ಸುಮತಿಯವರ ಕೃತಿಯ ಬಗ್ಗೆ ಚೊಕ್ಕಾಡಿಯವರ ಅಭಿಪ್ರಾಯ

ಕನ್ನಡದ ಖ್ಯಾತ ಕವಿ, ಕಥೆಗಾರ ಹಾಗೂ ವಿಮರ್ಶಕ ಶ್ರೀಯುತ ಸುಬ್ರಾಯ ಚೊಕ್ಕಾಡಿ ಅವರು ಸುಮತಿ ಕೃಷ್ಣಮೂರ್ತಿ ಅವರ ಎರಡೂ ಕವನ ಸಂಕಲನಗಳಾದ ‘ಹೆಣ್ಣಾಲದ ಮರ’ ಹಾಗೂ ‘ವೈಶಾಖದ ಮಳೆ’ ಕುರಿತು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಅದನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ಬಯಕೆ ನನ್ನದು.

ಪ್ರಿಯ ಸುಮತಿಯವರೇ,
ನಮಸ್ಕಾರ.

ತುಂಬಾ ತಡವಾಗಿ ಪ್ರತಿಕ್ರಿಯಿಸುತ್ತಿದ್ದೇನೆ.ಕ್ಷಮೆಯಿರಲಿ. ತಡಕ್ಕೆ ಅನೇಕ ಕಾರಣಗಳು.ಮುಖ್ಯವಾಗಿ ಆಗೀಗ ಮನಸ್ಸನ್ನು ದೇಹವನ್ನು ಆವರಿಸಿಕೊಳ್ಳುವ ಜಡತನ.ನಿಷ್ಕ್ರಿಯತೆ.ಏನೂ ಬೇಡ,ಎಲ್ಲವೂ ವೇಸ್ಟು,ಸುಮ್ಮನಿದ್ದುಬಿಡೋಣ ಅನ್ನುವ ಭಾವ.

ಅದರಿಂದ ಸ್ವಲ್ಪ ಹೊರಬಂದು ನಿಮ್ಮ “ಹೆಣ್ಣಾಲದ ಮರ” ಹಾಗೂ “ವೈಶಾಖದ ಮಳೆ”ಯಲ್ಲಿನ ಎಲ್ಲಾ ಕವಿತೆಗಳನ್ನು ,ಕಾಫಿಯನ್ನು ಸಿಪ್ ಮಾಡುವಂತೆ ಸ್ವಲ್ಪ ಸ್ವಲ್ಪವೇ ಓದಿದೆ. “ಹೆಣ್ಣಾಲದ ಮರ”ದಲ್ಲಿನ “ಕಥೆಯಲ್ಲ ವ್ಯಥೆ”,”ಹೆಣ್ಣಾಲದ ಮರ”,”ಬಯಕೆ”,”ಅಂತರಾಳ”,”ಪ್ರಣಯ”,”ಬಯಲು”,”ಅಯ್ಯೋಪಾಪ”,”ಪಂಚಭೂತ”,”ಬೊಗಸೆ”,”ವಶ”ಮೊದಲಾ ಕವನಗಳು,ಹಾಗೂ “ವೈಶಾಖದ ಮಳೆ”ಯಲ್ಲಿನ,”ನಿರ್ಗಮನ”,”ಸಮ್ಮೋಹ”,”ನಿರೀಕ್ಷೆ”,”ಒತ್ತಾಸೆ”,”ಬೆಕ್ಕಿನ ಕಣ್ಣು”,”ವೈಶಾಖದ ಮಳೆ”, “ಶಾಸ್ತ್ರ”, “ಒಲವು”, “ಖೇದ”, ಗೆಳತಿ”, “ನಾನು”, “ಕ್ಯಾಂಡಲ್ ಲೈಟ್ ಡಿನ್ನರ್”,”ಬೀಳ್ಕೊಡುಗೆ”,”(ಸು)ಮನನ್ಸಿನ್ ಪದ್ಗೋಳ್”,”ಮೊದಲಾದ ಕವನಗಳು ಬೇರೆಬೇರೆ ಕಾರಣಗಳಿಗಾಗಿ ,-ಅವುಗಳಲ್ಲಿನ ಕೆಲವು ಕೊರತೆಗಳ ನಡುವೆಯೂ-ಇಷ್ಟವಾದವು.

ನಿಮಗೆ ಕವಿತೆಯ ಭಾಷಿಕಲಯ ಸಿದ್ಧಿಸಿದೆ.ಅವಕ್ಕೆ ಲಿರಿಕಲ್ ಕ್ವಾಲಿಟಿಯೂ ಇದೆ.ಅದಕ್ಕೆ ಇಲ್ಲಿನ ಅನೇಕ ಕವಿತೆಗಳೇ ಸಾಕ್ಷಿ. ಅಮ್ಮನ ಕುರಿತಾಗಿ ಲಂಕೇಶರ ಅವ್ವ ಕವಿತೆ ಬಂದಮೇಲೆ ಆ ಮಾದರಿಯನ್ನು ಒಡೆಯಲು ಬಹುಕಾಲದ ನಂತರ ಎಚ್ಚೆಸ್ವಿಯವರ “ಕನ್ನಡಿಯ ಸೂರ್ಯ”ಕವಿತೆ ಬರಬೇಕಾಯ್ತು.ನಿಮ್ಮ “ಹೆಣ್ಣಾಲದ ಮರ”ಕವಿತೆಯೂ ಹಾಗೆ ಮಾದರಿಯನ್ನು ಮೀರುವಂಥ ಕವಿತೆ.ಬೆಕ್ಕಿನ ಬಗ್ಗೆ ಎಲಿಯೆಟ್ ನ ಮೆಕ್ಯಾವಿಟಿ ಪದ್ಯಗಳ ಹಾಗೆ ತಿರುಮಲೇಶರ ಮುಖಾಮುಖಿಯಂತಹ ಕವಿತೆಗಳ ಜತೆ ನಿಮ್ಮ ಬೆಕ್ಕಿನ ಕಣ್ಣು ಕವಿತೆಯೂ ಸೇರಿಕೊಳ್ಳುತ್ತದೆ.ಈ ಕವಿ ತೆ,ಅಯ್ಯೋಪಾಪ ,ಮೊದಲಾದ ಕೆಲವು ಕವಿತೆಗಳನ್ನು ಸ್ವಲ್ಪ ಎಡಿಟ್ ಮಾಡಿದ್ದರೆ ಇನ್ನೂ ಚೆನ್ನಾಗಿರ್ತಿತ್ತು.ಹಾಗೆಯೇ ಕೆಲವು ಕವಿತೆಗಳು ವಾಚ್ಯವಾಗುವುದರ ಕಡೆಗೆ ಮುಂದೆ ನೀವು ಗಮನ ಹರಿಸುವುದು ಒಳ್ಳೆಯದು.

ಕೆಲವು ಸಣ್ಣ ಪುಟ್ಟ ರಿಪೇರಿ ಮಾಡಿಕೊಳ್ಳಬಹುದು.ಉದಾ:”ಎತ್ತು ಬಂಡಿಗಳಲ್ಲಿ ಜನರು ಬಂದಾಗಿದೆ”ಎಂಬುದನ್ನು “ಜನರು ಬಂಡಿಗಳಲ್ಲಿ ಬಂದಾಗಿದೆ”ಅಂತ ಮಾಡಿಕೊಂಡರೆ,”ಬಟ್ಟ ಬಯಲಲಿ ಈಗ ರಟ್ಟಾಗಿದೆ”ಎನ್ನುವ ಸಾಲಿನ ಮಾತ್ರಾ ಗಣಗಳಿಗೆ ಹೊಂದಿಕೆಯಾಗ್ತದೆ.

ಅದೇನೇ ಇರಲಿ.ನೀವು ಸಂಕಲನದಿಂದ ಸಂಕಲನಕ್ಕೆ ಬೆಳೆಯುತ್ತಿದ್ದೀರಿ ಪಳಗುತ್ತಿದ್ದೀರಿ ಎಂಬುದು ಸ್ಪಷ್ಟ.ನಿಮ್ಮೊಳಗೊಂದು ಕವಿ ಮನವಿದೆ.ಅದನ್ನು ಮುಂದಿನ ಸಂಕಲನಗಳಲ್ಲಿ ಚೆನ್ನಾಗಿ ದುಡಿಸಿಕೊಳ್ಳಿ.ಹೊಸ ಹೊಸ ಅನುಭವಗಳನ್ನು ಕವಿತೆಯೊಳಕ್ಕೆ ತನ್ನಿ.ಒಳಿತಾಗಲಿ.


  • ಸುಬ್ರಾಯ ಚೊಕ್ಕಾಡಿ.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading