‘ ಕುಣಿಗಲ್ to ಕಂದಹಾರ್’ ಪುಸ್ತಕ ಪರಿಚಯ

‘ಕೃತಿಯುದ್ದಕ್ಕೂ ಬರುವ ಘಟನೆಗಳಲ್ಲಿ ಓದುಗ ಲೇಖಕನಾಗುವಷ್ಟು ಅನುಭವವನ್ನು ಈ ಕೃತಿ ಕೊಡುತ್ತದೆ, ಬಿಗಿಯಾದ ಭಾಷೆಯಲ್ಲಿ ಹಿಡಿದು ರೂಪಿಸಿರುವ ಅನುಭವ ಶಿಲ್ಪವಾಗಿ ಈ ಕೃತಿಯು ಮೂಡಿಬಂದಿದೆ’. – ಅರವಿಂದ ಚೊಕ್ಕಾಡಿ, ಲೇಖಕ ಮಂಜುನಾಥ ಕುಣಿಗಲ್ ಅವರ ‘ಕುಣಿಗಲ್ to ಕಂದಹಾರ್’ ಪುಸ್ತಕದ ಕುರಿತು ಹಿರಿಯ ಲೇಖಕ ಅರವಿಂದ ಚೊಕ್ಕಾಡಿ ಅವರು ಬರೆದು ಪರಿಚಯ ಲೇಖನವನ್ನು ತಪ್ಪದೆ ಓದಿ….

ಪುಸ್ತಕ :’ ಕುಣಿಗಲ್ to ಕಂದಹಾರ್’
ಲೇಖಕರು : ಮಂಜುನಾಥ ಕುಣಿಗಲ್
ಪ್ರಕಾಶಕರು : ವೀರಲೋಕ ಪ್ರಕಾಶನ
ಬೆಲೆ :೨೨೦ /
ಪುಸ್ತಕಕ್ಕಾಗಿ ಕರೆ ಮಾಡಿ : 7022122121

ಮೊನ್ನೆ ಮೈಸೂರಿನಲ್ಲಿ ಭೇಟಿಯಾದ ಮಂಜುನಾಥ ಕುಣಿಗಲ್ ಅವರು ಅವರ ‘ ಕುಣಿಗಲ್ to ಕಂದಹಾರ್’ ಕೃತಿಯನ್ನು ಕೊಟ್ಟಿದ್ದರು. ಸೈನಿಕನಲ್ಲದ ವ್ಯಕ್ತಿ ಮಿಲಿಟರಿಗೆ ಪೂರಕ ಅಗತ್ಯಗಳನ್ನು ಒದಗಿಸುವ ಕಂಪನಿಯ ಸಿಬ್ಬಂದಿಯಾಗಿ ” ಶಸ್ತ್ರ ರಹಿತ ವ್ಯಕ್ತಿಯ ಯುದ್ಧಭೂಮಿಯಂತಹ ಸನ್ನಿವೇಶದ ಅನುಭವಗಳು” ಆಸಕ್ತಿದಾಯಕ ಓದು ಎನಿಸಿತು. ಆದ್ದರಿಂದ ಪೂರ್ತಿ ಓದಿದೆ.

ಈ ಕೃತಿಯಲ್ಲಿ ಬರುವ ವಿವರಗಳು ಹಲವು ಮೂಲಗಳಲ್ಲಿ ಲಭ್ಯ ಇವೆ. ಈ ಶೈಲಿಯ ಪುಸ್ತಕಗಳನ್ನು ರವಿ ಬೆಳಗೆರೆಯವರೂ ಬರೆದಿದ್ದಾರೆ. ಆದರೆ ರವಿ ಬೆಳಗೆರೆಯವರಿಗೂ ಮಂಜುನಾಥರಿಗೂ ವ್ಯತ್ಯಾಸವಿದೆ.

ರವಿ ಬೆಳಗೆರೆಯವರದು ಅತ್ಯಂತ ಮೋಹಕ ಭಾಷೆ. ಆ ಭಾಷೆಯ ಸೆಳೆತ ಎಷ್ಟು ತೀಕ್ಷ್ಣವೆಂದರೆ ಲೇಖಕ ಹೇಳಿದ್ದನ್ನೆಲ್ಲ ಒಪ್ಪಿಕೊಳ್ಳುವುದೇ. ಅಂತಹ ಓದಿನಲ್ಲಿ ಲೇಖಕನ ಭಾಷೆಯ ಶಕ್ತಿಯಿಂದಾಗಿ ಓದುಗರ ಚಿಂತನೆಗಳು ಬ್ಲಾಕ್ ಆಗುತ್ತವೆ. ಮಂಜುನಾಥರದು ಆ ರೀತಿ ಭಾಷೆಯಲ್ಲ. ಭಾಷೆಯ ಶಕ್ತಿಯ ಆಚೆಗೂ ಅನುಭವವು ವಿಸ್ತಾರವನ್ನು ಕಂಡುಕೊಳ್ಳುತ್ತದೆ.

ಎರಡನೆಯದಾಗಿ ರವಿ ಬೆಳಗೆರೆಯವರ ಯುದ್ಧಭೂಮಿಯ ಅನುಭವಗಳು ಸರಾಗವಾಗಿ ಓದಿಸಿಕೊಂಡು ಹೋಗುತ್ತವೆ. ಅದರಲ್ಲಿ ಪತ್ತೆದಾರಿ ಕಾದಂಬರಿ ಶೈಲಿಯ ರೋಚಕತೆ ಅಲ್ಲಲ್ಲಿ ಇಣುಕುತ್ತದೆ; ಆದರೆ ಲೇಖಕ ಅಲ್ಲಿ ಡಿಸ್ಟರ್ಬ್ ಆಗುತ್ತಿಲ್ಲ ಎನ್ನುವ ನಿರಂತರತೆಯನ್ನು ಅದು ಕಾಪಾಡಿಕೊಳ್ಳುತ್ತದೆ.

‘ ಕುಣಿಗಲ್ to ಕಂದಹಾರ್’ ಲೇಖಕ ಮಂಜುನಾಥ ಕುಣಿಗಲ್

ಮಂಜುನಾಥರ ಈ ಕೃತಿಯ ವಿನ್ಯಾಸ ಬೇರೆ ಬಗೆಯದು. ತನ್ನ ಕಣ್ಣೆದುರೇ ರಾಕೆಟ್ ಬಿದ್ದು ಸುಂದರ ಯುವತಿ ಕರಕಲಾದದ್ದನ್ನು ಹೇಳುವಾಗ ಲೇಖಕ ಡಿಸ್ಟರ್ಬ್ ಆಗುವುದು ಗೊತ್ತಾಗುತ್ತದೆ. ಮಂಜುನಾಥ್ ಅವರು ಕೊಟ್ಟಿರುವ ಅಪಾರವಾದ ವಿವರಗಳು ನನಗೆ ಮುಖ್ಯವೆನಿಸುವುದಿಲ್ಲ. ಆದರೆ ಆ ವಿವರಗಳ ಹಿಂದೆ ಕೆಲಸ ಮಾಡುವ ಲೇಖಕನ ಒಳದೃಷ್ಟಿಯ ಸಂವೇದನಾಶೀಲತೆ ಬಹಳ ಮುಖ್ಯವೆನಿಸುತ್ತದೆ.

ಅಫ್ಘಾನಿಸ್ತಾನದ ಜನರ ಬದುಕು, ಭಾಷೆಯ ಬಳಕೆ, ಇಂಗ್ಲಿಷ್ ಜ್ಞಾನದ ಕೊರತೆ, ಸೈನಿಕರ ಹತಾಶೆಗಳು, ಸಾವುಗಳನ್ನು ಅಂಕಿಸಂಖ್ಯೆಗಳಾಗಿ ತೆಗೆದುಕೊಳ್ಳಬಲ್ಲ ಯಾಂತ್ರಿಕತೆ, ರಾಕೆಟ್ ದಾಳಿಯಾದಾಗ ತಪ್ಪಿಸಿಕೊಳ್ಳುವ ವಿಧಾನಗಳಿಗೆ ತಮ್ಮನ್ನು ತಾವು ಒಪ್ಪಿಸಿಕೊಳ್ಳಲು ನಡೆಸುವ ಹೋರಾಟಗಳು, ಒಳತುಮುಲಗಳು, ದಾಳಿ ಮುಗಿದ ತಕ್ಷಣ ಏನೂ ಆಗೇ ಇಲ್ಲವೇನೋ ಎನ್ನುವಷ್ಟು ಸಹಜವಾಗಿ ತೆಗೆದುಕೊಳ್ಳುವಲ್ಲಿ ಯುದ್ಧಗಳು ಉಂಟು ಮಾಡಿರುವ ಭಾವರಾಹಿತ್ಯ ಸ್ಥಿತಿಗತಿಗಳೆಲ್ಲವನ್ನೂ ಕೃತಿಯು ಮನೋಜ್ಞವಾಗಿ ತೆರೆದಿಟ್ಟಿದೆ. ಇದರ ನಡುವೆಯೇ, ಹಾವಿನ ಬಾಯೊಳಗಿನ ಕಪ್ಪೆ ಮಿಡತೆ ಹಿಡಿಯಲು ನಾಲಗೆ ಚಾಚಿದಂತೆ ಕೈಗೆ ಸಿಕ್ಕವರನ್ನು ಕಿಡ್ನ್ಯಾಪ್ ಮಾಡಿ ಹಣಕ್ಕೆ ಬೇಡಿಕೆ ಇಡುವ ಕೆಲವು ಸ್ಥಳೀಯರ ನಡೆವಳಿಕೆಗಳು, ಹಣ ಸಿಗದಿದ್ದರೆ ಕಿಡ್ನ್ಯಾಪ್ ಮಾಡಿದವನನ್ನು ಕೊಂದೇ ಹಾಕುವ ಮನಸ್ಥಿತಿಗಳೆಲ್ಲ ಮಾನವ ವರ್ತನೆಗಳ ಕ್ರೌರ್ಯದಲ್ಲೂ ಇರುವ ವೈಚಿತ್ರಗಳನ್ನು ಅನುಭವಕ್ಕೆ ತಂದು ಸಂಕೀರ್ಣ ಅನುಭವ ಲೋಕವನ್ನು ತೆರೆದಿಡುತ್ತವೆ.

ನಿಜವಾಗಿ ಈ ಕೃತಿ ಓದಿನ ಮೂಲಕ ಸಿಕ್ಕುವುದಿಲ್ಲ. ಅನುಭವದ ಮೂಲಕ ಧಕ್ಕುತ್ತದೆ.‌ ಕೃತಿಯುದ್ದಕ್ಕೂ ಬರುವ ಘಟನೆಗಳಲ್ಲಿ ಓದುಗರೇ ಲೇಖಕನಾಗಿ ಲೇಖಕನ ಪರಕಾಯ ಪ್ರವೇಶ ಮಾಡಿ ಅನುಭವಿಸಿದಾಗ ಕೃತಿಯು ಅನುಭವವಾಗಿ ಧಕ್ಕುತ್ತದೆ. ತೀರಾ ಅಪೂರ್ವವಾದ ಕಾಂಟೆಕ್ಸ್ಟ್ ಒಂದನ್ನು ಬಿಗಿಯಾದ ಭಾಷೆಯಲ್ಲಿ ಹಿಡಿದು ರೂಪಿಸಿರುವ ಅನುಭವ ಶಿಲ್ಪವಾಗಿ ಈ ಕೃತಿಯು ಮೂಡಿಬಂದಿದೆ. ಅದಕ್ಕಾಗಿ ಮಂಜುನಾಥ್ ಅವರಿಗೆ ಅಭಿನಂದನೆಗಳು.


  • ಅರವಿಂದ ಚೊಕ್ಕಾಡಿ – ವಿಮರ್ಶಕರು, ಲೇಖಕರು

0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d
Aakruti Kannada

FREE
VIEW