ಕೆ.ಅರುಣ್ ಪ್ರಸಾದ್ ಅವರ ‘ಬೆಸ್ತರ ರಾಣಿ ಚಂಪಕಾ’ ಕಾದಂಬರಿಯಲ್ಲಿ ಕನ್ನಡ ನಾಡಿನ ಆನಂದಪುರಕ್ಕೂ ಸಂಬಂಧವಿದೆ ಮತ್ತು ಕೇರಳದ ತಿರುವಂತಪುರದಲ್ಲಿರುವ ಪ್ರಖ್ಯಾತ ಅನಂತಪದ್ಮನಾಭ ಸ್ವಾಮಿಯ ಮೂಲ ಸ್ಥಾನ ಎಂದು ಕೆಲವರು ಹೇಳುತ್ತಾರೆ.ಇದೆ ದೇವಾಲಯದ ಸರೋವರದಲ್ಲಿ ಸಸ್ಯಾಹಾರಿ ಮೊಸಳೆಯೊಂದು ಇಂದಿಗೂ ಇದೆ ಎನ್ನುವ ರೋಚಕ ವಿಷಯವನ್ನು ಹೇಳುತ್ತಾರೆ, ಕಾದಂಬರಿ ಕುರಿತು ಲೇಖಕರ ಮಾತನ್ನು ತಪ್ಪದೆ ಮುಂದೆ ಓದಿ.
ಪುಸ್ತಕ : ಬೆಸ್ತರ ರಾಣಿ ಚಂಪಕಾ
ಲೇಖಕರು : ಕೆ. ಅರುಣ್ ಪ್ರಸಾದ್
ಪ್ರಕಾರ : ಕಾದಂಬರಿ
ಪ್ರಕಾಶನ : ಪಶ್ಚಿಮಘಟ್ಟದ ಶಿವಮೊಗ್ಗ
ಬೆಲೆ :೧೦೦/
ಮರ ಮಟ್ಟುಗಳನ್ನ ಕಾಡಿನಿ೦ದ ಕಡಿದು ಉಪಯೋಗಕ್ಕೆ ಬೇಕಾದ ಆಕಾರರಕ್ಕೆ ಕೊಯ್ಯುವ ಕೆಲಸ ಮಾಡುವವರಿಗೆ ಗಂಜಿಯವರು ಎನ್ನುತ್ತಾರೆ ಅವರೆಲ್ಲರ ಹೆಸರಿನ ಮುಂದೆ ಗಂಜಿ ಬರುತ್ತದೆ. ಉದಾಹರಣೆಗೆ ಅವರಲ್ಲಿ ಗಣಪ ಎಂಬ ಹೆಸರಿದ್ದರೆ ಅವರು ಗಂಜಿ ಗಣಪ ಅಂತ.
ಇವರು ವನದೇವಿಯ ಭಕ್ತರು, ಬೇಕಾದ ಸೂಕ್ತ ಮರ ಆಯ್ಕೆ ಮಾಡಿದ ಮೇಲೆ ಸುತ್ತ ಮುತ್ತ ಯಾವುದೇ ದೇವಾಲಯವಿದ್ದರೆ ಆ ಮರ ಕಡಿಯುವುದಿಲ್ಲ, ಶಕುನಗಳನ್ನ ಹೆಚ್ಚು ನಂಬುತ್ತಾರೆ, ಎಲ್ಲವೂ ಸರಿಯಾದ ಮರ ಆಯ್ಕೆ ಮಾಡಿದ ಮೇಲೆ ಯಾರಿಗೆ ಆ ಮರ ಬಳಕೆ ಆಗುತ್ತದೆ, ಆ ಮನೆಯ ಯಜಮಾನನಿಂದ ಮೊದಲ ಕೊಡಲಿ ಕಚ್ಚು ಹಾಕಿಸುತ್ತಾರೆ. ಯಾಕೆಂದರೆ ಆ ಮರದಲ್ಲಿ ಯಾವುದೇ ಅಗೋಚರ ಶಕ್ತಿ ಇದ್ದರೆ ಗಂಜಿಯವರಿಗೆ ಬಾಧಿಸದಿರಲಿ ಎಂದು ಮರ ಕಡಿದ ಪಾಪ ತಮಗೆ ತಟ್ಟಬಾರದು ಎಂಬುದು ಅವರ ಉದ್ದೇಶ.
ಬೇಕಾಬಿಟ್ಟಿ ಕಾಡು ಕಡಿಯುವವರು ಇವರಲ್ಲ, ನೂರು ಮರ ಇದ್ದರೆ ಅದರಲ್ಲಿ ಒಂದು ಮರ ಮಾತ್ರ ಇವರ ಆಯ್ಕೆ. ಇವರುಗಳು ಪಶ್ಚಿಮ ಘಟ್ಟ ಮತ್ತು ಕರಾವಳಿ ಅಂಚಿನ ಬೈಂದೂರು, ಭಟ್ಕಳ, ಗೇರುಸೊಪ್ಪೆ, ಕುಮಟಾದಲ್ಲಿ ಹೆಚ್ಚಾಗಿ ಇದ್ದಾರೆ. ಇದೇ ರೀತಿ ಕಾಸರಗೋಡು, ಕುಂಬಳೆ, ಬೇಕಲ್ ನ ಮಲೆಯಾಳಿ ಮರ ಕೊಯ್ಯುವವರಿದ್ದಾರೆ ಆದರೆ ಅವರಿಗೆ ಗಂಜಿಯವರ೦ತೆ ನಿಯಮ ಇಲ್ಲ.
ಇದು ನಾನು ಬರೆದು ಪ್ರಕಟಿಸಿರುವ ಕೆಳದಿ ಸಾಮ್ರಾಜ್ಯ ಇತಿಹಾಸ ಮರೆತಿರುವ ‘ಬೆಸ್ತರರಾಣಿ ಚಂಪಕಾ ‘ ಕಾದ೦ಬರಿಯಲ್ಲಿ ಆ ಕಾಲದಲ್ಲಿ ಮಲೆನಾಡಿನಲ್ಲಿ ಮನೆ ಕಟ್ಟುವವರಿಗೆ ಕಾಡಿನಿಂದ ಮರ ಕಡಿದು ಮರ ಮಟ್ಟು ತಯಾರಿಸಿ ಕೊಡುತ್ತಿದ್ದ ಗಂಜಿಯವರ ಉಲ್ಲೇಖದ ಒಂದು ಅಧ್ಯಾಯವಿದೆ.
ಈಗ ಗಂಜಿಯವರಾರು ಕುಲ ಕಸುಬು ಮಾಡುತ್ತಿಲ್ಲ, ಮರ ಕೊಯ್ಯುವ ಯಂತ್ರಗಳ ಕಾಲವೀಗ. ಗಂಜಿ ಅವರ ಹೆಸರಿನ ಮುಂದಿನ ಗಂಜಿ ನಾಮ ಅದೃಶ್ಯ ಆಗಿದೆ, 1963ರಲ್ಲಿ ನಮ್ಮ ಮೂಲ ಮನೆಗೆ ಗಂಜಿ ಗಣಪಣ್ಣರ ತಂಡ ಮರ ಮಟ್ಟು ತಯಾರಿಸಿ ಕೊಟ್ಟಿದ್ದರು. ನಿಯಮಗಳಿದ್ದ ಕಾಲದಲ್ಲಿ ಪ್ರಕೃತಿ ಸಮತೋಲನ ಇತ್ತು, ಈಗ ನಿಯಮಗಳಿಲ್ಲ ಎಲ್ಲಿ ನೋಡಿದರು ಪರಿಸರ ನಾಶ ಇದರ ಬಗ್ಗೆ ಪರಿಸರ ಪ್ರೇಮಿಗಳು ಹೆಚ್ಚಿನ ಸಂಶೋದನೆ ಮಾಡಬಹುದು.
- ಕೆ. ಅರುಣ್ ಪ್ರಸಾದ್