ಮಾನಸ….ಇದು ಮನಸಿನ ಮಾತು (ಭಾಗ-೪೦)

ಅಡಲೊಸೆಂಟ್ ಏಜ್ ಅಂದರೆ ಹದಿಹರೆಯದ ವಯಸ್ಸು. ಈ ವಯಸಿನ ಮಕ್ಕಳೊಂದಿಗೆ ಬಹಳ ಪ್ರೀತಿ ಹಾಗು ಸ್ನೇಹದಿಂದ ಇರಬೇಕು. ಅತಿಯಾದ ಶಿಕ್ಷೆ, ಬೈಯ್ಯುವುದು, ಹೊಡೆಯುವುದು ಮಾಡಿದಾಗ ಇವರ ಮನಸಿನ ಮೇಲೆ ಪರಿಣಾಮದಿಂದ ಅನಾಹುತಗಳೇ ಹೆಚ್ಚಾಗುತ್ತದೆ. ಆಪ್ತ ಸಮಾಲೋಚಕಿ ಚಂಪಾ ಚಿನಿವಾರ್ ಅವರ ‘ಮಾನಸ….ಇದು ಮನಸಿನ ಮಾತು’ ಅಂಕಣದಲ್ಲಿ ‘ಹರೆಯ ನೀ ಹೊರೆಯೇ ?’ ತಪ್ಪದೆ ಮುಂದೆ ಓದಿ…

ಹರೆಯ ಏಕಿಷ್ಟು ಹೊರೆ ಎಲ್ಲರಿಗೂ. ಇದು ಶತ್ರುವಿನ ಹಾಗೆ ಭಾಸವಾಗುತ್ತದೆ. ಹರೆಯದ ವಯಸ್ಸು ದಾಟಿದವರಿಗೆ ತಿಳಿಯುತ್ತದೆ ಏನಿದರ ಭಾದೆ ಎಂದು. ಹೆಣ್ಣು ಮಕ್ಕಳಿಗೂ, ಗಂಡು ಮಕ್ಕಳಿಗೂ ಸಹ ಈ ವಯಸ್ಸು ಅನೇಕ ಸಮಸ್ಯೆಗಳು ತಲೆದೋರುತ್ತದೆ. ಹದಿಹರೆಯ ಅಂದರೆ ಅಡಲೊಸೆಂಟ್ ಏಜ್. ಈ ಪದ “ಅಡೊಲಿಸಿಯರ್” ಎಂಬ ಲ್ಯಾಟಿನ್ ಭಾಷೆಯಿಂದ ಬಂದಿದೆ ಅಂದರೆ ಇದರ ಅರ್ಥ ಪ್ರಬುದ್ಧತೆ, ಪಕ್ವತೆ ಎಂದು.

ಈ ವಯಸಿನ ಮಕ್ಕಳೊಂದಿಗೆ ಬಹಳ ಪ್ರೀತಿ ಹಾಗು ಸ್ನೇಹದಿಂದ ಇರಬೇಕು. ಅತಿಯಾದ ಶಿಕ್ಷೆ, ಬೈಯ್ಯುವುದು, ಹೊಡೆಯುವುದು ಮಾಡಿದಾಗ ಇವರ ಮನಸಿನ ಮೇಲೆ ಪರಿಣಾಮದಿಂದ ಅನಾಹುತಗಳೇ ಹೆಚ್ಚಾಗುತ್ತದೆ. ಹೆಚ್ಚಾಗಿ ಗಂಡು ಮಕ್ಕಳ ಮೇಲೆ ಬಹಳವಾಗಿ ಗಮನಹರಿಸಬೇಕು. ಇಲ್ಲದಿದ್ದರೆ ಅವರು ಮನೆ ಬಿಟ್ಟು ಹೋಗಬಹುದು, ಮದ್ಯವ್ಯಸನಿಗಳಾಗಬಹುದು, ಧೂಮಪಾನ ಅಭ್ಯಾಸವಾಗಬಹುದು. ಇದೆಲ್ಲಕ್ಕಿಂತ ಮಿಗಿಲಾಗಿ ತಂದೆ ತಾಯಿಯ ಮೇಲೆ ದ್ವೇಷ ಮೂಡಿಸಿಕೊಂಡು ಹೊರಗಿನವರಿಂದ ಪ್ರೀತಿ ಬಯಸಿ ಜೀವನ ಹಾಳು ಮಾಡಿಕೊಳ್ಳುವ ಸಂದರ್ಭಗಳೆ ಹೆಚ್ಚು.

ಫೋಟೋ ಕೃಪೆ : google

ಪೋಷಕರು ಅವರಿಗಾಗಿ ಸಮಯ ಮೀಸಲಿಟ್ಟು ಅವರ ದಿನನಿತ್ಯದ ಚಟುವಟಿಕೆಗಳ ಬಗ್ಗೆ ಕೇಳಿ ಅವರ ಮಾತು ಕೇಳಿಸಿಕೊಂಡು ಎಲ್ಲಿ ತಿದ್ದಬೇಕು, ಎಲ್ಲಿ ಮಾರ್ಗದರ್ಶನ ನೀಡಬೇಕು ಎಂದು ತಿಳಿಸಬೇಕಾಗುತ್ತದೆ. ಕೆಲವು ಸಂದರ್ಭದಲ್ಲಿ ಈ ವಯಸ್ಸಿನ ಮಕ್ಕಳು ಇಲ್ಲದ್ದನ್ನು, ಬೇಡವಾದದ್ದನ್ನು ಅರಸಿ ಹೋಗುತ್ತಾರೆ, ಇದಕ್ಕೆ ಕಾರಣ ಮನೆಯ ವಾತಾವರಣ. ಅವರಂತೆ ನಡೆಯದಿದ್ದಾಗ ಎಲ್ಲಿ ತಮ್ಮ ಮಾತಿಗೆ ಮನ್ನಣೆ ಸಿಗುತ್ತದೆಯ ಅಲ್ಲಿ ಹೆಚ್ಚು ಸಮಯ ಕಳೆಯಲು ಶುರು ಮಾಡುತ್ತಾರೆ. ಅವರ ಮನಸು ಅರಿತು ಅವರನ್ನು ಸರಿಯಾದ ಮಾರ್ಗಕ್ಕೆ ತರಲು ಮನೆಯವರ ಸಹಕಾರ ತುಂಬಾ ಅತ್ಯಗತ್ಯ.

ಈ ವಯಸ್ಸಿನಲ್ಲಿ ಹೆಣ್ಣು ಮಕ್ಕಳಿಗೂ ಸಹ ದೈಹಿಕವಾಗಿ ಅನೇಕ ಬದಲಾವಣೆಗಳಾಗುತ್ತದೆ. ಹಾರ್ಮೋನ್ ಸ್ರವಿಸುವಿಕೆಯಿಂದ ದೇಹದ ಮೇಲೂ ಮನಸಿನ ಮೇಲೂ ಅನೇಕ ಪರಿಣಾಮಗಳಾಗುತ್ತದೆ. ದೇಹದಲ್ಲಿ ಬದಲಾವಣೆ ಕಂಡು ಹೆಣ್ಣು ಮಕ್ಕಳು ಮುಜುಗರ, ಸಂಕೋಚ, ನಾಚಿಕೆ ಪ್ರವೃತ್ತಿ ಬೆಳೆಸಿಕೊಳ್ಳುತ್ತಾರೆ. ಸ್ತನಗಳ ಬೆಳವಣಿಗೆ ಆಗುವಾಗ ಅದನ್ನು ಮರೆಮಾಚಿಕೊಳ್ಳಲು ಸಂಕೋಚಗೊಂಡು ಗೂನು ಬೆನ್ನು ಮಾಡಿಕೊಂಡು ನಡೆದಾಡುತ್ತಾರೆ. ಶ್ರಗ್ ಅಥವಾ ಓವರ್ ಕೋಟ್ ಧರಿಸಿಕೊಂಡು ಮರೆಮಾಚಿಕೊಳ್ಳುತ್ತಾರೆ. ಈ ಸಮಯದಲ್ಲಿ ತಾಯಿ ಅಥವಾ ಹಿರಿ ಅಕ್ಕ ಅವರಿಗೆ ತಿಳಿ ಹೇಳಬೇಕಾಗುತ್ತದೆ. ವಯಸಿನ ಸಹಜ ನಿನ್ನ ದೇಹದಲ್ಲಿ ಬೆಳವಣಿಗೆ ಆಗುತ್ತಿದೆ ಇದು ಸಹಜ ಕ್ರಿಯೆ ಹಾಗಾಗಿ ಮುಜುಗರ ಪಡುವ ಅಗತ್ಯವಿಲ್ಲ ಎಂದು ಅವರಿಗೆ ಸಮಾಧಾನ ಮಾಡಬೇಕು.

ಇದೇ ಸಮಯದಲ್ಲಿ ತಿಂಗಳ ಮುಟ್ಟಿನ ಸಮಸ್ಯೆಯಿಂದಲೂ ಬಳಲುತ್ತಾರೆ, ಹೊಟ್ಟೆ ನೋವು, ಕೈಕಾಲು ನೋವು, ಮೈಗ್ರೇನ್ ತಲೆನೋವು ಹೀಗೆ ಹಲವಾರು ಸಮಸ್ಯೆಗಳು ತಲೆತೋರುತ್ತದೆ. ಇದರಿಂದ ಕೆಲವೊಮ್ಮೆ ಕೆಲವು ಹೆಣ್ಣು ಮಕ್ಕಳು ಖಿನ್ನತೆಗೆ ಒಳಗಾಗುತ್ತಾರೆ. ಕೆಲವರಿಗೆ ಮುಟ್ಟಾದಾಗ ಬಹಳ ರಕ್ತಸ್ರಾವವಾಗಿ ಆಸ್ಪತ್ರೆ ಸೇರಿ ಡ್ರಿಪ್ಸ್ ಹಾಕುವ ಮಟ್ಟಿಗೆ ಉಲ್ಬಣವಾಗುತ್ತದೆ. ಈ ಸಮಸ್ಯೆ ಸಹ ಅವರ ದೈನಂದಿನ ಚಟುವಟಿಕೆಗಳಿಗೆ ತೊಂದರೆಯಾಗಿ ವಿಚಲಿತಗೊಳ್ಳುವ ಸಂಭವ ಹೆಚ್ಚು. ಇಂತಹ ಮಕ್ಕಳ ಬಗ್ಗೆ ಈ ಸಮಯದಲ್ಲಿ ಬಹಳ ಕಾಳಜಿ ಮುಖ್ಯ. ಮನೆಯ ಸದಸ್ಯರೆಲ್ಲರ ಸಹಕಾರ, ಪ್ರೀತಿ ಬೇಕಾಗುತ್ತದೆ.

ಶಾಲೆ, ಕಾಲೇಜು ತರಗತಿಗಳಿಗೆ ಹಾಜರಾಗದೆ ಪಾಠದಲ್ಲಿಯೂ ಹಿಂದೆ ಉಳಿದು ಬಿಡುತ್ತಾರೆ. ಈ ಸಮಯದಲ್ಲಿ ಶಾಲಾ ಶಿಕ್ಷಕರು ಹಾಗು ಸ್ನೇಹಿತರ ಸಹಕಾರ, ಬೆಂಬಲ ಬಹಳ ಅಗತ್ಯ. ಮನೆ ವಾತಾವರಣ, ಶಾಲೆಯ ವಾತಾವರಣ, ಸ್ನೇಹಿತರು, ಅಕ್ಕಪಕ್ಕದವರು, ಸುತ್ತ ಮುತ್ತ ಪರಿಸರದಿಂದ ಬಹಳ ಪ್ರಭಾವಿತರಾಗುತ್ತಾರೆ ಅಥವಾ ಖಿನ್ನತೆಗೆ ಒಳಗಾಗುತ್ತಾರೆ. ಇದು ತಂದೆ ತಾಯಿ ಮಕ್ಕಳಲ್ಲಿ ಬಹಳವಾಗಿ ಗಮನವಿರಿಸಬೇಕಾದ ಸಮಯವಿದು.

 

ಫೋಟೋ ಕೃಪೆ : google

ಇದೆಲ್ಲಕ್ಕಿಂತ ಆಕರ್ಷಣೆಗೊಳಗಾಗುವ ವಯಸ್ಸು. ಒಂಬತ್ತು, ಹತ್ತನೇ ತರಗತಿಯಲ್ಲಿ ಇರುವಾಗಲೇ ಹೆಣ್ಣು ಮಕ್ಕಳು ಹಾಗು ಗಂಡು ಮಕ್ಕಳು ಪರಸ್ಪರ ಆಕರ್ಷಣೆಗೆ ಒಳಗಾಗುತ್ತಾರೆ. ಪ್ರೀತಿ, ಪ್ರೇಮ ಎಂದು ಭ್ರಮೆಗೆ ಒಳಗಾಗಿ ಸತ್ಯಾಸತ್ಯತೆಯನ್ನು ಅರಿಯದೆ ಜೀವನ ಹಾಳುಮಾಡಿಕೊಳ್ಳುವ ಸಂಭವ ಹೆಚ್ಚು. ಈ ನಿಟ್ಟಿನಲ್ಲಿ ಅವರಿಗೆ ಸೂಕ್ತ ಮಾರ್ಗದರ್ಶನದ ಅವಶ್ಯಕತೆ ಖಂಡಿತವಾಗಿಯೂ ಬೇಕಾಗುತ್ತದೆ. ಎಲ್ಲರೂ ಅದೇ ರೀತಿ ಇರುವುದಿಲ್ಲ. ಅವರ ಓದು, ಅವರ ಗುರಿ ಮುಖ್ಯ ಎಂದುಕೊಂಡವರು ಬುದ್ಧಿವಂತಿಕೆಯಿಂದ ದೂರ ಇರುತ್ತಾರೆ. ಇವರಿಗೆ ಮಾರ್ಗದರ್ಶನದ ಅವಶ್ಯಕತೆ ಇರುವುದಿಲ್ಲ. ಆದರೆ ದೃಢವಾಗಿ ಇರದ, ತಮ್ಮ ಧ್ಯೇಯವೇನು, ಗುರಿ ಏನು ಎಂಬುದನ್ನು ಅರಿಯದೇ ವಿದ್ಯಾಭ್ಯಾಸದ, ವಿದ್ಯಾರ್ಥಿ ಜೀವನದ ಅರ್ಥವೇ ತಿಳಿಯದ ಮಕ್ಕಳಿಗೆ ಆಪ್ತಸಮಾಲೋಚನೆಯ ಅಗತ್ಯವಿರುತ್ತದೆ.

ಈ ರೀತಿ ಮನೋಭಾವ ಹೊಂದಿರುವ ಮಕ್ಕಳ ಪೋಷಕರಿಗೂ ಸಹ ಆಪ್ತಸಮಾಲೋಚನೆಯ ಅಗತ್ಯ ಖಂಡಿತವಾಗಿಯೂ ಬೇಕಾಗುತ್ತದೆ. ಹರೆಯದ ವಯಸಿನಲ್ಲಿ ಅವರದೇ ರೀತಿ ನೀತಿ ಸರಿ ಎಂದುಕೊಂಡು ನಡೆಯುತ್ತಿರುತ್ತಾರೆ. ಯಾರೇನೆ ಹೇಳಿದರೂ ಕೇಳದ ಮನಸ್ಥಿತಿ ಇರುತ್ತದೆ. ಅವರದೇ ಲೋಕದಲ್ಲಿ ಇರುತ್ತಾರೆ. ತಂದೆ ತಾಯಿ ಏನೇ ಹೇಳಿದರು ಕೇಳದ ಮನಸ್ಥಿತಿ ಇರುತ್ತದೆ. ಓದು ಎಂದರೆ ಕೋಪ, ಕೆಲಸ ಮಾಡು ಎಂದರೆ ಕೋಪ ಹೀಗೆ ಅವರು ಯಾವುದಕ್ಕೂ ಒಪ್ಪದ ವಯಸ್ಸು. ಸ್ನೇಹಿತರ ಪ್ರಭಾವಕ್ಕೆ ಒಳಪಟ್ಟಿರುತ್ತಾರೆ.

ಈ ಸಮಯದಲ್ಲಿ ಪೋಷಕರು, ಶಿಕ್ಷಕರು ಸರಿಯಾಗಿ ಮಾರ್ಗದರ್ಶನ ನೀಡಬೇಕು. ಇಲ್ಲದಿದ್ದರೆ ಭ್ರಮೆಯ ಲೋಕದಲ್ಲಿ ಸುಳ್ಳನ್ನೇ ಸತ್ಯವೆಂದು ತಿಳಿದು ಯಾರ ಮಾತನ್ನು ಕೇಳದ ಮನಸ್ಥಿತಿ ಅವರದಾಗಿರುತ್ತದೆ. ಸರಿಯಾದ ಸಮಯದಲ್ಲಿ ಆಪ್ತಸಮಾಲೋಚನೆ ನಡೆಸಿ ಅವರಿಗೆ ಮಾರ್ಗದರ್ಶನ ತೋರುವ ಜವಾಬ್ದಾರಿ ಎಲ್ಲರ ಹೊಣೆಯಾಗಿರುತ್ತದೆ.


  • ಚಂಪಾ ಚಿನಿವಾರ್ – ಆಪ್ತಸಮಾಲೋಚಕಿ.

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW