ಪ್ರೀತಿಸುವುದರ ಜೊತೆಗೆ ಇತರರು ಮಾಡುವ ಕೆಲಸವನ್ನೂ ಗೌರವಿಸೋಣ. ಸ್ವಾಸ್ಥ್ಯ ಸಮಾಜದ ನಿರ್ಮಾಣಕ್ಕೆ ಇದೂ ಸಹಾಯಕವಾಗುತ್ತದೆ.

ಇವೆಲ್ಲಾ ಕೆಲವು ಉದಾಹರಣೆಯಷ್ಟೆ. ” ಅಬ್ಬಬ್ಬಾ, ಎಷ್ಟೊಂದು ತರದ ಮನಸ್ಥಿತಿಯವರು. ಎಲ್ಲಾ ನಮ್ಮ ಸುತ್ತಮುತ್ತ ಇರುವವರೇ. ಇವರೊಂದಿಗೇ ಹೊಂದಾಣಿಕೆಯ ಬದುಕು. ಬೇಕೆಂದರೂ, ಬೇಡವೆಂದರೂ ಇದೇ ಸತ್ಯ”.

ಮನಸ್ಥಿತಿ ಸರಿಯಿಲ್ಲದಿದ್ದರೆ ಮನೆಯ ಜೊತೆಗೆ ಮನಿಯ (Money) ಸ್ಥಿತಿಯೂ ಹದಗೆಡುತ್ತದೆ. ಮನೆಯಲ್ಲಿ ಒಬ್ಬರ ಮನಸ್ಥಿತಿ ಸರಿಯಿಲ್ಲದಿದ್ದರೆ, ಮನೆಯಲ್ಲಿರುವ ಅಷ್ಟೂ ಜನರ ಮೇಲೆ ಅದು ಪರಿಣಾಮ ಬೀರುತ್ತದೆ. ಹಾಗೇ ಮನಸ್ಥಿತಿ ಸರಿಯಿಲ್ಲದಿದ್ದರೆ ಕೆಲಸ, ಕಾರ್ಯಗಳಲ್ಲೂ ತೊಂದರೆಯಾಗಿ ಹಣಕ್ಕೂ ಪರದಾಡಬೇಕಾದಂತಹ ಪರಿಸ್ಥಿತಿ ಎದುರಾಗಲೂ ಬಹುದು. ಮನಸ್ಥಿತಿಯನ್ನು ಚೆನ್ನಾಗಿಟ್ಟುಕೊಳ್ಳಬೇಕೆಂದರೆ ಯೋಗ, ಧ್ಯಾನ, ಒಳ್ಳೆಯ ವಾತಾವರಣ, ಹಸಿರಿನ ಪ್ರಕೃತಿ, ಒಳ್ಳೆಯ ಗಾಳಿ, ಉತ್ತಮ ಸ್ನೇಹಿತರು, ಅಲ್ಲದೇ ಸೋಮಾರಿಯಾಗಿರದೇ ಚಟುವಟಿಕೆಯಿಂದಿರುವುದು, ಇಷ್ಟದ ಹವ್ಯಾಸಗಳಲ್ಲಿ ತೊಡಗಿಸಿಕೊಳ್ಳುವುದು, ಪ್ರವಾಸ, ಶಾಪಿಂಗ್, ಅಗತ್ಯವಿದ್ದಲ್ಲಿ ಮನೋಚಿಕಿತ್ಸೆ ಹೀಗೆ ಇನ್ನೂ ಸಾಕಷ್ಟಿವೆ. ಎಲ್ಲಕ್ಕಿಂತ ಮುಖ್ಯವಾಗಿ ನಮ್ಮ ಮನಸ್ಥಿತಿಯನ್ನು ಹಿಡಿತದಲ್ಲಿಟ್ಟುಕೊಳ್ಳುವುದು ನಮ್ಮ ಕೈಯ್ಯಲ್ಲೇ ಇರುವಾಗ ಆದಷ್ಟು ಸಮಚಿತ್ತದಿಂದ ನಮ್ಮ ಬದುಕನ್ನು ಹಸನು ಮಾಡಿಕೊಳ್ಳೋಣ.


  • ಮಂಗಳ ಎಂ ನಾಡಿಗ್

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW