ಕ್ಯಾಲೆಂಡರ್ ಹೊಸ ವರ್ಷ ಎಂದ ಕೂಡಲೇ ‘ಇದು ನಮ್ಮ ಹೊಸ ವರ್ಷವಲ್ಲ, ಯುಗಾದಿ ನಮ್ಮ ಹೊಸ ವರ್ಷ’ ಎನ್ನುವವರನ್ನು ನೋಡಿದ್ದೇನೆ. ಹಾಗಾದರೆ ‘ಅದು ಯಾರ ಹೊಸ ವರ್ಷ’ ಎಂದರೆ ಕ್ರಿಶ್ಚಿಯನ್ರದು ಎನ್ನುವ ಉತ್ತರ ಬರುತ್ತದೆ. ಸತ್ಯವೆಂದರೆ ಕ್ರಿಸ್ ಮಸ್ ಹೊರತು ಪಡಿಸಿದರೆ ಬೇರೆ ಯಾವ ಕ್ರಿಶ್ಚಯನ್ ಹಬ್ಬಗಳೂ ಕ್ಯಾಲೆಂಡರ್ ಅನ್ವಯವಾಗಿ ಬರುವುದಿಲ್ಲ. ಖ್ಯಾತ ಪತ್ರಕರ್ತರಾದ ಎನ್.ಎಸ್.ಶ್ರೀಧರ ಮೂರ್ತಿ ಅವರ ಒಂದು ಚಿಂತನ ಲೇಖನವನ್ನು ತಪ್ಪದೆ ಮುಂದೆ ಓದಿ…
ಕ್ಯಾಲೆಂಡರ್ ಹಾಗೆ ನೋಡಿದರೆ ಯಾವ ಧರ್ಮಕ್ಕೂ ಸೇರಿಲ್ಲ. ಎಲ್ಲಾ ಪ್ರಮುಖ ಆಚರಣೆಗಳು ಅದರಲ್ಲಿ ಇರುತ್ತದೆ. ಭಾರತೀಯ ಪಂಚಾಗ ಗಣಿತವೂ ಸೇರಿ ಕನಿಷ್ಟ ಎಂಟು ಲೆಕ್ಕಾಚಾರಗಳು ಇದರಲ್ಲಿದೆ. ಕನ್ನಡದ ಮಟ್ಟಿಗಂತೂ ಕ್ಯಾಲೆಂಡರ್ ಇತಿಹಾಸ ಮತ್ತು ಗಣನೆ ಎರಡೂ ಅನಾವರಣಗೊಳ್ಳದ ಲೋಕ.
ಕಾಲಗಣನೆಯ ಕುರಿತು ಮಾನವನ ಆಸಕ್ತಿ ಬಹಳ ಪುರಾತನವಾದದ್ದು. ಅಲ್ಲಿಂದಲೇ ಕ್ಯಾಲೆಂಡರ್ಗಳ ಇತಿಹಾಸ ಆರಂಭವಾಯಿತು ಎಂದು ಹೇಳ ಬಹುದು. ಕ್ರಿಪೂ 6,000ದಲ್ಲಿ ಈಜಿಪ್ಟಿನಲ್ಲಿ ಕ್ಯಾಲೆಂಡರ್ನ ಸ್ಥೂಲ ರೂಪ ಆರಂಭವಾಯಿತು. ಸರಿ ಸುಮಾರು ಇದೇ ಕಾಲದಲ್ಲಿ ಭಾರತದಲ್ಲಿ ಕೂಡ ನಾಕ್ಷತ್ರಿಕ ಗಣನೆ ಕಂಡು ಬಂದಿತು. ಕ್ರಿ.ಪೂ 4,000ದಲ್ಲಿ ಚೀನಾ ಕ್ಯಾಲೆಂಡರ್ ಕಾಣಿಸಿ ಕೊಂಡಿತು. ಕ್ರಿ.ಪೂ 3641ರಲ್ಲಿ ಮಯಾ ಕ್ಯಾಲೆಂಡರ್ ಆರಂಭವಾಯಿತು. ಕ್ರಿ.ಪೂ 3102ರ ಫೆಬ್ರವರಿ 18ರಂದು ಕಲಿಯುಗ ಆರಂಭವೆಂಬ ಗಣನೆ ಭಾರತೀಯ ಲೆಕ್ಕಾಚಾರದಲ್ಲಿ ಸಿಕ್ಕುತ್ತದೆ. ಕ್ರಿ.ಪೂ 2100ರಲ್ಲಿ ಬ್ಯಾಬಿಲೋನಿಯಾದ ಕ್ಯಾಲೆಂಡರ್ ಆರಂಭವಾಯಿತು. ಅವರು ಅಧಿಕ ಮಾಸದ ಲೆಕ್ಕಾಚಾರವನ್ನು ಕಂಡು ಕೊಂಡಿದ್ದರು. ಕ್ರಿ.ಪೂ 1680ರಲ್ಲಿ ಈಜಿಪ್ಟರು ವಿಷವತ್ತು ಮತ್ತು ಅಯನದ ಚಲನೆಯನ್ನು ಗುರುತಿಸಿದರು. ಇವೆಲ್ಲವೂ ಕ್ಯಾಲೆಂಡರ್ಗಳ ಬಾಲ್ಯಾವಸ್ಥೆ.

ಫೋಟೋ ಕೃಪೆ :google
ಕ್ರಿ,ಪೂ 700ರಲ್ಲಿ ಈಗ ನಾವು ಉಪಯೋಗಿಸುವ ಗ್ರೆಗೋರಿಯನ್ ಕ್ಯಾಲೆಂಡರ್ನ ಮೂಲ ರೂಪ ನ್ಯೂಮಾ ಪಾಂಪಿಲಿಯೇನ್ ಕ್ಯಾಲೆಂಡರ್ ಆರಂಭವಾಯಿತು. ಗ್ರೀಕರು ಕ್ರಿ.ಪೂ 640ರಲ್ಲಿ ತಿಂಗಳಿಗೆ 30 ದಿನಗಳ ಲೆಕ್ಕವನ್ನು ಖಚಿತ ಪಡಿಸಿದರು. ಕ್ರಿ.ಶ 78ರಲ್ಲಿ ಭಾರತದಲ್ಲಿ ಶಾಲಿವಾಹನ ಶಕ ಆರಂಭವಾಯಿತು. ಅಲ್ಲಿಂದ ನಿರಂತರವಾಗಿ ನಮ್ಮ ಪಂಚಾಂಗ ಗಣಿತ ಬೆಳೆದು ಬಂದಿದೆ. ಕ್ರಿ.ಶ 330ರಲ್ಲಿ ಈಜಿಪ್ಟ್ ಕ್ಯಾಲೆಂಡರ್ನಿಂದ ಇಸ್ಲಾಮಿಕ್ ಮತ್ತು ಯಹೂದಿ ಕ್ಯಾಲೆಂಡರ್ಗಳು ಕವಲೊಡೆದವು. ಅಲ್ಲಿಂದ ಮುಂದೆ ಕ್ರಿ.ಶ 1200ರ ಸುಮಾರಿಗೆ ಪ್ರಪಂಚದ ಬಹುತೇಕ ಕ್ಯಾಲೆಂಡರ್ಗಳು ಸ್ಪಷ್ಟರೂಪ ಪಡೆದವು.ಅವುಗಳಲ್ಲಿ ಇವುಗಳಲ್ಲಿ ಭಾರತೀಯ ಪಂಚಾಂಗ, ಈಜಿಪ್ಷಿಯನ್ ಕ್ಯಾಲೆಂಡರ್, ಬ್ಯಾಬಿಲೋನಿಯನ್ ಕ್ಯಾಲೆಂಡರ್, ಗ್ರೀಕ್ ಕ್ಯಾಲೆಂಡರ್, ಚೀನಿ ಪಂಚಾಂಗ, ಮಯಾ ಪಂಚಾಂಗ, ಯಹೂದಿ ಕ್ಯಾಲೆಂಡರ್, ಇಸ್ಲಾಮಿಕ್ ಹಿಜರಿ, ಪರ್ಷಿಯನ್ ಕ್ಯಾಲೆಂಡರ್ ಗಳು ಮುಖ್ಯವಾದವು. ಇದಲ್ಲದೆ ಈ ಕಾಲಘಟ್ಟದಲ್ಲಿ ಸುಮಾರು 3,800 ವಿವಿಧ ಕ್ಯಾಲೆಂಡರ್ಗಳು ಜಗತ್ತಿನ ವಿವಿದೆಡೆ ರೂಪುಗೊಂಡವು. ಭಾಷೆಗಳ ಹಾಗೆ ಇವುಗಳಲ್ಲಿ ಹಲವು ಅಳಿದಿವೆ, ಕೆಲವು ಅಳಿವಿನಂಚಿನಲ್ಲಿವೆ.
ಕ್ಯಾಲೆಂಡರ್ ನ ಮುಂದಿನ ಘಟ್ಟವೆಂದರೆ, ಜೂಲಿಯನ್ ಕ್ಯಾಲೆಂಡರ್ನ ದೋಷ ಪತ್ತೆಯಾಗಿತ್ತು. ಸೂರ್ಯ ಒಂದು ವಿಷವತ್ತುವಿನಿಂದ ಹೊರಟು ಅದೇ ವಿಷವತ್ತಿಗೆ ತಲುಪಲು ಬೇಕಾಗುವ ಕಾಲ 365.242216 ದಿನಗಳು. ಆದರೆ ಇದನ್ನು ಜೂಲಿಯನ್ ಕ್ಯಾಲೆಂಡರ್ 365.24 ಅಂದು ಲೆಕ್ಕ ಹಾಕಿತ್ತು. 0.000784 ದಿನ (ಅಂದರೆ 11 ನಿಮಿಷ 12.5 ಸೆಕಂಡ್ಗಳು) ದೊಡ್ಡ ವ್ಯತ್ಯಾಸ ಎನ್ನಿಸದಿದ್ದರೂ 12.4 ಸಂವತ್ಸರಗಳಿಗೆ ಒಂದು ದಿನ ಆಗುತ್ತದೆ. ಈ ವ್ಯತ್ಯಾಸ ಆಗಲೇ ಹತ್ತು ದಿನಗಳಾಗಿ ಬಿಟ್ಟಿತ್ತು. ಕ್ರಿ.ಶ 1572ರಲ್ಲಿ ಪೋಪ್ ಗ್ರೇಗರಿಯ ಖಗೋಳ ವಿದ್ವಾಂಸರ ಸಮಿತಿಯನ್ನು ಮಾಡಿ ವಸಂತ ವಿಷವತ್ತುವನ್ನು ಮಾರ್ಚಿ 21ಕ್ಕೆ ತರಲು ನಿರ್ಧರಿಸಿದನು. ಪೋಪರಿಗೆ ಏಕೆ ಕ್ಯಾಲೆಂಡರ್ ಕುರಿತು ಆಸಕ್ತಿ ಎಂದು ನಿಮಗನ್ನಿಸ ಬಹುದು. ವಸಂತ ವಿಷವತ್ತುವಿನ ನಂತರದ ಹುಣ್ಣಿಮೆಯ ಮುಂದಿನ ಭಾನುವಾರ ಈಸ್ಟರ್ ಸಂಡೇ ಮತ್ತು ಅದರ ಹಿಂದಿನ ಶುಕ್ರವಾರ ಗುಡ್ಫ್ರೈಡೇ. ಅದು ತಪ್ಪಾದರೆ ಕ್ರಿಶ್ಚಯನ್ ನಂಬಿಕೆಗಳೇ ತಲೆಕೆಳಗಾಗುತ್ತವೆ. (ಮಾರ್ಚಿ21ರ ವಸಂತ ವಿಷವತ್ತು ಜಗತ್ತಿನ ಎಲ್ಲಾ ಕ್ಯಾಲೆಂಡರ್ಗಳಿಗೂ ಮೂಲಬಿಂದು. ನಮ್ಮ ಯುಗಾದಿ ಕೂಡ ಮಾರ್ಚಿ 21ರಿಂದ ಏಪ್ರಿಲ್ 21ರೊಳಗೇ ಬರುತ್ತದೆ. ರಾಷ್ಟ್ರೀಯ ಪಂಚಾಗದ ಪ್ರಕಾರ ಯಾವಾಗಲೂ ಯುಗಾದಿ ಮಾರ್ಚಿ 21ಕ್ಕೇ ಬರುತ್ತದೆ.) ಖಗೋಳ ಶಾಸ್ತ್ರಜ್ಞರ ಸಮಿತಿ ಲೀಪ್ ಇಯರ್ ಪರಿಕಲ್ಪನೆ ರೂಪಿಸಿ, ನಾಲ್ಕರಿಂದ ಭಾಗವಹಿಸಲು ಸಾಧ್ಯವಿಲ್ಲದ ವರ್ಷಗಳು ಲೀಪ್ ಇಯರ್ ಅಲ್ಲವೆಂದು ತೀರ್ಮಾನಿಸಿತು. ಈಗ ಸಮಸ್ಯೆ ಬಂದಿದ್ದು ಹತ್ತು ದಿನಗಳನ್ನು ಇಲ್ಲವಾಗಿಸುವುದು. ಬೇರೆ ಬೇರೆ ದೇಶಗಳಲ್ಲಿ ಇದನ್ನು ಬೇರೆ ಬೇರೆ ರೀತಿಯಲ್ಲಿ ಮಾಡಿದರು. ಇಂಗ್ಲೇಡ್ನಲ್ಲಿ 1752ರ ಸೆಪ್ಟಂಬರ್ ತಿಂಗಳಿನಲ್ಲಿ 19 ದಿನಗಳು ಮಾತ್ರ ಇದ್ದವು. ಈ ವ್ಯತ್ಯಾಸ ಆ ವೇಳಗೆ 11 ದಿನ ತಲುಪಿತ್ತು. ಸ್ವೀಡನ್ ನಲ್ಲಿ 1700ರಿಂದ 1740ರವರೆಗೆ ಲೀಪ್ ಇಯರ್ ತಗೆದು ವಿವೇಚನೆಯಿಂದ ಈ ಕೆಲಸವನ್ನು ಮಾಡಿದರು. ಇದು ಬೇರೆ ಬೇರೆ ದೇಶಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ನಡೆಯಿತು.

ಫೋಟೋ ಕೃಪೆ :google
ಮುಂದೆ ಹದಿನಾರನೆಯ ಶತಮಾನದ ನಂತರ ಖಗೋಳ ಶಾಸ್ತ್ರ ಮತ್ತು ಪಂಚಾಂಗ ಕವಲೊಡೆಯಿತು. ಪಂಚಾಂಗ ಗಣಿತದ ಮೇಲೆ ಧಾರ್ಮಿಕ ಪ್ರಭಾವ ಹೆಚ್ಚಾಯಿತು. ಇದು ಭಾರತ ಮಾತ್ರವಲ್ಲದೆ ಎಲ್ಲಾ ದೇಶಗಳಲ್ಲಿಯೂ ಆಗಿರುವ ಬೆಳವಣಿಗೆ. ಕ್ರಿ.ಶ 1922ರಲ್ಲಿ ಇಂಟರ್ ನ್ಯಾಷನಲ್ ಅಸ್ಟ್ರಾನಾಮಿಕಲ್ ಯೂನಿಯನ್ ಜಗತ್ತಿಗೆ ಅನ್ವಯವಾಗುವ ಕ್ಯಾಲೆಂಡರ್ ರೂಪಿಸಲು ನಿರ್ಧರಿಸಿತು. ಈ ಮೂಲಕ ʼಅಂತರ ರಾಷ್ಟ್ರೀಯ ಕ್ಯಾಲೆಂಡರ್ ಸಂಘʼ ರೂಪುಗೊಂಡು ಕ್ರಿ.ಶ.1955ರಲ್ಲಿ ಈಗಿರುವ ಕ್ಯಾಲೆಂಡರ್ ಅನ್ನು ಜಾಗತಿಕ ಕ್ಯಾಲೆಂಡರ್ ಎಂದು ಅಂಗೀಕರಿಸಲಾಯಿತು. ಇದಕ್ಕೆ ಭಾರತವೂ ಸೇರಿದಂತೆ ಜಗತ್ತಿನ 155 ದೇಶಗಳು ಒಪ್ಪಿಗೆ ಸೂಚಿಸಿದವು. ಇನ್ನೂ ಕ್ಯಾಲೆಂಡ್ ಪರಿಷ್ಕರಣೆ ಪ್ರಯತ್ನಗಳು ನಡೆಯುತ್ತಲೇ ಇವೆ.
ಹೀಗೆ ಕ್ಯಾಲೆಂಡರ್ ಇತಿಹಾಸ ಮತ್ತು ವರ್ತಮಾನ ಮತ್ತು ಗಣನೆ ಎಂದಿನಿಂದಲೂ ನನ್ನ ಕುತೂಹಲದ ಮತ್ತು ಆಸಕ್ತಿಯ ವಿಷಯ. ಈ ಕುರಿತು 3-4 ಸಂಪುಟಗಳ ಕೃತಿ ಸರಣಿ ರಚಿಸುವ ಕನಸಿದೆ. ಇದಕ್ಕೆ ಪೂರಕವಾಗಿ ಗೆಳಯ ಕಂನಾಡಿಗ ನಾರಾಯಣ ಅವರು ʼಪರಸ್ಪರ ಎಂಟನೆಯ ಮೈಲಿʼ ಸಂಘದಲ್ಲಿ ಇದೇ ಭಾನುವಾರ ಜನವರಿ 12ರಂದು ಬೆಳಿಗ್ಗೆ 11ಗಂಟೆಗೆ ʼಭೂಮಿಕಾ ಸೇವಾ ಫೌಂಡೇಷನ್ ನಲ್ಲಿ ಏರ್ಪಡಿಸಿರುವ ಕಾರ್ಯಕ್ರಮದಲ್ಲಿ ಈ ವಿಷಯದ ಕುರಿತು ಮಾತನಾಡುತ್ತಿದ್ದೇನೆ. ಆಸಕ್ತರು ಭಾಗವಹಿಸಿ.
- ಎನ್.ಎಸ್.ಶ್ರೀಧರ ಮೂರ್ತಿ – ಲೇಖಕರು, ಪತ್ರಕರ್ತರು, ಉಪನ್ಯಾಸಕರು, ಬೆಂಗಳೂರು
