ಅಶ್ವಿನಿ ಸುನಿಲ್ ಕಥೆಗಾರ್ತಿ “ಅತೀತಭವ” ಕಥಾಸಂಕಲನದಲ್ಲಿ ಒಟ್ಟು 15 ಸಣ್ಣಕತೆಗಳಿವೆ. ಲೇಖಕಿ ಹೆಚ್ ವಿ ಮೀನಾ ಅವರು ಈ ಕಥಾ ಸಂಕಲನದಲ್ಲಿನ ಎರಡು ಕತೆಯನ್ನು ಓದುಗರಿಗೆ ಪರಿಚಯಿಸಿದ್ದಾರೆ, ತಪ್ಪದೆ ಮುಂದೆ ಓದಿ…
ಪುಸ್ತಕ : “ಅತೀತಭವ” ಕಥಾ ಸಂಕಲನ
ಲೇಖಕರು : ಅಶ್ವಿನಿ ಸುನಿಲ್
ಪ್ರಕಾಶಕರು : ಸಾಹಿತ್ಯಲೋಕ ಪಬ್ಲಿಕೇಷನ್ಸ್
ಬೆಲೆ : 135/-
ಮೊಬೈಲ್ ಸಂಖ್ಯೆ : 9945939436
“ಅತೀತಭವ” ಅರ್ಥಕ್ಕೆ ನ್ಯಾಯವನ್ನು ತಂದುಕೊಟ್ಟಿರುವ 15 ಸಣ್ಣ ಕಥೆಗಳು ನಮ್ಮೆಲ್ಲರ ಜೀವನದಲ್ಲಿ ಕಂಡು ಕೇಳಿದ ಹಾಗೂ ಅನುಭವಿಸಿದ ಸತ್ಯ ಎಂದೆನಿಸಿ ನಮಗೆ ನಾವೇ ಒಮ್ಮೆ ಬದುಕಿನ ಆದರ್ಶಗಳ ಕುರಿತಾಗಿ ಆತ್ಮಾವಲೋಕನಕ್ಕೆ ಒಳಗಾಗುತ್ತೇವೆ. ಇಂತಹ ಅನುಭವಕ್ಕೆ ಒಳಗಾದ ನಾನು ಪುಸ್ತಕದ ಒಂದೆರಡು ಕಥೆಗಳನ್ನು ಮಾತ್ರ ನಿಮಗೆ ಪರಿಚಯಿಸಲು ಪ್ರಯತ್ನಿಸಿದ್ದೇನೆ. ಎಲ್ಲಾ 15 ಕಥೆಗಳು ಅತ್ಯುತ್ತಮವಾಗಿವೆ ಹಾಗಾಗಿ ಎಲ್ಲರೂ ಪುಸ್ತಕ ಕೊಂಡು ಬರಹಗಾರರನ್ನು ಪ್ರೋತ್ಸಾಹಿಸಿ.

ಚಿನ್ನದ ಒಡವೆ-ವಸ್ತ್ರಗಳನ್ನು ತೊಟ್ಟರೆ ಮಾತ್ರ ಸಂಬಂಧಗಳಲ್ಲಿ ನಮಗೆ ಗೌರವ ಸಿಗುತ್ತದೆ ಎಂಬ ಅನೇಕರ ಮನಸ್ಥಿತಿಗೆ ಅನುಗುಣವಾಗಿ ನಾವು ನಮ್ಮ ಬಡತನವನ್ನು ಮುಚ್ಚಿಡಲು ತೊಡುವ ತೋರಿಕೆಯ ಕಥೆ “ವಿಂಡೋ ಸೀಟ್”. ತಾಯಿಯಾದವಳು ಮಗಳಿಗೆ ಇಷ್ಟ ವಿಲ್ಲದಿದ್ದರೂ, ಮಗಳನ್ನು ಕೇಳಿ ಪಡೆದು ತೊಟ್ಟ ಬಂಗಾರದ ಕಿವಿಯೋಲೆಯಿಂದ ಸಂಭವಿಸಿದ ಘಟನೆಯು ನಮ್ಮ ಸಮಾಜವು ಚಿನ್ನದ ಲೋಹಕ್ಕೆ ತೋರುವ ಪ್ರಾಮುಖ್ಯತೆಯನ್ನು ಅನಾವರಣಗೊಳಿಸಿದ್ದಾರೆ.
“ಲೋಹವನ್ನು ತೊಟ್ಟ ದೇಹಕ್ಕೆ ಸಿಗುವ ಬೆಲೆ ಸಂಬಂಧಗಳಿಗೆ ಇಲ್ಲವಾಗಿದೆ”
ಚಿನ್ನದ ಲೋಹದಷ್ಟೇ ಹಣವೂ ಕೂಡ ವ್ಯಕ್ತಿಯನ್ನು ಮತಿಹೀನನನ್ನಾಗಿ ಮಾಡಿಸುತ್ತದೆ. ಒಂದೇ ಸಮನೆ ಸುರಿಯುತ್ತಿದ್ದ ಕುಂಭದ್ರೋಣ ಮಳೆಗೆ ಕುಮುದಿನಿ ನದಿಯು ರಭಸದಿಂದ ಹರಿಯುತ್ತಿದ್ದಳು. ಚಿಕ್ಕ ಪೆಟ್ಟಿಗೆಯನ್ನು ಹಿಡಿದ್ದಿದ್ದ ಕೈಯೊಂದು ನೀರಿನಲ್ಲಿ ತೇಲುತ್ತ ಬರುತ್ತಿದ್ದಾಗ, ಬೀಡಿ ಸೇದುತ್ತಾ ಸೇತುವೆಯ ಹತ್ತಿರ ಹೋಗುತ್ತಿದ್ದ ರಾಮನ ಕಣ್ಣಿಗೆ ಬಿದ್ದು, ಆ ಕ್ಷಣದಲ್ಲಿ ರಾಮನ ಮನಸ್ಸಿನಲ್ಲಿ ಎದ್ದ ಲೆಕ್ಕಾಚಾರದ ಪ್ರಕಾರ ಮೊದಲಿಗೆ ತೆಲುತ್ತಿದ್ದ ವ್ಯಕ್ತಿಯ ಕೈ ಇಂದ ಪೆಟ್ಟಿಗೆಯನ್ನು ಬಿಡಿಸಿ ಸೇತುವೆಯ ಮೇಲೆ ಎಸೆಯುತ್ತಾನೆ. ನಂತರ ಆ ವ್ಯಕ್ತಿಯನ್ನು ರಕ್ಷಿಸಲು ಕೈ ಚಾಚಿದಾಗ ಅಷ್ಟರಲ್ಲಿ ಆ ವ್ಯಕ್ತಿಯು ನೀರಿನಲ್ಲಿ ಕೊಚ್ಚಿ ಹೋಗುತ್ತಾನೆ. ನಂತರ ಕುತೂಹಲವನ್ನು ತಡೆಯಲಾಗದೆ ರಾಮನು ಆ ಪೆಟ್ಟಿಗೆಯನ್ನು ತೆರೆದು ನೋಡಿದಾಗ ಪೆಟ್ಟಿಗೆಯಲ್ಲಿದ್ದ ಒಡವೆಗಳಿಂದ ಹಣದ ರೂಪದಲ್ಲಿ ರಾಮನ ಕಷ್ಟಗಳಿಗೆ ಪರಿಹಾರ ದೊರಕುತ್ತದೆ.
ಕೊಚ್ಚಿಹೋಗುತ್ತಿದ್ದ ವ್ಯಕ್ತಿಯ ಕೈಗಳು ದೈನ್ಯತೆಯಿಂದ ತನ್ನತ್ತಲೆ ನೋಡುತ್ತಿದ್ದಂತೆ ಭಾಸವಾದರೂ ಕೂಡ ರಾಮ ನಿರ್ಲಿಪ್ತ ಭಾವನೆಯಿಂದ ಗಟ್ಟಿಯಾಗಿ ಪೆಟ್ಟಿಗೆ ಹೊತ್ತು ಮನೆಗೆ ಹೋದಾಗ….. ಅವನ ಕೈಯಲ್ಲಿದ್ದ ಪೆಟ್ಟಿಗೆ ಜಾರಿ ಕೆಳಗೆ ಬೀಳುತ್ತದೆ. ಕಾರಣ ನೀರಿನಲ್ಲಿ ತೇಲಿಹೋದ ವ್ಯಕ್ತಿಯಾದರೂ ಯಾರು!?

“ಪೆಟ್ಟಿಗೆ ಹಿಡಿದ ಕೈ” ಎಂಬ ಕಥೆಯಲ್ಲಿ ಒಬ್ಬ ವ್ಯಕ್ತಿಯ ಸ್ವಾರ್ಥ ನಡೆ ಅವನ ಕರ್ಮ ಫಲವಾಗಿ ಪರಿವರ್ತನೆಗೊಂಡು ಅದರ ಅನುಸಾರವಾಗಿ ಅವನು ಫಲವನ್ನು ಅಂದೇ ಅನುಭವಿಸುತ್ತಾನೆ.
“ಅಪ್ಪ ” ಎನ್ನುವ ಕಥೆಯಲ್ಲಿ ಅಪ್ಪ-ಮಗನ ನಡುವೆ ಹುಟ್ಟಿಕೊಂಡಿದ್ದ ಅಂತರದ ಕಾರಣ ಅಪ್ಪ ಒಂಟಿಯಾಗಿಬಿಡುತ್ತಾನೆ. ಅಪ್ಪನ ಈ ಸ್ಥಿತಿಯನ್ನು ಕಂಡು ಸಂತೋಷ ಪಡುವ ಮಗ…. ಇವರಿಬ್ಬರಲ್ಲಿ ಗೆದ್ದವರು ಯಾರಿರಬಹುದು?…..ಊಹಿಸಿ? ಮಕ್ಕಳು ಸ್ವತಂತ್ರರಾದಾಗ “ಅಪ್ಪ ನನಗೇನು ಮಾಡಿದ್ದಾನೆ”? ಎಂಬ ಸಂಶಯದ ಭಾವನೆ ಮೂಡಿ, ಅವರಲ್ಲಿ ಅಪ್ಪನ ಬಗ್ಗೆ ತಾತ್ಸಾರ ಮೂಡುವುದು ನಾವು ನೋಡಿದ್ದೇವೆ. ವಾಸ್ತವ…
“ಅಪ್ಪ ಎಂದಿಗೂ ತನ್ನ ಕಷ್ಟಗಳು ಮಕ್ಕಳಿಗೆ ಗೊತ್ತಾಗಬಾರದೆಂದು ಮೌನಕ್ಕೆ ಶರಣಾಗಿರುತ್ತಾನೆ”.
ಇಂತಹ ಮನ ಕಲಕುವ 15 ಕಥೆಗಳ ತಿರುಳು ಎಲ್ಲರ ಜೀವನಕ್ಕೆ ಹತ್ತಿರವಾಗಿದ್ದು ತಮ್ಮ ಜೀವನದಲ್ಲಿ ಮಾಡಿರುವ ತಪ್ಪುಗಳನ್ನು ತಿದ್ದಿಕೊಳ್ಳಲು ಪ್ರೇರೇಪಿಸುತ್ತದೆ ಎಂಬ ಅಭಿಪ್ರಾಯ ನನ್ನದು. ಕಥಾ ಹಂದರ ಹಾಗೂ ಅವರ ಉತ್ತಮ ಶೈಲಿಯ ಬರಹದಲ್ಲಿ ಜೀವನದ ಅನುಭವಗಳ ಕಲ್ಪನೆಯು ಚಿಕ್ಕ- ಚೊಕ್ಕದಾಗಿ ರೂಪುಗೊಂಡಿವೆ.
ಶ್ರೀಮತಿ ಅಶ್ವಿನಿ ಸುನಿಲ್ ಅವರು ಪುಸ್ತಕಗಳನ್ನು ಓದಿ, ತಮ್ಮ ಮುಖಪುಟದಲ್ಲಿ ಹಾಗೂ ಬುಕ್ ಬ್ರಹ್ಮ ವೇದಿಕೆಯಲ್ಲಿ ಪುಸ್ತಕ ಪರಿಚಯವನ್ನು ಮಾಡುವ ಮೂಲಕ ಅನೇಕ ಬರಹಗಾರರನ್ನು ಎಲ್ಲರಿಗೂ ಪರಿಚಯಿಸುತ್ತಿದ್ದಾರೆ. ಸ್ವತಃ ಬರಹಗಾರರಾದ ಇವರ ಅನೇಕ ಬರಹಗಳನ್ನು ನಾನು ವಿನಯವಾಣಿ ಪತ್ರಿಕೆಯಲ್ಲಿ ಓದುತ್ತಿರುತ್ತೇನೆ. ಇವರ ವಾಸಸ್ಥಳ ಆಂಧ್ರಪ್ರದೇಶವಾದರೂ ಇವರು ಕನ್ನಡ ಭಾಷೆಗೆ ತೋರುವ ಪ್ರೀತಿ ಹಾಗೂ ಆಸಕ್ತಿಯನ್ನು ಮೆಚ್ಚಲೇ ಬೇಕು. ಶ್ರೀಮತಿ ಅಶ್ವಿನಿ ಸುನಿಲ್ಅವರಿಗೆ ನನ್ನ ಪ್ರೀತಿಯ ಅಭಿನಂದನೆಗಳು. ಅಶ್ವಿನಿ ಅವರ ಈ ಚೊಚ್ಚಲ ಕೃತಿ ಅದ್ಭುತವಾದ ಮೂಡಿಬಂದಿದೆ. ನಿಮ್ಮ ಸಾಧನೆಗೆ ಮತ್ತಷ್ಟು ಪುರಸ್ಕಾರ, ಗೌರವ ಸನ್ಮಾನಗಳು ದೊರಕಲಿ. ಇಂತಹ ಮತ್ತಷ್ಟು ಕಥೆಗಳು ಓದುಗರಿಗೆ ಓದಲು ಸಿಗಲಿ ಎಂದು ಶುಭ ಹಾರೈಸುತ್ತೇನೆ.
- ಹೆಚ್ ವಿ ಮೀನ – ಬೆಂಗಳೂರು.
