ಬಾದಾಮಿ ಜಾತ್ರೆಯ ನೆನಪು

ಉತ್ತರ ಕರ್ನಾಟಕದ ಬಹುಮುಖ್ಯ ಕ್ಷೇತ್ರವಾದ ಮಹಾಕೂಟ “ದಕ್ಷಿಣ ಕಾಶಿ” ಎಂದೇ ಖ್ಯಾತ. ಬನಶಂಕರಿ ದೇವಿಯ ಅಭೂತಪೂರ್ವ ದರ್ಶನ ಪಡೆದು ಎಷ್ಟೋ ವರ್ಷಗಳ ನಂತರ ಜಾತ್ರೆಯಲ್ಲಿ “ಅಡ್ಡಾಡಿ” ಶಾಪಿಂಗ್ ಮಾಡಿ ಸಂಭ್ರಮಿಸಿದೆ.ಕವಿತಾ ಹೆಗಡೆ ಅಭಯಂ ಅವರ ಬಾದಾಮಿ ಜಾತ್ರೆಯ ಅನುಭವವನ್ನು ತಪ್ಪದೆ ಮುಂದೆ ಓದಿ…

“ಬರೀ ಲೇಡೀಸ್ ಸೇರಿಕೊಂಡು ಒಂದು ಸಣ್ಣ ಟ್ರಿಪ್ ಪ್ಲಾನ್ ಮಾಡೋಣ ಅಂತ, ಬರ್ತೀರಾ ಬಾದಾಮಿಗೆ?” ಅಂತ ಪ್ರೀತಿಯ ಗೆಳತಿ ಕಾವ್ಯಾ ಕೇಳಿದಾಗ ಇಲ್ಲವೆನ್ನಲಾಗಲಿಲ್ಲ. ಅವತ್ತು ಸೆಕೆಂಡ್ ಸಾಟರ್ಡೇ ರಜೆ! ಬೆಳಿಗ್ಗೆ ಐದು ಗಂಟೆಗೆ ಮಿನಿ ಬಸ್ಸಿನ ಬಳಿ ಒಂಬತ್ತು ಗೆಳತಿಯರು ನವ ದುರ್ಗಿಯರ ಹಾಗೆ ನೆರೆದಾಗ ಅದೆಷ್ಟು ಉತ್ಸಾಹವಿತ್ತು! “ಬರೀ ಹೆಣ್ಮಕ್ಳ ಹೊಂಟಾರ…. ಏನರ ಆದ್ರ…” ಎಂಬ ದುಗುಡ ಹೊತ್ತು ಬಂದ ಗಂಡ, ಮಕ್ಕಳಿಗೆ ಉಲ್ಲಾಸದಿಂದ ಕೈ ಬೀಸಿ ಹೊರಟೇಬಿಟ್ಟೆವು.

ಬದುಕನ್ನೆಲ್ಲ ಮನೆ – ಸಂಸಾರ ಎಂಬ ಪರಿಧಿಯಲ್ಲಿಯೇ ಭ್ರಮಿಸುತ್ತಿರುವ ಸ್ತ್ರೀಗೆ “ಮಿ ಟೈಮ್” ಎಷ್ಟು ಮುಖ್ಯವೆಂಬುದು ಅಲ್ಲಿರುವ ಪ್ರತಿಯೊಬ್ಬ ಸ್ತ್ರೀಯ ಕಣ್ಣಲ್ಲಿ ಮಿಂಚುವ ಉತ್ಸಾಹವೇ ಹೇಳುತ್ತಿತ್ತು. ಆಡುವ ಪ್ರತಿಯೊಂದು ಮಾತು, ಎಳೆದುಕೊಂಡ ಉಸಿರು, ಹರಿಸಿದ ನಗು ಎಲ್ಲವೂ ಅದೇನೋ ಬಿಡುಗಡೆಯ ಗಂಧ ಹೊತ್ತು ವ್ಯಾಪಿಸಿದ್ದವು. ಹುಬ್ಬಳ್ಳಿಯಿಂದ ಹೊರಟು ನರಗುಂದದ ಹೋಟೆಲ್ ಒಂದರಲ್ಲಿ ಗರ್ಮಾ ಗರಂ ಪೂರಿ, ಗಟ್ಟಿ ಚಹಾ ಬಿದ್ದಿದ್ದೇ ತಡ ಎಲ್ಲರಿಗೂ ಎಲ್ಲಿಲ್ಲದ ಸಂತೋಷ, ಉತ್ಸಾಹ ಅವರಿಸಿತು. ಆ ಉಲ್ಲಾಸಕ್ಕೆ ಸಾಟಿಯೇ ಇರಲಿಲ್ಲ.

ಹೆಣ್ಣು ಹೃದಯವೊಂದಿದ್ದರೆ ಸಾಕು, ಅದಕ್ಕೆ ತನಗಿಂತ ಪರರ ಹೊಟ್ಟೆಗೆ ಏನೇನು ಬೇಕಾದೀತು ಎಂಬುದೇ ಚಿಂತನೆ. ದಾರಿಯುದ್ದಕ್ಕೂ ಚಿಪ್ಸ್, ಸ್ವೀಟ್ಸ್ , ಹಣ್ಣು ಎಂದು ಹಂಚಿ ತಿನ್ನುವ ಉತ್ತರ ಕರ್ನಾಟಕದ ವಿಶಾಲ ಮನೋಭಾವ ಕ್ಷಣ ಕ್ಷಣಕ್ಕೂ ಪ್ರಕಟವಾಗುತ್ತಿತ್ತು.

ಮೊದಲಿಗೆ ಸೇರಿದ್ದು ಪವಿತ್ರ ಕ್ಷೇತ್ರ ಮಹಾಕೂಟವನ್ನು. ಎಲ್ಲೆಲ್ಲೂ ಪುಟ್ಟ ದೊಡ್ಡ ಶಿವ ಮಂದಿರ, ಲಿಂಗಗಳು ದೈವಿಕ ವಾತಾವರಣವನ್ನು ಸೃಷ್ಟಿಸಿದ್ದವು. ಪುಷ್ಕರಿಣಿಯಲ್ಲಿ ಜಲಕ್ರೀಡೆಯಾಡುವ ಉನ್ಮತ್ತ ಜೋಡಿಗಳು, ನೀರೆರಚಿ, ಕಿರುಚಾಡಿ ಸಂಭ್ರಮಿಸುವ ಮಕ್ಕಳ ಆಟ ಅದಷ್ಟೇ ಜಾಗವನ್ನು ವಿಶೇಷವಾಗಿಸಿದ್ದವು. ಉತ್ತರ ಕರ್ನಾಟಕದ ಬಹುಮುಖ್ಯ ಕ್ಷೇತ್ರವಾದ ಮಹಾಕೂಟ “ದಕ್ಷಿಣ ಕಾಶಿ” ಎಂದೇ ಖ್ಯಾತ. ಆರತಿ, ಪ್ರಸಾದ ಸ್ವೀಕರಿಸಿ, ಕಾಣಿಕೆಗಳ ಅರ್ಪಣೆಯ ಧನ್ಯತೆ ಅನುಭವಿಸಿ ಹೊರಟು, ಶಿವಯೋಗಿ ಮಂದಿರ ನೋಡಿ ಬಾದಾಮಿಗೆ ಬಂದೆವು.
ಬಸ್ಸಿನಿಂದ ಇಳಿಯುವಷ್ಟರಲ್ಲೇ “ಹಾಯ್, ಹಲೋ, ವೆಲ್ಕಮ್” ಎಂದು ನಾಲ್ಕು ಕಪಿ ಶ್ರೇಷ್ಠರು ನಮ್ಮ ಮೇಲೇ ಜಿಗಿದು ಆದರದ ಸ್ವಾಗತ ಕೋರಿದವು.

“ಬ್ಯಾಗ್, ಛತ್ರಿ, ಕನ್ನಡಕ, ಕ್ಯಾಪ್ ಒಂದೂ ಬಿಡಂಗಿಲ್ರೀ… ಕೇರ್ಫುಲ್ ಇರ್ರಿ ಎಲ್ಲಾರೂ,” ಎಂದು ಒಬ್ಬರಿಗೊಬ್ಬರು ಎಚ್ಚರಿಕೆ ಕೊಟ್ಟುಕೊಳ್ಳುತ್ತ ಕೆಳಗಿಳಿದೆವು. “ಹಸುರಿತ್ತಲ್ ಹಸುರತ್ತಲ್” ಎಂಬ ಕುವೆಂಪು ಹೇಳಿದರೆ ಇಲ್ಲಿ “ಕಪಿಯಿತ್ತಲ್ ಕಪಿಯತ್ತಲ್” ಎಂದುಕೊಳ್ಳುತ್ತ ಬಾದಾಮಿ ಗುಹೆಗಳನ್ನು ನೋಡಲು ಸುಮಾರು 20 ಮೆಟ್ಟಿಲು ಹತ್ತಿದ್ದೆವು. ತಾಮ್ ತೋಮ್ ಎಂದು ಮೇಲಿನಿಂದ ಹಾರಿ ಬಂದ ವಾನರ ಶ್ರೇಷ್ಠನೊಬ್ಬ ಸ್ತ್ರೀಯೊಬ್ಬಳ ಜಡೆಯಿಂದ ಮಲ್ಲಿಗೆ ಕನಕಾಂಬರ ಸೇರಿಸಿ ಕಟ್ಟಿದ್ದ ಮಾಲೆಯನ್ನು ದೋಚಿ ಹರಿದು ತಿನ್ನಲಾರಂಭಿಸಿದ. ಇನ್ನೊಬ್ಬ ಕಪಿರಾಯ ಪ್ರವಾಸಿಗಳೊಬ್ಬಳ ವ್ಯಾನಿಟಿಬ್ಯಾಗ್ ಕಸಿದು ಎತ್ತರದ ಬಂಡೆಯ ಮೇಲೇರಿ ಜಿಪ್ ತೆಗೆದು ಅದರಲ್ಲಿನ ಒಂದೊಂದೇ ವಸ್ತುವನ್ನು ಎಸೆಯತೊಡಗಿದ. ಲಿಪ್ ಸ್ಟಿಕ್, ಕಾಜಲ್, ಪೌಡರ್, ಕನ್ನಡಿ, ಬಾಚಣಿಗೆ, ಕರವಸ್ತ್ರ ಎಂಬ ಆಪ್ತ ಮಿತ್ರರು ಠಣ್ ಎಂದು ಪುಡಿಯಾಗುತ್ತ ಪ್ರಪಾತ ಸೇರುವಾಗ ಅವಳ ಕಣ್ಣಂಚಿನಲ್ಲಿ ಸದ್ದಿಲ್ಲದೇ ನದಿಯೊಂದು ಆವಿರ್ಭವಿಸಿತ್ತು. ಮೊಬೈಲೊಂದು ಕೈಯಲ್ಲಿದ್ದ ಕಾರಣ ಉಳಿದುಕೊಂಡಿತು. ಪ್ರವಾಸಿಗರಿಗೆ ಸುರಕ್ಷತೆಯಿಲ್ಲದ ವ್ಯವಸ್ಥೆಯ ಬಗ್ಗೆ, ಮಂಗಗಳ ಹಕ್ಕಿನ ಬಗ್ಗೆ, ವಿನಾಕಾರಣ ಕಳೆದುಕೊಳ್ಳುವುದರ ನೋವಿನ ಬಗ್ಗೆ ಸುತ್ತಲೂ ಡಿಬೇಟ್ ನಡೆದಾಗ ನಾನು ಏಕಾಂತವನ್ನು ಆವಾಹಿಸಿಕೊಂಡೆ.

ಮೆಟ್ಟಿಲುಗಳನ್ನೇರುತ್ತ ಮೇಲೆ ಹೋದಂತೆಲ್ಲ ಮಂಗಗಳು ಆ ಪರಿಸರದೊಟ್ಟಿಗೆ ಹೊಂದಿರುವ ಅವಿನಾಭಾವ ಸಂಬಂಧ ಸ್ವೀಕೃತವಾಗುತ್ತ ಪ್ರತಿಯೊಬ್ಬರೂ ಭಯ ಬಿಟ್ಟು ಮೇಣದ ಬಸದಿಗಳ ವೀಕ್ಷಣೆಗೈದೆವು. ಬಾದಾಮಿ ಚಾಲುಕ್ಯರ ಅಸಾಮಾನ್ಯ ಸಾಮರ್ಥ್ಯದ ಸಂಕೇತವಾದ ಈ ಬಸದಿಗಳನ್ನು ದರ್ಶಿಸಲು ಶಕ್ತಿ ಬೇಕು.

ಆದರೆ ಒಮ್ಮೆ ಏರಿದರೆ ಬಸದಿಗಳ ಅನುಪಮ ಕೆತ್ತನೆ ಮನಮೋಹಕ ಎನಿಸುತ್ತದೆ. ಬೆಳಿಗ್ಗೆಯಿಂದ ಬಕಾಸುರನ ಹಾಗೆ ತಿಂದರೂ ಬಸದಿಯ ತಿರುಗಾಟ ಹಸಿವು ಕೆರಳಿಸಿತ್ತು. “ಬಾಳೆಲೆಯ ಮೇಲೆ ರೊಟ್ಟಿ ಊಟ” ಬೋರ್ಡ್ ನೋಡಿ ಬಾಯಲ್ಲಿ ‘ಚಪ್ನೀರು’ ಬಂದು ಒಂದು ರೊಟ್ಟಿ ಖಾನಾವಳಿಯಲ್ಲಿ ಕುಳಿತೆವು. ಮೊದಲು ಶೇಂಗಾ ಹೋಳಿಗೆ ಬಂತು! “ವಾಹ್” ಎಂದು ಚಪ್ಪರಿಸಿ ತಿಂದೆವು. ಮಲ್ಲಿಗೆಯಂಥ ರೊಟ್ಟಿ ಬಂತು. ಪಲ್ಯಗಳು, ಚಟ್ನಿ ಪುಡಿ ಒಂದೊಂದೂ ಎಷ್ಟು ಖಾರ! ದೇಹದ ನವರಂಧ್ರಗಳು ಮಾತ್ರವಲ್ಲ, ಇನ್ನೂ ಹತ್ತು ಡ್ಯಾಮ್ ಗೇಟ್ ಓಪನ್ ಆದ ಹಾಗನಿಸಿತು. ಒಂದೇ ಚಮಚ ಸಾರು ಹಾಕಿಸಿಕೊಂಡು ಪರೀಕ್ಷೆ ಮಾಡಿದೆ. ಅದು ಇನ್ನಷ್ಟು ಗೇಟ್ ಓಪನ್ ಮಾಡುವ ಭಯದಿಂದ ಎರಡೆರಡು ಮೊಸರು ತಿಂದು ಹೇಗೋ ಬದುಕಿಕೊಂಡೆ!
ಒಳಗಣ ಖಾರ ಹೊರಗಿನ ಬಿಸಿಲುಗಳಿಗೆ ತಂಪು ಕೊಟ್ಟಿದ್ದು ಕಾವ್ಯಳ ಅಕ್ಕ ಸರಸ್ವತಿಯ ಮನೆಯ ತಂಪು ಮನೆ, ಮನ ಮತ್ತು ಮಜ್ಜಿಗೆ. ನಮ್ಮ ಮುಂದಿನ ಪಯಣ ಬನಶಂಕರಿ ಜಾತ್ರೆಗಿತ್ತು. ಸರಸ್ವತಿ ಅಕ್ಕ ಉಡಿ ತುಂಬಿ, “ಬನಶಂಕರಿ ಜಾತ್ರಿಗ್ ಬಂದ್ ಹೆಣ್ ಮಕ್ಳಿಗ್ ಬಳೀ ಇಟ್ಟ ಕಳಿಸ್ತೀವಿ, ಕಾವ್ಯಾನ ಕಡೆ ರೊಕ್ಕಾ ಕೊಟ್ಟಿರ್ತೀನಿ, ಎಲ್ಲಾರೂ ಜಾತ್ರೀವಳಗ ಬಳಿ ಇಡಸಗೋರಿ,” ಎಂದರು! ತವರಿಗೆ ಬಂದ ಮಗಳನ್ನು ಉಪಚರಿಸುವ ಹಾಗೆ ಪ್ರೀತಿ ತೋರಿದ ಆ ಹೃದಯಸ್ಪರ್ಶಿ ಘಟನೆಯನ್ನು ಮರೆಯಲೇ ಆಗದು.

ಬನಶಂಕರಿ ದೇವಿಯ ಅಭೂತಪೂರ್ವ ದರ್ಶನ ಪಡೆದು ಎಷ್ಟೋ ವರ್ಷಗಳ ನಂತರ ಜಾತ್ರೆಯಲ್ಲಿ “ಅಡ್ಡಾಡಿ” ಶಾಪಿಂಗ್ ಮಾಡಿ ನಾನು ತುಂಬ ಸಂಭ್ರಮಿಸಿದೆ. ಗಾಜಿನ ಬಳೆಗಳನ್ನೇ ಹಾಕದವಳು ಕೈತುಂಬ ಬಳೆ ಇಡಿಸಿಕೊಂಡು ಸರಸ್ವತಿ ಅಕ್ಕನನ್ನು ನೆನೆದು ಭಾವುಕಳಾದೆ. ನನ್ನ ಹಾಗೆಯೇ ಶಾಪಿಂಗ್ ಮಾಡುತ್ತಿದ್ದ ಗೆಳತಿಯರಲ್ಲೂ ಏನೋ ಸಂತೋಷ! ಜಾತ್ರೆ ಮುಗಿಸಿ ಎಷ್ಟೋ ವರ್ಷಗಳ ನಂತರ ರಾಜು ತಾಳೀಕೋಟೆ ಕಂಪನಿ ಡ್ರಾಮಾ ನೋಡಿ ಬಿದ್ದು ಬಿದ್ದು ನಗುತ್ತ ಮನೆಗೆ ಮರಳಿದೆವು.

ಗೃಹಕೃತ್ಯದಲ್ಲೇ ತನ್ನನ್ನು ತಾನು ತೊಡಗಿಸಿ, ಕಳೆದುಕೊಂಡವಳಿಗೆ ಇಂಥ ಔಟಿಂಗ್ ಎಷ್ಟು ಸಾಂತ್ವನ, ಧೈರ್ಯ, ಉಲ್ಲಾಸ ನೀಡಬಹುದು! ಪರಿವಾರವನ್ನು ಪ್ರೀತಿಸುವವಳಿಗೆ ಹೀಗೆ ಒಮ್ಮೊಮ್ಮೆ ಜೀವನ ಜಾತ್ರೆಯಲ್ಲೂ ಏಕಾಂತಕ್ಕೆ ಮೊರೆಹೋಗುವ ಅಗತ್ಯವಿದೆ. ಆ ಒಂದು ಏಕಾಂತವನ್ನು ದಕ್ಕಿಸಿಕೊಂಡ ಕಣ್ಣುಗಳು ಅಪೂರ್ವ ಕಾಂತಿಯಿಂದ ಹೊಳೆಯುತ್ತಿದ್ದವು.


  • ಕವಿತಾ ಹೆಗಡೆ ಅಭಯಂ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW