“ಯಥಾರ್ಥ ಇದು ನಮ್ಮ ನಿಮ್ಮೆಲ್ಲರ ಬದುಕಿನ ನಿಜಾರ್ಥದ ಕವಿತೆ. ಜೀವ-ಜೀವನದ ಸತ್ಯಾರ್ಥದ ನಿತ್ಯ ಸತ್ಯ ಭಾವಗೀತೆ. ಪ್ರತಿಷ್ಠಿತ ಡಾ.ಡಿ.ಎಸ್.ಕರ್ಕಿ ಪ್ರಶಸ್ತಿ ಪಡೆದ ನನ್ನ ’ಕಾಡುವ ಕವಿತೆಗಳು’ ಸಂಕಲನದ ನನ್ನ ಅತ್ಯಂತ ಇಷ್ಟದ ಕವಿತೆ. ಇಲ್ಲಿ ಅರಿತಷ್ಟೂ ಬದುಕಿನ ತತ್ವದ ಹರಿವಿದೆ. ಅರ್ಥೈಸಿದಷ್ಟೂ ಬೆಳಕಿನ ಸತ್ವದ ಹೊಳಹಿದೆ. ಏನಂತೀರಾ..?” – ಪ್ರೀತಿಯಿಂದ ಎ.ಎನ್.ರಮೇಶ್.ಗುಬ್ಬಿ
ಇಲ್ಲಿ ಇಳೆಯಲ್ಲಿನ
ನಮ್ಮ ಬದುಕೆಂದರೆ..
ಲಾಟರಿಯಿದ್ದಂತೆ.!
ನಾವು ಬಯಸಿದ್ದು
ಎಲ್ಲವೂ ಸಿಗುವುದಿಲ್ಲ.!
ಸಿಕ್ಕಿದ್ದು ಸಕಲವೂ
ಖುಷಿ ಕೊಡುವುದಿಲ್ಲ.!
ಯಾರು ಯಾರಿಗೆ
ಎಷ್ಟೆಷ್ಟು ಋಣವೋ..
ಅಷ್ಟಷ್ಟೇ ಲಭ್ಯವಿಲ್ಲಿ.!
ಹುಟ್ಟು ಸಾವು..
ನೋವು ನಲಿವು..
ಏನಿಹುದು ಹೇಳಿ
ನಮ್ಮ ಕರಗಳಲ್ಲಿ.!
ನೆರಳೂ ಕೂಡ
ಜೊತೆ ಬರುವುದಿಲ್ಲ
ಕಾರ್ಗತ್ತಲ ಇರುಳಲ್ಲಿ.!
ನೊಂದು ನಿಂತರೆ
ಪರಿತಪಿಸಿ ಕುಂತರೆ
ಎಲ್ಲವೂ ದಿಗಿಲು..
ಭೀತಿಯ ಮುಗಿಲು.!
ಬಂದಿದ್ದು ಬರಲೆಂದು
ನಡೆಯುತ್ತಿದ್ದರೆ..
ತೆರೆದುಕೊಳ್ಳುವುದು
ನಿಗೂಢ ಗಮ್ಯದ
ಮುಂದಿನ ಬಾಗಿಲು.!
- ಎ.ಎನ್.ರಮೇಶ್.ಗುಬ್ಬಿ