ಹಾರಿತು ಅರಗಿಣಿಯು…ತೋರುತ ರೆಕ್ಕೆಯ…ದೂರದ ಕಾಡಿನ ದಾರಿಯೆಡೆ….ಕವಿಯತ್ರಿ ಶಕುಂತಲ ಪಿ ಆಚಾರ್ ಅವರ ಸುಂದರ ಕವನವನ್ನು ತಪ್ಪದೆ ಮುಂದೆ ಓದಿ…
ಅರಗಿಣಿ ಮಾತಲಿ
ಸರಸದ ದನಿಯದು
ನರನಿಗೆ ಹಿತವನು ನೀಡಿತ್ತು
ಮರದಿಂ ಹಾರುತ
ಸರಸರ ಹಾಡುತ
ಚರಪರ ರೆಕ್ಕೆಯ ಬಡಿದಿತ್ತು
ಅಂದದ ಹಸಿರಿನ
ಸುಂದರ ಹಕ್ಕಿಯು
ಚೆಂದದಿ ಬೇಡನ ಸೆಳೆದಿತ್ತು
ತಂದನು ಬಲೆಯನು
ನಿಂದನು ಕಾಯುತ
ಬಂಧನದೊಳು ಗಿಳಿ ಸಿಲುಕಿತ್ತು
ಅರಗಿಣಿ ಸಿಕ್ಕಲು
ತೆರಳಿದ ಮಾರಲು
ನೆರೆದಿಹರಲ್ಲಿಯೆ ಪುರಜನರು
ಕಿರುಚುತ ಶುಕವದು
ತಿರುವುತ ತಲೆಯನು
ಬಿರುಸಲಿ ಹುಡುಕಿತು ದಾರಿಯನು
ನರನಿಗೆ ಗಮನವು
ವರಮಾನದ ಕಡೆ
ಮರುಗನು ಬಡವನ ಸಂಕಟಕೆ
ಸೆರೆಯೊಳು ಗಿಳಿಯನು
ಮರುಕವ ತೋರುತ
ತೊರೆದರೆ ಕೂಡದು ಹಣಗಳಿಕೆ
ಗುಂಪಿನಲೊಬ್ಬನು
ತಂಪಿನ ಮನಸಿನ
ಸಂಪದ ಹೊಂದಿದ ಸಜ್ಜನನು
ಇಂಪಿನ ಗಿಳಿಯನು
ಪೆಂಪಲಿ ಕೊಂಡನು
ಸೊಂಪಿನ ಗಗನಕೆ ಹಾರಿಸಲು
ಹಾರಿತು ಹಕ್ಕಿಯು
ತೋರುತ ರೆಕ್ಕೆಯ
ದೂರದ ಕಾಡಿನ ದಾರಿಯೆಡೆ
ದಾರಿಯ ತೋರಿದ
ಮೇರುಗೆ ನಮಿಸುತ
ಬಾರದ ಮನಸಲಿ ಗೂಡಿನೆಡೆ
- ಶಕುಂತಲ ಪಿ ಆಚಾರ್, ಚಿತ್ರದುರ್ಗ