‘ಬಾಕಿ ಸಂಗ್ತಿ ಮೊಕ್ತಾ’ ಕೃತಿ ಪರಿಚಯ

 ಬರಹಗಾರ್ತಿ ವಸುಮತಿ ಉಡುಪ ಅವರು ಕನ್ನಡ ಸಾಹಿತ್ಯ ಲೋಕದಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಪಡೆದವರು. ಇದುವರೆಗೆ ೧೪ ಕಥಾ ಸಂಕಲನ, ೨ ಪ್ರಬಂಧ ಸಂಕಲನ, ೬ ಕಾದಂಬರಿಗಳು ಹಾಗೂ ಮಕ್ಕಳಿಗಾಗಿ ಹಲವು ನಾಟಕಗಳು ಮತ್ತು ಕವನ ಸಂಕಲನಗಳನ್ನು ಇವರು ರಚಿಸಿದ್ದಾರೆ. ಅನೇಕ ಪ್ರಶಸ್ತಿ ಪುರಸ್ಕಾರಗಳಿಗೆ ಇವರು ಭಾಜನರಾಗಿದ್ದಾರೆ. ‘ಬಾಕಿ ಸಂಗ್ತಿ ಮೊಕ್ತಾ’ ಕೃತಿಯ ಕುರಿತು ಲೇಖಕಿ ಮಾಲತಿ ರಾಮಕೃಷ್ಣ ಭಟ್ ಅವರು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಕೃತಿ  : ಬಾಕಿ ಸಂಗ್ತಿ ಮೊಕ್ತಾ..
ಲೇಖಕರು: ವಸುಮತಿ ಉಡುಪ.
ಅಕ್ಷಯ ಪ್ರಕಾಶನ ಬೆಂಗಳೂರು.
ಮುದ್ರಣದ ವರ್ಷ: ೨೦೧೬.
ಬೆಲೆ: ರೂ. ೧೨೦.
ಪುಟ:೧೬೦.

ಇದು ಅವರ ಮತ್ತೊಂದು ಕಥಾ ಸಂಕಲನ. ಅರೆರೆ…! ಇಂತದ್ದೇ ಒಂದು ಪ್ರಸಂಗವನ್ನು ನಾವೆಲ್ಲೋ ಕೇಳಿದ್ದೇವಲ್ಲವೇ?… ಎನಿಸಿ ಓದುತ್ತಾ, ನಮ್ಮೊಳಗೇ ನಾವು ಪಿಸುಗುಟ್ಟುವಷ್ಟರ ಮಟ್ಟಿಗೆ ನಮ್ಮನ್ನು ತಟ್ಟುವ ಒಟ್ಟೂ ೧೩ ಚೆಂದದ ಕಥೆಗಳು ಈ ಸಂಕಲನದಲ್ಲಿವೆ. ಅವುಗಳಲ್ಲಿ ಒಂದಿಷ್ಟರ ಪರಿಚಯವನ್ನು ಮಾತ್ರ ನಿಮ್ಮೆದುರಿಗಿಟ್ಟಿರುವೆ.

ಜೀವ ನದಿ
ಸುಭದ್ರಾ- ರಾಜೇಂದ್ರ ಇಬ್ಬರೂ ಕಾಲೇಜು ಉಪನ್ಯಾಸಕರು. ಅವರ ಮುದ್ದು ಮಗಳು ಸುದೇಷ್ಣ. ಅಜ್ಜಿ ಇಂದಿರಾಳೇ ಅವಳನ್ನು ಚಿಕ್ಕಂದಿನಿಂದ ಲಾಲಿಸಿ ಬೆಳೆಸಿದವಳು. ಎಲ್ಲರ ಕಣ್ಮಣಿಗೀಗ ಒಂಭತ್ತು ವರ್ಷ. ಏಕತಾನತೆಯ ಉದ್ಯೋಗದಲ್ಲಿನ ಬದಲಾವಣೆ ಬಯಸಿ ಹೆತ್ತವರೊಂದಿಗೆ ಕೇದಾರನಾಥ ಯಾತ್ರೆಗೆ ಹೋಗುವ ಯೋಜನೆ ಹಾಕಿಕೊಂಡು ಪ್ರಯಾಣಕ್ಕೆ ಸನ್ನದ್ಧಳಾದ ಸುಭದ್ರಾ ಸಂತಸದಿಂದಿದ್ದಳು.

ಆದರೆ ಉತ್ತರಾಕಾಂಡ ಯಾತ್ರೆಯಲ್ಲಿ ಹೀಗೊಂದು ಕಲ್ಪನೆಗೂ ಸಿಗದ ಜಲ ಪ್ರಳಯದಲ್ಲಿ ಸಿಕ್ಕಿ ಹಾಕಿಕೊಂಡ ಕುಟುಂಬ ತತ್ತರಿಸಿತ್ತು. ನೆರೆ ಮಟ್ಟ ದಾಟಿ ಮುಚ್ಚಿದ ದಾರಿಯಲ್ಲಿ ಜೀವ ಭಯದಿಂದ ಬದುಕುಳಿಯಲು ಎಲ್ಲರೂ ಹೋರಾಡುತ್ತಿದ್ದರು. ಮೇಘ ಸ್ಫೋಟದಲ್ಲಿ ಮಡಿದ ಸಹಸ್ರಾರು ಜನರಲ್ಲಿ ಸುಭದ್ರಾಳ ತಂದೆ -ತಾಯಿ ಹಾಗೂ ಅವರ ಪ್ರಾಣ ಪದಕವಾದ ಮಗಳೂ ಸೇರಿದ್ದರು!.

ಪ್ರತಿದಿನ ತಮ್ಮ ಒಡಲು ಸುಡುತ್ತಿದ್ದ ಜ್ವಾಲೆಯನ್ನು ತಣಿಸಲು
ಸುಭದ್ರಾ- ರಾಜೇಂದ್ರ ಕಂಡುಕೊಂಡ ದಾರಿ ಯಾವುದು?….

ಬದುಕು

ಏಳು ವರ್ಷದ ಮಗಳು ‘ಡ್ಯಾಡಿ ಬೇಕು..’ ಎಂದು ಹಠ ತೆಗೆದು ಅಳುವಾಗಲೆಲ್ಲಾ ಭಾಗ್ಯಳಿಗೆ ಸಮಾಧಾನ ಮಾಡುವುದೇ ಕಷ್ಟವಾಗುತ್ತದೆ. ಪ್ರಭಾಕರ ಮತ್ತು ಭಾಗ್ಯ ಇಬ್ಬರೂ ಶಿಕ್ಷಕ ವೃತ್ತಿಯಲ್ಲಿದ್ದಾರೆ. ಸ್ವಂತ ಮನೆ, ಒಬ್ಬಳೇ ಮಗಳು. ಮೇಲ್ನೋಟಕ್ಕೆ ಸುಂದರ ಸಂಸಾರ. ಆದರೆ ಗಂಡನಾದವನಿಗೆ ಜವಾಬ್ದಾರಿಯೇ ಇಲ್ಲ. ಮನೆಗಾಗಿ ಅವನು ಏನೂ ಮಾಡಲಾರ. ಇವಳಿಗೆ ತಿಳಿಸದೇ ಗೆಳೆಯರ ದಂಡಿನೊಂದಿಗೆ ಆಗಾಗ ನಾಲ್ಕಾರು ದಿನ ಎಲ್ಲೆಲ್ಲೋ ಸುತ್ತುತ್ತಾ ಪ್ರವಾಸವೆಂದು ಹೋದರೂ ಇವಳಿಗೆ ಸುದ್ದಿಯೇ ಗೊತ್ತಾಗುವುದಿಲ್ಲ!!.

ಮೊದಲೆಲ್ಲಾ ಹೀಗಾದಾಗ ಗಾಬರಿಯಾಗಿ, ಕಂಗೆಟ್ಟು ದುಃಖಿಸಿ ಕುಗ್ಗುತ್ತಿದ್ದ ಭಾಗ್ಯ ಈಗ ಒಗ್ಗಿ ಕೊಂಡಿದ್ದಾಳೆ. ಆಗೆಲ್ಲಾ ಹೀಗೆ…ಮಗಳ ರಗಳೆ! ಮಗಳನ್ನು ಅತಿಯಾಗಿ ಮುದ್ದಿಸುವ ಪ್ರಭಾಕರನಿಗೆ ಹೆಂಡತಿ ಭಾಗ್ಯ ಎಂದರೆ ಅಸಡ್ಡೆ. ಅವನನ್ನು ತಿದ್ದಲಾಗದೇ ಸೋತು,ಆಕೆ ನೋವು ನುಂಗಿ ಬದುಕಲು ಅಭ್ಯಾಸ ಮಾಡಿಕೊಂಡಿದ್ದಾಳೆ.
ಹೀಗೆ ಹೇಳದೇ ಕೇಳದೇ ಆಗಾಗ ಮನೆ ಬಿಟ್ಟು ಹೋಗುವ ಗಂಡನಿಗೆ ಬುದ್ಧಿ ಕಲಿಸಲು ಭಾಗ್ಯ ಮಾಡಿದ ಉಪಾಯವೇನು?…. ಅವಳ ಬಾಣ ಗುರಿ ಮುಟ್ಟಿತಾ?….

ಬಾಕಿ ಸಂಗ್ತಿ ಮೊಕ್ತಾ

ಸದಾಶಿವ ಭಟ್ಟರು ಹಳ್ಳಿಯಿಂದ ಮಗಳನ್ನು ನೋಡಲು ದೂರದ ಬೆಂಗಳೂರಿಗೆ ತಿಂಡಿಯ ಚೀಲದ ಜೊತೆಗೆ ಆಗಾಗ ಬರುತ್ತಾರೆ. ಮಲೆನಾಡಿನ ರುಚಿಯ ಹಲಸಿನ ಹಣ್ಣಿನ ಮುಳುಕವನ್ನಿಲ್ಲಿ ಲೇಖಕಿ ಬಾಯಲ್ಲಿ ನೀರೂರುವಂತೆ ವರ್ಣಿಸಿದ್ದಾರೆ.

ಮಗಳು ರಜನಿಯನ್ನು ಚೆನ್ನಾಗಿ ಕಾಪಾಡುವ ಅಳಿಯ ಒಳ್ಳೆಯವನಾದರೂ, ಅಷ್ಟಾಗಿ ತಮ್ಮನ್ನು ಮಾತಾಡಿಸದ ಪ್ರೀತಿ ಪಡದ ಬಗ್ಗೆ ಭಟ್ಟರಿಗೆ ಬೇಸರವಿದೆ. ಎಲ್ಲರಿಂದ ಗೌರವ ಪಡೆದು ಅಭ್ಯಾಸವಾಗಿದ್ದ ಅವರಿಗೆ ಅಳಿಯನ ಅವಗಣನೆಯ ಬಗ್ಗೆ ಸೂಕ್ಷ್ಮ ನೋವಿತ್ತು.

ಹೆಂಡತಿ ತೀರಿಕೊಂಡ ಮೇಲೆ ತಮ್ಮ ಒಬ್ಬಳೇ ಮಗಳು ರಜನಿಯನ್ನು ತಂಗಿಯ ಮಗನಿಗೆ ಕೊಟ್ಟು ಮನೆ ಅಳಿಯನನ್ನಾಗಿಸಿ ಕೊಳ್ಳಬೇಕೆಂಬ ಆಸೆಯಿತ್ತಾದರೂ ಅವನು ಬೇರೆ ಹುಡುಗಿಯನ್ನು ಇಷ್ಟ ಪಟ್ಟಿದ್ದರಿಂದ ಅದು ಈಡೇರಿರಲಿಲ್ಲ.

ಭಟ್ಟರಿಗೆ ಪ್ರತೀಸಲ ಮಗಳ ಮನೆಗೆ ಹೋದಾಗಲೂ ಪರಕೀಯತೆ ಕಾಡುತ್ತದೆ. ಅವರ ಅಂತಃಸ್ಸತ್ವ ಇಷ್ಟಿಷ್ಟೇ ಕುಗ್ಗಿ ಹೋಗುತ್ತದೆ. ವಯಸ್ಸಾಗುತ್ತಾ ಯಾಕೀ ಅಭದ್ರತೆ?… ಇವರಿಗಿಂತ ಏಳೆಂಟು ವರ್ಷ ಚಿಕ್ಕವನಾದ ಊರಿನ ಪರಿಚಿತ ಶೀನಪ್ಪಯ್ಯ ತೀರಿ ಕೊಂಡ ಮೇಲೆ, ‘ನಿಮ್ಮ ಗೆಳೆಯ ಸುಸೂತ್ರವಾಗಿ ವೈಕುಂಠ ಸೇರಿ ಕೊಂಡಾರಂತಾ?.. ಕಾಗದ ಬಂದಿತ್ತಾ?’ಎಂದು ಯಾರಾದರೂ ದಾರಿಯಲ್ಲಿ ಸಿಕ್ಕಿ ಕುಶಾಲು ಮಾಡುತ್ತಾರೆ. ‘ಕಾಗದ ಬಂದಿತ್ತು. ವೈಕುಂಠ ಭಾರೀ ಲಾಯಕ್ಕುಂಟಂತೆ. ಬಾಕಿ ಸಂಗ್ತಿ ಮೊಕ್ತಾ.. ಅಂತ ಬರ್ದಿದ್ದಾನೆ’. ಎಂದು ಭಟ್ಟರು ಹಾಗೇ ತಮಾಷೆ ಮಾಡುತ್ತಾ ಗಟ್ಟಿಯಾಗಿ ನಗುತ್ತಾರೆ.

ಹಿಂದಿನ ಕಾಲದ ಪತ್ರದ ‘ಪದಗುಚ್ಛ’ವೊಂದನ್ನು ಬಳಸಿ ಹೆಣೆದ ಈ ಕಥೆ ಸಾವನ್ನು ಸಹಜವಾಗಿ ಮುಕ್ತ ಮನಸ್ಸಿನಿಂದ ಸ್ವಾಗತಿಸುವ ಮನೋಧರ್ಮದ ಬಗ್ಗೆ ಅರ್ಥ ಹೇಳುತ್ತದೆ.

ವಿಲೇವಾರಿ

ಪೌರ ಕಾರ್ಮಿಕರು ಉದ್ಯೋಗ ಖಾಯಂ ಗೊಳಿಸಲು ಮುಷ್ಕರ ಹೂಡಿದ್ದರಿಂದ ದಿನದ ಕಸ ವಿಲೇವಾರಿಯಾಗದೇ ನಗರ ಕೊಳೆತು ನಾರುತ್ತಿತ್ತು. ಅದೇ ಸಮಯದಲ್ಲಿ ಮನೆ ಮುಂದೆ ಬೀದಿ ಸತ್ತು ಬಿದ್ದ ನಾಯಿಯೊಂದರ ಶವವನ್ನು ಎತ್ತುವವರಿಲ್ಲದೇ ಕಲಾವತಿ ಮತ್ತು ಮನೋಹರ ದಂಪತಿಗಳು ಚಿಂತಿತರಾಗಿದ್ದರು. ಮರುದಿನ ಹಳ್ಳಿಯಿಂದ ಬಂದ ಅವಳ ಅಣ್ಣ ನಿರಾಯಾಸವಾಗಿ ಈ ಸಮಸ್ಯೆಯನ್ನು ಬಗೆ ಹರಿಸಿದ್ದು ಹೇಗೆ?…

ಸುಳಿ

ಒಂಟಿ ಬದುಕಿನ ಸಂಕಟ ಅರಿತ ಶಿಕ್ಷಕಿ ಕಾವೇರಮ್ಮ ಮಗಳು ಕೇತಕಿಯನ್ನು ತುಂಬಿದ ಮನೆಗೆ ಸೊಸೆಯಾಗಿ ಮದುವೆ ಮಾಡಿ ಕಳಿಸಿ ಕೊಟ್ಟಿದ್ದರು. ಕರುಣಾಕರ- ಕೇತಕಿ ಅನ್ಯೋನ್ಯವಾಗಿ ಸಂಸಾರ ಮಾಡಿ ಕೊಂಡಿದ್ದರು. ಅತ್ತೆ ಮಾವ, ಭಾವ ಎಲ್ಲರೂ ಒಳ್ಳೆಯವರೇ. ಮೈಸೂರಲ್ಲಿ ಈಗಾಗಲೇ ಕಟ್ಟಿಸಿದ ಮನೆಯ ಮೇಲೆ ಮತ್ತೊಂದು ಮನೆ ಕಟ್ಟಿ ಅದನ್ನು ಬಾಡಿಗೆಗೆ ಕೊಡುವಾಗ ಅವಳಮ್ಮ ತಮ್ಮ ನಿವೃತ್ತಿಯ ಹಣವನ್ನು ಮಗಳಿಗೆ ಕೊಟ್ಟು ಸಹಾಯ ಮಾಡಿದ್ದರು. ಆದರೆ ಅನಿರೀಕ್ಷಿತ ಹೊಡೆತದಿಂದ ಕೇತಕಿ ಭೀತಳಾಗಿದ್ದಳು!!

ಹಾಗಾದರೆ…

ಕೇತಕಿಯ ಸಂತೋಷದ ಹಿಂದೆ ಹೊಂಚು ಹಾಕಿ ಕೊಂಡಿದ್ದ ದುಃಖ ಯಾವುದು?….ತಿಳಿಯಲು ನೀವೂ ಓದಿ….

ಹೀಗೇ ನಮ್ಮೆಲ್ಲರ ಬದುಕಿನಲ್ಲಿ ಬರುವ ತಿರುವುಗಳನ್ನೇ ಹರವಿ, ನಿರೂಪಿಸಿ ಮನಕರಗುವಂತೆ ಬರೆಯುವ ಲೇಖಕಿ ವಸುಮತಿ ಉಡುಪರ ಸಣ್ಣ ಕಥೆಗಳಿಗೆ ಮಾರು ಹೋಗದವರಿಲ್ಲ.
ನಾನು ಕೆಲವು ವರ್ಷಗಳ ಹಿಂದೆ ‘ಮಯೂರ’ದಲ್ಲಿ ಇವರ ಕಥೆಯೊಂದನ್ನು ಓದಿ ಮರುಳಾಗಿದ್ದೆ.ಅಲ್ಲಿ ಮಲೆನಾಡಿನ ಅಡಿಕೆ ಕೊಯ್ಲಿನ ಬಣ್ಣನೆ ನೋಡಿ ಇವರು ಖಂಡಿತಾ ನಮ್ಮೂರ ಕಡೆಯ ಯಾರೋ ಲೇಖಕಿ. ಇಲ್ಲವಾದ್ರೆ ಇಷ್ಟು ಕಣ್ಣಿಗೆ ಕಟ್ಟಿದಂತೆ ಬರೆಯಲು ಸಾಧ್ಯವೇ ಇಲ್ಲ!! ಎಂದು ಪರಿಚಿತರಲ್ಲಿ ಹೇಳುತ್ತಿದ್ದೆ. ಆಗ ಪತ್ರಿಕೆಯಲ್ಲಿ ಕಥೆಯ ಜೊತೆ ಒಂದು ಫೋಟೋವನ್ನಾದರೂ ಹಾಕಿದ್ದರೆ ಅವರು ಯಾರೆಂದು ಹೇಳುತ್ತಿದ್ದೆ ಎನ್ನುವವರೆಲ್ಲಾ ಈಗ ಮತ್ತೆ ನೆನಪಾಗುತ್ತಿದ್ದಾರೆ.

ಈಗಲೂ ನಾನು ‘ಮೊಕ್ತಾ’ ಲೇಖಕಿಯವರನ್ನು ನೋಡದೇ ಇದ್ದರೂ,ಅವರದೇ ‘ಬಾಕಿ ಸಂಗ್ತಿ ಮೊಕ್ತಾ..’ ವನ್ನೂ ಸೇರಿಸಿ ಇನ್ನಷ್ಟು ಕಥೆಗಳು ಓದಿಗೆ ಸಿಕ್ಕಿ, ತನ್ಮೂಲಕ ಆಪ್ತರಾಗಿದ್ದಾರೆ ಎಂದರೆ ತಪ್ಪಿಲ್ಲ.

ಮಾಲತಿ ರಾಮಕೃಷ್ಣ ಭಟ್ ಅವರು ಸಾಕಷ್ಟು ಪುಸ್ತಕಗಳನ್ನು ಓದಿ ಓದುಗರಿಗೆ ಪರಿಚಯವನ್ನು ಮಾಡಿಕೊಟ್ಟಿದ್ದಾರೆ. ಅವರು ಮಾಡಿದ ಪುಸ್ತಕಗಳ ಪರಿಚಯ : 


  • ಮಾಲತಿ ರಾಮಕೃಷ್ಣ ಭಟ್

5 1 vote
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW