“ಇದು ಅವಳ ಕವಿತೆಯಲ್ಲ.. ಅವಳದೇ ಭಾವಗೀತೆ.. ಅವಳೆಂದರೆ.. ಅದೇ ಅವಳು.. ಕಾಲೇಜಿನಲ್ಲಿ ನಿಮ್ಮ ನಿದ್ದೆ ಕೆಡಿಸಿದವಳು. ಈಗಲೂ ಹಗಲಲ್ಲೂ ಕನಸಾಗಿ ನಿಮ್ಮ ಕಾಡುವವಳು. ನಿಮ್ಮ ಚಿತ್ತಭಿತ್ತಿಯ ಚಿರಂತನ ಚೆಲುವೆ. ಅವಳೇ ಇವಳಲ್ವಾ..? ಅವಳ ವಿಳಾಸ ಕೇಳಿದ್ರೆ ನೀವು ಹೀಗೆ ಹೇಳ್ತೀರಾ ಅಲ್ವಾ..? – ಪ್ರೀತಿಯಿಂದ ಎ.ಎನ್ .ರಮೇಶ್. ಗುಬ್ಬಿ.
ಅವಳಾರೆಂದು ತಿಳಿಯಬೇಕೆಂದರೆ
ನವಿಲುಗಳ ಬಳಿ ಕೇಳಿ.
ನರ್ತಿಸುತ ನುಡಿದ್ಯಾವು
ಕಾರಣ.. ನವಿಲುಗಳಿಗೆ
ನಾಟ್ಯ ಕಲಿಸಿದವಳು ಅವಳೆ.!
ಅವಳಾರೆಂದು ಅರಿಯಬೇಕೆಂದರೆ..
ಕೋಗಿಲೆಗಳ ಬಳಿ ಕೇಳಿ..
ರಾಗದಿ ಹಾಡುತ್ತ ಉಲಿದ್ಯಾವು..
ಕಾರಣ.. ಕೋಗಿಲೆಗಳಿಗೆ
ಸ್ವರ ಕಲಿಸಿದವಳು ಅವಳೆ.!
ಅವಳಾರೆಂದು ಮನವರಿಕೆಯಾಗಲು
ಅರಗಿಳಿಗಳ ಬಳಿ ಕೇಳಿ..
ಮುದ್ದಾಗಿ ನುಡಿದು ಹೇಳ್ಯಾವು..
ಕಾರಣ.. ಅರಗಿಳಿಗಳಿಗೆ
ನುಡಿ ಕಲಿಸಿದವಳು ಅವಳೆ.!
ಅವಳಾರೆಂದು ಮನದಟ್ಟಾಗಲು
ಹಂಸಗಳ ಬಳಿ ಕೇಳಿ..
ಬಳುಕುತ್ತ ನಡೆದು ನುಡಿದ್ಯಾವು..
ಕಾರಣ ಹಂಸಗಳಿಗೆ
ಹೆಜ್ಜೆ ಇಡಿಸಿದವಳು ಅವಳೆ.!
ಅವಳ ವಿಳಾಸ ಬೇಕೆಂದರೆ..
ತಂಗಾಳಿಯ ಬಳಿ ಕೇಳಿ..
ಸೌರಭ ಸೂಸಿ ವಿವರಿಸೀತು..
ಕಾರಣ ತಂಗಾಳಿಗೂ ತಂಪು
ಇಂಪುಗಳನಿಟ್ಟವಳು ಅವಳೆ.!
ಅವಳ ವಿವರ ಬೇಕೆಂದರೆ..
ಚಂದ್ರಮನ ಬಳಿ ಕೇಳಿ..
ಬೆಳಗಿನತನಕ ವರ್ಣಿಸಾನು..
ಕಾರಣ ಚಂದ್ರನಿಗೆ ಬೆಳದಿಂಗಳ
ಕಡ ಕೊಟ್ಟು ಬೆಳಗಿದವಳು ಅವಳೆ.!
- ಎ.ಎನ್.ರಮೇಶ್. ಗುಬ್ಬಿ.