‘ಅವಳು’ ಕವನ ಸಂಕಲನ ಪರಿಚಯ – ಪಾರ್ವತಿ ಜಗದೀಶ್

ಕವಿಯತ್ರಿ ಪದ್ಮಶ್ರೀ. ಗೋವಿಂದರಾಜ್ ಅವರ ಚೊಚ್ಚಲ ಕೃತಿ ‘ಅವಳು’ ಕವನ ಸಂಕಲನ ಕುರಿತು ಲೇಖಕಿ ಪಾರ್ವತಿ ಜಗದೀಶ್ ಅವರು ಬರೆದಿರುವ ಕೃತಿ ಪರಿಚಯವನ್ನು ತಪ್ಪದೆ ಓದಿ…

ಪುಸ್ತಕ :ಅವಳು
ಲೇಖಕಿ : ಪದ್ಮಶ್ರೀ. ಗೋವಿಂದರಾಜ್

ಪದ್ಮಶ್ರೀ. ಗೋವಿಂದರಾಜ್ ಅವರ ಚೊಚ್ಚಲ ಕೃತಿ ‘ಅವಳು’  ಇದೊಂದು ವಿಶೇಷ ರೀತಿಯಲ್ಲಿಯೇ ರಚಿಸಲ್ಪಟ್ಟ ಕವನ ಸಂಕಲನ. ನಾನು ಸುಮಾರು ಕವನ ಸಂಕಲನಗಳನ್ನು ಓದಿರುವೆ ಆದರೇ ಅವಳು ಓದಿನ ಅನುಭವವೇ ಬೇರೆ ತರನಾಗಿ ಅನಿಸುತ್ತೆ ಮುಖ್ಯವಾಗಿ ಇಲ್ಲಿನ ಬಹುತೇಕ ಕವನಗಳು ಶೀರ್ಷಿಕೆ ರಹಿತ ಆದ್ರೂ ಪ್ರತಿ ಕವಿತೆ ಓದಿದ ನಂತರ ಓದುಗರೇ ಆಯಾ ಕವಿತೆಗಳಿಗೆ ಶೀರ್ಷಿಕೆ ಕೊಟ್ಟುಬಿಡುತ್ತಾರೆ ಅಂದರೆ ಕವಿತೆ ನಿರ್ದಿಷ್ಟ ವಿಷಯ, ಪಾತ್ರಗಳ ಪರಿಕಲ್ಪನೆ ಓದುಗರಿಗೆ ಸ್ಪಷ್ಟವಾಗುವಂತೆ ಕೃತಿ ರಚನೆಯಾಗಿದೆ.

ಕೃತಿಗೆ ವಾಸುದೇವ ನಾಡಿಗ್ ಅವರ ಕೃತಿ ರಚನೆಯಲ್ಲಿರುವ ಸ್ಪಷ್ಟ ಅಭಿಮತಗಳ ಪೋಷಿಸುವ ನಿಟ್ಟಿನಲ್ಲಿಯೇ ಸಪೂರ್ಣ ಮುನ್ನುಡಿ ಬರದರೆ ಸಿದ್ದರಾಮ ಹೊನ್ಕಲ್ ಅವರು ಪದ್ಮಶ್ರೀ ಅವರ ವ್ಯಕ್ರಿತ್ವ, ಕರ್ತವ್ಯ ಬಗ್ಗೆ ಚುಟುಕಾಗಿಯೇ ಬೆನ್ನುಡಿಯಲ್ಲೇ ತಿಳಿಸಿದ್ದಾರೆ.

 

ಕೃತಿಯನ್ನು ನಾಲ್ಕು ವಿಭಿನ್ನ ಭಾಗಗಳಲ್ಲಿ ಪರಿಚಯಿಸಿದ್ದಾರೆ 1) ಪೌರಾಣಿಕ ಪಾತ್ರಗಳ ಸ್ವಗತ,2)ಹೆಣ್ಣುಸಿರ ತಲ್ಲಣಗಳು 3) ನನ್ನ ಹುಚ್ಚು ದವಾಖಾನೆಯಲ್ಲಿ 4) ಬದುಕಿನ ಮುಖವಾಡದ ಮಿಥ್ಯಗಳು.

ಮೊದಲ ಭಾಗದಲ್ಲಿ ಕೆಲವು ಪೌರಾಣಿಕ ಪಾತ್ರಗಳ ಪರಿಚಯ ಅವುಗಳಲ್ಲಿರುವ ಭಾವನೆಗಳನ್ನು ಅಭಿವ್ಯಕ್ತಗೊಳಿಸುತ್ತವೆ. ಆದರೆ ಪ್ರತಿ ಪಾತ್ರದ ಒಳ ಮನದ ಭಾವಗಳು ಆಯಾಯ ಪಾತ್ರಗಳೇ ಸ್ವ ಆತ್ಮ ವಿಮರ್ಶೆ ಮಾಡಿಕೊಳ್ಳುವ ರೀತಿಯಲ್ಲಿ ಕವಿಯತ್ರಿಯ ನಿರೂಪಣಾ ಶೈಲಿ ಮನಸಿಗೆ ಆಪ್ತವೆನಿಸುತ್ತೆ. ಆ ನಿಟ್ಟಿನಲ್ಲಿ ಮೊದಲ ಪ್ರಯತ್ನದಲ್ಲೇ ಯಶಸ್ವಿ ಕೂಡ ಆಗಿದ್ದಾರೆ. ಪ್ರತಿ ಕವನ ಓದಿ ಮುಗಿದ ನಂತರ ಒಮ್ಮೆ ನಮ್ಮೊಳಗೇ ಇರುವ ಅವಳು ಸ್ವ ವಿಮರ್ಶೆ ಮಾಡಿಕೊಳ್ಳದೇ ಇರಲಾರಳು. ಪಾತ್ರಗಳು ಸೀತೆ, ಉರ್ಮಿಳೆ, ಮಾಂಡವಿ, ಪಾರ್ವತಿ, ರಾಧೇ, ರುಕ್ಮಿಣಿ, ಮಾದ್ರಿ, ಪಾಂಚಾಲಿ,ಅಮೃತಮತಿ, ತಾರಾ, ಶಕುಂತಲಾ ಹೀಗೆ ಸುಮಾರು ಪಾತ್ರಗಳು ಕೆಲವು ಚಿರ ಪರಿಚಿತ ಇನ್ನೂ ಕೆಲವು ನೆನಪಿಸಿಕೊಳ್ಳಬೇಕಾದ ಪಾತ್ರ ಹಾದು ಹೋಗುತ್ತವೆ.ಕೆಲವು ಪಾತ್ರಗಳ ಸ್ವಗತ ಪ್ರಶ್ನೆಗಳು ಓದುಗರಿಗೆ ಆಲೋಚನೆ ಮಾಡುವಂತೆ ಮಾಡಿವೆ.

ಸೀತೆಯಲ್ಲಿ.

ಹೆಣ್ಣು ತಾನೇ ಸರಳ ಸುಂದರಿಯಾಗಿದ್ದರೂ ಅದೇಕೋ ಆ ಮಾಯಾಮೃಗ ಸೆಳೆದಿತ್ತು ಚಿನ್ನದಂತೆ ಉಳಿದಿದ್ದೆಲ್ಲ ರಾಮಾಯಣವೇ ನಂತರದ್ದು. ಅನ್ನುವಲ್ಲಿ ಹೆಣ್ಣಿನ ಒಂದು ಸಹಜ ಸಣ್ಣ ಆಕರ್ಷಣೆ ದೊಡ್ಡದೊಂದು ಘಟನೆಗೆ ಕಾರಣವಾಗಬಲ್ಲದು ಅನ್ನುವ ಆಲೋಚನೆ ಉಂಟಾಗುತ್ತದೆ. ಮುಂದುವರೆದು ಅದೇ ಪಾತ್ರವೇ ನಾನಂದು ಹೊನ್ನ ಜಿಂಕೆಗೆ ಕನವರಿಸದೇ ಇದ್ದಿದ್ರೆ ಆ ರಾವಣ, ಈ ಅಗಸ ಇವರೆಲ್ಲ ನನ್ನ ಕಥೆಯಲ್ಲಿ ಬರುತ್ತಲೇ ಇರಲಿಲ್ಲ ನಿಜ ಅಲ್ವಾ?
ಆದ್ರೂ ಕೊನೆಗೆ ತನ್ನ ಮನದ ತುಮಲವನ್ನು ದ್ರೌಪದಿಯೊಂದಿಗೆ ಹೋಲಿಕೆ ಮಾಡಿಕೊಂಡ ಸಾಲುಗಳನ್ನು ಓದಿದಾಗ ವ್ಯಥೆ ಅನಿಸುತ್ತೆ.

” ಪಂಚ ಪಾಂಡವರ ಸುಖದ ಅಮಲು ಒಬ್ಬರಾದ ಮೇಲೆ ಇನ್ನೊಬ್ಬರು ಆದರೂ ಅವಳು ಮಹಾಸತಿ ಸಾಲಿನಲ್ಲಿ ಮೊದಲಿಗಳು. ಹುಟ್ಟಿನಿಂದ ಭುವಿ ಬಿರಿಯುವ ತನಕ ಬೆಂಕಿಯ ಸೆರಗಲ್ಲಿ ಕಟ್ಟಿ ಸುಟ್ಟು ಬಳಲಿದವಳು ಆದರೂ ಕೊಳೆ ಬಟ್ಟೆ ತೊಳೆಯುವ ಅಗಸನಿಂದ ಪತಿವೃತೆಯ ಸಾಭೀತಿಗೆ ಒಳಪಟ್ಟವಳು ಎಷ್ಟೊಂದು ಸತ್ಯವಿದೆ ಈ ಸಾಲುಗಳಲ್ಲಿ.ಆದರೇ ಬಹುತೇಕ ಪಾತ್ರಗಳಿಗೆ ಅದರದ್ದೇ ಆದ ಸಾರ್ಥಕ ಭಾವವಿದೆ ಊರ್ಮಿಳೆ ಮಾತ್ರ ತನಗೇ ಅನ್ಯಾಯವಾದರೂ ಅವಳಲ್ಲೂ ಒಂದು ಧೀಮಂತ ಕಾರ್ಯಕ್ಕೆ ಪರೋಕ್ಷವಾಗಿ ಸಹಕರಿಸಿದ ಭಾವವಿದೆ ಆದರೇ ಅಕ್ಕ ಸೀತೆಯಂತೆ ದೇವರಾಗಲಿಲ್ಲ ಅನ್ನುವ ವಿಷಾದ ಭಾವವಿದೆ.ಮಾದ್ರಿ ಗೆ ತಿಳಿಯದೇ ಆದ ತಪ್ಪಿಗೆ ಪಶ್ಚಾತಾಪವಿದೆ,ಹಿಡಂಬಿ ರಕ್ಕಸ ಗುಣದವಳೇ ಆದರೂ ಅವಳಲ್ಲಿ ಪತಿ ಭಕ್ತಿ, ಪುತ್ರ ವ್ಯಾಮೋಹ ಹೇರಳವಾಗಿತ್ತು ಅನ್ನೋದು ಒಪ್ಪಬೇಕಿದೆ.. ದ್ರೌಪದಿಯಲ್ಲಿನ ಕ್ರಷ್ಣನೆಡೆಗೆ ಬ್ರಾತೃ ವಾತ್ಸಲ್ಯ ಸ್ಫೂಟವಾಗಿದೆ.ಊರ್ವಶಿಯದು ಮತ್ತೊಂದು ವ್ಯಥೆ, ಅಹಲ್ಯೆಯ ಮನೋವ್ಯಥೆ ತುಸು ಕಾಲ ಚಿಂತನೆ ಮಾಡುವಂತಿದೆ ” ಹೆಣ್ಣು, ನೀರು ಮತ್ತು ಕಲ್ಲು ” ಎಂತಹ ಕಥೆ ಹೆಣದಿರುವ ಆ ಬ್ರಹ್ಮ ಕಲ್ಲಾಗಿ ಕಾದಿರುವೆ ಮತ್ತೊಬ್ಬ ಪುರುಷೋತ್ತಮನ ನಾ ಮತ್ತೆ ಹೆಣ್ಣಾಗಲು.. ಅನಾಚಾರ ಮಾಡಿ ಬೀದಿಗೆ ಎಸದ ಕಂದನ ಮರುಕವಿದೆ. ಎಲ್ಲದರ ಮದ್ಯೆ ವೃಷಾಲಿ ವ್ಯಕ್ತಿತ್ವದ ಬಗ್ಗೆ ಹೆಮ್ಮೆ ಅನಿಸುತ್ತೆ.

 

ಗಾಂಧಾರಿಯ ಅಳಲು ನ್ಯಾಯ ಸಮ್ಮತವಾಗೇ ಇದೆ ಒಳ್ಳೆ ಮಾತೃ ಆಗಿದ್ದರೂ ಸರಿ ದಾರಿಯಲ್ಲಿ ತಿದ್ದಿ ತೀಡಿ ಮುನ್ನೆಡುಸುವ ಪ್ರಯತ್ನ ಮಾಡಿಯೂ ವಿಧಿಯಾಟದ ಮುಂದೆ ತೃಣಕ್ಕೆ ಸಮನಾಗಿದ್ದು ವಿಪರ್ಯಾಸ. ನಿಜ ಕೊಡಬೇಕಿತ್ತು ಅವಳ ಮಕ್ಕಳಿಗೂ ಪಾಂಡವರಂತೆ ಸಭುದ್ದಿ ಅದಿಲ್ಲದಕೆ ಆಕೆಗೆ, ಆಕೆಯ ತ್ಯಾಗ ನಡುವಳಿಕೆಗೆ ಸಿಕ್ಕಿದ್ದು ಕುರುಡು ಮಮತೆಯ ಪಟ್ಟ.

ಶಕುಂತಲೇ ಅಂತರ್ಯ ಮಾತ್ರ ಆಗಲಾರದೇ ಇರುವುದಕ್ಕೆ ಹಪಾ ಹಪಿ ಇದೆ ಉಂಗುರದ ಬದಲು ತಾಳಿ ಕಟ್ಟಿಸಿಕೊಳ್ಳಬೇಕಿತ್ತು ಅವನು ಮರೆಯುವ ಸಾಹಸ ಮಾಡುತ್ತೀರಲಿಲ್ಲ ಓದುವಾಗ ನಗು ಮೂಡಿ ಮರೆಯಾಗುತ್ತದೆ.ಕೊನೆಗೆ ಕಾಳಿದಾಸ ಕಡಿಮೆ ಏನಿಲ್ಲ ಹೆಣ್ಣ ವಿರಹಕೆ ಹೆಚ್ಚು ಪದ ಕಟ್ಟಿರುವ ಮೊದಲು ಅವನ ವಿಚಾರಿಸಿ ಬರುವೆ ಅನ್ನುತ್ತಾಳೆ ಶಕುಂತಲೇ.

ಉಳಿದಂತೆ ಸತಿ, ಅಮೃತಮತಿ ಮಿತ್ರವಿಂದ, ರಾಧಾ, ಗೋಪಿಕೆ ಮೌನ ಗೌರಿ ಪಾತ್ರ ಪರಿಚಯವಾಗಿ ಪೌರಾಣಿಕ ಲೋಕದಲ್ಲಿ ಕೆಲಹೊತ್ತು ಸಂಚರಿಸಿ ಆ ಪಾತ್ರಗಳ ಎದೆಯಲ್ಲಿ ಮಡುಗಟ್ಟಿದ ಅನೇಕ ಭಾವಗಳನ್ನು ಎದುರು ಕುಳಿತೆ ಕೇಳಿ ಅನುಭವಿಸದ ಅನುಭವವೇದ್ಯವಾಗುತ್ತದೆ.ಪೌರಾಣಿಕ ಪಾತ್ರಗಳ ಮೂಲಕ ವರ್ತಮಾನವನ್ನು ಧ್ವನಿಸಿದ ರೀತಿ ಅನನ್ಯವಾಗಿದೆ.

ಮುಂದೆ ಮನದ ತಲ್ಲಣಗಳಿಗೆ ಅಭಿವ್ಯಕ್ತಿಗೆ ಕಲ್ಪನೆ, ಹಾಗೂ ವಾಸ್ತವಿಕ ನೆಲಗಟ್ಟಿನ ಆಧಾರದಲ್ಲೇ ಕೆಲವು ಕವಿತೆ ರಚನೆಯಾಗಿವೆ ಅದರಲ್ಲಿ ಅವಳು, ಅವಳಂತೆ ಇರುವ ಇನ್ಯಾರದ್ದೋ ಖಾಸಗಿ ಬಿಕ್ಕು ನೋವು, ನಲಿವು ತಣ್ಣಗಿನ ಕ್ರೋರ್ಯ ಸಮಾಜದ ನಿಭಂದನೆಗೆ ಒಳಪಟ್ಟ ಉಸಿರುಗಳ ಅಕ್ಷರ ರೂಪ ಪಡೆದಂತಿವೆ.

ನಿರ್ಜನ ಬಯಲಿನಲ್ಲಿ ಹರಿವ ಜಲದ ಸಡಿಲವಾದ ಹೆಜ್ಜೆ ಗುರುತುಗಳಂತಿವೆ ಕೆಲ ಕವಿತೆಗಳು ಕಾವ್ಯದ ಕಟ್ಟು ಪಾಡುಗಳಲ್ಲಿ ಬಂಧಿಸಿಕೊಳ್ಳದೇ ತನ್ನದೇ ಸ್ವತಂತ್ರ ಮನೋಭಾವನೆ ಅಲ್ಲಲ್ಲಿ ಸಾರಾಗವಾಗಿ ಹರಿದಾಡಿದೆ. ಈ ಮನೋಭಾವನೆ ಹೊಸ ಅನುಭವಗಳಿಗೆ ಹೊಸ ತರದ ಬೆಳವಣಿಗೆ ಅನಿಸುತ್ತೆ ಬದುಕಿನ ದೊಡ್ಡ ಕ್ಯಾನ್ವಾಸಿನಲ್ಲಿ ಆಗುತ್ತಿರುವ ಪಲ್ಲಟಗಳನ್ನು ಪುಟ್ಟ ಬೆರಳಿಂದಲೇ ಹಿಡಿದು ನೋಡುವ ರೀತಿ ಕುತೂಹಲವಾಗಿದೆ.

‘ಅವಳು’ ಕವಯತ್ರಿ ಪದ್ಮಶ್ರೀ. ಗೋವಿಂದರಾಜ್

ಆಧುನಿಕತೆ ತಂದೊಡ್ದುವ ವೇಗದ ಬದಲಾವಣೆಗಳು ಒಂದು ತಣ್ಣನೆಯ ಜೀವನಕ್ರಮವನ್ನು ಅನುಕ್ಷಣ ಅಲ್ಲೋಲ ಕಲ್ಲೋಲ ಗೊಳಿಸುವ ಬದಲಾವಣೆಯನ್ನೇ ಒಪ್ಪಬೇಕಾದ ಅನಿವಾರ್ಯ ಹಾಗೆ ಹಳೆಯ ಬದುಕಿನ ಮಾಧುರ್ಯದ ಮೆಲಕು ಎರೆಡನ್ನು ಒಟ್ಟಿಗೆ ಇವರ ಅಭಿವ್ಯಕ್ತಿಯಲ್ಲಿ ಕಾಣಬಹುದು.

ಹೊಸ ಬದುಕಿನ ತಲ್ಲಣಗಳನ್ನು ಸೂಕ್ಷ್ಮವಾಗಿ ಪ್ರತಿಪಾದಿಸುವ ಅವಳ ಬರಹಗಳು ಆಪ್ತತೆಯ ಆಸಕ್ತಿ ಹುಟ್ಟಿಸುತ್ತವೆ ಕೋಲ್ಮಿಂಚಿನ ಕೆಲವು ಸಾಲುಗಳು ಬದುಕಿಗೆ ಭರವಸೆ ನೀಡುವಂತಿವೆ.

ಬದುಕಿನ ಸೂಕ್ಷ್ಮ ಕಂಪನಗಳನ್ನು ಆಲಿಸಿ ಸಶಕ್ತ ಪದಗುಚ್ಛಗಳಲ್ಲಿ ಹಿಡಿದಿಡುವ ಕೌಶಲ್ಯವಿದೆ ವೈಚಾರಿಕತೆಯ ನೆಲೆಗಟ್ಟು ಮಾನವೀಯ ಮೌಲ್ಯಗಳು ಮರೆಯಾಗುತ್ತಿರುವ ಬಗ್ಗೆ ಖೇದವಿದೆ “ನನ್ನ ಗೋರಿಯ ಮೇಲೆ ತಂದು ಸುರಿ ನಿನ್ನ ಪಲ್ಲಂಗದಲಿ ನಲುಗಿದ ಹೂಗಳನ್ನು ” ಅನ್ನುವ ಸಾಲಿನಲ್ಲಿ ಶೋಷಣೆಯ ವಿಕೃತ ಮುಖವಾಡದ ಹಿಂದಿನ ತಣ್ಣನೆಯ ಕ್ರೋರ್ಯವನ್ನು ಬಯಲಿಗೆಳೆಯುವ ಪ್ರಯತ್ನವಿದೆ. ನೆಲಕಚ್ಚುತ್ತಿರುವ ಹೆಣ್ಮನದ ಭಾವಗಳ ತುಡಿತ, ಮಾನವೀಯ ಮೌಲ್ಯಗಳನ್ನು ಮೇಲೇತ್ತಲು ಅಸಹನೀಯ ಬದುಕನ್ನು ತಿಳಿಗೊಳಿಸಲು ವಿಶೇಷ ರೀತಿಯ ಕಾವ್ಯ ಪ್ರಕಾರ ಪ್ರಸ್ತುತ ಪಡಿಸಿ ಅಕ್ಷರ ರೂಪದಲ್ಲಿ ಬಲಗೊಂಡು ಅದು ಅವಳಂತಿರುವವರಿಗೆಲ್ಲ ತಲುಪಲಿ ಅನ್ನುವ ಸದುದ್ದೇಶವಿದೆ. ” ಮನವ ಕಳಚಿ ಬಟ್ಟೆ ತೊಟ್ಟ ದೇಹ ಬಹಳ ಇವೆ ” ಅನ್ನುವ ಸಾಲು ಮನ ಕಲಕುತ್ತದೆ. ಕೆಲವು ಕವಿತೆ ಪ್ರೀತಿ ಕೇಂದ್ರವಾಗಿರಿಸಿ ರಚಿಸಿದರೂ ಪ್ರೀತಿಯೇ ಭ್ರಮೆಯಾಗಿ ಕೆಲವೊಮ್ಮೆ ಬೇಸರ ತರಿಸಿದೆ ಅನ್ನುವ ವಾಸ್ತವಾ0ಶವೂ ಬಿತ್ತರವಾಗಿದೆ.

ಒಂದು ಒಳ್ಳೆಯ ಕವನ ಸಂಕಲನವನ್ನು ಕನ್ನಡ ಸಾಹಿತ್ಯ ಲೋಕಕ್ಕೆ ಪರಿಚಯ ಮಾಡಿದ್ದಾರೆ. ಒಟ್ಟಾರೆಯಾಗಿ ರೋಚಕತೆ, ಭಾವುಕತೆ, ಚಿಂತನೆ, ನವಿರು ಹಾಸ್ಯ ಇಲ್ಲಿನ ರಚನೆಯಲ್ಲಿವೆ. ಭಾಷೆ, ಆಶಯಗಳಿಗೆ ಒಂದು ವಿಶೇಷ ಕಾಳಜಿ ಅದಮ್ಯ ಉತ್ಸಾಹ ಕವಯತ್ರಿಯಲ್ಲಡಗಿದೆ ಭಾಷೆಯ ದನಿ, ಬನಿಗಳ ಬಳಕೆ ಸಮರ್ಪಕವಾಗಿದೆ.ಅಲ್ಲಲ್ಲಿ ರೂಪಕ ಉಪಮೆಯಗಳ ಬಳಕೆ ಸೂಕ್ತವಾಗಿದೆ. ಕೆಲವು ರಚನೆ ಸರಳ, ಸಹಜ, ಗೇಯತೆ ಅನಿಸಿದರೆ ಮತ್ತೊಂದಿಷ್ಟು ಸಮಾನತೆ, ಸಹಿಷ್ಣುತೆ ಬಿಂಬಿಸುವ ರಚನೆಯಾಗಿವೆ.

ಈ ಕೃತಿ ಸಹೃದಯಿ ಓದುಗರಿಗೆ ಖಂಡಿತ ಇಷ್ಟವಾಗುತ್ತದೆ ಅನ್ನುವದರಲ್ಲಿ ಸಂಶಯವಿಲ್ಲ. ಇವರಿಂದ ಮತ್ತಷ್ಟು ಕೃತಿ ಸಾಹಿತ್ಯ ಲೋಕಕ್ಕೆ ಸಮರ್ಪಣೆ ಆಗಲಿ ಅನ್ನುವ ಶುಭ ಹಾರೈಕೆಗಳೊಂದಿಗೆ.


  • ಪಾರ್ವತಿ ಜಗದೀಶ್

0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW