ವೈಕುಂಠವಿಲ್ಲೇ…..ಕೈಲಾಸವಿಲ್ಲೇ…..!!

ಅಸಲಿಗೆ ವೈಕುಂಠವೆಂದರೆ ಯಾವುದು..? ವೈಕುಂಠವೆಂದರೆ ಯಾವುದೇ ತೊಂದರೆ , ತಾಪತ್ರಯ, ಕಿರಿಕ್ಕು, ಕೆಡುಕುಗಳಿಲ್ಲದಿರುವುದು. ಆ ಹಿಂದಿನ ದಿನಗಳಲ್ಲಿ ಏನೆಲ್ಲಾ ಕಷ್ಟ ನಷ್ಠಗಳನ್ನು ಅನುಭವಿಸಿ, ಅಡೆತಡೆಗಳನ್ನು ಎದುರಿಸಿ ತಿರುಪತಿಗೆ ಮಾತ್ರವೇ ಹೋಗಿ ಅವನ ದರ್ಶನ‌ ಮಾಡಿದರೆ ವೈಕುಂಠದ ಬಾಗಿಲು ತಮಗಾಗಿ ತೆರೆಯಬಹುದೆಂಬ ಬಲವಾದ ಮಿಥ್ ಯಾಕೇ ? -ಹಿರಿಯೂರು ಪ್ರಕಾಶ್ ಅವರ ಈ ಲೇಖನವನ್ನು ತಪ್ಪದೆ ಮುಂದೆ ಓದಿ…

ಯಾಕೋ ಇತ್ತೀಚಿಗೆ ತಿರುಪತಿಯ ಹೆಸರು ಬೇಡವಾದ ಕಾರಣಗಳಿಗಾಗಿ ಮುನ್ನೆಲೆಗೆ ಬರುತ್ತಿದೆ. ಕೆಲ ದಿನಗಳ ಹಿಂದೆ, ತಿರುಪತಿಯ ಲಡ್ಡು ತಯಾರಿಸಲು ಕಲಬೆರಕೆಯಿಂದ ಕೂಡಿದ ತುಪ್ಪ ಬಳಸಲಾಗುತ್ತಿದೆ ಎಂಬ ಅರೋಪಗಳು ದೇಶಾದ್ಯಂತ ಸುದ್ದಿ ಮಾಡಿ ಭಕ್ತರಲ್ಲಿ ಆತಂಕವನ್ನುಂಟು ಮಾಡಿದ್ದರೆ, ಮೊನ್ನೆ‌ ಬುಧವಾರ ತಿರುಪತಿಯ ವೆಂಕಟೇಶ್ವರನ ದರ್ಶನಕ್ಕಾಗಿ ಟೋಕನ್‌ ಪಡೆಯಲು ಸರತಿಯಲ್ಲಿ ನಿಂತಿದ್ದವರ ನೂಕಾಟ ತಳ್ಳಾಟಗಳಿಂದಾಗಿ ಸಂಭವಿಸಿದ ಕಾಲ್ತುಳಿತದಿಂದ ಐವರು ಮಹಿಳೆಯರೂ ಸೇರಿದಂತೆ ಆರು ಮಂದಿ ಭಕ್ತರು ಮೃತ ಪಟ್ಟಿರುವ ಘಟನೆ ನಿಜಕ್ಕೂ ಮನಕಲುಕುವಂತಹ ಘೋರ ದುರಂತ.

ದರ್ಶನದ ಟಿಕೆಟ್ ಪಡೆಯಲು ಸಾವಿರಾರು ಜನರು ಸರತಿಯಲ್ಲಿ ಸಾಲಾಗಿ ಹೋಗದೇ ಸಂವಹನ ಕೊರತೆಯಿಂದಾಗಿ ಒಮ್ಮೆಲೇ ನೂಕುನುಗ್ಗಲಾಗಿದ್ದರಿಂದ ಪರಿಸ್ಥಿತಿ ವಿಕೋಪಕ್ಕೆ ಹೋಗಿ ಜನಜಂಗುಳಿಯ ನಡುವೆ ಸಿಲುಕಿದ್ದ ನತದೃಷ್ಟರುಪ್ರಾಣಕಳೆದುಕೊಂಡಿದ್ದಾರೆಂದು ವರದಿಯಾಗಿದೆ.

ಫೋಟೋ ಕೃಪೆ :google

ಮೃತರ ಆತ್ಮಕ್ಕೆ ತಿರುಪತಿ ತಿಮ್ಮಪ್ಪ ಶಾಂತಿ ಕರುಣಿಸಲಿ ಎಂಬ ಔಪಚಾರಿಕ ಸಾಂತ್ವನದೊಂದಿಗೆ ಈ ಬಗ್ಗೆ ನಾಲ್ಕು ಸಾಲುಗಳು.

ನಮ್ಮ ಜನ ಯಾಕೆ‌ ಹೀಗೆ ? ಎಂಬ ಪ್ರಶ್ನೆಗೆ , ಜನರಿಗೆ ಎಲ್ಲದರಲ್ಲೂ ಅರ್ಜೆಂಟು , ” ಎಲ್ಲದರಲ್ಲೂ ತನಗೆ ಮಾತ್ರ ಬೇಗ ಅನುಕೂಲವಾದರೆ ಸಾಕು , ಮಿಕ್ಕವರು ಸತ್ತರೂ ತನಗೇನೂ ಆಗಬೇಕಿಲ್ಲ” ಎಂಬ ವಿಕೃತ ಮನೋಭಾವವೇ ಇದಕ್ಕೆ ಪ್ರಮುಖ ಕಾರಣ. ಇದೇ ಕಾಲ್ತುಳಿತದ ಘಟನೆಯನ್ನು‌ ಉಲ್ಲೇಖಿಸಿ ಹೇಳುವುದಾದರೆ ಅಲ್ಲಿ ” ಸತ್ತ ಆರು ಜನರನ್ನು ಮತ್ತೇ ತುಳಿದುಕೊಂಡಾದರೂ ಸರಿ, ತಿಮ್ಮಪ್ಪನ ದರ್ಶನವಾಗಿ ವೈಕುಂಠದ ಬಾಗಿಲು ತನಗಾಗಿ ತೆರೆದರೆ ಸಾಕು..” ಎಂಬ ಸಂಕುಚಿತ ಮನಸ್ಥಿತಿಗಳೇ ಎಲ್ಲೆಡೆ ವಿಜೃಂಭಿಸಿ ಇಂತಹ ಘಟನೆಗಳಿಗೆ ನೇರ ಕಾರಣವಾಗಿ ಬಿಡುತ್ತವೆ. ಕೊನೇಪಕ್ಷ ದೇವರ ದರ್ಶನವನ್ನಾದರೂ ನೆಮ್ಮದಿಯಿಂದ ಮಾಡುವ ಸ್ಥಿತಿಯಲ್ಲಿ ಸಮಾಜವಿಲ್ಲದಿರುವುದರಿಂದ , ಮುಂದೆ ಇದಕ್ಕಿಂತ ಘೋರಾತಿ ಘೋರ ಘಟನೆಗಳು ನಡೆದರೂ ಅಚ್ಚರಿಯೇನಿಲ್ಲ.

ವೈಕುಂಠ ಏಕಾದಶಿಯಂದು ಮಹಾವಿಷ್ಣುವಿನ ವೈಕುಂಠದ ಬಾಗಿಲು ತಮಗಾಗಿ ತೆರೆದಿರುತ್ತದೆ. ಅದನ್ನು ತಮ್ಮದಾಗಿಸಿ ಪುಣ್ಯ ಸಂಪಾದಿಸಬೇಕೆಂಬ ಕಾತರ, ಧಾರ್ಮಿಕ ನಂಬಿಕೆ ಬಹುತೇಕರಲ್ಲಿ ಇರುವುದು ಸಹಜ . ಆದರೆ ಆರು ಜನರ ಹೆಣದ ಮೇಲೆ ತುಳಿದು ಅವರನ್ನು ಮೊದಲು‌ ವೈಕುಂಠಕ್ಕೆ ಕಳಿಸಿದ ನಂತರ ತಮಗೆ ಸ್ವರ್ಗದ ಬಾಗಿಲು ತೆರೆಯುತ್ತದೆಯೆಂಬ ನಂಬಿಕೆ ಅದೆಷ್ಟು ಜನರಿಗಿತ್ತೋ ಗೊತ್ತಿಲ್ಲ.

ಅಸಲಿಗೆ ವೈಕುಂಠವೆಂದರೆ ಯಾವುದು..?

ವೈಕುಂಠವೆಂದರೆ ಯಾವುದೇ ತೊಂದರೆ , ತಾಪತ್ರಯ, ಕಿರಿಕ್ಕು, ಕೆಡುಕುಗಳಿಲ್ಲದಿರುವುದು . ಆದರೆ ಹೀಗೆ ಯಾರನ್ನೂ ಲೆಕ್ಕಿಸದೇ ದೊಂಬಿಯಂತೆ ಒಬ್ಬರನ್ನೊಬ್ಬರು ತಳ್ಳಿಯಾದರೂ, ಇನ್ನೊಬ್ಬರನ್ನು ತುಳಿದಾದರೂ ತಮಗೆ ಮಾತ್ರ ತಿಮ್ಮಪ್ಪನ ದರ್ಶನವಾದರೆ ಸಾಕು ಎಂಬ ಮನೋಭಾವದಲ್ಲಿ ಯಾವ ಒಳಿತಿದೆ ಹೇಳಿ ? ಅಥವಾ ಯಾವ ಕೆಡುಕು- ಕಿರಿಕ್ಕುಗಳಿಲ್ಲ ಹೇಳಿ ?

ವೈಕುಂಠವೆಂದರೆ ಅದು ಕೇವಲ ಒಂದೆಡೆ ನೆಲೆನಿಲ್ಲದೇ , ಎಲ್ಲೆಲ್ಲೂ ಇರುವಂತಹದು. ಅಂದರೆ‌ ಮಹಾವಿಷ್ಣು ತನ್ನ‌ ಭಕ್ತರಿಗಾಗಿ ಎಲ್ಲೆಲ್ಲಿಯೂ ನೆಲೆಸಿದ್ದಾನೆಂಬ ನಂಬಿಕೆಯೇ ನಿಜವಾದಲ್ಲಿ ವೈಕುಂಠ ಏಕಾದಶಿಯಂದು ಅಥವಾ ಆ ಹಿಂದಿನ ದಿನಗಳಲ್ಲಿ ಏನೆಲ್ಲಾ ಕಷ್ಟ ನಷ್ಠಗಳನ್ನು ಅನುಭವಿಸಿ, ಅಡೆತಡೆಗಳನ್ನು ಎದುರಿಸಿ ತಿರುಪತಿಗೆ ಮಾತ್ರವೇ ಹೋಗಿ ಅವನ ದರ್ಶನ‌ ಮಾಡಿದರೆ ವೈಕುಂಠ ದ ಬಾಗಿಲು ತಮಗಾಗಿ ತೆರೆಯಬಹುದೆಂಬ ಬಲವಾದ ಮಿಥ್ ಯಾಕೇ ?

ಎಲ್ಲಕ್ಕಿಂತ ಮುಖ್ಯವಾಗಿ ಎಲ್ಲಿ ನಮಗೆ ಸುಖ, ಶಾಂತಿ , ನೆಮ್ಮದಿ ಆನಂದ ತೃಪ್ತಿ ದೊರಕುವುದೋ ಅದೇ ವೈಕುಂಠವೆಂಬ ಪ್ರತೀತಿಯಿದೆ. ಚಿಕ್ಕ ಮಕ್ಕಳು, ವೃದ್ಧರು ಮಹಿಳೆಯರು ವಿಕಲಚೇತನರು ಅನಾರೋಗ್ಯದಿಂದ ಬಳಲುವವರ ಅಸಹಾಯಕತೆಯನ್ನು ಲೆಕ್ಕಿಸದೇ ತನಗೆ ಮಾತ್ರ ವೆಂಕಟರಮಣನ ದರ್ಶನ ಸಿಕ್ಕರೆ ಸಾಕೆಂದುಕೊಂಡು ಕಾಲ್ತುಳಿತಕ್ಕೊಳಗಾದವರ ಸಾವಿನ ಸಮಾಧಿಯ ಮೇಲೆ ಗೋವಿಂದಾ ಗೋವಿಂದಾ ಎಂದು ನುಗ್ಗಿ ಪಡೆಯುವ ದರ್ಶನ ನೆಮ್ಮದಿ ತಂದುಕೊಡಬಲ್ಲದೇ ..? ಅದನ್ನು ಜಗದ್ರಕ್ಷಕ ವೆಂಕಟರಮಣ ಮೆಚ್ಚುವನೇ..?

ಫೋಟೋ ಕೃಪೆ :google

ವೈಕುಂಠವೂ ಇಲ್ಲೇ…ಕೈಲಾಸವೂ ಇಲ್ಲೇ ಎಂಬುದು ಕೇವಲ ಪುಣ್ಯಕತೆಗಳಲ್ಲಿ ಮಾತ್ರವೇ ಇರುವುದೇ..?

ಇನ್ನೊಂದೆಡೆ, ಜೀವನ‌ಪೂರ್ತಿ ಅಥವಾ ವರ್ಷಪೂರ್ತಿ ಅನೈತಿಕ, ಅನ್ಯಾಯ, ಅಕ್ರಮ ಕೃತ್ಯಗಳಲ್ಲಿ ತೊಡಗಿರುವ ವ್ಯಕ್ತಿಗಳೂ, ಮನಸೆಲ್ಲಾ‌ ಮಲಿನವಾಗಿರುವವರೂ ಸಹಾ ವೈಕುಂಠ ಏಕಾದಶಿಯಂದು ವಿಷ್ಣುವಿನ ಧಾಮ ತಮಗಾಗಿ ತೆರೆದಿರುತ್ತೆ , ತಮ್ಮೆಲ್ಲಾ ಪಾಪಕಾರ್ಯಗಳಿಗೆ ಕೃತ್ಯಾನಂತರದ ಕ್ಷಮೆ ಸಿಗಲಿದೆ, ಅದರ ಜೊತೆಗೆ ತಿಮ್ಮಪ್ಪನ ಪೋಸ್ಟ್ ಫ಼್ಯಾಕ್ಟೋ ಅಪ್ರೂವಲ್ ಸಿಕ್ಕೀತೆಂಬ ಅಚಲ ನಂಬಿಕೆಯನ್ನಿಟ್ಟುಕೊಂಡು ತಿರುಪತಿಗೆ ಹೋಗಿಬರುವುದೂ ಸಹಾ ವಿಸ್ಮಯವೇ !

ವಿಶೇಷ ದಿನಗಳಲ್ಲಿ ಎಲ್ಲಾ ಪ್ರಸಿದ್ಧ ದೇವಾಲಯಗಳಲ್ಲಿ ವಿಪರೀತ ಜನಸಂದಣಿ ಇರುವುದು ಸಹಜ. ಹೀಗಾಗಿ ಮಹಿಳೆಯರು, ಅಶಕ್ತರು, ಮಕ್ಕಳು_ ವೃದ್ಧರು ಅಥವಾ ಯಾವುದೇ ಗಂಭೀರ ಖಾಯಿಲೆಯಿರುವವರು ಇಂತಹ ಜನಸಂದಣಿಯಲ್ಲಿಯೇ ದರ್ಶನ ಮಾಡಬೇಕೆಂಬ ಉತ್ಕಟೇಚ್ಛೆ ಯೇಕೇ ? ಬದಲಿಗೆ ಸ್ಥಳೀಯ ವೆಂಕಟೇಶ್ವರ ಸ್ವಾಮಿಯ ದೇವಾಲಯಕ್ಕೋ ಅಥವಾ ಮನೆಯಲ್ಲಿ ತಿಮ್ಮಪ್ಪನ ಮೂರ್ತಿಗೋ ಮನದುಂಬಿ ಭಕ್ತಿಯಿಂದ ಪೂಜಿಸಿದರೆ ಸಾಲದೇ ?

ಧಾರ್ಮಿಕ ನಂಬಿಕೆಯ ಮುಂದೆ, ಮನುಷ್ಯ ಯಾರದೇ ಮಾತನ್ನೂ ಕೇಳಲು ತಯಾರಾಗಿಲ್ಲವೆಂಬುದು ಎಲ್ಲರಿಗೂ ಗೊತ್ತಿರೋದೇ. ಆದರೆ ಯಾವುದೇ ಅವಘಡಗಳು ಅಥವಾ ಪ್ರಕೃತಿ ವಿಕೋಪಗಳು ಸಂಭವಿಸುವಾಗ ಅದು ತಿರುಪತಿ, ಇದು ಲಾಸ್ ಏಂಜಲೀಸ್ , ಕ್ಯಾಲಿಫೋರ್ನಿಯಾ, ಇಲ್ಲವೇ ಇದು ವಯನಾಡ್ ಎಂದು ಲೆಕ್ಕ ಹಾಕಿ ಕೂರುವುದಿಲ್ಲ ಎಂಬ ಪ್ರಾಕ್ಟಿಕಲ್ ಥಿಂಕಿಂಗು ಸ್ವಲ್ಪಮಟ್ಟಿಗಾದರೂ ಇರುವುದು ಅಪೇಕ್ಷಣೀಯ.

ತಾನೂ ಬದುಕಿ ಬೇರೆಯವರನ್ನೂ ಬದುಕಲು‌ ಬಿಡಬೇಕೆನ್ನುವ ಸಾಮಾನ್ಯ ಕನಿಷ್ಠ ವಿವೇಕ, ವಿವೇಚನೆ ಅರೆಪಾವಿನಷ್ಟಾದರೂ ಮನುಷ್ಯನ ಅಂತರಂಗದಲ್ಲಿ ಪ್ರಾಮಾಣಿಕವಾಗಿ ಇದ್ದಿದ್ದರೆ ಇಂತಹ ಸಾಕಷ್ಟು ದುರಂತಗಳನ್ನು ತಪ್ಪಿಸಬಹುದಿತ್ತೇನೋ ….!!

ತಿರುಪತಿಯ ಕಾಲ್ತುಳಿತಕ್ಕೆ ಸಿಕ್ಕು ಪ್ರಾಣಕಳೆದುಕೊಂಡ ಆರು ಮಂದಿ ಭಕ್ತರ ಕುಟುಂಬದವರಿಗೆ ನಮ್ಮ ಸಾಂತ್ವನಗಳು.

ಫೋಟೋ ಕೃಪೆ :google

* ಮರೆಯುವ ಮುನ್ನ *

ನೈತಿಕತೆಗೆ ವಾಸ್ತವಿಕತೆಗೆ ಸಂಬಂಧಿಸಿದ ಈ ರೀತಿಯ ನೂರಾರು ಪ್ರಶ್ನೆಗಳು ಮನುಷ್ಯನ ಧಾರ್ಮಿಕ ನಂಬಿಕೆಯ ಎದುರು ತರಗಲೆಗಳಂತೆ ಉದುರಿ ಹೋಗುತ್ತವೆ. ತಿರುಪತಿ , ವೈಷ್ಣೋದೇವಿ, ಶಬರಿಮಲೆ.. ಮುಂತಾದೆಡೆಗಳಲ್ಲಿ ಅಥವಾ ಯಾರೋ ದೇವಮಾನವನ ಸಮಾವೇಶಗಳಲ್ಲಿ ಸಂಭವಿಸಿದಂತಹ ಸಾವು- ನೋವಿನ ಇಂತಹ ಸಾವಿರ ಅವಘಡಗಳು‌ ನಡೆದರೂ ಅವುಗಳಾವುವೂ ಜನರಿಗಿರುವ ಧಾರ್ಮಿಕ ನಂಬಿಕೆಯನ್ನು ಅಲುಗಾಡಿಸಲಾರವೆಂಬುದು ಕಹಿಯಾದರೂ ಸತ್ಯ !

ಹೀಗಾಗಿ ಅಂತಹ ಚರ್ಚೆಗಳನ್ನೇ ಯಾರೂ ಕೇಳಿಸಿಕೊಳ್ಳಲಾರರೆಂಬ ಅರಿವು ನನಗಿದೆಯಾದರೂ ದೇವರ ದರ್ಶನಕ್ಕಾಗಿ ಹೋದ ಅಮಾಯಕರು, ಸತ್ತು ಹೆಣವಾಗಿ ಮನೆ ಸೇರಬೇಕಾದಂತಹ ದಾರುಣ ದುರಂತ ಪರಿಸ್ಥಿತಿಗಳಿಗೆ ಸಮಾಜ ಸಾಕ್ಷಿಯಾಗುತ್ತಿರುವುದರ ಬಗ್ಗೆ ಕೆಲವರಲ್ಲಾದರೂ ಒಂದು ಸಣ್ಣಮಟ್ಟದ ಪಶ್ಚಾತ್ತಾಪ ಅಥವಾ ಆತ್ಮವಿಮರ್ಶೆ ಒಡಮೂಡೀತೇನೋ ಎಂಬ ಆಶಾಭಾವನೆ ಇನ್ನೂ ಎದೆಯೊಳಗೆ ಬತ್ತಿಲ್ಲದಿರುವುದೇ ಈ ನಾಲ್ಕು ಸಾಲುಗಳಿಗೆ ಪ್ರೇರಣೆ.

ನೆನಪಿಡಿ….ಸಮಾಜಕ್ಕೆ‌ ನೀವು ಮಾಡುವ ಒಳ್ಳೆಯ ಕೆಲಸ, ನಿಮ್ಮ‌ ಒಳ್ಳೆಯತನದಲ್ಲೇ ವೈಕುಂಠವಿದೆ….ಕೈಲಾಸವಿದೆ.

ಎಲ್ಲರಿಗೂ ವೈಕುಂಠ ಏಕಾದಶಿಯ ಶುಭಾಶಯಗಳು.

ಪ್ರೀತಿಯಿಂದ…..


  • ಹಿರಿಯೂರು ಪ್ರಕಾಶ್

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW